ಇಮ್ರಾನ್​ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯ ವಜಾಗೊಳಿಸಿದ್ದು ಉಪ ಸಭಾಪತಿಯ ತಪ್ಪು: ಪಾಕ್​ ಸುಪ್ರೀಂಕೋರ್ಟ್​

| Updated By: Lakshmi Hegde

Updated on: Apr 09, 2022 | 10:09 AM

ಸುಪ್ರೀಂಕೋರ್ಟ್​ಗೆ ವರದಿ ಸಲ್ಲಿಸಿದ ಪಾಕಿಸ್ತಾನ ಚುನಾವಣಾ ಆಯೋಗ, ಯಾವ ಕಾರಣಕ್ಕೂ ದೇಶದಲ್ಲಿ ಅಕ್ಟೋಬರ್​ವರೆಗೆ ಚುನಾವಣೆ ನಡೆಸಲು ಸಾಧ್ಯವೇ ಇಲ್ಲ ಎಂದು ಹೇಳಿದೆ.

ಇಮ್ರಾನ್​ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯ ವಜಾಗೊಳಿಸಿದ್ದು ಉಪ ಸಭಾಪತಿಯ ತಪ್ಪು: ಪಾಕ್​ ಸುಪ್ರೀಂಕೋರ್ಟ್​
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್
Follow us on

ಸದ್ಯಕ್ಕೆ ಸೇಫ್​ ಎಂದುಕೊಂಡಿದ್ದ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್​ಗೆ ಅಲ್ಲಿನ ಸುಪ್ರೀಂಕೋರ್ಟ್ ಶಾಕ್ ನೀಡಿದೆ. ಇಮ್ರಾನ್ ಖಾನ್​ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿ, ಸಂಸತ್​ ಕಲಾಪವನ್ನು ಮುಂದೂಡಿದ ಡೆಪ್ಯೂಟಿ ಸ್ಪೀಕರ್​ ಖಾಸಿಂ ಖಾನ್​ ಸೂರಿ ಅವರ ಕ್ರಮ ತಪ್ಪು ಎಂದು ಪಾಕ್​ ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಪ್ರಸ್ತುತ ವಿಷಯವನ್ನು ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಉಮರ್ ಅತಾ ಬಂಡಿಯಲ್ ತೀರ್ಪನ್ನು ಕಾಯ್ದಿರಿಸಿದ್ದಾರೆ. ಇಂದು ರಾತ್ರಿ 8 ಗಂಟೆಗೆ ಅಂತಿಮ ತೀರ್ಪು ನೀಡುವುದಾಗಿ ತಿಳಿಸಿದ್ದಾರೆ.  

ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯ ವಜಾಗೊಂಡಿರುವ ವಿಚಾರವನ್ನು ಪಾಕ್​ ಸುಪ್ರೀಂಕೋರ್ಟ್ ಕಳೆದ ನಾಲ್ಕು ದಿನಗಳಿಂದಲೂ ವಿಚಾರಣೆ ನಡೆಸುತ್ತಿದೆ. ಇದೊಂದು ಸಾರ್ವಜನಿಕ ಹಿತಾಸಕ್ತಿ ವಿಚಾರವೆಂದು ಪರಿಗಣಿಸಿಕೊಂಡಿದ್ದಾಗಿ ಸಿಜೆಪಿ ಹೇಳಿದ್ದಾರೆ. ಹಾಗೇ ಇಂದು ವಿಚಾರಣೆ ವೇಳೆ ಉಪಸಭಾಪತಿಯ ಕ್ರಮ ಸರಿಯಾದುದಲ್ಲ. ಇದು ಅಸಂವಿಧಾನಿಕವಾಗಿದ್ದು, ಆರ್ಟಿಕಲ್​ 95ರ ಉಲ್ಲಂಘನೆ ಎಂದು ಹೇಳಿದ್ದಾರೆ.  ಅಂದಹಾಗೇ, ಈ ಪ್ರಕರಣವನ್ನು ಸಿಜೆಐ ಬಂಡಿಯಲ್ ನೇತೃತ್ವದ, ನ್ಯಾಯಮೂರ್ತಿಗಳಾದ  ಇಜಾಜುಲ್ ಅಹ್ಸಾನ್, ನ್ಯಾಯಮೂರ್ತಿ ಮಜರ್ ಆಲಂ ಮಿಯಾಂಖೇಲ್, ನ್ಯಾಯಮೂರ್ತಿ ಮುನಿಬ್ ಅಖ್ತರ್ ಮತ್ತು ನ್ಯಾಯಮೂರ್ತಿ ಮಂಡೋಖೇಲ್ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸುತ್ತಿದೆ.

ಅಕ್ಟೋಬರ್​ವರೆಗೆ ಚುನಾವಣೆ ಸಾಧ್ಯವಿಲ್ಲ

ಇದೆಲ್ಲದರ ಮಧ್ಯೆ ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ ಸಂಸತ್ತನ್ನು ವಿಸರ್ಜಿಸಿ, ಇನ್ನು 90 ದಿನಗಳ ಒಳಗೆ ಚುನಾವಣೆ ನಡೆಸುವಂತೆ ಸೂಚಿಸಿದ್ದರು. ಆದರೆ ಸುಪ್ರೀಂಕೋರ್ಟ್​ಗೆ ವರದಿ ಸಲ್ಲಿಸಿದ ಪಾಕಿಸ್ತಾನ ಚುನಾವಣಾ ಆಯೋಗ, ಯಾವ ಕಾರಣಕ್ಕೂ ದೇಶದಲ್ಲಿ ಅಕ್ಟೋಬರ್​ವರೆಗೆ ಚುನಾವಣೆ ನಡೆಸಲು ಸಾಧ್ಯವೇ ಇಲ್ಲ ಎಂದು ಹೇಳಿದೆ. ಹೀಗಾಗಿ  ಮುಂದೇನಾಗಲಿದೆ ಎಂಬ ಕುತೂಹಲ ದಟ್ಟವಾಗಿದೆ. ಇಂದು ರಾತ್ರಿ 7.30-8 ಗಂಟೆ ಅವಧಿಯಲ್ಲಿ ತೀರ್ಪು ಹೊರಬೀಳಲಿದೆ.

ಇನ್ನು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿದ ಬೆನ್ನಲ್ಲೇ ಇಮ್ರಾನ್ ಖಾನ್ ಸಿಕ್ಕಾಪಟೆ ಖುಷಿಪಟ್ಟಿದ್ದರು. ಉಪಸಭಾಪತಿ ಖಾಸಿಂ ಸತ್ಯ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪಿತೂರಿಯನ್ನು ನಿಲ್ಲಿಸಿದ್ದಾರೆ. ಗಬ್ರಾನಾ ನಹೀ ಹೈ (ಚಿಂತಿಸಬೇಡಿ). ದೇವರು ಪಾಕಿಸ್ತಾನವನ್ನು ನೋಡುತ್ತಿದ್ದಾನೆ ಎಂದು ಹೇಳಿದ್ದರು. ಅಷ್ಟೇ ಅಲ್ಲ, ಸಂಸತ್ತು ವಿಸರ್ಜನೆ ಮಾಡುವಂತೆ ನಾನೇ ಅಧ್ಯಕ್ಷರಿಗೆ ತಿಳಿಸಿದ್ದೇನೆ ಎಂದಿದ್ದರು. ಆದರೆ ಉಪಸಭಾಪತಿ ನಿರ್ಣಯವೇ ತಪ್ಪು ಎಂದಿರುವ ಸುಪ್ರೀಂಕೋರ್ಟ್ ತೀರ್ಪು ಏನು ಕೊಡುತ್ತದೆ ಎಂಬುದರ ಆಧಾರದ ಮೇಲೆ ಇಮ್ರಾನ್​ ಭವಿಷ್ಯ ನಿರ್ಧಾರವಾಗಲಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳೇ ಗಮನಿಸಿ! ಕಲಬುರಗಿ ಜಿಲ್ಲೆಯ 16 ಖಾಸಗಿ ಪದವಿ ಪೂರ್ವ ಕಾಲೇಜುಗಳ ಶೈಕ್ಷಣಿಕ ಮಾನ್ಯತೆ ರದ್ದು ಮಾಡಲಾಗಿದೆ

Published On - 6:42 pm, Thu, 7 April 22