ಮೋದಿ ಬಹಳ ಸುಂದರ ವ್ಯಕ್ತಿ; ಹೊಗಳಿ ಅಟ್ಟಕ್ಕೇರಿಸಿ ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದ ಟ್ರಂಪ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ಮೋದಿ ನೋಡಲು ಬಹಳ ಸುಂದರವಾಗಿರುವ ವ್ಯಕ್ತಿಯೆಂದು ಹೊಗಳಿದ್ದಾರೆ. ಮೋದಿ ಕಿಲ್ಲರ್ ಲುಕ್ ಹೊಂದಿದ್ದಾರೆ ಎಂದಿರುವ ಟ್ರಂಪ್ ಮತ್ತೊಮ್ಮೆ ಭಾರತ ಹಾಗೂ ಪಾಕಿಸ್ತಾನದ ನಡುವಿನ ಯುದ್ಧವನ್ನು ನಾನೇ ನಿಲ್ಲಿಸಿದ್ದು ಎಂದು ಹಳೇ ರಾಗ ಹಾಡಿದ್ದಾರೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತಕ್ಕೆ ವ್ಯಾಪಾರ ನಿರ್ಬಂಧದ ಬೆದರಿಕೆಯೊಡ್ಡಿ ಕದನವಿರಾಮಕ್ಕೆ ಒಪ್ಪಿಸಿದ್ದೆ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ.

ಮೋದಿ ಬಹಳ ಸುಂದರ ವ್ಯಕ್ತಿ; ಹೊಗಳಿ ಅಟ್ಟಕ್ಕೇರಿಸಿ ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದ ಟ್ರಂಪ್!
Trump And Modi

Updated on: Oct 29, 2025 | 3:52 PM

ನವದೆಹಲಿ, ಅಕ್ಟೋಬರ್ 29: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅತ್ಯಾಪ್ತ ಗೆಳೆಯರಾಗಿದ್ದರು. ಆದರೆ, ಭಾರತ ರಷ್ಯಾದಿಂದ ಇಂಧನ ಖರೀದಿ ಮಾಡುತ್ತಿದೆ ಎಂಬ ಕಾರಣಕ್ಕೆ ಭಾರತದ ಮೇಲೆ ಅಮೆರಿಕ ಹೆಚ್ಚುವರಿಯಾಗಿ ಶೇ. 25ರಷ್ಟು ತೆರಿಗೆ ವಿಧಿಸಿದ ನಂತರ ಎರಡೂ ದೇಶಗಳ ನಡುವೆ ಅಂತರ ಸೃಷ್ಟಿಯಾಯಿತು. ಇದಷ್ಟೇ ಅಲ್ಲದೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುವುದನ್ನು ತಪ್ಪಿಸಿ ಕದನವಿರಾಮಕ್ಕೆ ಒಪ್ಪಿಸಿದ್ದು ನಾನೇ ಎಂದು ಟ್ರಂಪ್ ಪದೇಪದೆ ಹೇಳುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮುಜುಗರ ಉಂಟುಮಾಡಿದ್ದರು. ಇದೀಗ ಪ್ರಧಾನಿ ಮೋದಿಯನ್ನು ಹೊಗಳಿರುವ ಟ್ರಂಪ್ ಮೋದಿ ಅತ್ಯಂತ ಸುಂದರವಾದ ವ್ಯಕ್ತಿ ಎಂದು ಹೇಳಿದ್ದಾರೆ. ಆದರೆ, ಮೋದಿಯನ್ನು ಹೊಗಳಿ ಅಟ್ಟಕ್ಕೇರಿಸಿ ಮತ್ತೆ ತಮ್ಮ ಹಳೇ ರಾಗ ತೆಗೆದಿದ್ದಾರೆ. ಈ ಮೂಲಕ ತೊಟ್ಟಿಲನ್ನೂ ತೂಗಿ, ಮಗುವನ್ನೂ ಚಿವುಟಿದ್ದಾರೆ.

ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ್ ನಡೆಸುವುದನ್ನು ತಡೆಯಲು ಅನ್ನು ನಿಲ್ಲಿಸಲು ಭಾರತಕ್ಕೆ ವ್ಯಾಪಾರ ನಿರ್ಬಂಧಗಳನ್ನು ವಿಧಿಸುವುದಾಗಿ ಬೆದರಿಕೆ ಹಾಕಿದ್ದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಆದರೆ ಪ್ರಧಾನಿ ಮೋದಿಯ ಬಹಳ ಸುಂದರವಾದ ಆದರೆ ಕಠಿಣ ವ್ಯಕ್ತಿ ಎಂದು ಕರೆದಿರುವ ಟ್ರಂಪ್ ಮೋದಿಯೊಬ್ಬರು “ಮಹಾನ್ ವ್ಯಕ್ತಿ” ಎಂದು ಹೊಗಳಿದ್ದಾರೆ.

ಇದನ್ನೂ ಓದಿ: ಉಡುಗೊರೆ ವಿವಾದ; ಪಾಕಿಸ್ತಾನಕ್ಕೆ ಭಾರತೀಯ ಪ್ರದೇಶಗಳಿರುವ ಬಾಂಗ್ಲಾ ನಕ್ಷೆಯನ್ನು ನೀಡಿದ ಯೂನಸ್

ದಕ್ಷಿಣ ಕೊರಿಯಾದಲ್ಲಿ ಮಾಡಿದ ಭಾಷಣದ ಸಮಯದಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ. ಇದರ ಜೊತೆಗೆ ಈ ವರ್ಷದ ಆರಂಭದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಹೋರಾಟವನ್ನು ಕೊನೆಗೊಳಿಸಲು ವೈಯಕ್ತಿಕವಾಗಿ ಸಹಾಯ ಮಾಡಿದ್ದಾಗಿ ಮತ್ತೊಮ್ಮೆ ಹೇಳಿಕೊಂಡಿದ್ದಾರೆ. ಹಾಗೇ, ಅಮೆರಿಕ ಭಾರತದೊಂದಿಗೆ ಹೊಸ ವ್ಯಾಪಾರ ಒಪ್ಪಂದದ ಕುರಿತು ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. ಭಾರತೀಯ ಸರಕುಗಳ ಮೇಲಿನ ಅಮೆರಿಕದ ಕಡಿದಾದ ಸುಂಕಗಳ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ನಡೆಯುತ್ತಿರುವ ವ್ಯಾಪಾರ ಚರ್ಚೆಗಳ ನಡುವೆ ಅವರ ಈ ಹೇಳಿಕೆಗಳು ಬಂದಿವೆ.

ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆಗೆ ಮುಂಚಿತವಾಗಿ ದಕ್ಷಿಣ ಕೊರಿಯಾದಲ್ಲಿ ನಡೆದ ಭಾಷಣದಲ್ಲಿ ಮಾತನಾಡಿದ ಟ್ರಂಪ್, “ನಾನು ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿದ್ದೇನೆ. ಪ್ರಧಾನಿ ಮೋದಿ ಅವರ ಬಗ್ಗೆ ನನಗೆ ಅಪಾರ ಗೌರವ ಮತ್ತು ಪ್ರೀತಿ ಇದೆ. ನಮ್ಮ ಮಧ್ಯೆ ಉತ್ತಮ ಸಂಬಂಧವಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪರ್ವೇಜ್ ಮುಷರಫ್ ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳ ನಿಯಂತ್ರಣವನ್ನು ಅಮೆರಿಕಕ್ಕೆ ಹಸ್ತಾಂತರಿಸಿದ್ದರು; ಮಾಜಿ ಸಿಐಎ ಅಧಿಕಾರಿ ಸ್ಫೋಟಕ ಮಾಹಿತಿ

“ನಾನು ಪ್ರಧಾನಿ ಮೋದಿಯವರಿಗೆ ಕರೆ ಮಾಡಿ ನೀವು ಪಾಕಿಸ್ತಾನದೊಂದಿಗೆ ಹೋರಾಡುತ್ತಿರುವುದರಿಂದ ನಾವು ನಿಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ. ನಂತರ ನಾನು ಪಾಕಿಸ್ತಾನಕ್ಕೆ ಕೂಡ ಕರೆ ಮಾಡಿ ಅದೇ ಮಾತನ್ನು ಹೇಳಿದೆ. ಇದರಿಂದ ಎರಡೂ ದೇಶಗಳು ಕದನವಿರಾಮಕ್ಕೆ ಒಪ್ಪಿದವು” ಎಂದು ಅವರು ಹೇಳಿದ್ದಾರೆ.

ಇದೇ ರೀತಿ ಈ ಹಿಂದೆ ಕೂಡ ಸಾಕಷ್ಟು ಬಾರಿ ಟ್ರಂಪ್ ಹೇಳಿಕೆ ನೀಡಿದ್ದರು. ಆದರೆ, ಈ ಹೇಳಿಕೆಯನ್ನು ಭಾರತ ಸಾರಾಸಗಟಾಗಿ ನಿರಾಕರಿಸಿತ್ತು. ಎರಡೂ ದೇಶಗಳ ನಡುವಿನ ಕದನ ವಿರಾಮವನ್ನು ಯಾವುದೇ ಮೂರನೇ ವ್ಯಕ್ತಿಯ ಒಳಗೊಳ್ಳುವಿಕೆ ಇಲ್ಲದೆ ದ್ವಿಪಕ್ಷೀಯವಾಗಿ ಮಾಡಿಕೊಳ್ಳಲಾಗಿದೆ ಎಂದು ಭಾರತ ಸ್ಪಷ್ಟಪಡಿಸಿತ್ತು. ಹೀಗಿದ್ದರೂ ಟ್ರಂಪ್ ಮಾತ್ರ ಹಳೇ ರಾಗ ಹಾಡುವುದನ್ನು ಬಿಟ್ಟಿಲ್ಲ!

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ