ಉಡುಗೊರೆ ವಿವಾದ; ಪಾಕಿಸ್ತಾನಕ್ಕೆ ಭಾರತೀಯ ಪ್ರದೇಶಗಳಿರುವ ಬಾಂಗ್ಲಾ ನಕ್ಷೆಯನ್ನು ನೀಡಿದ ಯೂನಸ್
ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಯೂನಸ್ ಈಶಾನ್ಯ ಭಾರತವನ್ನು ಒಳಗೊಂಡ ಬಾಂಗ್ಲಾದೇಶದ ನಕ್ಷೆಯನ್ನು ಪಾಕಿಸ್ತಾನದ ಜನರಲ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಕಾಫಿ ಟೇಬಲ್ ಪುಸ್ತಕವಾದ ಉಡುಗೊರೆಯು ಭಾರತದ ಕೆಲವು ಭಾಗಗಳನ್ನು ಬಾಂಗ್ಲಾದೇಶದ ಭಾಗಗಳಾಗಿ ತೋರಿಸುವ ನಕ್ಷೆಯನ್ನು ಹೊಂದಿತ್ತು. ಈ ನಕ್ಷೆ ಇದೀಗ ವಿವಾದಕ್ಕೆ ಕಾರಣವಾಗಿದೆ.

ನವದೆಹಲಿ, ಅಕ್ಟೋಬರ್ 28: ಬಾಂಗ್ಲಾದೇಶದ (Bangladesh) ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ (Muhammad Yunus) ಅವರು ಪಾಕಿಸ್ತಾನದ ಜಂಟಿ ಮುಖ್ಯಸ್ಥರ ಸಮಿತಿಗೆ ನೀಡಿದ ಉಡುಗೊರೆಯು ಇದೀಗ ವಿವಾದಕ್ಕೆ ಕಾರಣವಾಗಿದೆ. ಇದು ಕಾಫಿ ಟೇಬಲ್ ಪುಸ್ತಕವಾಗಿದ್ದು, ಭಾರತದ ಕೆಲವು ಭಾಗಗಳನ್ನು ಬಾಂಗ್ಲಾದೇಶದ ಭಾಗಗಳಾಗಿ ತೋರಿಸುವ ನಕ್ಷೆಯನ್ನು ಹೊಂದಿದೆ. ಹೀಗಾಗಿ, ಇದು ವಿವಾದವನ್ನು ಹುಟ್ಟುಹಾಕಿದೆ.
‘ಆರ್ಟ್ ಆಫ್ ಟ್ರಯಂಫ್, ಗ್ರಾಫಿಟಿ ಆಫ್ ಬಾಂಗ್ಲಾದೇಶದ ನ್ಯೂ ಡಾನ್’ ಎಂಬ ಶೀರ್ಷಿಕೆಯ ಕಾಫಿ ಟೇಬಲ್ ಪುಸ್ತಕದ ಮುಖಪುಟದಲ್ಲಿ ಬಾಂಗ್ಲಾದೇಶದ ನಕ್ಷೆಯಿದೆ. ಆದರೆ ಕೆಲವು ಬಾಂಗ್ಲಾದೇಶಿ ಎಕ್ಸ್ ಹ್ಯಾಂಡಲ್‌ಗಳು ಆ ಫೋಟೋ ಬಾಂಗ್ಲಾದ ನಕ್ಷೆಯಲ್ಲ ಅದು ಬಾಂಗ್ಲಾದೇಶದ ರಾಷ್ಟ್ರೀಯ ಧ್ವಜದ ವರ್ಣಚಿತ್ರವಾಗಿದೆ ಎಂದು ಹೇಳಿಕೊಂಡಿವೆ. ಆದರೂ ಅದು ಬಾಂಗ್ಲಾ ನಕ್ಷೆಯನ್ನು ಹೋಲುತ್ತದೆ.
ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರದ ಬಳಿಕ ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ; ಮೂವರು ಸಾವು
ಈ ಪುಸ್ತಕವನ್ನು ಬಾಂಗ್ಲಾ ಅಧ್ಯಕ್ಷ ಮುಹಮ್ಮದ್ ಯೂನಸ್ ಅವರು ಢಾಕಾದಲ್ಲಿ ನಡೆದ ಸಭೆಯಲ್ಲಿ ಜನರಲ್ ಸಾಹಿರ್ ಶಂಶಾದ್ ಮಿರ್ಜಾ ಅವರಿಗೆ ನೀಡಿದರು. ಈ ಫೋಟೋದ ವಿವಾದದ ಬಗ್ಗೆ ಬಾಂಗ್ಲಾದೇಶ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪಾಕಿಸ್ತಾನದ ಜಂಟಿ ಮುಖ್ಯಸ್ಥರ ಸಮಿತಿಯ (CJCSC) ಅಧ್ಯಕ್ಷ ಜನರಲ್ ಸಾಹಿರ್ ಶಂಶಾದ್ ಮಿರ್ಜಾ ಅವರು ಶನಿವಾರ ತಡರಾತ್ರಿ ಜಮುನಾದಲ್ಲಿರುವ ರಾಜ್ಯ ಅತಿಥಿ ಗೃಹದಲ್ಲಿ ಮುಖ್ಯ ಸಲಹೆಗಾರ ಪ್ರೊಫೆಸರ್ ಮುಹಮ್ಮದ್ ಯೂನಸ್ ಅವರನ್ನು ಭೇಟಿ ಮಾಡಿದರು. ಈ ಸಭೆಯಲ್ಲಿ ದ್ವಿಪಕ್ಷೀಯ ವ್ಯಾಪಾರ, ಹೂಡಿಕೆ ಮತ್ತು ರಕ್ಷಣಾ ಸಹಕಾರದ ಹೆಚ್ಚುತ್ತಿರುವ ಪ್ರಾಮುಖ್ಯತೆ ಸೇರಿದಂತೆ ಬಾಂಗ್ಲಾದೇಶ-ಪಾಕಿಸ್ತಾನ ಸಂಬಂಧಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಅವರು ಚರ್ಚಿಸಿದರು.
ಇದನ್ನೂ ಓದಿ: ಶೇಖ್ ಹಸೀನಾಗೆ ದೆಹಲಿಯಲ್ಲಿ ಆಶ್ರಯ ನೀಡಿರುವುದರಿಂದಲೇ ಭಾರತ-ಬಾಂಗ್ಲಾದೇಶದ ಸಂಬಂಧ ಮತ್ತಷ್ಟು ಹದಗೆಟ್ಟಿದೆ; ಮೊಹಮ್ಮದ್ ಯೂನಸ್
2024ರ ಡಿಸೆಂಬರ್ ತಿಂಗಳಲ್ಲಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಪ್ರಮುಖ ಸಹಾಯಕರೊಬ್ಬರು ಭಾರತದ ಭೂಪ್ರದೇಶದ ಕೆಲವು ಪ್ರದೇಶಗಳು ಬಾಂಗ್ಲಾ ದೇಶದ ಭಾಗವಾಗಿರಬೇಕು ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇದೀಗ ಆ ಪೋಸ್ಟ್ ಅನ್ನು ಡಿಲೀಟ್ ಮಾಡಲಾಗಿದೆ.
ಪ್ರಚೋದನಕಾರಿ ಹೇಳಿಕೆಗಳಿಗೆ ಹೆಸರುವಾಸಿಯಾದ ಮಹ್ಫುಜ್ ಆಲಂ ಈ ಹಿಂದೆ ಪಶ್ಚಿಮ ಬಂಗಾಳ, ತ್ರಿಪುರ ಮತ್ತು ಅಸ್ಸಾಂನ ಕೆಲವು ಭಾಗಗಳನ್ನು ಬಾಂಗ್ಲಾದೇಶದ ಭಾಗಗಳಾಗಿ ತೋರಿಸುವ ನಕ್ಷೆಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




