AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ಸ್ವತಂತ್ರವಾಗಿ ವಾಸಿಸುತ್ತಿದ್ದೇನೆ, ಭಾರತ ತೊರೆಯುವ ಯೋಚನೆಯಿಲ್ಲ; ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ

ಬಾಂಗ್ಲಾದೇಶದಿಂದ ಉಚ್ಛಾಟಿಸಲ್ಪಟ್ಟಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅಲ್ಲಿಂದ ಪಲಾಯನ ಮಾಡಿ ದೆಹಲಿಯಲ್ಲಿ ಆಶ್ರಯ ಪಡೆದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಪರೂಪದ ಸಂದರ್ಶನ ನೀಡಿರುವ ಶೇಖ್ ಹಸೀನಾ, ತಾವು ದೆಹಲಿಯಲ್ಲಿ ಮುಕ್ತವಾಗಿ ಆದರೆ ಎಚ್ಚರಿಕೆಯಿಂದ ವಾಸಿಸುತ್ತಿದರುವುದಾಗಿ ತಿಳಿಸಿದ್ದಾರೆ. ಹಾಗೇ, ಭಾರತವನ್ನು ತೊರೆಯುವ ಯಾವುದೇ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ತಮ್ಮ ಪಕ್ಷವಾದ ಅವಾಮಿ ಲೀಗ್‌ಗೆ ಭಾಗವಹಿಸಲು ಅವಕಾಶ ನೀಡದಿದ್ದರೆ ಲಕ್ಷಾಂತರ ಮತದಾರರು ಬಾಂಗ್ಲಾದೇಶದಲ್ಲಿ ಚುನಾವಣೆಯನ್ನು ಬಹಿಷ್ಕರಿಸುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.

ದೆಹಲಿಯಲ್ಲಿ ಸ್ವತಂತ್ರವಾಗಿ ವಾಸಿಸುತ್ತಿದ್ದೇನೆ, ಭಾರತ ತೊರೆಯುವ ಯೋಚನೆಯಿಲ್ಲ; ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ
Sheikh Hasina
ಸುಷ್ಮಾ ಚಕ್ರೆ
|

Updated on: Oct 29, 2025 | 9:59 PM

Share

ನವದೆಹಲಿ, ಅಕ್ಟೋಬರ್ 29: ಬಾಂಗ್ಲಾದೇಶದ ಪದಚ್ಯುತ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಬಾಂಗ್ಲಾದೇಶದ ರಾಷ್ಟ್ರೀಯ ಚುನಾವಣೆ, ಅವಾಮಿ ಲೀಗ್ ಪಕ್ಷ, ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪಗಳು ಮತ್ತು ತಮ್ಮ ದೇಶಕ್ಕೆ ಮರಳುವ ಅವರ ಯೋಜನೆಗಳ ಬಗ್ಗೆ ಮುಕ್ತವಾಗಿ ಶೇಖ್ ಹಸೀನಾ ರಾಯಿಟರ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಬಾಂಗ್ಲಾದೇಶದಲ್ಲಿ ನಾಗರಿಕ ಸೇವಾ ಕೋಟಾ ವ್ಯವಸ್ಥೆಯ ವಿರುದ್ಧ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಗಳ ನಂತರ 78 ವರ್ಷದ ನಾಯಕಿ ಶೇಖ್ ಹಸೀನಾ ಕಳೆದ ವರ್ಷ ಆಗಸ್ಟ್‌ನಲ್ಲಿ ಢಾಕಾದಿಂದ ದೆಹಲಿಗೆ ಪಲಾಯನ ಮಾಡಿದ್ದರು.

ಶೇಖ್ ಹಸೀನಾ ಅವರ ಪದಚ್ಯುತಿಯ ನಂತರ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಬಾಂಗ್ಲಾದೇಶವನ್ನು ಆಳುತ್ತಿದೆ. ಫೆಬ್ರವರಿ 2027ರಲ್ಲಿ ರಾಷ್ಟ್ರೀಯ ಚುನಾವಣೆಗಳನ್ನು ನಡೆಸುವುದಾಗಿ ಘೋಷಣೆ ಮಾಡಿದೆ. ಶೇಖ್ ಹಸೀನಾ ಸಾಮಾಜಿಕ ಮಾಧ್ಯಮದ ಮೂಲಕ ಸಂದೇಶಗಳನ್ನು ಕಳುಹಿಸಿದ್ದರೂ ಬಾಂಗ್ಲಾದೇಶದಿಂದ ಹೊರಹಾಕಲ್ಪಟ್ಟ ನಂತರ ಅವರು ಮಾಧ್ಯಮಗಳೊಂದಿಗೆ ಸಂವಹನ ನಡೆಸುತ್ತಿರುವುದು ಇದೇ ಮೊದಲು.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಪೊಲೀಸರ ಜೊತೆ ಶೇಖ್ ಹಸೀನಾ ಬೆಂಬಲಿಗರ ಘರ್ಷಣೆ; 4 ಸಾವು, 14 ಜನರ ಬಂಧನ

ಕಳೆದ ವರ್ಷ ಆಗಸ್ಟ್‌ನಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಪ್ರತಿಭಟನೆಗಳ ನಡುವೆ ಜನಸಮೂಹವು ಬಾಂಗ್ಲಾದ ಢಾಕಾದಲ್ಲಿರುವ ಅವರ ಅರಮನೆಗೆ ನುಗ್ಗಿದ್ದರು. ಶೇಖ್ ಹಸೀನಾ ಹೆಲಿಕಾಪ್ಟರ್ ಮೂಲಕ ದೇಶವನ್ನು ಬಿಟ್ಟು ಭಾರತಕ್ಕೆ ಪಲಾಯನ ಮಾಡಿದ್ದರು. ಅಂದಿನಿಂದ, ಅವರು ನವದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಅವರು ತಾವು ಭಾರತದ ರಾಜಧಾನಿಯಲ್ಲಿ ಮುಕ್ತವಾಗಿ ವಾಸಿಸುತ್ತಿದ್ದೇನೆ. ಆದರೆ, ತಮ್ಮ ಕುಟುಂಬದ ಹಿಂಸಾತ್ಮಕ ಇತಿಹಾಸವನ್ನು ಪರಿಗಣಿಸಿ ಜಾಗರೂಕರಾಗಿರುವುದಾಗಿ ತಿಳಿಸಿದ್ದಾರೆ. ಶೇಖ್ ಹಸೀನಾ ಮತ್ತು ಅವರ ಸಹೋದರಿ ವಿದೇಶದಲ್ಲಿದ್ದಾಗ 1975ರ ಮಿಲಿಟರಿ ದಂಗೆಯಲ್ಲಿ ಶೇಖ್ ಹಸೀನಾ ಅವರ ತಂದೆ ಮತ್ತು ಮೂವರು ಸಹೋದರರು ಕೊಲ್ಲಲ್ಪಟ್ಟಿದ್ದರು.

ಒಂದುವೇಳೆ ತಮ್ಮ ಅವಾಮಿ ಲೀಗ್ ಪಕ್ಷವು 2026ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದಿದ್ದರೆ, ಅದರ ಲಕ್ಷಾಂತರ ಬೆಂಬಲಿಗರು ಬಾಂಗ್ಲಾದೇಶದಲ್ಲಿ ಚುನಾವಣೆಗಳನ್ನು ಬಹಿಷ್ಕರಿಸುತ್ತಾರೆ ಎಂದು ಶೇಖ್ ಹಸೀನಾ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಶೇಖ್ ಹಸೀನಾಗೆ ದೆಹಲಿಯಲ್ಲಿ ಆಶ್ರಯ ನೀಡಿರುವುದರಿಂದಲೇ ಭಾರತ-ಬಾಂಗ್ಲಾದೇಶದ ಸಂಬಂಧ ಮತ್ತಷ್ಟು ಹದಗೆಟ್ಟಿದೆ; ಮೊಹಮ್ಮದ್ ಯೂನಸ್

ಶೇಖ್ ಹಸೀನಾ, ಅವರ ಸರ್ಕಾರ ಮತ್ತು ಅವರ ಪಕ್ಷದ ಹಲವಾರು ನಾಯಕರು ಕೊಲೆ ಆರೋಪಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಢಾಕಾದಲ್ಲಿರುವ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ -1 ರಲ್ಲಿ ವಿಚಾರಣೆ ಮುಕ್ತಾಯಗೊಂಡಿದೆ. ಅಲ್ಲಿ ಸರ್ಕಾರಿ ಪ್ರಾಸಿಕ್ಯೂಟರ್ ಶೇಖ್ ಹಸೀನಾ ಅವರಿಗೆ ಮರಣದಂಡನೆ ವಿಧಿಸಬೇಕೆಂದು ಕೋರಿದ್ದಾರೆ.

ಕಳೆದ ವರ್ಷ ಜುಲೈ ಮತ್ತು ಆಗಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ಉದ್ಯೋಗಗಳಲ್ಲಿ ಮೀಸಲಾತಿ ವಿರುದ್ಧದ ವಿದ್ಯಾರ್ಥಿಗಳ ಪ್ರತಿಭಟನೆ ಶೇಖ್ ಹಸೀನಾ ಆಡಳಿತದ ವಿರುದ್ಧದ ಚಳುವಳಿಯಾಗಿ ಮಾರ್ಪಟ್ಟಾಗ ಸುಮಾರು 1,400 ಜನರು ಸಾವನ್ನಪ್ಪಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ