ಇಂದು ರಾತ್ರಿ ಇರಾನ್ ಮೇಲೆ ಭೀಕರ ದಾಳಿ ನಡೆಸುತ್ತೇವೆ; ಟ್ರಂಪ್ ಎಚ್ಚರಿಕೆ

ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಗಳು, ಕರಾವಳಿ ರಾಡಾರ್ ನೆಲೆಗಳು, ಕಮಾಂಡ್ ಕೇಂದ್ರಗಳು ಮತ್ತು ಇರಾನ್ ರೆವಲ್ಯೂಷನರಿ ಗಾರ್ಡ್ಸ್‌ನ (IRGC) ಸುಮಾರು 60 ಯುದ್ಧ ದೋಣಿಗಳು ಸೇರಿದಂತೆ 80ಕ್ಕೂ ಹೆಚ್ಚು ಟಾರ್ಗೆಟ್ ಮೇಲೆ ಅಮೆರಿಕ ಭೀಕರ ದಾಳಿ ನಡೆಸಿದೆ. ಇದರ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಇಂದು ರಾತ್ರಿ ಇರಾನ್ ಮೇಲೆ ಮತ್ತಷ್ಟು ಭೀಕರ ದಾಳಿಗಳನ್ನು ನಡೆಸುವುದಾಗಿ ಇರಾನಿಗೆ ಎಚ್ಚರಿಕೆ ನೀಡಿದ್ದಾರೆ. ಇದರಿಂದಾಗಿ ಮತ್ತೊಂದು ಭಯಾನಕ ದಾಳಿ ನಡೆಯುವ ಸಾಧ್ಯತೆ ಹೆಚ್ಚಾಗಿದೆ.

ಇಂದು ರಾತ್ರಿ ಇರಾನ್ ಮೇಲೆ ಭೀಕರ ದಾಳಿ ನಡೆಸುತ್ತೇವೆ; ಟ್ರಂಪ್ ಎಚ್ಚರಿಕೆ
Us President Trump
Image Credit source: AP

Updated on: Jul 08, 2026 | 8:11 PM

ಮುಖ್ಯಾಂಶಗಳು

  • ಇರಾನ್ ಮೇಲೆ ಅಮೆರಿಕ ಯುದ್ಧ
  • ಇಂದು ರಾತ್ರಿ ಭೀಕರ ದಾಳಿಯ ಎಚ್ಚರಿಕೆ ನೀಡಿದ ಟ್ರಂಪ್
  • ಕದನವಿರಾಮದ ಅಂತ್ಯದ ಬಳಿಕ ಟ್ರಂಪ್ ಹೇಳಿಕೆ

ವಾಷಿಂಗ್ಟನ್, ಜುಲೈ 8: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆಗಿನ ಕದನ ವಿರಾಮ ಅಂತ್ಯಗೊಂಡಿದೆ ಎಂದು ಘೋಷಿಸಿದ್ದರು. ಇದೀಗ ಇನ್ನೊಂದು ಎಚ್ಚರಿಕೆಯನ್ನೂ ನೀಡಿದ್ದು, ಇಂದು ರಾತ್ರಿಯೇ ಇರಾನ್ (Iran War) ಮೇಲೆ ಅಮೆರಿಕ ಮತ್ತೊಮ್ಮೆ ದಾಳಿ ನಡೆಸಲಿದೆ ಎಂಬ ಸುಳಿವು ನೀಡಿದ್ದಾರೆ. ಟರ್ಕಿಯ ಅಂಕಾರಾದಲ್ಲಿ ನಡೆಯುತ್ತಿರುವ ನ್ಯಾಟೋ (NATO) ಶೃಂಗಸಭೆಯಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಪಡೆಗಳು ಹಡಗುಗಳ ಮೇಲೆ ನಡೆಸಿದ ದಾಳಿಯು ಸಂಘರ್ಷವನ್ನು ಕೊನೆಗೊಳಿಸಲು ಎರಡೂ ದೇಶಗಳು ಮಾಡಿಕೊಂಡಿದ್ದ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

“ಇರಾನ್ ಮಾಡುತ್ತಿರುವ ಕೆಲಸಗಳು ನನಗೆ ಸಮಾಧಾನ ತಂದಿಲ್ಲ. ಅವರು ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರವನ್ನು ಹೊಂದುವುದು ನನಗಿಷ್ಟವಿಲ್ಲ. ಇರಾನ್ ನಡೆಸಿದ ದಾಳಿಗಳು ತಾತ್ಕಾಲಿಕ ಒಪ್ಪಂದದ ಉಲ್ಲಂಘನೆಯಾಗಿದ್ದು, ಇರಾನ್ ಮಾಡಿರುವುದು ತಪ್ಪು. ಇರಾನ್ ತನ್ನ ಪರಮಾಣು ಯೋಜನೆಯನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ನಾವೇ ಅದನ್ನು ನಿಲ್ಲಿಸುತ್ತೇವೆ ಎಂದು ನಮ್ಮ ಒಪ್ಪಂದದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಅಮೆರಿಕ- ಇರಾನ್ ನಡುವಿನ ಕದನ ವಿರಾಮ ಅಂತ್ಯ; ಭಾರತದ ತಲೆಬಿಸಿಗೆ ಕಾರಣಗಳಿವು

ಅಮೆರಿಕ-ಇರಾನ್ ಕದನ ವಿರಾಮವು ಸಂಪೂರ್ಣವಾಗಿ ಮುರಿದುಬಿದ್ದಿದೆಯೇ ಎಂಬ ಪ್ರಶ್ನೆಗಳಿಗೆ ಉತ್ತರಿಸಿದ ಟ್ರಂಪ್, ರಾತ್ರೋರಾತ್ರಿ ನಡೆಸಿದ ದಾಳಿಯಲ್ಲಿ ಅಮೆರಿಕದ ಪಡೆಗಳು ಇರಾನ್‌ನ 28 ದೋಣಿಗಳನ್ನು ಧ್ವಂಸಗೊಳಿಸಿವೆ ಎಂದು ಹೇಳಿದ್ದಾರೆ. ಅಲ್ಲದೆ ಅಗತ್ಯ ಬಿದ್ದರೆ ಇರಾನ್‌ನ ಮತ್ತಷ್ಟು ಯುದ್ಧ ನೌಕೆಗಳನ್ನು ಖಂಡಿತವಾಗಿಯೂ ನಾಶಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಫೆಬ್ರವರಿ ಕೊನೆಯ ವಾರದಲ್ಲಿ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಬೃಹತ್ ದಾಳಿಯಿಂದ ಈ ಸಂಘರ್ಷ ಆರಂಭವಾಯಿತು. ಹಾರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣ ತನ್ನದೇ ಎಂದು ವಾದಿಸುತ್ತಿರುವ ಇರಾನ್ ಅಲ್ಲಿ ಸಂಚರಿಸುವ ಹಡಗುಗಳಿಗೆ ಶುಲ್ಕ ವಿಧಿಸುವುದಾಗಿ ಹೇಳಿದೆ. ಅಲ್ಲದೆ ತನ್ನ ಅಧಿಕೃತ ಮಾರ್ಗವನ್ನು ಬಿಟ್ಟು ಚಲಿಸುವ ಹಡಗುಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆಯನ್ನೂ ಹಾಕಿದೆ.

ಇದನ್ನೂ ಓದಿ: ಕದನ ವಿರಾಮ ಅಂತ್ಯವೆಂದು ಘೋಷಿಸಿದ ಟ್ರಂಪ್; ಇರಾನ್ ಮೇಲೆ ಅಮೆರಿಕದಿಂದ ಭೀಕರ ವೈಮಾನಿಕ ದಾಳಿ

ಇರಾನ್ ಮಿಲಿಟರಿ ಹಾರ್ಮುಜ್ ಜಲಸಂಧಿಯಲ್ಲಿ ಕಳೆದ ಕೆಲವು ದಿನಗಳಲ್ಲಿ 3 ಹಡಗುಗಳ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕ ಮಂಗಳವಾರ ಇರಾನ್ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿತ್ತು. ಇದಾದ ನಂತರ ಇರಾನ್ ಕೂಡ ಗಲ್ಫ್ ದೇಶಗಳ ಮೇಲಿನ ದಾಳಿಯೊಂದಿಗೆ ಪ್ರತಿಕಾರ ತೀರಿಸಿಕೊಂಡಿದೆ. ಇನ್ನೂ ಎರಡೂ ದೇಶಗಳ ನಡುವಿನ ಯುದ್ಧದ ಕಾವು ಹೆಚ್ಚಾಗುವ ಸಾಧ್ಯತೆಗಳಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us