Earthquake: ಗ್ರಹ ರಚನೆ ಆಧಾರದಲ್ಲಿ 3 ದಿನಗಳ ಹಿಂದೆಯೇ ಭೂಕಂಪದ ಭವಿಷ್ಯ ನುಡಿದಿದ್ದ ಡಚ್ ವ್ಯಕ್ತಿ; ಇದು ಸಾಧ್ಯವಾ?

Dutch Expert Predicting Earthquake- ಭೂಮಿಯ ಮೇಲೆ ಗ್ರಹಗಳ ರಚನೆಯ ಆಧಾರದ ಮೇಲೆ ಡಚ್ ಪರಿಣಿತರೊಬ್ಬರು ಟರ್ಕಿ ಮೊದಲಾದ ಪ್ರದೇಶಗಳಲ್ಲಿ ಪ್ರಬಲ ಭೂಕಂಪ ಸಂಭವಿಸಬಹುದು ಎಂದು ಮೂರು ದಿನಗಳ ಹಿಂದೆ ಭವಿಷ್ಯ ನುಡಿದಿದ್ದರು.

Earthquake: ಗ್ರಹ ರಚನೆ ಆಧಾರದಲ್ಲಿ 3 ದಿನಗಳ ಹಿಂದೆಯೇ ಭೂಕಂಪದ ಭವಿಷ್ಯ ನುಡಿದಿದ್ದ ಡಚ್ ವ್ಯಕ್ತಿ; ಇದು ಸಾಧ್ಯವಾ?
ಟರ್ಕಿ ಭೂಕಂಪ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 07, 2023 | 1:52 PM

ನವದೆಹಲಿ: ಟರ್ಕಿಯ ದಕ್ಷಿಣ ಭಾಗ ಮತ್ತು ಸಿರಿಯಾದ ಉತ್ತರ ಭಾಗಗಳು ನಿನ್ನೆ ಸೋಮವಾರ ಪ್ರಬಲ ಭೂಕಂಪಗಳಿಗೆ (Turkey Earthquake) ತತ್ತರಿಸಿಹೋಗಿವೆ. 7.8, 7.7 ಮತ್ತು 6.0 ಹಾಗೂ ಇಂದು 5.6 ತೀವ್ರತೆಯ ಭೂಕಂಪಗಳು ಈ ಭಾಗದಲ್ಲಿ ಸಂಭವಿಸಿವೆ. ಐದು ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 20 ಸಾವಿರ ದಾಟಿ ಹೋಗುವ ಭೀತಿ ಇದೆ. ಆದರೆ, ಟರ್ಕಿಯಲ್ಲಿ ಭೂಕಂಪ ಸಂಭವಿಸಬಹುದು ಎಂದು ಯಾವ ಕಂಪನ ಕೇಂದ್ರಗಳು ಗ್ರಹಿಸಲು ವಿಫಲವಾಗಿವೆ. ಭೂಕಂಪ ಸಾಧ್ಯತೆಯನ್ನು ನಿಖರವಾಗಿ ಕಂಡುಹಿಡಿಯುವಷ್ಟು ತಂತ್ರಜ್ಞಾನ ಇನ್ನೂ ಬೆಳೆದಿಲ್ಲ. ಈ ಸಂದರ್ಭದಲ್ಲಿ, ಈ ಭಾಗದಲ್ಲಿ ಪ್ರಬಲ ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದು ಡಚ್ ಸಂಶೋಧಕರೊಬ್ಬರು 3 ದಿನಗಳ ಹಿಂದೆ ಭವಿಷ್ಯ ನುಡಿದಿದ್ದ ಸಂಗತಿ ಬೆಳಕಿಗೆ ಬಂದಿದೆ.

ಟರ್ಕಿ, ಜೋರ್ಡನ್, ಸಿರಿಯಾ, ಲೆಬನಾನ್ ಇರುವ ಪ್ರದೇಶದಲ್ಲಿ ಇಂದಲ್ಲ ನಾಳೆ 7.5 ತೀವ್ರತೆಯ ಭೂಕಂಪ ಸಂಭವಿಸುತ್ತದೆ ಎಂದು ಫೆಬ್ರುವರಿ 3ರಂದು ಡಚ್ ಸಂಶೋಧಕ ಫ್ರಾಂಕ್ ಹೂಗರ್​ಬೀಟ್ಸ್ ಟ್ವೀಟ್ ಮಾಡಿದ್ದರು.

ಸೋಲಾರ್ ಸಿಸ್ಟಂ ಜಾಮಿಟ್ರಿ ಸರ್ವೇ (ಎಸ್​ಎಸ್​ಜಿಎಸ್– Solar System Geometry Survey) ಸಂಸ್ಥೆಯಲ್ಲಿ ತಜ್ಞರಾಗಿ ಕೆಲಸ ಮಾಡುವ ಫ್ರಾಂಕ್ ಹೂಗರ್​ಬ್ರೀಟ್ಸ್, ಇದೀಗ ತಾನು ಟರ್ಕಿ ಭೂಕಂಪ ಸಾಧ್ಯತೆ ಪತ್ತೆಹಚ್ಚಲು ಏನು ಕಾರಣ ಎಂದು ತಿಳಿಸಿ ನಿನ್ನೆ ಟ್ವೀಟ್ ಮೂಲಕ ವಿವರಣೆ ನೀಡಿದ್ದಾರೆ.

ಇದನ್ನೂ ಓದಿ: Turkey Earthquake: ಕಟ್ಟಡಗಳು ಕುಸಿದುಬೀಳುತ್ತಿರುವ ಭಯಾನಕ ದೃಶ್ಯಗಳು (Videos)

ಅವರ ಪ್ರಕಾರ ಗ್ರಹಗಳ ರಚನೆಯ ಮೂಲಕ ಭೂಕಂಪ ಸಾಧ್ಯತೆಯನ್ನು ಗ್ರಹಿಸಲಾಯಿತಂತೆ. ಬಹಳ ಗಂಭೀರವಾದ ಗ್ರಹಗಳ ಸ್ಥಾನಗಳ ರಚನೆ ಆದಾಗ ಭೂಕಂಪ ಸಾಧ್ಯತೆ ಇರುತ್ತದೆ. ಇಂಥದ್ದು ಕ್ರಿ.. 115 ಮತ್ತು 526 ರಲ್ಲಿ ಆಗಿತ್ತು ಎಂದು ಡಚ್ ಸಂಶೋಧಕ ತಿಳಿಸಿದ್ದಾರೆ.

ಅಂದಹಾಗೆ, ಫ್ರಾಂಕ್ ಅವರ ವಾದವನ್ನು ಹಲವರು ಒಪ್ಪುತ್ತಿಲ್ಲ. ಗ್ರಹಗಳ ರಚನೆಯಿಂದ ಭೂಕಂಪ ಆಗಬಹುದು ಎನ್ನುವುದು ಸುಳ್ಳು ವಿಜ್ಞಾನ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ. ಫ್ರಾಂಕ್ ಅವರು ಕೆಲಸ ಮಾಡುವ ಎಸ್​ಎಸ್​ಜಿಇಒಎಸ್ ಸಂಸ್ಥೆಯು ಭೂಮಿಯ ಕಂಪನಕ್ಕೆ ಬೇರೆ ಗ್ರಹಗಳ ಪ್ರಭಾವ ಹೇಗಿರುತ್ತೆ ಎಂಬುದನ್ನು ಅಧ್ಯಯನ ಮಾಡುತ್ತದೆ.

ಇದನ್ನೂ ಓದಿ: Nature Fury: ಇಂಡೋನೇಷ್ಯಾ, ಹೈಟಿ ಭೂಕಂಪ; ಈ ಶತಮಾನದಲ್ಲಿ ಕಂಡ ಅತ್ಯಂತ ಭೀಕರ ನೈಸರ್ಗಿಕ ವಿಕೋಪ ದುರಂತ

ಗ್ರಹಗಳ ರಚನೆಯಿಂದ ಭೂಮಿಯ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ವಿಜ್ಞಾನಿಗಳು ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ, ಜ್ಯೋತಿಷದಲ್ಲಿ ಪ್ರಮುಖ ಸ್ಥಾನ ಇದೆ. ಪಾಶ್ಚಿಮಾತ್ಯ ಮತ್ತು ಭಾರತೀಯ ಜ್ಯೋತಿಷದಲ್ಲಿ ಗ್ರಹಗಳ ರಚನೆಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಭಾರತೀಯ ಶಾಸ್ತ್ರದಲ್ಲಿ ಇದಕ್ಕೆ ಗ್ರಹ ದೃಷ್ಟಿ ಎನ್ನುತ್ತಾರೆ.

ಡಿಸೆಂಬರ್​ನಲ್ಲಿ ಮತ್ತೊಬ್ಬರಿಂದ ಭವಿಷ್ಯ

ಟರ್ಕಿಯ ಮಾರ್ಮರ ಪ್ರದೇಶದಲ್ಲಿ ದೊಡ್ಡ ಭೂಕಂಪವೊಂದು ಸಂಭವಿಸಬಹುದು ಎಂದು ಡಿಸೆಂಬರ್ ತಿಂಗಳಲ್ಲಿ ಟರ್ಕಿಯ ಭೂವಿಜ್ಞಾನಿ ಸೆರ್ಕನ್ ಇಕೆಲಿ ಎಂಬುವವರು ಭವಿಷ್ಯ ನುಡಿದಿದ್ದರು. ಮಾರ್ಮರಾ ಪ್ರದೇಶದಲ್ಲಿ 1963 ಮತ್ತು 1999ರಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದರಿಂದ ಈ ಬಾರಿ ಸಂಭವಿಸುವ ಭೂಕಂಪದ ತೀವ್ರತೆ 7.0 ದಾಟುವುದಿಲ್ಲ ಎಂದು ಅವರು ಅಂದಾಜು ಮಾಡಿದ್ದರು. ಅವರು ಹೇಳಿದಂತೆ ಅಲ್ಲಿ ಪ್ರಬಲ ಭೂಕಂಪ ಸಂಭವಿಸಿದೆಯಾದರೂ ಕಂಪನದ ತೀವ್ರತೆ 7.0ಕ್ಕಿಂತ ಹೆಚ್ಚಾಗಿದೆ.

Published On - 1:52 pm, Tue, 7 February 23