Starship Rocket: ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡ ಎಲಾನ್ ಮಸ್ಕ್ ಸ್ಪೇಸ್ ಸ್ಟಾರ್​ಶಿಪ್ ರಾಕೆಟ್

|

Updated on: Apr 20, 2023 | 8:53 PM

ಉದ್ಯಮಿ ಎಲಾನ್​ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ನಿರ್ಮಿಸಿರುವ ಜಗತ್ತಿನ ಅತಿದೊಡ್ಡ ರಾಕೆಟ್ ಆಗಿರುವ ಸ್ಟಾರ್​ಶಿಪ್‌ ಪ್ರಾಯೋಗಿಕ ಉಡಾವಣೆಯಾದ ಕೆಲವೇ ಕ್ಷಣದಲ್ಲಿ ಸ್ಫೋಟಗೊಂಡಿದೆ.

Starship Rocket: ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡ ಎಲಾನ್ ಮಸ್ಕ್ ಸ್ಪೇಸ್ ಸ್ಟಾರ್​ಶಿಪ್ ರಾಕೆಟ್
ಸ್ಟಾರ್​ಶಿಪ್ ರಾಕೆಟ್ ಉಡಾವಣೆಯ ದೃಶ್ಯ
Image Credit source: The Guardian
Follow us on

ಟೆಕ್ಸಾಸ್: ಉದ್ಯಮಿ ಎಲಾನ್​ ಮಸ್ಕ್ (Elon Musk) ಒಡೆತನದ ಸ್ಪೇಸ್ ಎಕ್ಸ್ ನಿರ್ಮಿಸಿರುವ ಜಗತ್ತಿನ ಅತಿದೊಡ್ಡ ರಾಕೆಟ್ ಆಗಿರುವ ಸ್ಟಾರ್​ಶಿಪ್‌ (Starship Rocket) ಪ್ರಾಯೋಗಿಕ ಉಡಾವಣೆಯಾದ ಕೆಲವೇ ಕ್ಷಣದಲ್ಲಿ ಸ್ಫೋಟಗೊಂಡಿದೆ. ಟೆಕ್ಸಾಸ್‌ನ ಬೋಕಾ ಚಿಕಾದಲ್ಲಿರುವ ಸ್ಟಾರ್‌ಬೆಸ್‌ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ರಾಕೆಟ್​ ಅನ್ನು ಪ್ರಾಯೋಗಿಕವಾಗಿ ಸ್ಥಳೀಯ ಕಾಲಮಾನ ಗುರುವಾರ ಬೆಳಿಗ್ಗೆ 8.33ಕ್ಕೆ ಉಡಾವಣೆ ಮಾಡಲಾಯಿತು. ವೇಗವಾಗಿ ನಭದತ್ತ ಚಿಮ್ಮಿದ ರಾಕೆಟ್ ಟೇಕಾಫ್ ಆದ ಸುಮಾರು ನಾಲ್ಕು ನಿಮಿಷಗಳ ನಂತರ ಸ್ಫೋಟಗೊಳ್ಳುವ ಮೊದಲು ಆಗಸದಲ್ಲಿ ಅಲುಗಾಡಲು ಮತ್ತು ತಿರುಗಲು ಪ್ರಾರಂಭಿಸಿತು. ನಂತರ ಸ್ಫೋಟಗೊಂಡಿತು.

ರಾಕೆಟ್ ವ್ಯವಸ್ಥೆಯ ಎರಡು ವಿಭಾಗಗಳಾದ ಬೂಸ್ಟರ್ ಮತ್ತು ಕ್ರೂಸ್ ನೌಕೆ ಉಡ್ಡಯನದ ನಂತರ ಸರಿಯಾಗಿ ಬೇರ್ಪಡಲು ಸಾಧ್ಯವಾಗದಿರುವುದು ಸ್ಫೋಟಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ. ನಿಗದಿತ ಸಮಯಕ್ಕಿಂತ ಮುಂಚಿತವಾಗಿ ರಾಕೆಟ್‌ ಬೇರ್ಪಟ್ಟಿದ್ದರಿಂದ ಸ್ಫೋಟ ಸಂಭವಿಸಿದೆ ಎಂದು ಸ್ಪೇಸ್ ಎಕ್ಸ್ ಟ್ವೀಟ್ ಮಾಡಿದೆ.

ಸ್ಟಾರ್​​ಶಿಪ್ ಸ್ಫೋಟಗೊಂಡು ಛಿದ್ರಛಿದ್ರವಾಗುತ್ತಿರುವ ದೃಶ್ಯಾವಳಿಗಳುಳ್ಳ ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಅಂತರರಾಷ್ಟ್ರೀಯ ಸುದ್ದಿವಾಹಿನಿಗಳೂ ಪ್ರಸಾರ ಮಾಡಿವೆ.

ಮುಂದೂಡಿಕೆಯಾಗಿದ್ದ ಪ್ರಾಯೋಗಿಕ ಉಡಾವಣೆ

ಪೂರ್ವನಿಗದಿಯಂತೆ ರಾಕೆಟ್​ನ ಪ್ರಾಯೋಗಿಕ ಉಡಾವಣೆ ಏಪ್ರಿಲ್ 18ರಂದು ನಡೆಯಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಯ ಕಾರಣದಿಂದ ಉಡಾವಣೆಯನ್ನು 48 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಒಟ್ಟಾರೆಯಾಗಿ ಸ್ಟಾರ್​ಶಿಪ್ 390 ಅಡಿ ಎತ್ತರವಿತ್ತು. ಇದರಲ್ಲಿ ಸ್ಟಾರ್​​ಶಿಪ್ 164 ಅಡಿ ಎತ್ತರ ಮತ್ತು ಬೂಸ್ಟರ್ 230 ಅಡಿ ಎತ್ತರ ಹೊಂದಿದ್ದವು. ಸ್ಟಾರ್​​ಶಿಪ್ ಭೂಮಿಗೆ ಸುತ್ತುವರಿದು, ಬಳಿಕ ಪೆಸಿಫಿಕ್‌ ಸಮುದ್ರಕ್ಕಿಳಿಯುವಂತೆ ಮಾಡುವ ಯೋಜನೆ ರೂಪಿಸಲಾಗಿತ್ತು. ಗಗನಯಾತ್ರಿಗಳನ್ನು ಚಂದ್ರ ಹಾಗೂ ಮಂಗಳ ಗ್ರಹಕ್ಕೆ ಕರೆದೊಯ್ಯುವ ಉದ್ದೇಶದೊಂದಿಗೆ ಈ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಇದೀಗ ಸ್ಟಾರ್​​ಶಿಪ್ ಸ್ಫೋಟಗೊಳ್ಳುವುದರೊಂದಿಗೆ ಯೋಜನೆಗೆ ತುಸು ಹಿನ್ನಡೆಯಾದಂತಾಗಿದೆ.

ಅಂತಾರಾಷ್ಟ್ರೀಯಸ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ