ಸದ್ಯ ಆಫ್ರಿಕನ್ನರ ಪಾಲಿಗೆ ವೈದ್ಯೋ ನಾರಾಯಣ ಹರಿ ಆಗಿರುವ ಹಕ್ಕಿಪಿಕ್ಕಿಗಳು ಆಫ್ರಿಕಾಗೆ ಹೋಗಿದ್ದು ಹೇಗೆ? ಯುದ್ಧಪೀಡಿತ ಸುಡಾನ್‌ನಲ್ಲಿ ಈಗ ಇವರ ಪಡಿಪಾಟಲು ಹೇಗಿದೆ?
Hakki Pikki Community In Africa: ಪ್ರತಿವರ್ಷ ನಮ್ಮ ಜನಾಂಗದ ಕನಿಷ್ಠ ನಾಲ್ಕೈದು ಸಾವಿರ ಮಂದಿ ಆಫ್ರಿಕಾಕ್ಕೆ ತೆರಳುತ್ತಾರೆ. ಆದರೆ ಈಗ ಯುದ್ಧಪೀಡಿತ ಸುಡಾನ್‌ನಲ್ಲಿ ನಮ್ಮವರು ಅತಂತ್ರರಾಗಿದ್ದಾರೆ.
ನಮ್ಮದೇ ಕರ್ನಾಟಕದ ಅಲೆಮಾರಿ ಹಕ್ಕಿಪಿಕ್ಕಿ ಸಮುದಾಯ ಸದ್ಯ ದೂರದ ಆಫ್ರಿಕಾ ಖಂಡದಲ್ಲಿ ಪರದಾಡುತ್ತಿದೆ. ಯುದ್ಧಪೀಡಿತ ಸುಡಾನ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ ಹಕ್ಕಿಪಿಕ್ಕಿ ಜೀವಭಯದಲ್ಲಿ ಕಾಲ ಕಳೆಯುವಂತಾಗಿದೆ. ಕರ್ನಾಟಕದ ಕಾಡುಗಳಲ್ಲಿ ವಾಸಿಸುತ್ತಿದ್ದ ಹಕ್ಕಿ ಪಿಕ್ಕಿ ಸಮುದಾಯ ಆಫ್ರಿಕಾ ಖಂಡದೊಳಕ್ಕೆ ಕಾಲಿಟ್ಟಿದ್ದಾದ್ರೂ ಯಾಕೆ? ಹೇಗೆ? ಜೀವನ ರೂಪಿಸಿಕೊಳ್ಳಲು ಹೋಗಿ ಅವರು ಅನುಭವಿಸುತ್ತಿರುವ ಸಂಕಷ್ಟ ಎಂತಹದ್ದು? ಇಲ್ಲಿದೆ ವಿವರ (Karnataka’s Hakki Pikki Community Struggle In Africa).
ಕರ್ನಾಟಕದಲ್ಲಿ ಸುಮಾರು ಮೂರು ಲಕ್ಷ ಸಂಖ್ಯೆಯಲ್ಲಿರುವ ಹಕ್ಕಿಪಿಕ್ಕಿ ಸಮುದಾಯದ ಜನಕ್ಕೆ ಮೊದಲು ಇಲ್ಲಿನ ಕಾಡು- ಕಾಡು ಪ್ರಾಣಿಗಳ ಶಿಕಾರಿಯೇ ಹೊಟ್ಟೆಪಾಡಾಗಿತ್ತು. ಡೇರೆಗಳಲ್ಲಿ ಬದುಕು ಕಳೆಯುತ್ತಿತ್ತು. ಆದತರೆ ಕಾಲಾಂತರದಲ್ಲಿ ಮೂಲವೃತ್ತಿಗೆ ತಿಲಾಂಜಲಿಯಿಟ್ಟು, ಗಿಡಮೂಲಿಕೆ ಸಂಗ್ರಹದ ಹಿಂದೆ ಬಿದ್ದರು. ಎಲ್ಲೋ ದೂರದ ಆಫ್ರಿಕದಲ್ಲಿ ಭಾರತದ ಗಿಡಮೂಲಿಕೆಗಳಿಗೆ, ತೈಲಗಳಿಗೆ ಮಾರುಕಟ್ಟೆ ಇದೆ ಎಂದು ತಿಳಿಯುತ್ತಿದ್ದಂತೆ ಬಹುತೇಕರು ಆಫ್ರಿಕಾಗೆ ಗಂಟುಮೂಟೆ ಕಟ್ಟಿದರು.
ಹಕ್ಕಿಪಿಕ್ಕಿಗಳಿಗೆ ಆಫ್ರಿಕಾದಲ್ಲಿ ಮಾರುಕಟ್ಟೆ ಕಂಡಿದ್ದೇಗೆ?
ಗಮನಾರ್ಹವೆಂದರೆ ಈ ಅಲೆಮಾರಿ ಜನಾಂಗದವರು ಕೇರಳ, ಮದುಮಲೈ, ಬಂಡೀಪುರ, ನೇಪಾಳ, ಉತ್ತರಾಖಂಡದಂಥ ಕಾಡುಗಳಲ್ಲಿ ಗಿಡಮೂಲಿಕೆಗಳನ್ನು ಸಂಗ್ರಹಿಸಿ, ಅದನ್ನು ಆಫ್ರಿಕದ ರಾಷ್ಟ್ರಗಳಲ್ಲಿ ಮಾರುತ್ತಾರೆ. ಗಿಡಮೂಲಿಕೆ ಬಳಸಿ, ಆಯುರ್ವೇದದಿಂದ ತೈಲ ತಯಾರಿಸಿ ಅಲ್ಲಿಗೆ ಹೊತ್ತೊಯ್ಯುತ್ತಾರೆ. ಅಲ್ಲಿ ಮಸಾಜ್ ವೃತ್ತಿಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು vijaykarnataka.com ವರದಿ ಮಾಡಿದೆ.
2 ದಶಕದ ಹಿಂದೆ ಹುಣಸೂರು ತಾಲೂಕಿನಿಂದ ಕೆಲವರು ದುಬೈಗೆ ಗಿಡಮೂಲಿಕೆ, ತೈಲಗಳನ್ನು ತೆಗೆದುಕೊಂಡು ಹೋಗಿ, ಮಸಾಜ್ ವೃತ್ತಿಗಿಳಿದಿದ್ದರು. ಆದರೆ ಅಲ್ಲಿ ಝಾಂಬಿಯಾದಿಂದ ಪ್ರಜೆಯೊಬ್ಬ ನೀವು ಸೀದಾ ಆಫ್ರಿಕಾಕ್ಕೆ ಬನ್ನಿ. ಅಲ್ಲಿ ಭಾರತೀಯ ಗಿಡಮೂಲಿಕೆಗಳಿಗೆ ಇಲ್ಲಿಗಿಂತ ಭಾರೀ ಬೇಡಿಕೆ ಇದೆ ಎಂದು ಅವರೆಲ್ಲ ಝಾಂಬಿಯಾಕ್ಕೆ ಆಹ್ವಾನವಿತ್ತು. ಇವರೋ ಮತ್ತೆ ಗಂಟುಮೂಟೆ ಕಟ್ಟಿ ಅಲ್ಲಿಗೆ ತೆರಳಿದರು. ಅಲ್ಲಿ ವ್ಯಾಪಾರ ಕುದುರಿತು. ಆದರೆ ಅಲ್ಲಿಂದ ಕೆಲವರು ಹುಟ್ಟೂರಿಗೆ ಮರಳಿದರು. ಹಾಗಂತ ಬರಿಗೈಯಲ್ಲೇನೂ ಅವರು ಬರಲಿಲ್ಲ. ಶ್ರೀಮಂತರಾಗಿಯೇ ಬಂದು ಇಲ್ಲಿ ಬಂಗಲೆ, ಕಾರು ಖರೀದಿಸಿ ವಿಲಾಸಿ ಜೀವನ ಕಾಣತೊಡಗಿದರು.
ಇದರಿಂದ ಉಳಿದವರೂ ಇಲ್ಲಿಂದ ಆಫ್ರಿಕಾಕ್ಕೆ ಗಂಟುಮೂಟೆ ಕಟ್ಟಿದರು. ಪ್ರತಿವರ್ಷ ಸರಾಸರಿ ನಾಲ್ಕು ಸಾವಿರ ಮಂದಿ ಹಕ್ಕಿಪಿಕ್ಕಿಗಳು ಆಫ್ರಿಕಾಕ್ಕೆ ಹೋಗುತ್ತಿದ್ದಾರೆ. ವಿಮಾನದಲ್ಲಿ ಮುಂಬಯಿ ಮೂಲಕ ಆಫ್ರಿಕಾ ತಲುಪಲು 60-70 ಸಾವಿರ ರೂ. ಇದ್ದರೆ ಸಾಕಾದೀತು. ಆಫ್ರಿಕಾ ರಾಷ್ಟ್ರಗಳಲ್ಲಿ ಇನ್ನೂ ಕಡುಬಡತನ ಕಾಡುತ್ತಿದೆ. ಅಲ್ಲಿಆಸ್ಪತ್ರೆ ಸೌಲಭ್ಯಗಳು ಕಳಪೆ ಸ್ಥಿತಿಯಲ್ಲಿವೆ. ಅದರ ಲಾಭ ಪಡೆದು ಅಲ್ಪ ಬೆಲೆಗೆ ಗಿಡಮೂಲಿಕೆ ಮಾರಾಟ ಮಾಡತೊಡಗಿದರು.
ಇದರಿಂದ ಬಡ ಆಫ್ರಿಕನ್ನರ ಆರೋಗ್ಯ ಸುಧಾರಿಸಿದರೆ, ಇತ್ತ ಹಕ್ಕಿಪಿಕ್ಕಿಗಳ ಆರ್ಥಿಕ ಸ್ಥಿತಿಯೂ ಸುದಾರಣೆ ಕಾಣತೊಡಗಿತು. ಭಾರತದ ಆಯುರ್ವೇದ ಔಷಧಗಳ ಮೇಲೆ ಆಫ್ರಿಕನ್ನರಿಗೆ ಹೆಚ್ಚು ನಂಬಿಕೆ! ಆಯುರ್ವೇದದ 100 ರೂ. ಔಷಧದ ಬಾಟಲಿಗೆ ಅಲ್ಲಿ1 ಸಾವಿರ ರೂ. ಇದೆ! ಬಲಶಾಲಿ ಕೂಲಿ ಆಫ್ರಿಕನ್ನರು ಮೈಕೈ ನೋವಿಗೆ ತೈಲ, ಮಸಾಜನ್ನು ಹೆಚ್ಚು ಇಷ್ಟಪಡುತ್ತಾರೆ. ಈ ಕಾರಣದಿಂದ ಹಕ್ಕಿಪಿಕ್ಕಿಗಳು ಆಪತ್ಬಾಂಧವರಾಗಿದ್ದಾರೆ.
ಹಕ್ಕಿಪಿಕ್ಕಿ ಜನರು ಆಫ್ರಿಕಾದ 36 ರಾಷ್ಟ್ರಗಳಿಗೆ ಟೂರಿಸ್ಟ್ ವೀಸಾಗಳ ಮೂಲಕ ತೆರಳುತ್ತಾರೆ. ಆದರೆ ಈ ವೀಸಾದಡಿ ವ್ಯಾಪಾರ ಮಾಡುವ ಹಾಗಿಲ್ಲ. ಹಾಗಾಗಿ ಇವರು ಮಾಡುವ ಔಷಧ ವ್ಯಾಪಾರ, ಮಸಾಜ್ ವೃತ್ತಿಗಳು ಅಲ್ಲಿ ಕಾನೂನುಬಾಹಿರ. ಇವರ ಮಸಾಜ್ ತೈಲಕ್ಕೆ ಏರ್‌ಪೋರ್ಟ್‌ಗಳಲ್ಲಿ ಲ್ಯಾಬ್ ಪ್ರಮಾಣಪತ್ರ ಕೇಳುತ್ತಾರೆ. ಮಾರಾಟದ ಲೈಸೆನ್ಸ್ ಕೇಳುತ್ತಾರೆ. ಇವ್ಯಾವುವೂ ಇವರ ಬಳಿ ಇರುವುದಿಲ್ಲ.
ಅಲ್ಲಿನ ಅಧಿಕಾರಿಗಳಿಗೆ ಹಣ ನೀಡಿ, ಆಫ್ರಿಕಾದ ರಾಷ್ಟ್ರಗಳನ್ನು ಪ್ರವೇಶಿಸುತ್ತಾರೆ. ದುಬಾರಿ ಬಾಡಿಗೆ ಮನೆಗಳನ್ನು ಹಿಡಿದು, ಒಂದೇ ಪುಟ್ಟ ಮನೆಯಲ್ಲಿ 15-20 ಜನ ವಾಸಿಸುತ್ತಾರೆ. ಕೇವಲ ಸುಡಾನ್ ಮಾತ್ರವಲ್ಲ ಪ್ರಸ್ತುತ ಕೆಮರೂನ್, ಗ್ಯಾಬನ್, ಡಿಆರ್ ಕಾಂಗೊ, ಕಾಂಗೊ, ದಕ್ಷಿಣ ಆಫ್ರಿಕ, ಕೀನ್ಯಾ, ಇಥಿಯೋಪಿಯಾದಲ್ಲಿ ನೂರಾರು ಅಲೆಮಾರಿಗಳಿದ್ದಾರೆ. ಅಲ್ಲಿ ಹೆಚ್ಚೇನು ಬೇಡಾ, ಕೇವಲ ಒಂದು ವರ್ಷ ಕಾಲ ವೃತ್ತಿ ನಡೆಸಿ, ಮರಳುತ್ತಾರೆ.
ಪ್ರತಿವರ್ಷ ನಮ್ಮ ಜನಾಂಗದ ಕನಿಷ್ಠ ನಾಲ್ಕೈದು ಸಾವಿರ ಮಂದಿ ಆಫ್ರಿಕಾಕ್ಕೆ ತೆರಳುತ್ತಾರೆ. ಯಾವ ಲೈಸೆನ್ಸೂ ಇಲ್ಲದೆ ಅಲ್ಲಿ ಗಿಡಮೂಲಿಕೆಗಳನ್ನು ಮಾರುತ್ತಾರೆ. ಅಲ್ಲಿನ ದೇಶಗಳು ಅತ್ಯಂತ ವಿಚಿತ್ರ. ಒಂದಲ್ಲ ಒಂದು ಕಾರಣಕ್ಕೆ ನಮ್ಮವರು ಅಲ್ಲಿ ಸಂಕಷ್ಟ ಅನುಭವಿಸುತ್ತಾರೆ. ಈಗ ಯುದ್ಧಪೀಡಿತವಾಗಿರುವ ಸುಡಾನ್‌ನಲ್ಲಿ ನಮ್ಮವರು ಅತಂತ್ರರಾಗಿದ್ದಾರೆ.
ಆದರೆ, ಇದರ ಬಗ್ಗೆ ಧ್ವನಿಯೆತ್ತಲು ನಮ್ಮ ಸಮುದಾಯದಲ್ಲಿಒಬ್ಬ ಶಾಸಕನೂ ಇಲ್ಲ, ಸಂಸದನೂ ಇಲ್ಲ. ಎಲ್ಲೆಡೆ ಚದುರಿ ಹೋಗಿರುವ ನಮ್ಮವರು ವೋಟ್ ಬ್ಯಾಂಕ್ ಆಗಿಲ್ಲ. ಸುಡಾನ್‌ನಲ್ಲಿಅತಂತ್ರರಾಗಿರುವವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ. ಕಾದು ನೋಡಬೇಕು ಎನ್ನುತ್ತಾರೆ ಹಕ್ಕಿ ಪಿಕ್ಕಿ ಬುಡಕಟ್ಟು ಸಂಘಟನೆಯ ರಾಜ್ಯಾಧ್ಯಕ್ಷ ಪುನೀತ್ ಕುಮಾರ್.