ಮಮ್ಮುಟಿ ಮೇಲೆ ಗಂಭೀರ ಆರೋಪ ಮಾಡಿದ ನಟ ಪರೇಶ್ ರಾವಲ್
Paresh Rawal: ಹಿರಿಯ ನಟ ಪರೇಶ್ ರಾವಲ್ ತಮ್ಮ ಅದ್ಭುತ ಅಭಿನಯದಿಂದ ದಶಕಗಳಿಂದಲೂ ಪ್ರೇಕ್ಷಕರ ರಂಜಿಸುತ್ತಾ ಬಂದಿದ್ದಾರೆ. ಅತ್ಯುತ್ತಮ ನಟರಾದ ಪರೇಶ್ ಅವರಿಗೆ ಹಲವಾರು ಪ್ರಶಸ್ತಿಗಳು ಈ ವರೆಗೆ ಧಕ್ಕಿವೆ. ಆದರೆ ಪರೇಶ್ ಅವರಿಗೆ ಧಕ್ಕಿದ್ದ ರಾಷ್ಟ್ರಪ್ರಶಸ್ತಿಯನ್ನು ದಕ್ಷಿಣದ ಸ್ಟಾರ್ ನಟರೊಬ್ಬರು ಲಾಭಿ ಮಾಡಿ ಪಡೆದುಕೊಂಡಿದ್ದರಂತೆ. ಆ ಬಗ್ಗೆ ಅವರು ಮಾತನಾಡಿದ್ದಾರೆ.

ಬಿಜೆಪಿಯ ಮಾಜಿ ಸಂಸದ, ಹಿರಿಯ ನಟ ಪರೇಶ್ ರಾವಲ್ (Paresh Rawal) ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದರಲ್ಲಿ ಹಿಂದೆ ಮುಂದೆ ನೋಡುವವರಲ್ಲ. ಯಾವ ನಟರ ಬಗ್ಗೆಯೇ ಆಗಿರಲಿ ಯಾವುದೇ ಹಿಂಜರಿಕೆ ಇಲ್ಲದೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಲಲನ್ಟಾಪ್ ಸಂದರ್ಶನದಲ್ಲಿ ಮಾತನಾಡಿರುವ ನಟ ಪರೇಶ್ ರಾವಲ್ ಚಿತ್ರರಂಗದ ಅನೇಕ ವಿಷಯಗಳ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ಹಿರಿಯ ನಿರ್ಮಾಪಕ, ನಟರ ವಿರುದ್ಧ ನೇರವಾಗಿ ಹೆಸರು ಹೇಳಿಯೇ ಆರೋಪಗಳನ್ನು, ಟೀಕೆಗಳನ್ನು ಮಾಡಿದ್ದಾರೆ. ಮಲಯಾಳಂ ಸ್ಟಾರ್ ನಟ ಮಮ್ಮುಟಿ (Mammooty) ಬಗ್ಗೆಯೂ ಈ ಸಂದರ್ಶನದಲ್ಲಿ ಅವರು ಪ್ರಸ್ತಾಪ ಮಾಡಿದ್ದಾರೆ.
ತಮಗೆ ಬಂದಿದ್ದ ರಾಷ್ಟ್ರಪ್ರಶಸ್ತಿಯನ್ನು ಕೊನೆ ಕ್ಷಣದಲ್ಲಿ ಲಾಭಿ ಮಾಡಿ ಮಲಯಾಳಂ ಸ್ಟಾರ್ ನಟ ಮಮ್ಮುಟಿಗೆ ಕೊಡಲಾಯಿತು ಎಂದು ಪರೇಶ್ ಆರೋಪ ಮಾಡಿದ್ದಾರೆ. ನೇರವಾಗಿ ಮಮ್ಮುಟಿಯೇ ಲಾಭಿ ಮಾಡಿದರು ಎಂದು ಪರೇಶ್ ಹೇಳಿಲ್ಲವಾದರೂ, ಮಮ್ಮುಟಿ ಪರವಾಗಿ ರಾಜಕಾರಣಿಯೊಬ್ಬರು ತೀವ್ರ ಲಾಭಿ ಮಾಡಿ ಪ್ರಶಸ್ತಿಯನ್ನು ಮಲಯಾಳಂ ಸ್ಟಾರ್ಗೆ ಕೊಡಿಸಿದರು ಎಂದಿದ್ದಾರೆ ಪರೇಶ್ ರಾವಲ್.
ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ನಾನು 1993-94 ರ ಸಮಯ ಇರಬಹುದು ಸಿನಿಮಾ ಒಂದಕ್ಕಾಗಿ ಮಾರಿಷಸ್ನಲ್ಲಿ ಶೂಟಿಂಗ್ ಮಾಡುತ್ತಿದ್ದೆ. ನನಗೆ ಮೊದಲು ಮಹೇಶ್ ಭಟ್ ಕರೆ ಮಾಡಿ, ನಿನಗೆ ರಾಷ್ಟ್ರಪ್ರಶಸ್ತಿ ಸಿಗಲಿದೆ. ಕೇತನ್ ಮೆಹ್ತಾ ನಿರ್ದೇಶನದ ‘ಸರ್ದಾರ್’ ಸಿನಿಮಾದ ನಟನೆಗೆ ನಿನಗೆ ರಾಷ್ಟ್ರಪ್ರಶಸ್ತಿ ಸಿಗುವ ಸಾಧ್ಯತೆ ಇದೆ’ ಎಂದರು. ಆ ಬಳಿಕ ನಿರ್ದೇಶಕಿ ಕಲ್ಪನಾ ಲಾಜ್ಮಿ ಕರೆ ಮಾಡಿ ರಾಷ್ಟ್ರಪ್ರಶಸ್ತಿ ಸಿಕ್ಕಿದೆ ಎಂದು ಖಾತ್ರಿಯಾಗಿ ಹೇಳಿದರು. ನಾನು ‘ಸರ್ದಾರ್’ ಸಿನಿಮಾಕ್ಕೆ ಸಿಕ್ಕಿದೆ ತಾನೆ ಎಂದು ಒತ್ತಿ ಕೇಳಿದೆ. ಆಕೆಯೂ ಸಹ ಹೌದು ಎಂದೇ ಹೇಳಿದರು. ಖುಷಿಯಲ್ಲಿ ನಾನು ಮಾರಿಷಸ್ನಿಂದ ದೆಹಲಿಗೆ ವಾಪಸ್ಸಾದೆ. ಆದರೆ ಇಲ್ಲಿ ಬಂದು ನೋಡಿದರೆ ಎಲ್ಲವೂ ಬದಲಾಗಿತ್ತು’ ಎಂದಿದ್ದಾರೆ ಪರೇಶ್.
ಇದನ್ನೂ ಓದಿ:ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿಯ ಸಿನಿಮಾನಲ್ಲಿ ಶ್ರೀಲೀಲಾ
ದೆಹಲಿಗೆ ತಲುಪುವ ವೇಳೆಗೆ ಪರೇಶ್ ರಾವಲ್ಗೆ ‘ಸರ್’ ಸಿನಿಮಾಕ್ಕೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದೊರೆತಿದೆ ಎಂದು ಘೋಷಣೆಯಾಯ್ತು. ಇದು ನನಗೆ ಬಹಳ ಬೇಸರವಾಯ್ತು. ನಾನು ಚಿತ್ರರಂಗದವರಿಗೆ, ಸಿನಿಮಾ ಪ್ರಶಸ್ತಿ ಸಮಿತಿಯಲ್ಲಿರುವವರಿಗೆ ಕರೆ ಮಾಡಿ ವಿಚಾರಿಸಿದೆ ಆದರೆ ಯಾರೂ ಸಹ ನನಗೆ ಸರಿಯಾದ ಉತ್ತರ ನೀಡಲಿಲ್ಲ. ಕೊನೆಗೆ ಆಂಧ್ರದ ರಾಜಕಾರಣಿ ಟಿ ಸುಬ್ರಹ್ಮಣ್ಯ ರೆಡ್ಡಿ ನನಗೆ ಸರಿಯಾದ ಉತ್ತರ ನೀಡಿದರು. ಅವರೇ ಹೇಳಿದಂತೆ, ‘ನೀವು ಲಾಭಿ ಮಾಡಲಿಲ್ಲಿ ಹಾಗಾಗಿ ನಿಮಗೆ ಪ್ರಶಸ್ತಿ ಕೈತಪ್ಪಿತು, ಆದರೆ ನಾವು ತೀವ್ರ ಲಾಭಿ ಮಾಡಿದೆವು, ಮಮ್ಮುಟಿಗೆ ಪ್ರಶಸ್ತಿ ಕೊಡಿಸಿದೆವು’ ಎಂದಿದ್ದಾರೆ ಪರೇಶ್ ರಾವಲ್. ಆ ವರ್ಷ ‘ವಿಧೇಯನ್’ ಮತ್ತು ‘ಪೊಂತನ್ ಮಾದ’ ಸಿನಿಮಾಕ್ಕೆ ಮಮ್ಮುಟಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ದೊರಕಿತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




