ಆಮಿರ್ ಖಾನ್ಗೆ ‘ಮಿಸ್ಟರ್ ಪರ್ಫೆಕ್ಷನಿಸ್ಟ್’ ಹೆಸರು ಕೊಟ್ಟಿದ್ದು ಇದೇ ವ್ಯಕ್ತಿ
Aamir Khan: ಬಾಲಿವುಡ್ನ ಮೂವರು ಖಾನ್ಗಳಲ್ಲಿ ಆಮಿರ್ ಖಾನ್ ಸಹ ಒಬ್ಬರು. ಸಲ್ಮಾನ್, ಶಾರುಖ್ ರೀತಿ ಪಕ್ಕಾ ಕಮರ್ಶಿಯಲ್ ಸಿನಿಮಾ ಮಾಡದ ಆಮಿರ್ ಖಾನ್ ಒಳ್ಳೆಯ ಸಿನಿಮಾಗಳನ್ನೇ ಮಾಡುತ್ತಾ ಬಂದವರು. ಪಾತ್ರ ನಿರ್ವಹಿಸಲು ಯಾವ ಹಂತಕ್ಕೆ ಬೇಕಾದರೂ ಹೋಗುವ ಆಮಿರ್ ಖಾನ್ ಇದೇ ಕಾರಣಕ್ಕೆ ಪರ್ಫೆಕ್ಷನಿಸ್ಟ್ ಹೆಸರು ಪಡೆದುಕೊಂಡಿದ್ದಾರೆ ಎಂದುಕೊಳ್ಳಲಾಗಿದೆ. ಆದರೆ ಪರ್ಫೆಕ್ಷನಿಸ್ಟ್ ಹೆಸರು ಬಂದಿರುವುದು ಬೇರೆ ಕಾರಣಕ್ಕೆ, ಆ ಹೆಸರು ಕೊಟ್ಟವರು ಯಾರು? ಕಾರಣ ಏನು? ಇಲ್ಲಿದೆ ಮಾಹಿತಿ...

ಖಾನ್ ತ್ರಯರಲ್ಲಿ ಒಬ್ಬರಾದ ಆಮಿರ್ ಖಾನ್ (Aamir Khan), ಬಾಲಿವುಡ್ನ (Bollywood) ಸ್ಟಾರ್ ನಟ. ಇತರೆ ಖಾನ್ಗಳಾದ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಪಕ್ಕಾ ಹಣ ಗಳಿಸುವ ಮಾಸ್ ಮಸಾಲ, ಕಮರ್ಶಿಯಲ್ ಸಿನಿಮಾಗಳನ್ನು ಮಾಡುತ್ತಾ ಕೋಟಿಗಳ ಮೇಲೆ ಕೋಟಿಗಳನ್ನು ಬಾಚುತ್ತಿದ್ದರೆ ಆಮಿರ್ ಖಾನ್ ಮಾತ್ರ ಸಂದೇಶ ಕೊಡುವ ಸಿನಿಮಾ, ಸದಭಿರುಚಿಯ, ಪರಿಪೂರ್ಣ ಸಿನಿಮಾಗಳನ್ನೇ ನೀಡುವ ಪ್ರಯತ್ನದಲ್ಲಿದ್ದಾರೆ. ಅತ್ತ ಸಲ್ಮಾನ್, ಶಾರುಖ್ ‘ಟೈಗರ್ ಜಿಂದಾ ಹೇ’, ‘ಪಠಾಣ್’, ‘ಜವಾನ್’ ರೀತಿಯ ಸಿನಿಮಾಗಳನ್ನು ಮಾಡುತ್ತಿದ್ದರೆ, ಇತ್ತ ಆಮಿರ್ ಖಾನ್ ‘ಸಿತಾರೆ ಜಮೀನ್ ಪರ್’ ಅಂಥಹಾ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದೇ ಆಮಿರ್ ಖಾನ್ಗೂ ಇತರೆ ಖಾನ್ಗಳಿಗೂ ಇರುವ ವ್ಯತ್ಯಾಸ.
ಆಮಿರ್ ಖಾನ್ ಎಷ್ಟೋ ವರ್ಷಕ್ಕೊಂದು ಸಿನಿಮಾ ಮಾಡುತ್ತಾರೆ ಆದರೆ ಮಾಡುವ ಸಿನಿಮಾವನ್ನು ಪರಿಪೂರ್ಣತೆಯಿಂದ ಮಾಡುತ್ತಾರೆ. ಸಿನಿಮಾದ ಪಾತ್ರ ನಿರ್ವಹಣೆಗೆ ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ. ಒಂದು ಪಾತ್ರ ಒಪ್ಪಿಕೊಂಡರೆ ಆ ಪಾತ್ರವನ್ನೇ ಜೀವಿಸುತ್ತಾರೆ. ಇದೇ ಕಾರಣಕ್ಕೆ ಅವರನ್ನು ಬಾಲಿವುಡ್ನ ‘ಮಿಸ್ಟರ್ ಪರ್ಫೆಕ್ಷನಿಸ್ಟ್’ ಎಂದು ಕರೆಯಲಾಗುತ್ತದೆ. ಸಿನಿಮಾದ ಪ್ರತಿ ದೃಶ್ಯವೂ ಅವರಿಗೆ ಪರ್ಫೆಕ್ಟ್ ಆಗಿರಬೇಕು, ಪರ್ಫೆಕ್ಟ್ ಆಗಿಲ್ಲದಿದ್ದರೆ ಅವರು ಒಪ್ಪುವುದೇ ಇಲ್ಲ. ಇದೇ ಕಾರಣಕ್ಕೆ ಅವರ ಸಿನಿಮಾ ಬಹಳ ತಡವಾಗುತ್ತದೆ. ಆದರೆ ಆಮಿರ್ ಖಾನ್ಗೆ ಈ ‘ಮಿಸ್ಟರ್ ಪರ್ಫೆಕ್ಷನಿಸ್ಟ್’ ಹೆಸರು ಕೊಟ್ಟಿದ್ದು ಯಾರು? ಮತ್ತು ಏಕೆ? ಈ ವಿಷಯ ಅವರೇ ಹೇಳಿಕೊಂಡಿದ್ದಾರೆ.
ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗುವ ಕಮಿಲ್ ಶರ್ಮಾ ಶೋಗೆ ಆಗಮಿಸಿದ್ದ ಆಮಿರ್ ಖಾನ್, ಕಪಿಲ್ ಎದುರು ಈ ವಿಷಯ ಹೇಳಿಕೊಂಡಿದ್ದರು. 1990 ರ ಸಮಯದಲ್ಲಿ ಆಮಿರ್ ಖಾನ್ ‘ದಿಲ್’ ಹೆಸರಿನ ಸಿನಿಮಾದ ಶೂಟಿಂಗ್ ಮಾಡುತ್ತಿದ್ದರಂತೆ. ಆ ಸಿನಿಮಾಕ್ಕೆ ನಟಿ ಶಬಾನಾ ಆಜ್ಮಿ ಅವರ ಸಹೋದರ ಬಾಬಾ ಆಜ್ಮಿ ಕ್ಯಾಮೆರಾಮನ್ ಆಗಿದ್ದರಂತೆ. ಆ ಸಮಯದಲ್ಲಿ ಆಮಿರ್ ಖಾನ್, ಬಾಬಾ ಆಜ್ಮಿಯನ್ನು ಕಾಣಲು ಅವರ ಮನೆಗೆ ಹೋಗಿದ್ದರಂತೆ ಅಲ್ಲಿಯೇ ಇದ್ದ ಶಬಾನಾ ಆಜ್ಮಿ ಆಮಿರ್ ಖಾನ್ಗೆ ಟೀ ತಂದು ಕೊಟ್ಟು, ಸಕ್ಕರೆ ಎಷ್ಟು ಹಾಕಲಿ ಎಂದು ಕೇಳಿದರಂತೆ.
ಇದನ್ನೂ ಓದಿ:ಶಾರುಖ್ ಖಾನ್ ರೀತಿಯೇ ಮನೆ ಬಿಡಲು ನಿರ್ಧರಿಸಿದ ಆಮಿರ್ ಖಾನ್; ಕಾರಣ ಏನು?
ಬಾಬಾ ಆಜ್ಮಿ ಜೊತೆ ಏನೋ ಗಂಭೀರವಾಗಿ ಚರ್ಚಿಸುತ್ತಿದ್ದ ಆಮಿರ್ ಖಾನ್, ಟೀಗೆ ಸಕ್ಕರೆ ಎಷ್ಟು ಹಾಕಬೇಕು ಎಂದು ಕೇಳಿದ ಶಬಾನಾ ಆಜ್ಮಿ ಕಡೆ ತಿರುಗಿ, ಕಪ್ ಎಷ್ಟು ದೊಡ್ಡದಿದೆ ಎಂದು ಕೇಳಿದರಂತೆ. ಶಬಾನಾ ಆಜ್ಮಿ, ಟೀ ಹಾಕಲು ಇಟ್ಟಿದ್ದ ಕಪ್ ಅನ್ನು ತೋರಿಸಿದರಂತೆ. ಚಮಚ ಎಷ್ಟು ದೊಡ್ಡದಿದೆ ಎಂದು ಕೇಳಿದರಂತೆ ಆಮಿರ್ ಖಾನ್, ಬಳಿಕ ಶಬಾನಾ ಚಮಚವನ್ನೂ ತಂದು ತೋರಿಸಿದರಂತೆ. ಅದನ್ನು ನೋಡಿದ ಆಮಿರ್ ಖಾನ್, ಹಾಗಿದ್ದರೆ ಒಂದು ಚಮಚ ಸಕ್ಕರೆ ಹಾಕಿ ಎಂದು ಹೇಳಿದವರೆ ಅತ್ತ ತಿರುಗಿ ಬಾಬಾ ಆಜ್ಮಿ ಜೊತೆ ಚರ್ಚೆಯಲ್ಲಿ ನಿರತರಾದರಂತೆ.
ಈ ಸಂಗತಿಯನ್ನು ಶಬಾನಾ ಆಜ್ಮಿ ಎಲ್ಲರ ಬಳಿ ಹೇಳಿಕೊಂಡರಂತೆ. ‘ಆಮಿರ್ ಖಾನ್ ಗೆ ಟೀ ಕುಡಿಯುವಂತೆ ಹೇಳಿದರೆ ಕಪ್ ಎಷ್ಟು ದೊಡ್ಡದು, ಚಮಚ ಎಷ್ಟು ದೊಡ್ಡದು ಎಂದು ಲೆಕ್ಕಾ ಹಾಕಿ ಸಕ್ಕರೆ ಹಾಕಿಕೊಳ್ಳುತ್ತಾನೆ ಎಂದು ಹೇಳಿ ಅವರೇ ಆಮಿರ್ ಖಾನ್ಗೆ ಮಿಸ್ಟರ್ ಪರ್ಫೆಕ್ಷನಿಸ್ಟ್’ ಎಂದು ಹೆಸರು ಸಹ ಕೊಟ್ಟರಂತೆ. ಶಬಾನಾ ಆಜ್ಮಿ ಕೊಟ್ಟ ಹೆಸರು ಐವತ್ತು ವರ್ಷವಾದರೂ ಆಮಿರ್ ಖಾನ್ ಹೆಸರಿನ ಜೊತೆಗೆ ಸೇರಿಕೊಂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




