ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ, ರ್ಯಾಪರ್ ಬಾದ್ಶಾ ವಿರುದ್ಧ ಪ್ರಕರಣ
Rapper Badshah: ರ್ಯಾಪರ್ ಬಾದ್ಶಾ ತಮ್ಮ ಹೊಸ ಹಾಡನ್ನು ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಮಾಡಿದ್ದಾರೆ. ಏಪ್ರಿಲ್ 11 ರಂದು ಅವರ ಹೊಸ ಹಾಡು ಬಿಡುಗಡೆ ಆಗಿದೆ. ಆದರೆ ಹಾಡಿನಲ್ಲಿ ಚರ್ಚು ಮತ್ತು ಬೈಬಲ್ಗಳ ಬಳಕೆ ಮಾಡಿರುವ ಕಾರಣ ರ್ಯಾಪರ್ ಬಾದ್ಶಾ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪದಡಿ ದೂರು ದಾಖಲಿಸಲಾಗಿದೆ.

ಭಾರತದಲ್ಲಿ ಇತ್ತೀಚೆಗೆ ಕಲಾವಿದರು ಒಂದಲ್ಲ ಒಂದು ವಿವಾದಕ್ಕೆ ಸಿಲುಕುತ್ತಲೇ ಇದ್ದಾರೆ. ಕಮಿಡಿಯನ್ಗಳು, ನಟ-ನಟಿಯರು, ಇತ್ತೀಚೆಗೆ ಹಾಡುಗಾರರ ಮೇಲೂ ಸಹ ಪ್ರಕರಣಗಳು ದಾಖಲಾಗುತ್ತಿವೆ. ಭಾರತದ ಟಾಪ್ ರ್ಯಾಪರ್ಗಳಲ್ಲಿ ಒಬ್ಬರಾಗಿರುವ ರ್ಯಾಪರ್ ಬಾದ್ಶಾ (Badshah) ವಿರುದ್ಧ ಪಂಜಾಬ್ನಲ್ಲಿ ದೂರು ದಾಖಲಾಗಿದೆ. ತಮ್ಮ ಹಾಡಿನ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ನೀಡಿರುವ ಆರೋಪ ಅವರ ವಿರುದ್ಧ ಕೇಳಿ ಬಂದಿದೆ.
ರ್ಯಾಪರ್ ಬಾದ್ಶಾ ಇತ್ತೀಚೆಗಷ್ಟೆ ‘ವೆಲ್ವೆಟ್ ಫ್ಲೋ’ ಹೆಸರಿನ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡಿನಲ್ಲಿ ಚರ್ಚ್, ಬೈಬಲ್ ಪದಗಳ ಬಳಕೆ ಮಾಡಿರುವುದು ಕೆಲ ಕ್ರಿಶ್ಚಿಯನ್ನರನ್ನು ಕೆರಳಿಸಿದಂತಿದೆ. ಇದೇ ಕಾರಣಕ್ಕೆ ಇಮಾನ್ಯುಯೆಲ್ ಮಸಿಹ್ ಎಂಬುವರು ಪಂಜಾಬ್ನಲ್ಲಿ ದೂರು ದಾಖಲಿಸಿದ್ದಾರೆ. ಬಾದ್ಶಾ ತಮ್ಮ ಹಾಡಿನ ಮೂಲಕ ಕ್ರಿಶ್ಚಿಯನ್ನರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಆರೋಪ ಮಾಡಿದ್ದಾರೆ.
ಪಂಜಾಬ್ನ ಗುರುದಾಸ್ಪುರದ ಕಿಲಾ ಲಾಲ್ ಸಿಂಗ್ ಪೊಲೀಸ್ ಠಾಣೆಯಲ್ಲಿ ಬಾದ್ಶಾ ವಿರುದ್ಧ ದೂರು ದಾಖಲಾಗಿದೆ. ಮಾತ್ರವಲ್ಲದೆ ಬಾಟ್ಲಾ ಹೌಸ್ ಬಳಿ ಕ್ರಿಶ್ಚಿಯನ್ ಸಮುದಾಯದವರು ಬಾದ್ಶಾ ವಿರುದ್ಧ ಪ್ರತಿಭಟನೆ ಸಹ ಮಾಡಿದ್ದು, ಹಾಡನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಬಾಲಿವುಡ್ ಸಿನಿಮಾಕ್ಕಾಗಿ ಸಂಭಾವನೆ ತಗ್ಗಿಸಿಕೊಂಡರಾ ನಟಿ ಶ್ರೀಲೀಲಾ
ಬಾದ್ಶಾ ಅವರ ‘ವೆಲ್ವೆಟ್ ಫ್ಲೋ’ ಹಾಡು ಏಪ್ರಿಲ್ 11 ರಂದು ಬಿಡುಗಡೆ ಆಗಿದೆ. ಯೂಟ್ಯೂಬ್ನಲ್ಲಿ ಬಿಡುಗಡೆ ಆದ ಈ ಹಾಡು ಸಖತ್ ಟ್ರೆಂಡಿಂಗ್ ಆಗುತ್ತಿದೆ. ಹಾಡು ಈಗಾಗಲೇ 86 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ‘ಮನೆ ಚರ್ಚ್ನಂತೆ ಅನಿಸಲಿ, ಪಾಸ್ಪೋರ್ಟ್ ಬೈಬಲ್ ರೀತಿ’ ಎಂಬ ಸಾಲು ಆ ಹಾಡಿನಲ್ಲಿದೆ. ಹಾಡಿನಲ್ಲಿ ತಮ್ಮ ಬಗ್ಗೆ ತಾವೇ ಹೇಳಿಕೊಂಡಂತಿದೆ ಬಾದ್ಶಾ.
ರ್ಯಾಪರ್ಗಳಾದ ಬಾದ್ಶಾ ಮತ್ತು ಹನಿಸಿಂಗ್ ನಡುವೆ ವರ್ಷಗಳಿಂದಲೂ ದುಶ್ಮನಿ ಇದ್ದೇ ಇದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹನಿ ಸಿಂಗ್, ಬಾದ್ಶಾ ಅನ್ನು ಕ್ಲೈಂಟ್ ಎಂದು ಕರೆದಿದ್ದರು. ಅದಕ್ಕೆ ಹಾಡು ಮಾಡಿದ್ದ ಬಾದ್ಶಾ ಮತ್ತು ರಫ್ತಾರ್, ‘ಓಯೋ ಆಂಟಿ ನಮ್ಮನ್ನು ಕ್ಲೈಂಟ್ ಎಂದು ಕರೆಯುತ್ತಾಳೆ’ ಎಂದಿದ್ದರು. ಈಗ ಬಾದ್ ಶಾ ಮಾಡಿರುವ ‘ವೆಲ್ವೆಟ್ ಫ್ಲೋ’ ಹಾಡಿನಲ್ಲಿಯೂ ಸಹ ವಿರೋಧಿಗಳನ್ನು ಗುರಿ ಮಾಡಿಕೊಂಡೇ ಹಾಡು ಮಾಡಿದ್ದಾರೆ. ಅದರಲ್ಲಿ ಚರ್ಚ್ ಮತ್ತು ಬೈಬಲ್ ಪದಗಳನ್ನು ಬಳಸಿರುವುದು ಕ್ರಿಶ್ಚಿಯನ್ನರ ಅಸಮಾಧಾನಕ್ಕೆ ಕಾರಣವಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




