ಮಾಂಸ ತಿಂದ ‘ಲಾಪತಾ ಲೇಡೀಸ್’ ನಟಿ ವಿರುದ್ಧ ದಾಖಲಾಯ್ತು ದೂರು
Chhaya Kadam: ‘ಲಾಪತಾ ಲೇಡೀಸ್’, ಕಾನ್ಸ್ ಪ್ರಶಸ್ತಿ ವಿಜೇತ ‘ಆಲ್ ವಿ ಇಮಾಜಿನ್ ಆಸ್ ಲೈಟ್’, ‘ಅಂದಾಧುನ್’, ‘ಸೈರಾಟ್’ ಇನ್ನೂ ಹಲವು ಅತ್ಯುತ್ತಮ ಸಿನಿಮಾಗಳಲ್ಲಿ ನಟಿಸಿರುವ ನಟಿ ಛಾಯಾ ಕದಮ್ ಅವರ ವಿರುದ್ಧ ಕೆಲ ಪ್ರಾಣಿಗಳ ಮಾಂಸದಿಂದ ತಯಾರಿಸಿದ ಖಾದ್ಯ ತಿಂದಿದ್ದಕ್ಕೆ ದೂರು ದಾಖಲಿಸಲಾಗಿದೆ.

ಇತ್ತೀಚೆಗೆ ಬಿಡುಗಡೆ ಆದ ‘ಲಾಪತಾ ಲೇಡೀಸ್’ (laapataa ladies), ಕ್ಯಾನಸ್ ಇನ್ನಿತರೆ ಅಂತರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳ ಗೆದ್ದ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಸೇರಿದಂತೆ ಹಲವು ಅತ್ಯುತ್ತಮ ಸಿನಿಮಾಗಳಲ್ಲಿ ನಟಿಸಿರುವ ಮರಾಠಿ ಮೂಲದ ನಟಿ ಛಾಯಾ ಕದಮ್ ವಿರುದ್ಧ ಅರಣ್ಯ ಇಲಾಖೆಯವರು ದೂರು ದಾಖಲಿಸಿಕೊಂಡಿದ್ದಾರೆ. ನಟಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಹೇಳಿರುವ ಮಾತಿನಿಂದಾಗಿ ಈಗ ಅವರ ವಿರುದ್ಧ ದೂರು ದಾಖಲಾಗಿದೆ.
ರೇಡಿಯೋ ಸಂದರ್ಶನವೊಂದರಲ್ಲಿ ಭಾಗಿ ಆಗಿದ್ದ ನಟಿ ಛಾಯಾ ಕದಮ್ ಆಹಾರದ ವಿಷಯ ಚರ್ಚೆಗೆ ಬಂದಾಗ ತಾವು ಹಲವು ರೀತಿಯ ಮಾಂಸಾಹಾರ ತಿಂದಿರುವುದಾಗಿ ಹೇಳಿದ್ದರು. ಕೆಲವು ಪ್ರಾಣಿಗಳ ಹೆಸರು ಹೇಳಿ ಆ ಪ್ರಾಣಿಗಳ ಮಾಂಸದಿಂದ ತಯಾರಿಸಿದ ಖಾದ್ಯಗಳನ್ನು ತಿಂದಿರುವುದಾಗಿ ನಟಿ ಹೇಳಿದ್ದರು. ಇದನ್ನು ಗಮನಿಸಿದ ಮಹಾರಾಷ್ಟ್ರ ಅರಣ್ಯ ಇಲಾಖೆ ಸಿಬ್ಬಂದಿ ನಟಿಯ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಛಾಯಾ ಕದಮ್ ಅವರ ಸಂದರ್ಶನ ಪ್ರಸಾರವಾದ ಬಳಿಕ, ಪ್ಲ್ಯಾಂಟ್ ಆಂಡ್ ಅನಿಮಲ್ ವೆಲ್ಫೇರ್ ಸೊಸೈಟಿಯು ಥಾಣೆಯ ಅರಣ್ಯ ಇಲಾಖೆ ವಲಯ ಅಧಿಕಾರಿ ಬಳಿ ನಟಿಯ ವಿರುದ್ಧ ದೂರು ದಾಖಲಿಸಿದ್ದಾರೆ. ನಟಿಯು ಕಾನೂನಿಗೆ ವಿರುದ್ಧವಾಗಿ ಸಂರಕ್ಷಿತ ಪ್ರಾಣಿಗಳ ಮಾಂಸದಿಂದ ಮಾಡಿದ ಖಾದ್ಯಗಳನ್ನು ತಿಂದಿರುವುದಾಗಿ ಹೇಳಿದ್ದು, ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಆಸ್ಕರ್ ಅವಾರ್ಡ್ಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆದ ‘ಲಾಪತಾ ಲೇಡಿಸ್’
ಛಾಯಾ ಕದಮ್ ವಿರುದ್ಧ ದೂರು ದಾಖಲಾದ ಬೆನ್ನಲ್ಲೆ ಥಾಣೆ ಅರಣ್ಯ ಇಲಾಖೆ ಅಧಿಕಾರಿಗಳು ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿದ್ದಾರೆ. ನಟಿಯನ್ನು ಫೋನ್ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು ಸಂಪರ್ಕಿಸಿದ್ದು, ನಟಿ, ತಾನು ಸಿನಿಮಾ ಚಿತ್ರೀಕರಣಕ್ಕಾಗಿ ಹೊರಗೆ ಬಂದಿದ್ದು, ವಾಪಸ್ಸಾದ ಬಳಿಕ ತಮ್ಮ ವಕೀಲರ ಜೊತೆಗೆ ಚರ್ಚಿಸಿದ ಬಳಿಕ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರಂತೆ.
ರೇಡಿಯೋಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಛಾಯಾ ಕದಮ್, ತಾವು ಬರಿಂಕ ಎಂದು ಕರೆಯಲಾಗುವ ವಿಶೇಷ ಜಿಂಕೆ, ಮೊಲ, ಕಾಡು ಹಂದಿ, ಉಡ, ಮುಳ್ಳುಹಂದಿ ಮಾಂಸವನ್ನು ತಿಂದಿರುವುದಾಗಿ ಹೇಳಿಕೊಂಡಿದ್ದರು. ಛಾಯಾ ಕದಮ್ ಅವರು ಗ್ರಾಮೀಣ ಮೂಲದವರಾಗಿದ್ದು ಎಳವೆಯಲ್ಲಿ ತಮ್ಮೆಡೆ ಬೇಟೆ ಸಾಮಾನ್ಯವಾಗಿತ್ತು ಎಂಬರ್ಥದ ಮಾತುಗಳನ್ನು ನಟಿ ಸಂದರ್ಶನದಲ್ಲಿ ಆಡಿದ್ದರು. ಆದರೆ 1972ರ ವನ್ಯಜೀವಿ ಸಂರಕ್ಷಣೆ ಕಾಯ್ದೆಯ ಪ್ರಕಾರ ಯಾವುದೇ ಅರಣ್ಯಜೀವಿಯನ್ನು ಮಾಂಸಕ್ಕಾಗಿ ಅಥವಾ ಇತರೆ ಕಾರಣಕ್ಕಾಗಿ ಕೊಲ್ಲವುದು ಶಿಕ್ಷಾರ್ಹ ಅಪರಾಧವಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:08 am, Thu, 1 May 25




