ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜಾಇನ್ ದೇಶದಲ್ಲಿ ನಾಯಿ ಮಾಂಸ ಸೇವನೆ ನಿರ್ಬಂಧಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಪ್ರಾಣಿ ಸಂರಕ್ಷಣೆ ವಿಚಾರ ಜೋರಾಗಿ ಚರ್ಚೆಯಲ್ಲಿ ಇರುವ ವೇಳೆ ಈ ಚಿಂತನೆ ಕೇಳಿಬಂದಿದೆ. ಆಹಾರಕ್ಕಾಗಿ ನಾಯಿಗಳನ್ನು ಕೊಲ್ಲುವ ಕುರಿತಾಗಿ ಕೂಡ ದಕ್ಷಿಣ ಕೊರಿಯಾದಲ್ಲಿ ಚರ್ಚೆಗಳು ನಡೆದಿವೆ. ಆಗಸ್ಟ್ ತಿಂಗಳಲ್ಲಿ ದಕ್ಷಿಣ ಕೊರಿಯಾದ ನ್ಯಾಯಾಂಗ ಸಚಿವಾಲಯದ ಲೀಗಲ್ ಕೌನ್ಸೆಲ್ನ ಮಹಾನಿರ್ದೇಶಕ ಚೌಂಗ್ ಜಾ ಮಿನ್, ಸಾಕುಪ್ರಾಣಿಗಳನ್ನು ಹಿಂಸಿಸುವವರ ವಿರುದ್ಧ ಸೂಕ್ತ ಕಾನೂನು ತರುವ ಬಗ್ಗೆ ಸಂದರ್ಶನ ಒಂದರಲ್ಲಿ ಹೇಳಿದ್ದರು. ಈ ವಾರ ಫೂಟ್ಬಾಲ್ ಕ್ಲಬ್ನ ಅಧಿಕೃತ ಪಾಡ್ಕಾಸ್ಟ್ನಲ್ಲಿ ಮಾಜಿ ಮ್ಯಾಂಚೆಸ್ಟರ್ ಯುನೈಟೆಡ್ ಆಟಗಾರ ಪಾರ್ಕ್ ಜಿ ಸಂಗ್, ಕೊರಿಯಾದವರು ನಾಯಿ ಮಾಂಸ ಸೇವಿಸುವ ಬಗ್ಗೆ ಉಲ್ಲೇಖ ಇರುವ ಹಾಡು ಹಾಡದಂತೆ ಕೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯಾ ಅಧ್ಯಕ್ಷರ ಚಿಂತನೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ದಕ್ಷಿಣ ಕೊರಿಯಾದಲ್ಲಿ ನಾಯಿ ಮಾಂಸ ಸೇವನೆ ಪ್ರಮಾಣ ಕ್ರಮೇಣ ಕಡಿಮೆ ಆಗುತ್ತಿದೆ. ಚೀನಾ ಹಾಗೂ ಇತರ ಕೆಲವು ದೇಶಗಳಲ್ಲಿ ಕೂಡ 2,000ನೇ ಇಸವಿ ಬಳಿಕ ನಾಯಿ ಮಾಂಸ ಸೇವನೆ ಇಳಿಕೆ ಆಗಿದೆ ಎಂದು ಅಕಾಡೆಮಿ ಆಫ್ ಕೊರಿಯನ್ ಸ್ಟಡೀಸ್ನ ಪ್ರೊಫೆಸರ್ ಡಾ. ಜೂ ಯಂಗ್ ಹಾ ಹೇಳಿದ್ದಾರೆ. 1988 ರಲ್ಲಿ ದೇಶ ಒಲಿಂಪಿಕ್ ಕೂಟ ಆಯೋಜಿಸಿತ್ತು. ಆಗ ಹಲವು ವಿದೇಶಿಗರಿಂದ ಈ ಮಾಂಸ ವಿಚಾರವಾಗಿ ಟೀಕೆ ಎದುರಿಸಿತ್ತು. ಹಾಗೂ ದಕ್ಷಿಣ ಕೊರಿಯಾ ಜನರು ಪಾಶ್ಚಾತ್ಯ ಸಂಸ್ಕೃತಿಯಿಂದಲೂ ಪ್ರಭಾವಿತರಾಗಿದ್ದರು ಎಂದು ಅವರು ಆಹಾರ ಕ್ರಮದ ಬದಲಾವಣೆ ಬಗ್ಗೆ ಮಾಹಿತಿ ನೀಡಿದ್ದಾರೆ.
ರಾಯ್ಟರ್ಸ್ ಸುದ್ದಿ ಸಂಸ್ಥೆಯ ಮಾಹಿತಿ ಪ್ರಕಾರ ದಕ್ಷಿಣ ಕೊರಿಯಾದಲ್ಲಿ ವಾರ್ಷಿಕವಾಗಿ ಸುಮಾರು ಒಂದು ಮಿಲಿಯನ್ ನಾಯಿಗಳನ್ನು ಈಗಲೂ ಆಹಾರಕ್ಕಾಗಿ ಕೊಲ್ಲಲಾಗುತ್ತಿದೆ. ಇತಿಹಾಸ ಹೇಳುವಂತೆ ದಕ್ಷಿಣ ಕೊರಿಯಾದಲ್ಲಿ ಗೊರ್ಯೆಯೊ ಕಾಲ ಮತ್ತು ಜೊಸೆಯೊನ್ ಕಾಲದಲ್ಲಿ ನಾಯಿ ಮಾಂಸ ಬಳಕೆಯಲ್ಲಿತ್ತು ಎಂದು ಹೇಳಲಾಗಿದೆ. 20ನೇ ಶತಮಾನದಲ್ಲಿ ಜನರು ದನ, ಹಂದಿ ಹಾಗೂ ಕೋಳಿ ಮಾಂಸ ತಿನ್ನಲು ಆರಂಭಿಸಿದರೂ ನಾಯಿ ಮಾಂಸ ಸೇವನೆ ನಿಲ್ಲಿಸಿಲ್ಲ ಎಂದು ತಿಳಿದುಬಂದಿದೆ.
ನಾಯಿಯೊಂದಿಗೆ ಜನರ ಭಾವನಾತ್ಮಕ ನಂಟು ಅದರ ಮಾಂಸ ಬಳಕೆ ಇಳಿಕೆಯಾಗಲು ಕಾರಣವಾಗುತ್ತಿದೆ
ಶೇಕಡಾ 60 ಕ್ಕಿಂತ ಅಧಿಕ ಮಂದಿ ನಾಯಿಯನ್ನು ಮನೆಯ ಸಾಕು ಪ್ರಾಣಿ, ಪ್ರೀತಿಯ ಪ್ರಾಣಿ ಆಗಿಯೇ ಕಾಣುತ್ತಾರೆ. ಅದನ್ನು ಆಹಾರ ಎಂದು ಪರಿಗಣಿಸುವುದಿಲ್ಲ. ಇದು ಕೊರಿಯನ್ ಸಮಾಜದ ಆಂತರಿಕ ವೈರುಧ್ಯವಾಗಿಯೂ ಕಂಡಿದೆ. ಅಂತಾರಾಷ್ಟ್ರೀಯವಾಗಿ ದೇಶದ ಇಮೇಜ್ ವಿಚಾರಕ್ಕಿಂತಲೂ ಪ್ರಾಣಿಯೊಂದಿಗಿನ ಭಾವನಾತ್ಮಕ ನಂಟು ನಾಯಿ ಮಾಂಸದ ಮೇಲೆ ನಿರ್ಬಂಧ ತರುವಂತೆ ಮಾಡಿದೆ ಎಂದು ತಿಳಿದುಬಂದಿದೆ.
ದಕ್ಷಿಣ ಕೊರಿಯಾ ಅಧ್ಯಕ್ಷ ಸ್ವತಃ ಶ್ವಾನ ಪ್ರೇಮಿ ಆಗಿದ್ದಾರೆ. ಹೀಗಾಗಿ ಇದೀಗ ಅವರ ಅವಧಿಯಲ್ಲಿ ನಾಯಿ ಮಾಂಸ ಸೇವನೆ ಅಥವಾ ಮಾರಾಟ ಸಂಪೂರ್ಣ ನಿಷೇಧಿಸುವ ಬಗ್ಗೆ ಚರ್ಚೆ ಆಗುತ್ತಿದೆ. ದಕ್ಷಿಣ ಕೊರಿಯಾದಲ್ಲಿ ಹಿಂಸಾತ್ಮಕವಾಗಿ ನಾಯಿ ಅಥವಾ ಬೆಕ್ಕನ್ನು ಕೊಲ್ಲುವುದು ನಿಷೇಧ ಇದ್ದರೂ ಅದರ ಮಾಂಸ ಸೇವನೆ ಮೇಲೆ ಸಂಪೂರ್ಣ ನಿಷೇಧ ಹೇರಿಲ್ಲ.
ದಕ್ಷಿಣ ಕೊರಿಯಾದಲ್ಲಿ ಕೋಳಿ, ಹಂದಿ, ದನ ಇತ್ಯಾದಿಗಳ ಮಾಂಸ ಸಿಗುತ್ತಿದೆ. ಹಾಗೂ ವಿಶೇಷವಾಗಿ ಯುವಜನರು ನಾಯಿ ಮಾಂಸ ಬಳಕೆಯನ್ನು ಇಷ್ಟಪಡುತ್ತಿಲ್ಲ. ಹಾಗಾಗಿ ಆಹಾರ ಸಂಸ್ಕೃತಿಯೂ ಬದಲಾಗುಯತ್ತಿದೆ ಎಂದು ಹೇಳಲಾಗಿದೆ. ಪ್ರಾಣಿ ಸಂರಕ್ಷಣಾ ಗ್ರೂಪ್ ಒಂದು ನಡೆಸಿರುವ ಸಮೀಕ್ಷೆಯಂತೆ ಅಲ್ಲಿ ಶೇಕಡಾ 78 ರಷ್ಟು ಮಂದಿ ನಾಯಿ ಹಾಗೂ ಬೆಕ್ಕಿನ ಮಾಂಸ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸುವುದಕ್ಕೆ ಬೆಂಬಲ ಸೂಚಿಸಿದ್ದಾರೆ.
ನಾಯಿ ಮಾಂಸಕ್ಕೆ ಮೊದಲು ಸಾಂಪ್ರದಾಯಿಕ ತಳಿಯ ನಾಯಿಗಳನ್ನು ಬಳಸಲಾಗುತ್ತಿತ್ತು. ಆದರೆ, ಸುಮಾರು 2,000ನೇ ಇಸವಿ ಬಳಿಕ ಸಾಂಪ್ರದಾಯಿಕ ತಳಿಯ ನಾಯಿಗಳ ಸಂಖ್ಯೆ, ಪ್ರಮಾಣ ಕಡಿಮೆ ಆಗುತ್ತಿದೆ. ಹಾಗೂ ಇತ್ತೀಚೆಗೆ ವಿದೇಶಗಳಿಂದ ಆಮದು ಮಾಡಿಕೊಂಡಿರುವ ಹೊಸ ಬ್ರೀಡ್ ನಾಯಿಗಳೇ ಅಧಿಕ ಸಂಖ್ಯೆಯಲ್ಲಿ ಇವೆ. ಅವುಗಳನ್ನೇ ಮಾಂಸಕ್ಕೆ ಕೂಡ ಬಳಸಲಾಗುತ್ತಿದೆ ಎಂದು ಡಾ. ಜೂ ಹೇಳಿದ್ದಾರೆ.
ಚುನಾವಣೆ ಪ್ರಚಾರ/ ಆಶ್ವಾಸನೆ
ಕಳೆದ ಕೆಲವು ವರ್ಷಗಳಿಂದ ದಕ್ಷಿಣ ಕೊರಿಯಾ ಸರ್ಕಾರದ ಮೇಲೆ ನಾಯಿ ಮಾಂಸಕ್ಕೆ ಸಂಬಂಧಿಸಿದ ಫಾರ್ಮ್ಗಳು, ಮಾರ್ಕೆಟ್ಗಳು, ರೆಸ್ಟೋರೆಂಟ್ಗಳನ್ನು ಮುಚ್ಚಲು ಭಾರೀ ಒತ್ತಡ ಇದೆ. ಈ ನಡುವೆ, ದಕ್ಷಿಣ ಕೊರಿಯಾದಲ್ಲಿ ಮುಂದಿನ ಮಾರ್ಚ್ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಾಯಿ ಮಾಂಸ ಬ್ಯಾನ್ ಬಗ್ಗೆ ಚರ್ಚೆ ಪ್ರಾಮುಖ್ಯತೆ ಪಡೆದಿವೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ಕೂಡ ಈ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Drugs Case: ಮರಣ ದಂಡನೆ, ಜೀವಾವಧಿ ಶಿಕ್ಷೆ.. ಡ್ರಗ್ ಪ್ರಕರಣಗಳಿಗೆ ಈ ದೇಶಗಳಲ್ಲಿ ಇವೆ ಕಠಿಣ ಕಾನೂನು!
ಇದನ್ನೂ ಓದಿ: Spain Volcano: ಸ್ಪೇನ್ನ ಲಾ ಪಲ್ಮಾದಲ್ಲಿ ಜ್ವಾಲಾಮುಖಿ; ಹರಿದು ಸಾಗರ ಸೇರಿದ ಲಾವಾರಸ!
Published On - 6:01 pm, Mon, 4 October 21