ಭಾರತಕ್ಕೂ ಕಾಲಿಡಲಿದೆಯಾ ಆಸ್ಟ್ರೇಲಿಯಾದಲ್ಲಿ ಶುರುವಾದ ಸರ್ಕಾರ-ಫೇಸ್​ಬುಕ್​ ಆದಾಯ ಹಂಚಿಕೆ ವಿವಾದ?

|

Updated on: Feb 18, 2021 | 6:37 PM

Facebook Australia : ಅಗ್ನಿಶಾಮಕ, ಆರೋಗ್ಯ, ಹವಾಮಾನ ಸೇವೆಗಳನ್ನು ನೀಡುವ ಫೇಸ್‌ಬುಕ್ ಪುಟಗಳು ಗುರುವಾರ ತೀವ್ರ ಸಮಸ್ಯೆ ಎದುರಿಸಿವೆ. ಈ ಪುಟಗಳಲ್ಲಿದ್ದ ಸುದ್ದಿಗಳು ಮಾಯವಾಗಿವೆ. ಇನ್ನು, ಸುದ್ದಿ ಪಬ್ಲಿಶರ್​ಗಳು ಹೊಸ ಪೋಸ್ಟ್​ಗಳನ್ನು ಹಾಕಲಾಗುತ್ತಿಲ್ಲ.

ಭಾರತಕ್ಕೂ ಕಾಲಿಡಲಿದೆಯಾ ಆಸ್ಟ್ರೇಲಿಯಾದಲ್ಲಿ ಶುರುವಾದ ಸರ್ಕಾರ-ಫೇಸ್​ಬುಕ್​ ಆದಾಯ ಹಂಚಿಕೆ ವಿವಾದ?
ಪ್ರಾತಿನಿಧಿಕ ಚಿತ್ರ
Follow us on

ನವದೆಹಲಿ: ಆಸ್ಟ್ರೇಲಿಯಾ ಸರ್ಕಾರ ಹಾಗೂ ಫೇಸ್​ಬುಕ್​ ನಡುವಣ ತಿಕ್ಕಾಟ ಮಿತಿಮೀರಿದೆ. ಆಸ್ಟ್ರೇಲಿಯಾ ಸರ್ಕಾರ ಜಾರಿಗೆ ತಂದಿರುವ ಹೊಸ ಕಾಯ್ದೆ ವಿರೋಧಿಸಿ ಗುರುವಾರ ಏಕಾಏಕಿ ಮಾಧ್ಯಮ ಕಂಟೆಂಟ್​ಗಳನ್ನು ಫೇಸ್​ಬುಕ್​ ನಿಷೇಧಿಸಿದೆ. ಇದರಿಂದ ಕೊವಿಡ್​-19, ಕಾಡ್ಗಿಚ್ಚು, ಚಂಡಮಾರುತದ ಬಗ್ಗೆ ಮಾಹಿತಿ ನೀಡುವ ಪೇಜ್​ಗಳು ಬ್ಲ್ಯಾಂಕ್​ ಆಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.

ಅಗ್ನಿಶಾಮಕ, ಆರೋಗ್ಯ, ಹವಾಮಾನ ಸೇವೆಗಳನ್ನು ನೀಡುವ ಫೇಸ್‌ಬುಕ್ ಪುಟಗಳು ಗುರುವಾರ ತೀವ್ರ ಸಮಸ್ಯೆ ಎದುರಿಸಿವೆ. ಈ ಪುಟಗಳಲ್ಲಿದ್ದ ಸುದ್ದಿಗಳು ಮಾಯವಾಗಿವೆ. ಇನ್ನು, ಸುದ್ದಿ ಪಬ್ಲಿಷರ್​ಗಳು ಹೊಸ ಪೋಸ್ಟ್​ಗಳನ್ನು ಹಾಕಲಾಗುತ್ತಿಲ್ಲ.ಜತೆಗೆ ಹಳೆಯ ಸುದ್ದಿಗಳು ಕಾಣದಂತಾಗಿವೆ.

ಆಸ್ಟ್ರೇಲಿಯಾದಲ್ಲಿ ಸರ್ಕಾರ ಹಾಗೂ ಫೇಸ್​ಬುಕ್​ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಫೇಸ್​ಬುಕ್​ ಹಾಗೂ ಗೂಗಲ್​ ಹಣ ಪಾವತಿಸಬೇಕು ಎನ್ನುವ ಶಾಸನವನ್ನು ಸರ್ಕಾರ ಜಾರಿಗೆ ತಂದಿದೆ. ಇದನ್ನು ಫೇಸ್​ಬುಕ್​-ಗೂಗಲ್​ ಅಳವಡಿಸಿಕೊಳ್ಳಬೇಕು ಎಂದು ಸರ್ಕಾರ ಆಗ್ರಹಿಸಿದೆ. ಆದರೆ, ಇದನ್ನು ಫೇಸ್​ಬುಕ್​ ವಿರೋಧಿಸುತ್ತಿದೆ. ಇದೇ ಕಾರಣಕ್ಕೆ, ಇಂದು​ ನಾಟಕೀಯ ಬೆಳವಣಿಗೆಯಲ್ಲಿ ಫೇಸ್​ಬುಕ್ ಸುದ್ದಿಗಳನ್ನೇ ಬ್ಯಾನ್​ ಮಾಡಿದೆ.

ಸುದ್ದಿ ಸಂಸ್ಥೆಗಳು, ರಾಜಕಾರಣಿಗಳು ಮತ್ತು ಮಾನವ ಹಕ್ಕುಗಳ ವಕೀಲರು ಫೇಸ್​ಬುಕ್​ ಕ್ರಮವನ್ನು ಟೀಕಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಫೇಸ್​ಬುಕ್​ ತನ್ನ ಘನತೆಯನ್ನು ಕಡಿಮೆ ಮಾಡಿಕೊಳ್ಳುತ್ತಿದೆ ಎಂದು ಇವರು ಹೇಳಿದ್ದಾರೆ.

ಪಬ್ಲಿಶರ್​ಗಳಿಗೆ ಹಣ ಪಾವತಿಸಿ..
ಡಿಜಿಟಿಲ್​ ಪ್ಲಾಟ್​ಫಾರ್ಮ್​ಗಳು ತಮ್ಮ ಸುದ್ದಿಯನ್ನು ಫೇಸ್​ಬುಕ್​ನಲ್ಲಿ ಹಂಚಿಕೊಳ್ಳುತ್ತವೆ. ಈ ಮೂಲಕ ತಮ್ಮ ವೆಬ್​ಸೈಟ್​ಗೆ ಟ್ರಾಫಿಕ್​ ಪಡೆಯುತ್ತವೆ. ಇದಕ್ಕಾಗಿ ಸುದ್ದಿಸಂಸ್ಥೆಗಳಿಗೆ ಫೇಸ್​ಬುಕ್​ ಹಣ ಪಾವತಿ ಮಾಡುತ್ತಿಲ್ಲ. ಏಕೆಂದರೆ, ನಮ್ಮಿಂದಾಗಿ ವೆಬ್​ಸೈಟ್​ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದೆ ಎನ್ನುವ ಅವರ ವಾದ. ಆದರೆ, ಆಸ್ಟ್ರೇಲಿಯಾ ಸರ್ಕಾರ ಇದನ್ನು ಒಪ್ಪುತ್ತಿಲ್ಲ. ಫೇಸ್​ಬುಕ್​ ಪಬ್ಲಿಷರ್​ಗಳಿಗೆ ಹಣ ನೀಡಲೇಬೇಕು ಎಂದು ಹೇಳುತ್ತಿದೆ.

ಫೇಸ್​ಬುಕ್ ಹೇಳೋದೇನು?
ಫೇಸ್‌ಬುಕ್​ನಲ್ಲಿ 100 ಜನರಲ್ಲಿ ಕೇವಲ 4 ಮಂದಿ ಮಾತ್ರ ಸುದ್ದಿ ಫೀಡ್‌ ನೋಡುತ್ತಾರಂತೆ. ಹೀಗಾಗಿ, ಫೇಸ್​ಬುಕ್​ ವಿಡಿಯೋಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ಹೀಗಾಗಿ, ನ್ಯೂಸ್​ಗಳನ್ನು ಬ್ಯಾನ್​ ಮಾಡುವುದರಿಂದ ಹೆಚ್ಚು ನಷ್ಟವಿಲ್ಲ ಎನ್ನುವುದು ಫೇಸ್​ಬುಕ್​ ನಂಬಿಕೆ. ಇಂಗ್ಲೆಂಡ್​ನಲ್ಲಿ ಇತ್ತೀಚೆಗೆ ಫೇಸ್​ಬುಕ್​, ಫೇಸ್​ಬುಕ್​ ನ್ಯೂಸ್​ಅನ್ನು ಪರಿಚಯಿಸಿತ್ತು. ಎರಡನೇ ಹಂತದಲ್ಲಿ ಆಸ್ಟ್ರೇಲಿಯಾದಲ್ಲೂ ಇದನ್ನು ಜಾರಿಗೆ ತರುವ ಆಲೋಚನೆ ಫೇಸ್​ಬುಕ್​ನದ್ದಾಗಿತ್ತು. ಆದರೆ, ಈಗ ನಡೆದ ಬೆಳವಣಿಗೆಯಿಂದ ಇದು ಇನ್ನೂ ವಿಳಂವಾಗಲಿದೆ ಎನ್ನಲಾಗುತ್ತಿದೆ.

ಭಾರತಕ್ಕೂ ಬರಲಿದೆ ಹೊಸ ನೀತಿ?
ಆಸ್ಟ್ರೇಲಿಯಾದಲ್ಲಿ ಜಾರಿಗೆ ತರಲಾದ ಹೊಸ ಕಾಯ್ದೆ ಬಗ್ಗೆ ಫೇಸ್​ಬುಕ್​ ಹಾಗೂ ಗೂಗಲ್​ಗೆ ಒಂದು ಆತಂಕ ಶುರುವಾಗಿದೆ. ಏಕೆಂದರೆ, ಇದೇ ಮಾದರಿಯ ಕಾಯ್ದೆಯನ್ನು ಭಾರತ ಸೇರಿ ಎಲ್ಲಾ ರಾಷ್ಟ್ರಗಳು ಜಾರಿಗೆ ತಂದರೆ ಮುಂದೇನು ಎನ್ನುವ ಪ್ರಶ್ನೆ ಅವರದ್ದು. ಆಸ್ಟ್ರೇಲಿಯಾದಲ್ಲಿ ಜಾರಿಗೆ ತಂದಿರುವುದು ಆರಂಭ ಮಾತ್ರ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರಾಷ್ಟ್ರಗಳೂ ಈ ಕಾಯ್ದೆ ಜಾರಿಗೆ ತಂದರೆ ಫೇಸ್​ಬುಕ್ ಪಬ್ಲಿಷರ್​ಗಳಿಗೆ ಹಣ ಪಾವತಿ ಮಾಡುವುದು ಅನಿವಾರ್ಯ ಆಗಲಿದೆ.

ಇದನ್ನೂ ಓದಿ: ಫೇಸ್​ಬುಕ್​ನಲ್ಲಿ ಸಮಯ ವ್ಯಯಿಸುವುದನ್ನು ಕಡಿಮೆ ಮಾಡುವುದು ಹೇಗೆ?

Published On - 2:29 pm, Thu, 18 February 21