ಹಿಂಸಾಚಾರಕ್ಕೆ ಪ್ರಚೋದನೆ: ಮ್ಯಾನ್ಮಾರ್ ಮಿಲಿಟರಿ ಪೇಜ್ ರದ್ದುಗೊಳಿಸಿದ ಫೇಸ್​ಬುಕ್

Myanmar: ಮ್ಯಾನ್ಮಾರ್​ನಲ್ಲಿ ಫೆಬ್ರವರಿ 1ರಂದು ಮಿಲಿಟರಿ ಅಧಿಕಾರವನ್ನು ವಶಪಡಿಸಿಕೊಂಡಿತ್ತು. ಅದೇ ವೇಳೆ ನೋಬೆಲ್ ಪುರಸ್ಕೃತ ಸೂಕಿ ಅವರನ್ನು ಬಂಧಿಯಾಗಿಸಿ ಚುನಾಯಿತ ನಾಯಕರ ಹೊಸ ಅಧಿವೇಶನವನ್ನು ತಡೆಯಲಾಗಿತ್ತು.

ಹಿಂಸಾಚಾರಕ್ಕೆ ಪ್ರಚೋದನೆ: ಮ್ಯಾನ್ಮಾರ್ ಮಿಲಿಟರಿ ಪೇಜ್ ರದ್ದುಗೊಳಿಸಿದ ಫೇಸ್​ಬುಕ್
ಮ್ಯಾನ್ಮಾರ್​ನಲ್ಲಿ ಪ್ರತಿಭಟನೆ
Follow us
ರಶ್ಮಿ ಕಲ್ಲಕಟ್ಟ
|

Updated on: Feb 21, 2021 | 12:40 PM

ಯಾಂಗೂನ್: ಮ್ಯಾನ್ಮಾರ್ ಜುಂಟಾದ (ಸೇನಾಡಳಿತ) ಫೇಸ್​ಬುಕ್ ಪುಟ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತದೆ ಎಂಬ ಆರೋಪದಲ್ಲಿ ಫೇಸ್ ಬುಕ್ ಸಂಸ್ಥೆ ಆ ಪುಟವನ್ನು ರದ್ದು ಮಾಡಿದೆ. ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿ ಮರಳಬೇಕೆಂದು ಒತ್ತಾಯಿಸಿ ಜನರು ನಾಗರಿಕ ಅಸಹಕಾರ ಚಳವಳಿ ನಡೆಸುತ್ತಿದ್ದಾರೆ. ಮ್ಯಾನ್ಮಾರ್ ನಲ್ಲಿ ಸೇನಾ ದಂಗೆಯನ್ನು ವಿರೋಧಿಸಿ ಜನರು ನಡೆಸುತ್ತಿರುವ ಬೃಹತ್ ಪ್ರತಿಭಟನೆಯಾಗಿದೆ ಇದು.

ಮ್ಯಾನ್ಮಾರ್​ನಲ್ಲಿ ಫೆಬ್ರವರಿ 1ರಂದು ಮಿಲಿಟರಿ ಅಧಿಕಾರವನ್ನು ವಶಪಡಿಸಿಕೊಂಡಿತ್ತು. ಅದೇ ವೇಳೆ ನೋಬೆಲ್ ಪುರಸ್ಕೃತ ಆಂಗ್ ಸಾನ್ ಸೂಕಿ ಅವರನ್ನು ಬಂಧಿಯಾಗಿಸಿ ಚುನಾಯಿತ ನಾಯಕರ ಹೊಸ ಅಧಿವೇಶನವನ್ನು ತಡೆಯಲಾಗಿತ್ತು. ಇದರಿಂದ ರಾಷ್ಟ್ರದಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿವೆ. ಸೂಕಿ ಮತ್ತು ನ್ಯಾಷನಲ್‌ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷದ ಇತರ ನಾಯಕರನ್ನು ಸೇನೆ ಬಂಧಿಸಿದ ನಂತರ ಸರ್ಕಾರಿ ಅಧಿಕಾರಿಗಳು, ವೈದ್ಯರು ಸೇರಿದಂತೆ ನಾಗರಿಕರು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ.

ಕಳೆದ ನವೆಂಬರ್‌ನಲ್ಲಿ ನಡೆದ ಮತದಾನದಲ್ಲಿ ವಂಚನೆ ನಡೆಸಿ ಸೂಕಿ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅವರು ಪ್ರತಿಭಟನೆಗಳಿಗಾಗಿ ಕರೆ ನೀಡಿ ಸೇನಾಪಡೆ ಅಧಿಕಾರ ತ್ಯಜಿಸಬೇಕು ಎಂದು ಒತ್ತಾಯಿಸುತ್ತಿರುವುದಾಗಿ ಟ್ರೂ ನ್ಯೂಸ್ ಇನ್ಫಾರ್ಮೇಶನ್ ಟೀಂ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದಿತ್ತು. ‘ನಮ್ಮ ಸಮುದಾಯದ ಮಾನದಂಡಗಳನ್ನು ಪದೇ ಪದೇ ಉಲ್ಲಂಘಿಸಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದೆ’ ಎಂಬ ಆರೋಪದಲ್ಲಿ ಟ್ರೂ ನ್ಯೂಸ್ ಇನ್ಫಾರ್ಮೇಶನ್ ಟೀಂ ಪೇಜ್ ರದ್ದು ಮಾಡಲಾಗಿದೆ ಎಂದು ಫೇಸ್​ಬುಕ್ ಸಂಸ್ಥೆಯ ವಕ್ತಾರ ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ದುರುದ್ದೇಶಿತ ಪೋಸ್ಟ್​ಗಳಿರುವ ನೂರಾರು ಪೇಜ್​ಗಳನ್ನು ಫೇಸ್​ಬುಕ್ ರದ್ದು ಮಾಡಿದೆ.

ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ಸಾಧ್ಯತೆ: ವಿಶ್ವಸಂಸ್ಥೆ ಎಚ್ಚರಿಕೆ ಮ್ಯಾನ್ಮಾರ್​ನಲ್ಲಿ ಕಳೆದ ವಾರಗಳಿಂದ ಪ್ರತಿಭಟನೆ ನಡೆದು ಬರುತ್ತಿದ್ದು ಈ ವೇಳೆ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ನಡೆಯುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆಯೂ ಸೇನೆಯ ಚಟುವಟಿಕೆಗಳು ಹಿಂಸಾಚಾರಕ್ಕೆ ಎಡೆ ಮಾಡಿಕೊಟ್ಟಿವೆ. ಸದ್ಯ ಮ್ಯಾನ್ಮಾರ್​ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಇದೇ ಭೀತಿಯನ್ನು ಮೂಡಿಸಿವೆ. ಸೇನೆ ತಮ್ಮ ಪ್ರಜೆಗಳ ವಿರುದ್ಧ ಅಪರಾಧ ಕೃತ್ಯಗಳನ್ನು ನಡೆಸುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿತ್ತು.

ಇತ್ತೀಚಿನ ಮ್ಯಾನ್ಮಾರ್ ಜುಂಟಾ ಹಿಂಸಾಚಾರವನ್ನು ಯುಎಸ್ ಸರ್ಕಾರದ ಬಲವಾಗಿ ಖಂಡಿಸಿದೆ. ಭಿನ್ನಾಭಿಪ್ರಾಯದ ಹಕ್ಕನ್ನು ಚಲಾಯಿಸಿದ್ದಕ್ಕಾಗಿ ಯಾರಿಗೂ ತೊಂದರೆಯಾಗಬಾರದು. ಮಾಂಡಲೆಯಲ್ಲಿ ಪ್ರತಿಭಟನಾಕಾರರ ಮಾರಣಾಂತಿಕ ಗುಂಡಿನ ದಾಳಿಯಿಂದ ನಾವು ತೀವ್ರ ದುಃಖಿತರಾಗಿದ್ದೇವೆ.  ಮ್ಯಾನ್ಮಾರ್ ಜನರ ಮೇಲಿನ ಹಿಂಸಾಚಾರವನ್ನು ಮಿಲಿಟರಿ ನಿಲ್ಲಿಸಬೇಕು ಎಂದು  ಮಾನವ ಹಕ್ಕುಗಳ ನಿಗಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಕೆನ್ನೆತ್ ರೋತ್ ಟ್ವೀಟ್ ಮಾಡಿದ್ದಾರೆ.

ಪ್ರತಿಭಟನಾಕಾರರಿಗೆ ಆಶ್ರಯ ನೀಡದಂತೆ ಎಚ್ಚರಿಕೆ ತಲೆಮರೆಸಿಕೊಂಡಿರುವ ರಾಜಕೀಯ ಕಾರ್ಯಕರ್ತರಿಗೆ, ಪ್ರತಿಭಟನಕಾರರಿಗೆ ಆಶ್ರಯ ನೀಡದಂತೆ ಮ್ಯಾನ್ಮಾರ್‌ನ ಮಿಲಿಟರಿ ಆಡಳಿತ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಮ್ಯಾನ್ಮಾರ್‌ನಲ್ಲಿ ಸೇನಾ ದಂಗೆಯ ವಿರುದ್ಧ ಧ್ವನಿಯೆತ್ತಿರುವ ಮತ್ತು ಪ್ರತಿಭಟನೆ ನಡೆಸುತ್ತಿರುವ ಜನರ ಬಂಧನಕ್ಕೆ ಮಿಲಿಟರಿ ಆಡಳಿತ ಕ್ರಮ ಈ ಕ್ರಮ ಕೈಗೊಂಡಿದೆ. ಒಂದು ವೇಳೆ ಅವರಿಗೆ ಆಶ್ರಯ ನೀಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಮಿಲಿಟರಿ ಆಡಳಿತ ನೋಟಿಸ್‌ ಪ್ರಕಟಿಸಿದೆ.

ಸದ್ಯ, ತ ಲೆಮರೆಸಿಕೊಂಡಿರುವ ನಾಯಕರ ಪಟ್ಟಿಯಲ್ಲಿ ಮಿನ್ ಕೋ ನಾಯಿಂಗ್ ಅವರೂ ಇದ್ದಾರೆ. 1988ರಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾಗ ಹಿಂದಿನ ಸರ್ವಾಧಿಕಾರದ ವಿರುದ್ಧ ಪ್ರಮುಖ ಪ್ರತಿಭಟನೆಗಳಿಗೆ ಸಹಾಯ ಮಾಡಿದ್ದಕ್ಕಾಗಿ ಅವರನ್ನು ದಶಕಕ್ಕೂ ಹೆಚ್ಚು ಕಾಲ ಜೈಲಿನಲ್ಲಿಡಲಾಗಿತ್ತು. ರಾಜಕೀಯ ಕೈದಿಗಳ ಮೇಲ್ವಿಚಾರಣಾ ಗುಂಪಿನ ಸಹಾಯ ಸಂಘದ ಪ್ರಕಾರ ಆಂಗ್ ಸಾನ್ ಸೂಕಿ ಸೇರಿದಂತೆ ಸುಮಾರು 400 ಜನರನ್ನು ಈವರೆಗೆ ಬಂಧಿಸಲಾಗಿದೆ.

ಮಾಧ್ಯಮಗಳಿಗೆ ಸೂಚನೆ ಸಾರ್ವಜನಿಕ ಅಶಾಂತಿಗೆ ಕಾರಣವಾಗುವ ಬರಹಗಳನ್ನು ಪತ್ರಕರ್ತರು ಮತ್ತು ಸುದ್ದಿ ಮಾಧ್ಯಮ ಸಂಸ್ಥೆಗಳು ಬರೆಯಬಾರದು. ದೇಶದಲ್ಲಿ ಘಟನೆಗಳನ್ನು ವರದಿ ಮಾಡುವಾಗ ‘ಸುದ್ದಿ ಮಾಧ್ಯಮ ನೀತಿಸಂಹಿತೆ’ ಪಾಲಿಸುವಂತೆ ವರದಿಗಾರರಿಗೆ ಸೂಚನೆ ನೀಡಲಾಗಿದೆ.

 ಇದನ್ನೂ ಓದಿ: Myanmar: ಮ್ಯಾನ್ಮಾರ್​ನಲ್ಲಿ ತಡರಾತ್ರಿ ಗಸ್ತು ತಿರುಗಿದ ಸೇನಾ ವಾಹನಗಳು; ಅಂತರ್ಜಾಲ ಸೇವೆ ಸ್ಥಗಿತ