Sign In

By signing in or creating an account, you agree with Associated Broadcasting Company's Terms & Conditions and Privacy Policy.

Kim Kardashian: ಕಾನ್ಯೆ ವೆಸ್ಟ್​ಗೆ ವಿವಾಹ ವಿಚ್ಛೇದನ ನೀಡಲಿದ್ದಾರೆ ಅಮೆರಿಕದ ರಿಯಾಲಿಟಿ ಟಿವಿ ತಾರೆ ಕಿಮ್ ಕರ್ದಾಶಿಯನ್

Kim Kardashian Divorce: 2012ರಲ್ಲಿ ಕಿಮ್ ಕರ್ದಾಶಿಯನ್ ಮತ್ತು ಕಾನ್ಯೆ ವೆಸ್ಟ್​ ಪರಸ್ಪರ ಪ್ರೀತಿಸಲು ತೊಡಗಿದ್ದು, ಎರಡು ವರ್ಷಗಳ ನಂತರ ಇಟಲಿಯಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. ಜಗತ್ತಿನ ಖ್ಯಾತ ದಂಪತಿ ಎಂದು ಕಿಮ್- ಕಾನ್ಯೆ ಜೋಡಿ ಗುರುತಿಸಲ್ಪಟ್ಟಿತ್ತು.

Kim Kardashian: ಕಾನ್ಯೆ ವೆಸ್ಟ್​ಗೆ ವಿವಾಹ ವಿಚ್ಛೇದನ ನೀಡಲಿದ್ದಾರೆ ಅಮೆರಿಕದ ರಿಯಾಲಿಟಿ ಟಿವಿ ತಾರೆ ಕಿಮ್ ಕರ್ದಾಶಿಯನ್
ಕಿಮ್ ಕರ್ದಾಶಿಯನ್ -ಕಾನ್ಯೆ ವೆಸ್ಟ್​ ದಂಪತಿ
Follow us
ರಶ್ಮಿ ಕಲ್ಲಕಟ್ಟ
|

Updated on: Feb 20, 2021 | 1:15 PM

ಲಾಸ್ ಏಂಜಲೀಸ್: ಅಮೆರಿಕದ ರಿಯಾಲಿಟಿ ಟಿವಿ ಸ್ಟಾರ್ ಕಿಮ್ ಕರ್ದಾಶಿಯನ್ ಪತಿ ಕಾನ್ಯೆ ವೆಸ್ಟ್​ಗೆ ವಿವಾಹ ವಿಚ್ಛೇದನ ನೀಡಲಿದ್ದಾರೆ. ಖ್ಯಾತ ರ‍್ಯಾಪರ್ ಕಾನ್ಯೆ ವೆಸ್ಟ್ ಜತೆಗಿನ ಏಳು ವರ್ಷದ ದಾಂಪತ್ಯದಿಂದ ಹೊರಬಂದಿರುವ ಕಿಮ್ ಕೆಲವು ದಿನಗಳಿಂದ ಪ್ರತ್ಯೇಕ ವಾಸ ಮಾಡುತ್ತಿದ್ದರು ಎಂದು ವಾರಗಳ ಹಿಂದೆ ಅಮೆರಿದ ಮಾಧ್ಯಮಗಳು ವರದಿ ಮಾಡಿದ್ದವು.

ಕಾನ್ಯೆ ಮತ್ತು ಕಿಮ್ ನಡುವಿನ ವಿವಾಹ ವಿಚ್ಛೇದನ ಸೌಹಾರ್ದಯುತವಾಗಿಯೇ ಇರುತ್ತದೆ ಎಂದು ಅಮೆರಿಕದ ಸೆಲೆಬ್ರಿಟಿ ಗಾಸಿಪ್ ವೆಬ್​ಸೈಟ್ ಟಿಎಂಜೆಡ್ ವರದಿ ಮಾಡಿದೆ. ವಿವಾಹ ವಿಚ್ಛೇದನದ ನಂತರ ತಮ್ಮ ನಾಲ್ವರು ಮಕ್ಕಳ ಹೊಣೆಯನ್ನು ಕಾನ್ಯೆ ಮತ್ತು ತಾನು ಜಂಟಿಯಾಗಿ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಅರ್ಜಿ ಸಲ್ಲಿಸಿರುವುದಾಗಿ ಕರ್ದಾಶಿಯನ್ ಅವರ ವಕೀಲೆ ಲೌರಾ ವಾಸೆರ್ ಹೇಳಿದ್ದಾರೆ. ಕರ್ದಾಶಿಯನ್ ಅವರು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಅವರ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಳಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ.

2012ರಲ್ಲಿ ಕಿಮ್ ಮತ್ತು ಕಾನ್ಯೆ ಪರಸ್ಪರ ಪ್ರೀತಿಸಲು ತೊಡಗಿದ್ದು, ಎರಡು ವರ್ಷಗಳ ನಂತರ ಇಟಲಿಯಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. ಜಗತ್ತಿನ ಖ್ಯಾತ ದಂಪತಿ ಎಂದು ಕಿಮ್- ಕಾನ್ಯೆ ಜೋಡಿ ಗುರುತಿಸಲ್ಪಟ್ಟಿತ್ತು.

ಕಾನ್ಯೆ ವೆಸ್ಟ್ ಅವರಿಗೆ ಮಾನಸಿಕ ಸಮಸ್ಯೆ ಕಾಣಿಸಿಕೊಂಡ ಬೆನ್ನಲ್ಲೇ ಕಿಮ್ ದಾಂಪತ್ಯದಲ್ಲಿ ಬಿರುಕು ಮೂಡಿತ್ತು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. 43ರ ಹರೆಯದ ಕಾನ್ಯೆ ತಾನು ಬೈಪೊಲಾರ್ ಡಿಸಾರ್ಡರ್​ನಿಂದ (ಮಾನಸಿಕ ಕಾಯಿಲೆ)  ಬಳಲುತ್ತಿರುವುದಾಗಿ ಹೇಳಿದ್ದರು. ಕಳೆದ ವರ್ಷ ಜುಲೈ ತಿಂಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ತನಗೆ ಮಗಳು ಬೇಡ ಎಂದು ಗರ್ಭಪಾತ ಮಾಡಲು ಬಯಸಿದ್ದೆ ಎಂದು ಕಾನ್ಯೆ ಕಣ್ಣೀರು ಹಾಕಿದ್ದರು. ತನ್ನ ಪತ್ನಿ ಹಾಗೂ ಅತ್ತೆ ನನ್ನನ್ನು ಬಂಧನದಲ್ಲಿಡಲು ಬಯಸುತ್ತಿದ್ದಾರೆ ಎಂದು ಸರಣಿ ಟ್ವೀಟ್ ಮಾಡಿದ್ದ ಕಾನ್ಯೆ ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದೇನೆ ಎಂದಿದ್ದರು. ಆಮೇಲೆ ಆ ಟ್ವೀಟ್ ಡಿಲೀಟ್ ಮಾಡಿದ್ದರು.

ತನ್ನ ಗಂಡನ ನಡವಳಿಕೆ ಬಗ್ಗೆ ಮಾಧ್ಯಮದವರು ಮತ್ತು ಸಾರ್ವಜನಿಕರು ಸಹಾನುಭೂತಿ ತೋರಿಸಬೇಕು ಎಂದು ಕರ್ದಾಶಿಯನ್ ಮನವಿ ಮಾಡಿದ್ದರು. ಮಾನಸಿಕ ಕಾಯಿಲೆ ಬಗ್ಗೆ ತಿಳಿದಿರುವವರಿಗೆ ಇದೆಲ್ಲ ಅರ್ಥವಾಗುತ್ತದೆ ಎಂದು ಕರ್ದಾಶಿಯನ್ ಜುಲೈ ತಿಂಗಳಲ್ಲಿ ಇನ್​ಸ್ಟಾಗ್ರಾಂನಲ್ಲಿ ಸುದೀರ್ಘ ಬರಹವೊಂದನ್ನು ಪೋಸ್ಟ್ ಮಾಡಿದ್ದರು.

ಈ ದಂಪತಿಗಳಿಗೆ 7ರ ಹರೆಯದ ಮಗಳು ನಾರ್ಥ್, ಮಗ ಸೇಂಟ್ (5 ವರ್ಷ ), ಚಿಕಾಗೋ (3 ವರ್ಷ), ಮಗ ಸಾಲ್ಮ್ (21 ತಿಂಗಳು) ಹೆಸರಿನ ನಾಲ್ಕು ಮಕ್ಕಳಿದ್ದಾರೆ. ಇತ್ತೀಚೆಗೆ ಕಾನ್ಯೆ ವ್ಯೋಮಿಂಗ್ ನಲ್ಲಿ ವಾಸಿಸುತ್ತಿದ್ದು, ಕರ್ಡಾಷಿಯನ್ ನಾಲ್ವರು ಮಕ್ಕಳೊಂದಿಗೆ ಕ್ಯಾಲಿಫೋರ್ನಿಯಾದಲ್ಲಿ ವಾಸವಾಗಿದ್ದರು.

ಕರ್ದಾಶಿಯನ್​ಗೆ ಇದು ಮೂರನೇ ವಿವಾಹ ವಿಚ್ಛೇದನ ಕಾನ್ಯೆ ವೆಸ್ಟ್ ಅವರ ಬದುಕಿನಲ್ಲಿ ಇದು ಮೊದಲ ವಿವಾಹ ವಿಚ್ಛೇದನವಾಗಿದ್ದು, ಕರ್ದಾಶಿಯನ್ ಅ ವರದ್ದು ಮೂರನೇ ವಿವಾಹ ವಿಚ್ಛೇದನವಾಗಿದೆ. ‘ಕೀಪಿಂಗ್ ಅಪ್ ವಿದ್ ದಿ ಕರ್ದಾಶಿಯನ್’ ಎಂಬ ಅಮೆರಿಕದ ರಿಯಾಲಿಟಿ ಟಿವಿ ಸರಣಿ ಮೂಲಕ ಇವರು ಖ್ಯಾತಿ ಗಳಿಸಿದ್ದರು. ಚಿಕಾಗೊ ಮೂಲದ ರ‍್ಯಾಪರ್, ರೆಕಾರ್ಡ್ ಪ್ರೊಡ್ಯೂಸರ್ ಆಗಿರುವ ಕಾನ್ಯೆ ವೆಸ್ಟ್  21 ಗ್ರಾಮಿ ಅವಾರ್ಡ್ ವಿಜೇತರಾಗಿದ್ದಾರೆ.

ಇದನ್ನೂ ಓದಿ: ವಿವಾಹ ವಿಚ್ಛೇದನ ಪಡೆದ ಪತಿಯ ಕುಟುಂಬದ ಸದಸ್ಯನನ್ನು ಹೆಗಲಲ್ಲಿ ಹೊತ್ತು ನಡೆದ ಮಹಿಳೆ, ಅನ್ಯ ಪುರುಷನೊಂದಿಗಿನ ಸಂಬಂಧಕ್ಕೆ ಈ ಶಿಕ್ಷೆ!