ವಾಷಿಂಗ್ಟನ್: ಯುಎಸ್ನ ಯೂನಿವರ್ಸಿಟಿ (US University Shooting) ವೊಂದರಲ್ಲಿ ಭಾನುವಾರ ಬೆಳಗ್ಗೆ ಗುಂಡಿನ ದಾಳಿಯಾಗಿದ್ದು, ಈ ಘಟನೆಯಲ್ಲಿ ಒಬ್ಬ ಮೃತಪಟ್ಟಿದ್ದಾನೆ. ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲಿಸರು ತಿಳಿಸಿದ್ದಾರೆ. ಈ ಗುಂಡಿನ ದಾಳಿ ನಡೆದಿದ್ದು ಲೂಯಿಸಿಯಾನ ರಾಜ್ಯದ ಗ್ರಾಂಬ್ಲಿಂಗ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ (Grambling State University). ಇದು ಈ ವಾರದಲ್ಲಿ ನಡೆಯುತ್ತಿರುವ ಎರಡನೇ ದಾಳಿಯಾಗಿದೆ. ಅಕ್ಟೋಬರ್ 13ರಂದು ಇದೇ ವಿಶ್ವವಿದ್ಯಾಲಯದಲ್ಲಿ ದುಷ್ಕರ್ಮಿಗಳು ಫೈರಿಂಗ್ ನಡೆಸಿದ್ದರು. ಅದರಲ್ಲಿ 19ವರ್ಷದ ಒಬ್ಬ ವಿದ್ಯಾರ್ಥಿ ಮೃತಪಟ್ಟಿದ್ದರೆ, 16 ವರ್ಷದ ವಿದ್ಯಾರ್ಥಿ ತೀವ್ರ ಗಾಯಗೊಂಡಿದ್ದರು.
ಘಟನೆಯ ಬಗ್ಗೆ ಯೂನಿವರ್ಸಿಟಿ ಟ್ವೀಟ್ ಮಾಡಿದೆ..ಈ ಸಲ ಫೈರಿಂಗ್ನಲ್ಲಿ ಹತ್ಯೆಯಾದ ವ್ಯಕ್ತಿ ವಿಶ್ವವಿದ್ಯಾಲಯಕ್ಕೆ ಸೇರಿದವರಲ್ಲ. ಇನ್ನು ಏಳು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅದು ಮಾರಣಾಂತಿಕವಲ್ಲದ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದೆ. ಹಾಗೇ, ವಿದ್ಯಾರ್ಥಿಗಳು ಘಟನೆಗಳ ಬಗ್ಗೆ ತಪ್ಪು ಮಾಹಿತಿಗಳನ್ನು ಹಬ್ಬಿಸಬಾರದು ಎಂದು ಮನವಿ ಮಾಡಿದೆ. ಇನ್ನು ಈ ಯೂನಿವರ್ಸಿಟಿಯಲ್ಲಿ ಒಂದೇ ವಾರದಲ್ಲಿ ಎರಡು ಗುಂಡಿನ ದಾಳಿ ನಡೆದಿದ್ದರೂ, ಒಂದಕ್ಕೊಂದು ಸಂಬಂಧವಿರುವ ಬಗ್ಗೆ ಸರಿಯಾದ ಸ್ಪಷ್ಟನೆ ಸಿಕ್ಕಿಲ್ಲ ಎಂದೂ ಹೇಳಲಾಗಿದೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಗುಂಡಿನ ದಾಳಿಯ ಬೆನ್ನಲ್ಲೇ ಇಲ್ಲಿ ನಡೆಯಬೇಕಿದ್ದ ವಾರ್ಷಿಕ ಫೂಟ್ಬಾಲ್ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಹಾಗೇ, ಇಂದು ಮತ್ತು ನಾಳೆ ಯಾವ ತರಗತಿಗೂ ನಡೆಯುತ್ತಿಲ್ಲ. ಸದ್ಯಕ್ಕೆ ಕರ್ಫ್ಯೂ ಘೋಷಣೆಯಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಯಾರಿಗೇ ಏನೇ ಸಣ್ಣ ಮಾಹಿತಿ ಗೊತ್ತಿದ್ದರೂ ನಮ್ಮೊಂದಿಗೆ ಹಂಚಿಕೊಳ್ಳಿ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಅವರು ಫೇಸ್ಬುಕ್ನಲ್ಲಿ ಕೂಡ ಈ ಫೈರಿಂಗ್ ಬಗ್ಗೆ ಪೋಸ್ಟ್ ಹಾಕಿಕೊಂಡಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಯುವ ಮೋರ್ಚಾ ನಾಯಕನ ಹತ್ಯೆ; ಮನೆ ಎದುರು ನಿಂತಿದ್ದ ಮುಖಂಡನಿಗೆ ಗುಂಡು ಹಾರಿಸಿದ ದುಷ್ಕರ್ಮಿಗಳು