
ದುಬೈ, ಸೆಪ್ಟೆಂಬರ್ 30: ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಪ್ರಯಾಣಿಸುತ್ತಿದ್ದ ಫ್ಲೈದುಬೈ ವಿಮಾನವನ್ನು ಪತನಗೊಳಿಸಿ 9/11 ಮಾದರಿಯ ಭೀಕರ ಭಯೋತ್ಪಾದನಾ ದಾಳಿ ನಡೆಸಲು ಯತ್ನಿಸಿದ್ದ ಕೋ-ಪೈಲಟ್‌ನ ಸಂಚನ್ನು ವಿಫಲಗೊಳಿಸಿ, 180 ಪ್ರಯಾಣಿಕರ ಪ್ರಾಣ ಉಳಿಸಿದ ಸಾಹಸಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಭಾರತೀಯ ಮೂಲದವರು ಎಂಬ ಸಂಗತಿ ಬೆಳಕಿಗೆ ಬಂದಿದೆ. ಇವರು ಈ ಮೊದಲು ಸಾಕಷ್ಟು ವರ್ಷಗಳ ಕಾಲ ಭಾರತದ ಸ್ಪೈಸ್‌ಜೆಟ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದ ಅನುಭವ ಹೊಂದಿದ್ದಾರೆ. ಓಮನ್ ಮೂಲದ ಕೋ-ಪೈಲಟ್ ವಿಮಾನದ ನಿಯಂತ್ರಣ ಸಾಧಿಸಿ ಪತನಗೊಳಿಸಲು ನಡೆಸಿದ ಯತ್ನವನ್ನು ತನ್ನ ಜೀವವನ್ನೂ ಲೆಕ್ಕಿಸದೆ ತಡೆದು ವಿಫಲಗೊಳಿಸಿದ್ದಾರೆ ಕ್ಯಾಪ್ಟನ್ ಸ್ಮಿತ್ ಮಚ್ಚಾರ್. ಇಸ್ರೇಲಿ ಮಾಧ್ಯಮ ಸಂಸ್ಥೆಗಳಾದ ‘ಚಾನೆಲ್ 12’ ಮತ್ತು ‘ವೈನೆಟ್’ ಸಹ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಭಾರತೀಯ ಮೂಲದವರು ಹಾಗೂ ಭಾರತೀಯ ಪ್ರಜೆ ಎಂದು ದೃಢಪಡಿಸಿವೆ.
ಕೋ-ಪೈಲಟ್ ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದನ್ನು ತಡೆದ ಸ್ಮಿತ್ ಮಚ್ಚಾರ್ಗೆ ಚಾಕುವಿನಿಂದ ಇರಿಯಲಾಗಿತ್ತು. ಬಳಿಕ, ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪೈಲಟ್ ಒಬ್ಬರು ಆ ವಿಮಾನವನ್ನು ಸೌದಿ ಅರೇಬಿಯಾದ ತಬುಕ್ ನಗರದಲ್ಲಿ ತುರ್ತು ಲ್ಯಾಂಡ್ ಮಾಡಿದ್ದರು. ಚಾಕುವಿನಿಂದ ಇರಿದ ಕೋ-ಪೈಲಟ್ನನ್ನು ವಿಮಾನದ ಪ್ರಯಾಣಿಕರು ಥಳಿಸಿ, ಬಿಗಿಯಾಗಿ ಹಿಡಿದುಕೊಂಡಿದ್ದರು.
ಇದನ್ನೂ ಓದಿ: ರಷ್ಯಾದ ಮಿಲಿಟರಿ ವಿಮಾನ ಪತನ; 6 ಜನ ಸಾವು
ಇಸ್ರೇಲ್ ಅಧಿಕಾರಿಗಳು ಇದನ್ನು ಭಯೋತ್ಪಾದನಾ ದಾಳಿಯ ಯತ್ನವೆಂದು ತನಿಖೆ ನಡೆಸುತ್ತಿದ್ದಾರೆ. 27 ಮಕ್ಕಳು ಸೇರಿದಂತೆ ಒಟ್ಟು 180 ಪ್ರಯಾಣಿಕರಿದ್ದ ಈ ವಿಮಾನವು ಅಂತಿಮವಾಗಿ ಸೌದಿ ಅರೇಬಿಯಾದ ತಬುಕ್ ವಿಮಾನ ನಿಲುವಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ಓಮನ್ ಮೂಲದ ಕೋ-ಪೈಲಟ್ ಕಾಕ್‌ಪಿಟ್ ಒಳಗಿನ ನೂಕಾಟದ ಸಮಯದಲ್ಲಿ ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದಾನೆ. ಭಾರತೀಯ ಕ್ಯಾಪ್ಟನ್ ಪ್ರಯಾಣಿಕರ ನೆರವಿನಿಂದ ಆತನ ವಿರುದ್ಧ ಹೋರಾಡಿದರು. ಬಳಿಕ ಆತನನ್ನು ಕಟ್ಟಿಹಾಕಲಾಯಿತು. ಸ್ಮಿತ್ ಅವರ ಸಮಯಪ್ರಜ್ಞೆಯಿಂದಾಗಿ 180 ಪ್ರಯಾಣಿಕರ ಪ್ರಾಣ ಉಳಿಯಿತು.
ಕಿರುಚಾಟ ಕೇಳಿ ಕಾಕ್‌ಪಿಟ್‌ನತ್ತ ಧಾವಿಸಿದ ಪ್ರಯಾಣಿಕರು:
ಕಾಕ್‌ಪಿಟ್‌ನಿಂದ ಕಿರುಚಾಟ ಕೇಳಿಬಂದಾಗ ಪ್ರಯಾಣಿಕರಲ್ಲಿ ಭೀತಿ ಆವರಿಸಿತ್ತು. ಪ್ರಯಾಣಿಕರೊಬ್ಬರು ಕಾಕ್‌ಪಿಟ್ ಬಾಗಿಲು ತೆರೆದು ನೋಡಿದಾಗ ಎಲ್ಲೆಂದರಲ್ಲಿ ರಕ್ತ ಚೆಲ್ಲಿರುವುದು ಮತ್ತು ಪೈಲಟ್‌ಗೆ ಚಾಕು ಇರಿದಿರುವುದು ಕಂಡುಬಂತು. ತಕ್ಷಣವೇ ಹಲವು ಪ್ರಯಾಣಿಕರು ಒಳನುಗ್ಗಿ ದಾಳಿ ನಡೆಸಿದ್ದ ಕೋ-ಪೈಲಟ್ನನ್ನು ವಶಕ್ಕೆ ಪಡೆದರು. ವಿಮಾನದಲ್ಲಿ ಪ್ರಯಾಣಿಕರಾಗಿ ಪ್ರಯಾಣಿಸುತ್ತಿದ್ದ ಇನ್ನೊಬ್ಬ ಪೈಲಟ್ ತಕ್ಷಣವೇ ಕಾಕ್‌ಪಿಟ್‌ಗೆ ಧಾವಿಸಿದರು. ವಿಮಾನದಲ್ಲಿದ್ದ ಇಬ್ಬರು ವೈದ್ಯರು ಗಾಯಗೊಂಡ ಕ್ಯಾಪ್ಟನ್ ಮತ್ತು ಕೋ-ಪೈಲಟ್‌ಗೆ ಪ್ರಥಮ ಚಿಕಿತ್ಸೆ ನೀಡಿದರು. ತಕ್ಷಣವೇ ಸೌದಿ ಅರೇಬಿಯಾದ ತಬುಕ್ ವಿಮಾನ ನಿಲುವಾಣದಲ್ಲಿ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲಾಯಿತು.
ಇದನ್ನೂ ಓದಿ: ಕಾಕ್‌ಪಿಟ್ ಜಗಳ, ಪೈಲಟ್‌ಗೆ ಚಾಕು ಇರಿತ; ಫ್ಲೈದುಬೈ ವಿಮಾನದ ಹೈಜಾಕ್ ಕುರಿತು ಹೊಸ ಸಂಗತಿ ಬಯಲು
ಇಸ್ರೇಲ್‌ನ ಎನ್12ಗೆ ನೀಡಿದ ಮಾಹಿತಿಯಲ್ಲಿ, ಅಧಿಕಾರಿಯೊಬ್ಬರು ಇದೊಂದು ದೊಡ್ಡ ಮಟ್ಟದ ಅನಾಹುತದ ಯತ್ನವಾಗಿದ್ದು, ಓರ್ವ ಪೈಲಟ್ ಮತ್ತೊಬ್ಬರಿಗೆ ಚಾಕು ಇರಿದು ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದರು. 9/11ರ ದಾಳಿಯ ಮಾದರಿಯಲ್ಲೇ ಈ ಪ್ರಯತ್ನವೂ ಇತ್ತು ಎಂದು ತಿಳಿಸಿದ್ದಾರೆ.
ಫ್ಲೈದುಬೈ ಸಂಸ್ಥೆಯು FZ1073 ವಿಮಾನದಲ್ಲಿ ಈ ಘಟನೆ ನಡೆದಿದ್ದನ್ನು ದೃಢಪಡಿಸಿದ್ದು, ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ. ಈ ಕುರಿತು ಸಂಸ್ಥೆಯು ತನಿಖೆ ಆರಂಭಿಸಿದ್ದು, ಭದ್ರತಾ ಸಂಸ್ಥೆಗಳೊಂದಿಗೆ ಸಹಕರಿಸುತ್ತಿದೆ. ಇಸ್ರೇಲ್ ಸರ್ಕಾರವು ಘಟನೆಯ ಬೆನ್ನಲ್ಲೇ ತನ್ನ ಯುದ್ಧ ವಿಮಾನಗಳನ್ನು ಸಜ್ಜುಗೊಳಿಸಿ ಭದ್ರತೆಯನ್ನು ಹೆಚ್ಚಿಸಿತ್ತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:19 pm, Wed, 30 September 26