
ದುಬೈ, ಅಕ್ಟೋಬರ್ 01: ಫ್ಲೈದುಬೈ ವಿಮಾನದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮೇಲೆ ದಾಳಿ ನಡೆಸಲು ಓಮನ್ ಸಹ-ಪೈಲಟ್ ಚಾಕು ಬದಲಿಗೆ ವಿಮಾನದಲ್ಲಿದ್ದ ‘ಕ್ರ್ಯಾಶ್ ಆಕ್ಸ್’ ಆಯುಧವನ್ನು ಬಳಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಫ್ಲೈದುಬೈ ಅಥವಾ ಸೌದಿ ಅಧಿಕಾರಿಗಳಿಂದ ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲ. ಆದರೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮಚ್ಚರ್ ಮೇಲೆ ಕ್ರ್ಯಾಶ್ ಆಕ್ಸ್ನಿಂದ ದಾಳಿ ನಡೆದಿರುವುದಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
174 ಪ್ರಯಾಣಿಕರಿದ್ದ ಬೋಯಿಂಗ್ 737 MAX 8 ವಿಮಾನ ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ದಾಳಿಯಲ್ಲಿ ಮಚ್ಚರ್ ಅವರ ತಲೆ ಮತ್ತು ಕೈಗಳಿಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವವಾಗಿತ್ತು. ಆದರೂ ಅವರು ಕಾಕ್ಪಿಟ್ ಬಾಗಿಲು ತೆರೆಯಲು ಯಶಸ್ವಿಯಾದರು. ಬಾಗಿಲು ತೆರೆದ ನಂತರ ಪ್ರಯಾಣಿಕರು ಮತ್ತು ಸಿಬ್ಬಂದಿ ಕಾಕ್ಪಿಟ್ಗೆ ಪ್ರವೇಶಿಸಿ ಸಹ-ಪೈಲಟ್ನನ್ನು ನಿಯಂತ್ರಿಸಲು ನೆರವಾದರು. ಬಳಿಕ ವಿಮಾನದಲ್ಲಿದ್ದ ಇತರ ಫ್ಲೈದುಬೈ ಪೈಲಟ್ಗಳು ವಿಮಾನದ ನಿಯಂತ್ರಣವನ್ನು ವಹಿಸಿಕೊಂಡು ಸೌದಿ ಅರೇಬಿಯಾದ ತಬೂಕ್ನಲ್ಲಿ ತುರ್ತು ಭೂಸ್ಪರ್ಶ ಮಾಡಿಸಿದರು.
ಪೋಸ್ಟ್
‘ಕ್ರ್ಯಾಶ್ ಆಕ್ಸ್’ ವಾಣಿಜ್ಯ ವಿಮಾನಗಳಲ್ಲಿ ತುರ್ತು ಸಂದರ್ಭಗಳಿಗಾಗಿ ಇರಿಸಲಾಗುವ ಸಾಧನವಾಗಿದೆ. ಇದು ಸಣ್ಣ ಕೊಡಲಿಯಂತಿರುತ್ತದೆ. ವಿಮಾನದ ತುರ್ತು ನಿರ್ಗಮನ ಅಥವಾ ಇತರ ತುರ್ತು ಕಾರ್ಯಾಚರಣೆಗಳಲ್ಲಿ ಸಿಬ್ಬಂದಿಗೆ ನೆರವಾಗಲು ಇದನ್ನು ಬಳಸಲಾಗುತ್ತದೆ. ಈ ಪ್ರಕರಣದಲ್ಲಿ ಇದೇ ಸಾಧನವನ್ನು ದಾಳಿಗೆ ಬಳಸಲಾಗಿದೆಯೇ ಎಂಬುದನ್ನು ತನಿಖೆ ಸ್ಪಷ್ಟಪಡಿಸಬೇಕಿದೆ.
ಮತ್ತಷ್ಟು ಓದಿ: ಗಂಭೀರ ಗಾಯದ ನಡುವೆಯೂ ಧೈರ್ಯ ತೋರಿದ ಭಾರತೀಯ ಪೈಲಟ್, ಸ್ಮಿತ್ ಮಚ್ಚರ್ಗೆ ಪ್ರಧಾನಿ ಮೋದಿ ಮೆಚ್ಚುಗೆ
ತೀವ್ರ ಗಾಯಗೊಂಡಿದ್ದ ಕ್ಯಾಪ್ಟನ್ ಮಚ್ಚರ್ ಅವರನ್ನು ತಬೂಕ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಭಾರತೀಯ ಅಧಿಕಾರಿಗಳು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯ ನೆರವು ನೀಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಚ್ಚರ್ ಅವರ ಪತ್ನಿ ಮತ್ತು ಪೋಷಕರೊಂದಿಗೆ ಮಾತನಾಡಿ, ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ. ಘಟನೆಯ ಕುರಿತು ತನಿಖೆ ಮುಂದುವರೆದಿದ್ದು, ಕಾಕ್ಪಿಟ್ ಭದ್ರತೆ ಮತ್ತು ಪೈಲಟ್ಗಳ ಸುರಕ್ಷತೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ