Flying Ginsu: ಅಲ್​ಖೈದಾ ನಾಯಕ ಅಲ್​ ಜವಾಹಿರಿ ಹತ್ಯೆಗೆ ಫ್ಲೈಯಿಂಗ್ ಗಿನ್ಸು ಕ್ಷಿಪಣಿ ಬಳಸಿತಾ ಅಮೆರಿಕಾ?

| Updated By: ಸುಷ್ಮಾ ಚಕ್ರೆ

Updated on: Aug 02, 2022 | 1:01 PM

ಈ ಫ್ಲೈಯಿಂಗ್ ಗಿನ್ಸು ಮೂಲಕ ದಾಳಿ ನಡೆಸಿದರೆ ಯಾವುದೇ ಸ್ಫೋಟ ಉಂಟಾಗುವುದಿಲ್ಲ. ಇದು ತನ್ನೆದುರು ಸಿಕ್ಕ ಎಲ್ಲ ವಸ್ತುಗಳನ್ನೂ ಕತ್ತರಿಸುತ್ತಾ ಮುಂದೆ ಹೋಗುತ್ತದೆ.

Flying Ginsu: ಅಲ್​ಖೈದಾ ನಾಯಕ ಅಲ್​ ಜವಾಹಿರಿ ಹತ್ಯೆಗೆ ಫ್ಲೈಯಿಂಗ್ ಗಿನ್ಸು ಕ್ಷಿಪಣಿ ಬಳಸಿತಾ ಅಮೆರಿಕಾ?
ಅಯ್ಮನ್ ಅಲ್-ಜವಾಹಿರಿ
Follow us on

ಕಾಬೂಲ್: ಅಲ್-ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿಯನ್ನು (Ayman al-Zawahiri) ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ (Kabul) ಅಮೆರಿಕಾ ಡ್ರೋನ್ ದಾಳಿ ನಡೆಸಿ ಹತ್ಯೆ ಮಾಡಿದೆ. ಈ ಬಗ್ಗೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಘೋಷಣೆ ಮಾಡಿದ್ದು, 2001ರ ಸೆಪ್ಟೆಂಬರ್ 11ರಂದು ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ 2,977 ಜನರ ಕುಟುಂಬಗಳಿಗೆ ಇದು ನ್ಯಾಯದ ಕ್ಷಣವಾಗಿದೆ ಎಂದಿದ್ದಾರೆ. ತನ್ನ ಕುಟುಂಬದವರೊಂದಿಗೆ ಅವಿತಿದ್ದ ಅಲ್- ಜವಾಹಿರಿಯನ್ನು ಡ್ರೋನ್ ದಾಳಿ ನಡೆಸಿ ಅಮೆರಿಕಾ ಸೇನೆ ಹತ್ಯೆ ಮಾಡಿರುವುದಾಗಿ ಜೋ ಬೈಡೆನ್ (Joe Biden) ಹೇಳಿದ್ದರು. ಆದರೆ, ಈ ದಾಳಿಗಾಗಿ ಅಮೆರಿಕಾ ತನ್ನ ಬಳಿ ಇರುವ ರಹಸ್ಯ ಆಯುಧವನ್ನು ಬಳಸಿರಬಹುದು ಎನ್ನಲಾಗಿದೆ.

ಕಾಬೂಲ್​ನಲ್ಲಿರುವ ಮನೆಯೊಂದರ ಬಾಲ್ಕನಿಯಲ್ಲಿ ನಿಂತಿದ್ದ ಅಲ್-ಜವಾಹಿರಿ ಮೇಲೆ ದಾಳಿ ನಡೆಸಿ ಅಮೆರಿಕಾ ಹತ್ಯೆ ಮಾಡಿತ್ತು. ಈ ವೇಳೆ ಜವಾಹಿರಿ ಜೊತೆಗಿದ್ದ ಅವರ ಕುಟುಂಬಸ್ಥರಿಗೆ ಯಾರಿಗೂ ತೊಂದರೆಯಾಗಿಲ್ಲ. ಆದರೆ, ಜವಾಹಿರಿ ಸಾವನ್ನಪ್ಪಿದ ಜಾಗದಲ್ಲಿ ಡ್ರೋನ್ ದಾಳಿ ನಡೆದ ಯಾವ ಕುರುಹುಗಳೂ ಪತ್ತೆಯಾಗಿಲ್ಲ. ಅಲ್ಲಿ ಸ್ಫೋಟ ನಡೆದಿರುವುದಕ್ಕೆ ಸಾಕ್ಷಿಗಳು ಸಿಕ್ಕಿಲ್ಲ. ಹೀಗಾಗಿ, ಅಮೆರಿಕಾ ಜವಾಹಿರಿ ಹತ್ಯೆಗೆ ಹೆಲ್ಫೈರ್ R9X ಬಳಸಿರಬಹುದು ಎಂಬ ಊಹಾಪೋಹಗಳು ವ್ಯಾಪಕವಾಗಿ ಹರಿದಾಡುತ್ತಿದೆ.

ಈ ಹೆಲ್ಫೈರ್ ಆರ್​9ಎಕ್ಸ್​ ಅಥವಾ ಗಿನ್ಸು ಕ್ಷಿಪಣಿಯನ್ನು ಸೂಕ್ಷ್ಮವಾದ ದಾಳಿಗಳಲ್ಲಿ ಬಳಸಲಾಗುತ್ತದೆ. ಹೆಲ್ಫೈರ್ R9X ಕ್ರಮೇಣ ಫ್ಲೈಯಿಂಗ್ ಗಿನ್ಸು ಎಂಬ ಹೆಸರು ಗಳಿಸಿತು. ಈ ಹಿಂದೆ 2017ರ ಮಾರ್ಚ್​ ತಿಂಗಳಲ್ಲಿ ನಡೆದ ಅಲ್​ಖೈದಾ ಹಿರಿಯ ನಾಯಕ ಅಬು ಅಲ್-ಮಸ್ರಿ ಹತ್ಯೆಯಲ್ಲಿ ಈ ಕ್ಷಿಪಣಿಯನ್ನು ಮೊದಲ ಬಾರಿ ಬಳಸಲಾಗಿತ್ತು. ಸಿರಿಯಾದಲ್ಲಿ ಕಾರಿನಲ್ಲಿ ಅವರು ಪ್ರಯಾಣಿಸುತ್ತಿದ್ದ ವೇಳೆ ಡ್ರೋನ್ ದಾಳಿ ನಡೆಸಲಾಗಿತ್ತು.

ಇದನ್ನೂ ಓದಿ: Al-Zawahiri: ಕರ್ನಾಟಕದ ಮೇಲೆ ಕಣ್ಣಿಟ್ಟಿದ್ದ ಅಲ್​ಖೈದಾ ಉಗ್ರರ ಮುಖ್ಯಸ್ಥ ಅಲ್​-ಜವಾಹಿರಿ ಹತ್ಯೆ

ಈ ಫ್ಲೈಯಿಂಗ್ ಗಿನ್ಸು ಮೂಲಕ ದಾಳಿ ನಡೆಸಿದರೆ ಯಾವುದೇ ಸ್ಫೋಟ ಉಂಟಾಗುವುದಿಲ್ಲ. ಇದು ತನ್ನೆದುರು ಸಿಕ್ಕ ಎಲ್ಲ ವಸ್ತುಗಳನ್ನೂ ಕತ್ತರಿಸುತ್ತಾ ಮುಂದೆ ಹೋಗುತ್ತದೆ. 6 ಬ್ಲೇಡ್‌ಗಳನ್ನು ಹೊಂದಿರುವ, ವಿಮಾನದ ವಿನ್ಯಾಸದಲ್ಲೇ ಇರುವ ಹೆಲ್‌ಫೈರ್ ಆರ್‌9ಎಕ್ಸ್ ಎಂಬ ಈ ಕ್ಷಿಪಣಿಯನ್ನು ಅಮೆರಿಕ ಮತ್ತೆ ಬಳಕೆ ಮಾಡಿದೆ ಎನ್ನಲಾಗುತ್ತಿದೆ. ಯಾವುದೇ ಸ್ಫೋಟವಿಲ್ಲದೆ ಈ ಕ್ಷಿಪಣಿ ತನ್ನ ಕೆಲಸವನ್ನು ಮುಗಿಸುತ್ತದೆ.

ಈ ಹಿಂದೆ 2017ರಲ್ಲಿ ಅಲ್ ಮಸ್ರಿ ಹತ್ಯೆ ವೇಳೆ ಸಿರಿಯಾದಲ್ಲಿ ಆತ ಪ್ರಯಾಣಿಸುತ್ತಿದ್ದ ಕಾರಿನ ಮೇಲ್ಭಾಗದಲ್ಲಿ ದೊಡ್ಡ ಗಾತ್ರದ ರಂಧ್ರ ಉಂಟಾಗಿತ್ತು. ಆ ಕಾರಿನ ಲೋಹದ ಭಾಗ, ಒಳ ವಿನ್ಯಾಸ ಹಾಗೂ ಒಳಗಿದ್ದ ಎಲ್ಲರೂ ಛಿದ್ರವಾಗಿದ್ದರು. ಆದರೆ ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಸ್ವಲ್ಪವೂ ಹಾನಿ ಉಂಟಾಗಿರಲಿಲ್ಲ. ಇದೇ ಈ ಕ್ಷಿಪಣಿಯ ವಿಶೇಷತೆ. ಯಾವುದೇ ಶಬ್ದವಿಲ್ಲದೆ ವ್ಯಕ್ತಿಗಳನ್ನು ಮತ್ತು ವಸ್ತುಗಳನ್ನು ಛಿದ್ರಗೊಳಿಸುವ ಈ ಫ್ಲೈಯಿಂಗ್ ಗಿನ್ಸು ಬಗ್ಗೆ ಎಲ್ಲರಿಗೂ ಗೊತ್ತಾಗಿದ್ದೇ ಆಗ.

ಇದನ್ನೂ ಓದಿ: ಸರ್ಜನ್​ನಿಂದ ಅಲ್​ಖೈದಾ ನಾಯಕನವರೆಗೆ; ಅಮೆರಿಕಾದ ಡ್ರೋನ್ ದಾಳಿಗೆ ಬಲಿಯಾದ ಅಯ್ಮನ್ ಅಲ್-ಜವಾಹಿರಿ ಪಯಣ ಹೀಗಿತ್ತು

ಅಲ್-ಜವಾಹ್ರಿ ಈಜಿಪ್ಟಿನ ಕುಟುಂಬದಲ್ಲಿ ಜನಿಸಿದವರು. ಸಣ್ಣ ವಯಸ್ಸಿನಲ್ಲಿ ಸರ್ಜನ್ ಆಗಿ ಕೆಲಸ ಮಾಡಿದ ಅವರು ಕ್ರಮೇಣ ಭಯೋತ್ಪಾದನೆ ಸಂಘಟನೆಯತ್ತ ವಾಲಿದರು. ಒಸಾಮಾ ಬಿನ್ ಲಾಡೆನ್ ಆಪ್ತರಾಗಿದ್ದ ಅವರು ಅವರ ಮರಣದ ಬಳಿಕ ಅಲ್​ಖೈದಾ ಸಂಘಟನೆಯ ನಾಯಕತ್ವ ವಹಿಸಿಕೊಂಡರು.

ಈ ಕ್ಷಿಪಣಿಗೆ ‘ಹಾರುವ ಚಾಕು’ (ಫ್ಲೈಯಿಂಗ್ ಗಿನ್ಸು) ಎಂದು ಕರೆಯಲಾಗುತ್ತದೆ. 1980ರ ದಶಕದಲ್ಲಿ ಜಪಾನ್‌ನಲ್ಲಿ ‘ಗಿನ್ಸು’ ಎಂಬ ಬ್ರ್ಯಾಂಡ್‌ನ ಚಾಕುಗಳ ಜಾಹೀರಾತು ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಆ ಪ್ರಸಿದ್ಧ ಹೆಸರಿನ್ನೇ ಈ ಕ್ಷಿಪಣಿಗೆ ಇಡಲಾಗಿತ್ತು. ಇದಕ್ಕೆ ‘ನಿಂಜಾ ಬಾಂಬ್’ ಎಂಬ ಹೆಸರೂ ಇದೆ. ಸ್ಫೋಟವಾದರೆ ಬೇರೆಯವರ ಜೀವವೂ ಹೋಗುವುದರಿಂದ ಬೇರೆ ಯಾರಿಗೂ ತೊಂದರೆಯಾಗದಂತೆ ತಮ್ಮ ಗುರಿಯಾಗಿರುವ ವ್ಯಕ್ತಿಯ ಮೇಲೆ ಮಾತ್ರ ದಾಳಿ ನಡೆಸಲು ಈ ಕ್ಷಿಪಣಿಯನ್ನು ಬಳಸಲಾಗುತ್ತದೆ. ಈ ಯುದ್ಧ ಕ್ಷಿಪಣಿಯ ಮೂಲಕವೇ ಅಲ್-ಜವಾಹಿರಿಯನ್ನು ಹತ್ಯೆ ಮಾಡಲಾಗಿದೆ ಎನ್ನಲಾಗುತ್ತಿದೆ.