ಫ್ರಾನ್ಸ್: ಅಧ್ಯಕ್ಷರಾಗಿ 2ನೇ ಅವಧಿಗೆ ಮುಂದುವರಿದ ಎಮ್ಯಾನುಯೆಲ್ ಮ್ಯಾಕ್ರನ್, ಬಲಪಂಥೀಯ ನಾಯಕಿ ಲೆ ಪೆನ್ ಸೋಲು
French Presidential Election 2022 Results: ತಮ್ಮ ಎದುರಾಳಿಯಾಗಿದ್ದ ಬಲಪಂಥೀಯ ನಾಯಕಿ ಮರೀನ್ ಲೆ ಪೆನ್ ಅವರನ್ನು ನಿರ್ಣಾಯಕವಾಗಿ ಸೋಲಿಸುವ ಮೂಲಕ ಐರೋಪ್ಯ ದೇಶಗಳನ್ನು ಆವರಿಸಿಕೊಳ್ಳುತ್ತಿದ್ದ ಕಟ್ಟರ್ ಬಲಪಂಥೀಯ ಚಳವಳಿಗೆ ತಡೆಯೊಡ್ಡಿದ್ದಾರೆ.
ಪ್ಯಾರೀಸ್: ಫ್ರಾನ್ಸ್ನ ಅಧ್ಯಕ್ಷೀಯ ಚುನಾವಣಾ ಪ್ರಕ್ರಿಯೆ ಭಾನುವಾರ ಪೂರ್ಣಗೊಂಡಿದೆ. ಹಾಲಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸತತ 2ನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ. ತಮ್ಮ ಎದುರಾಳಿಯಾಗಿದ್ದ ಬಲಪಂಥೀಯ ನಾಯಕಿ ಮರೀನ್ ಲೆ ಪೆನ್ ಅವರನ್ನು ನಿರ್ಣಾಯಕವಾಗಿ ಸೋಲಿಸುವ ಮೂಲಕ ಐರೋಪ್ಯ ದೇಶಗಳನ್ನು ಆವರಿಸಿಕೊಳ್ಳುತ್ತಿದ್ದ ಕಟ್ಟರ್ ಬಲಪಂಥೀಯ ಚಳವಳಿಗೆ ತಡೆಯೊಡ್ಡಿದ್ದಾರೆ. ಚಲಾವಣೆಯಾಗಿದ್ದ ಒಟ್ಟು ಮತಗಳ ಪೈಕಿ ಶೇ 58ರಷ್ಟು ಮ್ಯಾಕ್ರನ್ ಪರವಾಗಿ, ಶೇ 42ರಷ್ಟು ಲೆ ಪೆನ್ ಪರವಾಗಿದ್ದವು. ಕಳೆದ 20 ವರ್ಷಗಳ ಅವಧಿಯಲ್ಲಿ 2ನೇ ಅವಧಿಗೆ ಅಧಿಕಾರ ಉಳಿಸಿಕೊಂಡ ಏಕೈಕ ಅಧ್ಯಕ್ಷ ಮ್ಯಾಕ್ರನ್. ಉದಾರವಾದಕ್ಕೆ ಹೆಸರುವಾಸಿಯಾದ ಫ್ರಾನ್ಸ್ನಲ್ಲಿ ಸಂಪ್ರದಾಯವಾದಿ ಬಲಪಂಥೀಯರ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಫ್ರಾನ್ಸ್ನಲ್ಲಿ ಇತ್ತೀಚಿನ ದಿನಗಳಲ್ಲಿ ಬಿರುಕು ಹೆಚ್ಚಾಗಿದ್ದು, ಹಲವು ವಿಚಾರಗಳಲ್ಲಿ ಭಿನ್ನಮತ ತಲೆದೋರುತ್ತಿದೆ. ಬಲಪಂಥೀಯ ಚಳವಳಿಗೆ ಜನಮನ್ನಣೆ ಸಿಗುತ್ತಿರುವ ಅಂಶವನ್ನೂ ಈ ಫಲಿತಾಂಶ ಎತ್ತಿ ತೋರಿಸಿದೆ.
ಇದೀಗ 44ರ ಹರೆಯಲ್ಲಿರುವ ಎಮ್ಯಾನುಯೆಲ್ ಮ್ಯಾಕ್ರನ್ಗೆ ಈ ಗೆಲುವು ಸುಲಭವಾಗಿರಲಿಲ್ಲ. ಫ್ರಾನ್ಸ್ನಲ್ಲಿ ಸುಧಾರಣೆ ಆರಂಭಿಸುವ ಕನಸು ಬಿತ್ತಿರುವ ಮ್ಯಾಕ್ರನ್ ಕಳೆದ ಜೂನ್ನಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿಯೂ ಪ್ರಬಲ ಪೈಪೋಟಿ ಎದುರಿಸಬೇಕಾಯಿತು. ಸಂಸತ್ತಿನಲ್ಲಿ ಬಹುಮತ ಹೊಂದುವುದು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸುಲಭವಾಗುತ್ತದೆ. ಹೀಗಾಗಿಯೇ ಇಬ್ಬರೂ ಅಭ್ಯರ್ಥಿಗಳು ಸಂಸತ್ತಿನಲ್ಲಿ ಪಕ್ಷದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಬೇಕು ಎಂದು ಇಬ್ಬರೂ ಬಯಸಿದ್ದರು.
ಫ್ಯಾರೀಸ್ನ ವಿಶ್ವಪ್ರಸಿದ್ಧ ಐಫೆಲ್ ಟವರ್ನ ಸಮೀಪವೇ ವಿಜಯೋತ್ಸವ ಆಚರಿಸಿದ ಮ್ಯಾಕ್ರನ್, ತಮ್ಮನ್ನು ವಿರೋಧಿಸಿದ ಮತದಾರರ ಸಿಟ್ಟು ಕಡಿಮೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇನೆ. ಸಚಿವ ಸಂಪುಟವನ್ನು ಹೊಸದಾಗಿ ರಚಿಸಲಾಗುವುದು. ಎಲ್ಲ ಹಳಬರಿಗೆ ಅಧಿಕಾರ ಸಿಗುವುದಿಲ್ಲ ಎಂದು ಹೇಳಿದರು. ‘ಹಿಂದಿನ ಅವಧಿಯ ಅಧಿಕಾರದ ಮುಂದುವರಿಕೆ ಇದಲ್ಲ. ಆಡಳಿತದಲ್ಲಿ ಆಮೂಲಾಗ್ರ ಬದಲಾವಣೆ ತರಲು ನಾವು ಉದ್ದೇಶಿಸುತ್ತಿದ್ದೇವೆ. ಬದಲಾವಣೆ ಶೀಘ್ರ ಜನರ ಅರಿವಿಗೆ ಬರುತ್ತದೆ’ ಎಂದು ಹೇಳಿದರು.
ಪರಾಜಿತ ಬಲಪಂಥೀಯ ಅಭ್ಯರ್ಥಿ ಲೆ ಪೆನ್ ಸಹ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಭಾಷಣ ಮಾಡಿ, ರಾಜಕಾರಣ ತೊರೆಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಜೂನ್ ತಿಂಗಳಲ್ಲಿ ನಡೆಯಲಿರುವ ಮತ್ತೊಂದು ಶಾಸಕಾಂಗ ಚುನಾವಣೆಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ನನಗೆ ಅಧ್ಯಕ್ಷ ಸ್ಥಾನಕ್ಕೆ ಬೇಕಿರುವಷ್ಟು ಮತ ಸಿಗದಿರಬಹುದು. ಆದರೂ ಇದು ನಮ್ಮ ವಿಜಯವೇ. ಅಧ್ಯಕ್ಷರ ವಿರೋಧಿಗಳು ನಮ್ಮ ನ್ಯಾಷನಲ್ ಱಲಿ ಪಕ್ಷವನ್ನು ಸೇರಬೇಕು ಎಂದು ಕರೆ ನೀಡಿದರು.
Congratulations to my friend @EmmanuelMacron on being re-elected as the President of France! I look forward to continue working together to deepen the India-France Strategic Partnership.
— Narendra Modi (@narendramodi) April 25, 2022
ಮೋದಿ ಅಭಿನಂದನೆ
ಫ್ರಾನ್ಸ್ ಅಧ್ಯಕ್ಷರಾಗಿ ಮರು ಆಯ್ಕೆಯಾಗಿರುವ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ. ಭಾರತ-ಫ್ರಾನ್ಸ್ ಕಾರ್ಯತಂತ್ರದ ಸಹಭಾಗಿತ್ವ ಗಟ್ಟಿಗೊಳಿಸುವ ಕೆಲಸವನ್ನು ಒಟ್ಟಾಗಿ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಬಿಕ್ಕಟ್ಟು ಶಮನಕ್ಕೆ ರಷ್ಯಾ ಮತ್ತು ಫ್ರಾನ್ಸ್ ಸಮ್ಮತಿ: ಶೀಘ್ರ ಪುಟಿನ್ ಮತ್ತು ಬೈಡೆನ್ ಭೇಟಿ
Published On - 6:52 am, Mon, 25 April 22