Margherita Hack: ಖಗೋಳ ಭೌತಶಾಸ್ತ್ರಜ್ಞೆ ಮಾರ್ಗರಿಟಾ ಹ್ಯಾಕ್​​ 99ನೇ ಜನ್ಮದಿನಕ್ಕೆ ಗೂಗಲ್ ಡೂಡಲ್​ ವಿಶೇಷ ನಮನ

| Updated By: Lakshmi Hegde

Updated on: Jun 12, 2021 | 11:34 AM

Google Doodles: ಮಾರ್ಗರಿಟಾ ಹ್ಯಾಕ್​​ ಉಪಗ್ರಹಗಳು, ಕ್ಷುದ್ರಗ್ರಹಗಳು ಮತ್ತು ನಾಕ್ಷತ್ರಿಕ ವಾತಾವರಣದ ವಿಕಾಸದ ಬಗ್ಗೆ ತುಂಬ ಆಸಕ್ತಿ ಹೊಂದಿದ್ದರು. ಹಾಗೇ, ಪ್ರಾಣಿ ರಕ್ಷಣೆ, ಪ್ರತಿಯೊಬ್ಬರಿಗೂ ಸಮಾನತೆ ಮತ್ತು ಪ್ರಗತಿಯ ಬಗ್ಗೆ ಸದಾ ಮಾತನಾಡುತ್ತಿದ್ದರು.

Margherita Hack: ಖಗೋಳ ಭೌತಶಾಸ್ತ್ರಜ್ಞೆ ಮಾರ್ಗರಿಟಾ ಹ್ಯಾಕ್​​ 99ನೇ ಜನ್ಮದಿನಕ್ಕೆ ಗೂಗಲ್ ಡೂಡಲ್​ ವಿಶೇಷ ನಮನ
ಮಾರ್ಗರಿಟಾ ಹ್ಯಾಕ್​​ರಿಗೆ ಗೂಗಲ್ ಡೂಡಲ್​​ ವಿಶೇಷ ಗೌರವ
Follow us on

ಇಟಲಿಯ ಖ್ಯಾತ ಪ್ರೊಫೆಸರ್​, ಹೋರಾಟಗಾರ್ತಿ, ಖಗೋಳ ಭೌತಶಾಸ್ತ್ರಜ್ಞೆ, ಲೇಖಕಿ ಮಾರ್ಗರಿಟಾ ಹ್ಯಾಕ್​​ ಅವರ 99ನೇ ಹುಟ್ಟುಹಬ್ಬವನ್ನು ಗೂಗಲ್ ತನ್ನ​ ಡೂಡಲ್ ಮೂಲಕ​ ವಿಶೇಷವಾಗಿ ಆಚರಿಸಿದೆ. ದಿ ಲೇಡಿ ಆಫ್​ ಸ್ಟಾರ್ಸ್​ ಎಂದು ಹೆಸರಾಗಿರುವ ಹ್ಯಾಕ್​ ಅವರ ಆ್ಯನಿಮೇಟೆಡ್​ ಚಿತ್ರದ ಮೂಲಕ ಡೂಡಲ್​​​ ಗೌರವ ಸಲ್ಲಿಸಿದೆ.ಮಾರ್ಗರಿಟಾ ಹ್ಯಾಕ್​​ ಉಪಗ್ರಹಗಳು, ಕ್ಷುದ್ರಗ್ರಹಗಳು ಮತ್ತು ನಾಕ್ಷತ್ರಿಕ ವಾತಾವರಣದ ವಿಕಾಸದ ಬಗ್ಗೆ ತುಂಬ ಆಸಕ್ತಿ ಹೊಂದಿದ್ದರು. ಹಾಗೇ, ಪ್ರಾಣಿ ರಕ್ಷಣೆ, ಪ್ರತಿಯೊಬ್ಬರಿಗೂ ಸಮಾನತೆ ಮತ್ತು ಪ್ರಗತಿಯ ಬಗ್ಗೆ ಸದಾ ಮಾತನಾಡುತ್ತಿದ್ದರು. ಬಹಿರಂಗವಾಗಿಯೇ ತಮ್ಮ ಅಭಿಪ್ರಾಯಗಳನ್ನು ನಿರ್ಭಿಡೆಯಿಂದ ಹೇಳಿಕೊಳ್ಳುತ್ತಿದ್ದರು.

ಖಗೋಳಶಾಸ್ತ್ರದ ಅಧ್ಯಯನದಲ್ಲಿ ತೊಡಗಿದ್ದ ಹ್ಯಾಕ್​​ 1995ರಲ್ಲಿ ಒಂದು ಕ್ಷುದ್ರಗ್ರಹ 8558ವನ್ನು ಪತ್ತೆಹಚ್ಚಿದ್ದರು. ಅದಕ್ಕೆ ಹ್ಯಾಕ್​ ಎಂದೇ ಹೆಸರಿಸಲಾಗಿತ್ತು. ಅದನ್ನೇ ಇಂದು ಗೂಗಲ್​ ಎನಿಮೇಟೆಡ್​ ಚಿತ್ರ ಬರೆದು ಗೌರವಿಸಿದೆ. ಅದರಲ್ಲಿ ಮಾರ್ಗರಿಟಾ ಟೆಲಿಸ್ಕೋಪ್​ ಹಿಡಿದಿದ್ದು ಆಕಾಶ ವೀಕ್ಷಣೆ ಮಾಡುತ್ತಿದ್ದು, ಕ್ಷುದ್ರಗ್ರಹ 8558 ಪತ್ತೆಯಾಗಿದ್ದನ್ನು ನೋಡಬಹುದಾಗಿದೆ.

ಮಾರ್ಗರಿಟಾ ಹ್ಯಾಕ್​ ಅವರು 1922ರ ಜೂನ್​ 12ರಂದು ಫ್ಲೋರೆನ್ಸ್​ನಲ್ಲಿ ಜನಿಸಿದ್ದಾರೆ. ಮೊದಲು ಸಾಹಿತ್ಯವನ್ನು ಅಧ್ಯಯನ ಮಾಡಿದರೂ ನಂತರ ಭೌತಶಾಸ್ತ್ರ ಅಭ್ಯಾಸದಲ್ಲಿ ತೊಡಗಿದರು. 1964ರಲ್ಲಿ ಹ್ಯಾಕ್​ ಟ್ರಿಸ್ಟೆಗೆ ತೆರಳಿದರು. ಅಲ್ಲಿ ಪೂರ್ಣಕಾಲಿಕ ಅಧ್ಯಾಪಕ ವೃತ್ತಿಗೆ ಏರಿದ ಮೊದಲ ಇಟಾಲಿಯನ್​ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹಾಗೇ, 1994ರಲ್ಲಿ ಮಾರ್ಗರಿಟಾರಿಗೆ ತರ್ಗಾ ಗೈಸೆಪೆ ಪಿಜ್ಜಾಯಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಹಾಗೇ 1995ರಲ್ಲಿ ವೈಜ್ಞಾನಿಕ ಪ್ರಸಾರಕ್ಕಾಗಿ ಕೊರ್ಟಿನಾ ಉಲಿಸ್ಸೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಆಕೆಯ 90ನೇ ಹುಟ್ಟುಹಬ್ಬದಂದು ಇಟಾಲಿಯನ್​ ಸರ್ಕಾರ ಇಟಲಿಯ ಉನ್ನತ ಗೌರವವಾದ ‘ಡಮಾ ಡಿ ಗ್ರ್ಯಾನ್ ಕ್ರೋಸ್’ ನೀಡಿದೆ. ಮಾರ್ಗರಿಟಾ 2013 ಜೂನ್​ 29ರಂದು ತಮ್ಮ 91ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ. ಆದರೆ ಅವರ ಸಾಧನೆಯನ್ನು ಜಗತ್ತು ಇಂದೂ ನೆನಪಿಸಿಕೊಳ್ಳುತ್ತದೆ..ವಿಶೇಷ ವ್ಯಕ್ತಿಗೆ ಇಂದು ಗೂಗಲ್​ ಡೂಡಲ್​ ವಿಶೇಷ ನಮನ ಸಲ್ಲಿಸಿದೆ.

ಇದನ್ನೂ ಓದಿ: Farmers Protest: ಜೂನ್​ 26ರಂದು ದೇಶಾದ್ಯಂತ ರೈತರ ಪ್ರತಿಭಟನೆ; ರಾಜಭವನದ ಮುಂದೆ ಕಪ್ಪು ಬಾವುಟ ಹಿಡಿದು ಧರಣಿ

Covid 19 Updates: ದೇಶದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.4.30; 24 ಗಂಟೆಯಲ್ಲಿ 4000ಕ್ಕೂ ಅಧಿಕ ಸಾವು

(Google Doodle celebrates Italian astrophysicist Margherita Hacks 99th birthday)