ಕಳೆದವಾರ ಹೈಟಿ ದೇಶದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 2,207ಕ್ಕೆ ಏರಿಕೆಯಾಗಿದ್ದು, ಇನ್ನೂ 344 ಮಂದಿ ಕಾಣೆಯಾಗಿದ್ದಾರೆ ಎಂದು ದೇಶದ ನಾಗರಿಕ ರಕ್ಷಣಾ ದಳ ಹೇಳಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ. ಹೆಚ್ಚೆಚ್ಚು ಕಾರ್ಯಾಚರಣೆ ನಡೆಸಿದಷ್ಟೂ ಶವಗಳು ಪತ್ತೆಯಾಗುತ್ತಿವೆ. ಭೂಕಂಪದಿಂದ ಸಾವಿರಾರು ಜನರು ಮನೆ ಕಳೆದುಕೊಂಡಿದ್ದಾರೆ. ಹೊತ್ತಿನ ಊಟವೂ ಇಲ್ಲದಂತಾಗಿದೆ. ಇಂಥ ನಿರಾಶ್ರಿತ ಜನರಿಗೆ ಅಲ್ಲಿನ ಡಕಾಯಿತ ಗುಂಪುಗಳೂ ಕೂಡ ಸಹಾಯ ಮಾಡಲು ಮುಂದೆ ಬರುತ್ತಿವೆ. ಈ ಡಕಾಯಿತರು ಬೇರೆ ಕಡೆಗಳಿಂದ ನೆರವಿನ ಟ್ರಕ್ಗಳನ್ನು ಲೂಟಿ ಹೊಡೆದು, ಭೂಕಂಪ ನಿರಾಶ್ರಿತರಿಗೆ ಸಹಾಯ ಮಾಡುತ್ತಿವೆ.
ಆಗಸ್ಟ್ 14ರಂದು ಹೈಟಿಯಲ್ಲಿ ಭೂಕಂಪ ಸಂಭವಿಸಿದ್ದು, 7.2ರಷ್ಟು ತೀವ್ರತೆ ಇತ್ತು. ಇದರಿಂದ 53 ಸಾವಿರ ಕಟ್ಟಡಗಳು ಕುಸಿದುಬಿದ್ದಿದ್ದವು. ಬುಧವಾರದ ಹೊತ್ತಿಗೆ 2,189 ಮಂದಿ ಮೃತಪಟ್ಟಿದ್ದರು. ಒಟ್ಟು 12,268 ಮಂದಿ ಗಾಯಗೊಂಡಿದ್ದಾರೆ. ಹೀಗೆ ಗಾಯಗೊಂಡ ಕೆಲವರೂ, ಚಿಕಿತ್ಸೆ ಫಲಿಸದೆ ಮೃತಪಡುತ್ತಿದ್ದಾರೆ. ಯುಎಸ್ ಮೂಲದ ನೆರವು ಸಂಸ್ಥೆ ಸಮರಿಟನ್ ಪರ್ಸ್ ಈಗೊಂದು ಆಸ್ಪತ್ರೆಯನ್ನು ತೆರೆದಿದೆ. ಲೆಸ್ ಕೇಯ್ಸ್ನಲ್ಲಿ ಅಭಯಾರಣ್ಯಗಳೂ ಭೂಕಂಪದಿಂದ ಹಾನಿಗೊಳಗಾಗಿವೆ.
2010ರಲ್ಲಿ ಹೈಟಿ ದೇಶದಲ್ಲಿ ಭಯಂಕರ ಪ್ರಮಾಣದ ಭೂಕಂಪ ಆಗಿತ್ತು. ಆಗ 10 ಸಾವಿರಗಳಷ್ಟು ಮನೆಗಳು, ಕಟ್ಟಡಗಳು ಕುಸಿದುಬಿದ್ದಿದ್ದವು. ಇನ್ನೂ ಅಭಿವೃದ್ಧಿಶೀಲ ದೇಶವಾಗಿರುವ ಹೈಟಿ ಇನ್ನೇನು ಚೇತರಿಸಿಕೊಳ್ಳುತ್ತಿದೆ ಎನ್ನುವಷ್ಟರಲ್ಲಿ ಈ ಬಾರಿ ಮತ್ತೆ ಪ್ರಬಲ ಭೂಕಂಪಕ್ಕೆ ತತ್ತರಿಸಿದೆ.
ಹೈಟಿಯಲ್ಲಿ ಸಮಸ್ಯೆಗಳು ಒಂದೆರಡಲ್ಲ. ಅಲ್ಲಿ ಕೊವಿಡ್ 19 ಪರಿಸ್ಥಿತಿ ಇದೆ..ರಾಜಕೀಯವಾಗಿ ಹಲವು ಜಂಜಾಟಗಳಿವೆ. ಅದರಲ್ಲೂ ಕಳೆದ ತಿಂಗಳು ಹಿಂದಿನ ಅಧ್ಯಕ್ಷ ಜೊವೆನೆಲ್ ಮೊಯಿಸ್ ಹತ್ಯೆಯಾದ ಬಳಿಕ ರಾಜಕೀಯ ಅಸ್ತವ್ಯಸ್ತತೆ ಇನ್ನಷ್ಟು ಹೆಚ್ಚಾಗಿದೆ. ಸದ್ಯ ಪ್ರಧಾನಿ ಏರಿಯಲ್ ಹೆನ್ರಿ ಹೈಟಿಯಲ್ಲಿ ಒಂದು ತಿಂಗಳ ಕಾಲದ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಇದನ್ನೂ ಓದಿ: ಕಾಬೂಲ್‌ನಿಂದ ಸಿಖ್ಖರ 3 ಪವಿತ್ರ ಗುರು ಗ್ರಂಥ ಸಾಹೀಬ್ ಭಾರತಕ್ಕೆ ತಂದ ಅಫ್ಘಾನಿಸ್ತಾನದ ಸಿಖ್ಖರು
ಆರ್ಡರ್ ಮಾಡಿ ತರಿಸಿಕೊಂಡ ಡಾಮಿನೋಸ್ ಪಿಜ್ಜಾದಲ್ಲಿ ಸಿಕ್ಕಿದ್ದು ನಟ್ ಬೋಲ್ಟ್; ಅಪಾಯಕಾರಿ ಎಂದು ಎಚ್ಚರಿಸಿದ ಮಹಿಳೆ!
(Haiti earthquake death toll rises to 2200)
Published On - 12:37 pm, Mon, 23 August 21