ಕೆರಿಬಿಯನ್ ಪ್ರದೇಶದಲ್ಲಿಯ ಒಂದು ಪುಟ್ಟ ದೇಶ ಹೇಟಿ ಅಥವಾ ಹೈಟಿಯ (Haiti) ಹೆಸರು ನೀವು ಕೇಳಿರಬಹುದು. ಈ ದೇಶಕ್ಕೆ ನೀವೀಗ ಹೋದರೆ ನರದದ ಪ್ರತ್ಯಕ್ಷ ದರ್ಶನ ಮಾಡಬಹುದು. ಸಲಾರ್, ಕೆಜಿಎಫ್ ಇತ್ಯಾದಿ ಗ್ಯಾಂಗ್ಸ್ಟರ್ ಸಿನಿಮಾಗಳ ದೃಶ್ಯಗಳೂ ಸಪ್ಪೆ ಎನಿಸಿಬಿಡಬಹುದು. ಹೇಟಿಯಲ್ಲಿ ಸರ್ಕಾರ ಇದ್ದೂ ಇಲ್ಲದಂತಿದೆ. ಇಲ್ಲಿ ಗ್ಯಾಂಗ್ಸ್ಟರ್ಗಳದ್ದೇ ದರ್ಬಾರ್. ಇಲ್ಲಿ ನಿತ್ಯವೂ ಹಿಂಸಾಚಾರವೇ. ದೇಶದ ವಿವಿಧೆಡೆ ಸಮಾಜಘಾತುಕ ಶಕ್ತಿಗಳ ಗ್ಯಾಂಗ್ಗಳು ತಮ್ಮ ಅಧಿಕಾರ ಸ್ಥಾಪಿಸಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತವೆ. ಎದುರಾಳಿ ಗ್ಯಾಂಗ್ಗಳ ಹಿಡಿತದಲ್ಲಿರುವ ಸ್ಥಳಗಳಿಗೆ ಹೋಗಿ ಅಲ್ಲಿ ಸಾಮೂಹಿಕ ಅತ್ಯಾಚಾರ, ಕೊಲೆ, ದರೋಡೆ ಇತ್ಯಾದಿ ಹಿಂಸಾಚಾರ ಎಸಗುತ್ತಾರೆ.
ಹೇಟಿಯಲ್ಲಿ ಸಿಕ್ಕಾಪಟ್ಟೆ ಗ್ಯಾಂಗ್ ವಾರ್ಗಳು ನಡೆಯುತ್ತಿವೆ. ತಮ್ಮ ತಮ್ಮಲ್ಲೇ ಹೊಡೆದಾಟ ಆಡಿಕೊಳ್ಳುವುದರ ಜೊತೆಗೆ ಪೊಲೀಸ್ ಸ್ಟೇಷನ್, ಏರ್ಪೋರ್ಟ್ ಇತ್ಯಾದಿ ಜಾಗದ ಮೇಲೆ ದಾಳಿ ಮಾಡಿ ಹಿಂಸೆ ಎಸಗುತ್ತಾರೆ.
ಇವರ ದಾಳಿಯಲ್ಲಿ ಬೆಂಕಿಯಿಂದ ಸಾಯುವ ಜನರ ದೇಹದ ಮಾಂಸವನ್ನು ಕಿತ್ತು ತಿನ್ನುವ ದೃಶ್ಯಗಳು ಹೇಟಿಯಲ್ಲಿ ಸಾಮಾನ್ಯವಾಗುತ್ತಿವೆ. ಗ್ಯಾಂಗ್ ಲೀಡರ್ಗಳು ತಮ್ಮ ದರ್ಪ ತೋರಿಸಲು ಈ ಕೆಲಸ ಮಾಡುತ್ತಾರೆ.
ಇದನ್ನೂ ಓದಿ: ಖಲಿಸ್ತಾನಿ ಬೆಂಬಲಿಗರ 300ಕ್ಕೂ ಹೆಚ್ಚು ಬ್ಯಾಂಕ್ ಖಾತೆ ವಶಪಡಿಸಿಕೊಂಡ ರಿಷಿ ಸುನಕ್ ಸರ್ಕಾರ
ಹೇಟಿಯಲ್ಲಿ ವಿವಿಧ ಗ್ಯಾಂಗ್ಗಳೇ ಸೇರಿ ಗ್ರೂಪ್ ಮಾಡಿಕೊಂಡಿವೆ. ಈ ಗುಂಪಿನ ನಾಯಕನೇ ಬಾರ್ಬೆಕ್ಯೂ. ಈತನ ಹೆಸರು ಜಿಮ್ಮಿ ಶೆರಿಜಿಯರ್. 9 ಕುಖ್ಯಾತ ಗ್ಯಾಂಗ್ಗಳನ್ನು ಸೇರಿಸಿ ಜಿ9 ಅಂಡ್ ಫ್ಯಾಮಿಲಿ ಎಂಬ ಬಲಶಾಲಿ ಗುಂಪಿನ ನಾಯಕ ಈತ. ಹೇಟಿ ದೇಶದಲ್ಲಿ ಈತನೇ ಈಗ ಅತಿ ಪ್ರಬಲ ವ್ಯಕ್ತಿ. ಪ್ರಧಾನಿಯೂ ಇವರ ಮುಂಚೆ ಏನಿಲ್ಲ. ಕುತೂಹಲ ಎಂದರೆ ಹೇಟಿ ಪ್ರಧಾನಿಯೇ ಹೆದರಿ ವಿದೇಶಕ್ಕೆ ಹೋಗಿ ಅಡಗಿದ್ದಾರೆ. ತಮ್ಮ ದೇಶಕ್ಕೆ ವಾಪಸ್ ಹೋಗಲು ಬೇರೆ ಬೇರೆ ದೇಶಗಳ ನೆರವು ಯಾಚಿಸುತ್ತಿದ್ದಾರೆ. ಅಷ್ಟರಮಟ್ಟಿಗೆ ಹೇಟಿ ಗ್ಯಾಂಗ್ಸ್ಟರ್ಗಳು ತಮ್ಮ ದೇಶದಲ್ಲಿ ಭಯಭೀತಿ ಸೃಷ್ಟಿ ಮಾಡಿದ್ದಾರೆ.
ಹೇಟಿಯಲ್ಲಿ ಮಿಲಿಟರಿ ಮತ್ತು ಪೊಲೀಸ್ ವ್ಯವಸ್ಥೆ ಬಹಳ ದುರ್ಬಲವಾಗಿದೆ. ಕ್ರಿಮಿನಲ್ ಗ್ಯಾಂಗ್ಗಳನ್ನು ನಿಯಂತ್ರಣ ಮಾಡುವಷ್ಟು ಸಾಮರ್ಥ್ಯ ಈ ಸರ್ಕಾರಿ ಪಡೆಗಳಿಗೆ ಇಲ್ಲ. ವಿಪರ್ಯಾಸ ಎಂದರೆ ಇಲ್ಲಿರುವ ರಾಜಕಾರಣಿಗಳು ಒಂದಿಲ್ಲೊಂದು ಗ್ಯಾಂಗ್ಗಳಿಗೆ ಸಂಬಂಧಪಟ್ಟವರೇ ಎನ್ನಲಾಗುತ್ತಿದೆ. ಪೊಲೀಸರೂ ಕೂಡ ಕ್ರಿಮಿನಲ್ ಗ್ಯಾಂಗ್ಗಳ ಜೊತೆ ಶಾಮೀಲಾಗಿ ತಟಸ್ಥರಾಗಿ ಉಳಿದುಕೊಂಡು ಬಿಟ್ಟಿದ್ದಾರೆ.
ಗ್ಯಾಂಗ್ ಲೀಡರ್ ಬಾರ್ಬೆಕ್ಯೂ ಈಗ ಹೇಟಿ ಗದ್ದುಗೆ ಹಿಡಿಯಲು ಹೊರಟಿದ್ದಾನೆ. ಬಂದೂಕಿನ ನಳಿಕೆಗಳನ್ನು ತೋರಿಸಿ, ತಾನೊಬ್ಬ ಕ್ರಾಂತಿಕಾರಿ ಎಂದು ಈತ ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾನೆ. ಹೀಗೇ ಆದರೆ ಮುಂದೊಂದು ದಿನ ಈತ ಹೇಟಿ ಸರ್ವಾಧಿಕಾರಿ ಆದರೂ ಅಚ್ಚರಿ ಇಲ್ಲ.
ಇದನ್ನೂ ಓದಿ: ಪ್ಯಾರಾಚೂಟ್ ವಿಫಲ: ವಿಮಾನದಿಂದ ಆಹಾರ ಪೊಟ್ಟಣಗಳು ನೇರವಾಗಿ ಮೈಮೇಲೆ ಬಿದ್ದು ಗಾಜಾದಲ್ಲಿ 5 ಮಂದಿ ಸಾವು
ಗ್ಯಾಂಗ್ಸ್ಟರ್ಗಳಿಂದ ನಲುಗಿ ಹೋಗುತ್ತಿರುವ ಹೇಟಿ ದೇಶಕ್ಕೆ ನೆರೆಯ ಎಲ್ ಸಾಲ್ವಡಾರ್ ದೇಶದ ಅಧ್ಯಕ್ಷರು ಭರವಸೆಯ ಮಾತುಗಳನ್ನಾಡಿದ್ದಾರೆ. ಹೇಟಿಯಲ್ಲಿ ಮನುಷ್ಯರ ದೇಹದ ಭಾಗಗಳನ್ನು ತಿನ್ನುತ್ತಿರುವ ಭಯಾನಕ ದೃಶ್ಯಗಳ ಬಗ್ಗೆ ಪ್ರತಿಕ್ರಿಯಿಸಿರುವ ಎಲ್ ಸಾಲ್ವಡಾರ್ ಅಧ್ಯಕ್ಷ ನಯಿಬ್ ಬುಕೆಲೆ, ತಮ್ಮ ದೇಶದ ಉದಾಹರಣೆ ಕೊಟ್ಟಿದ್ದಾರೆ.
ನಮ್ಮ ದೇಶದಲ್ಲಿ ಗ್ಯಾಂಗ್ಗಳು ತಾವು ಸಾಯಿಸಿದ ವ್ಯಕ್ತಿಗಳ ತಲೆಬುರುಡೆಗಳಿಂದ ಸ್ನಾನ ಮಾಡುತ್ತಿದ್ದರು. ಈ ರಕ್ಕಸರು ನಮ್ಮ ಸಮಾಜದ ಭಾಗವೇ ಆದ್ದರಿಂದ ಅವರನ್ನು ಸೋಲಿಸಲು ಯಾರಿಂದಲೂ ಆಗುವುದಿಲ್ಲ ಎಂದು ಎಲ್ಲಾ ಪರಿಣಿತರು ಹೇಳಿಬಿಟ್ಟಿದ್ದರು. ಆದರೆ, ನಾವು ಅವರನ್ನು ಮಟ್ಟಹಾಕಿದೆವು. ಹೇಟಿಯಲ್ಲೂ ಅದನ್ನೇ ಮಾಡಬಹುದು ಎಂದು ನಯಿಬ್ ಬುಕೆಲೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂದಹಾಗೆ, ಹೇಟಿ ಕೆರೆಬಿಯನ್ ಪ್ರದೇಶದಲ್ಲಿರುವ ಮೂರನೆ ಅತಿದೊಡ್ಡ ದೇಶ. ಇಲ್ಲಿರುವ ಜನಸಂಖ್ಯೆ 1.1 ಕೋಟಿ ಇರಬಹುದು. ಹೆಚ್ಚಿನವರು ಮೂಲತಃ ಆಫ್ರಿಕಾದಿಂದ ಗುಲಾಮರಾಗಿ ಇಲ್ಲಿಗೆ ವಲಸೆ ಬಂದ ಜನಾಂಗಕ್ಕೆ ಸೇರಿದವರಾಗಿದ್ದಾರೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:44 pm, Mon, 11 March 24