ಬ್ರಿಟನ್ ದೇಶದಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ಕೊವಿಡ್ನಿಂದಾಗಿ ಮಾನಸಿಕ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಬ್ರಿಟನ್ನ ಆಫೀಸ್ ಫಾರ್ ನ್ಯಾಶನಲ್ ಸ್ಟ್ಯಾಟಿಸ್ಟಿಕ್ಸ್ (ONS) ಬಿಡುಗಡೆಗೊಳಿಸಿರುವ ಅಂಕಿ-ಅಂಶಗಳಿಂದ ಈ ವಿಷಯ ಬಯಲಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಲಾಕ್ಡೌನ್ ಆರಂಭವಾದ ಏಪ್ರಿಲ್ ಸಮಯದಲ್ಲಿ ಬ್ರಿಟನ್ ವಾಸಿ ಭಾರತೀಯರು ಅತಿ ಹೆಚ್ಚು ಮಾನಸಿಕ ಒತ್ತಡ ಅನುಭವಿಸಿದ್ದಾರೆ. ಅವರಲ್ಲಿ ನಿದ್ರಾಹೀನತೆ ಕಂಡುಬಂದಿದ್ದು ಬ್ರಿಟನ್ ಪ್ರಜೆಗಳಿಗಿಂತ ಹೆಚ್ಚು ಒತ್ತಡಕ್ಕೆ ಸಿಲುಕಿದವರು ಅಲ್ಲಿನ ಭಾರತೀಯರು ಎಂದು ವರದಿಯಾಗಿದೆ.
ಒತ್ತಡಕ್ಕೆ ಮೂಲ ಕಾರಣ ಆದಾಯ ಮತ್ತು ಹಣಕಾಸು ಉಳಿತಾಯದ ವಿಚಾರ ಎಂದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಹಾಗೆ ನೋಡಿದರೆ ಲಾಕ್ಡೌನ್ ಪೂರ್ವದಲ್ಲಿ ಸಂಬಳ ಕಡಿತವಾದಾಗ ಆ ಸಂದರ್ಭವನ್ನು ಬ್ರಿಟನ್ನರಿಗಿಂತ ಚೆನ್ನಾಗಿ ಭಾರತೀಯರು ನಿಭಾಯಿಸಿದ್ದರು. ಹೆಚ್ಚೂ ಕಡಿಮೆ ಶೇ. 58ರಷ್ಟು ಭಾರತೀಯರು ತಮ್ಮ ಆಸ್ತಿ ಹಾಗೂ ಇತರ ಮೂಲಗಳ ಮೇಲೆ ಅವಲಂಬಿತರಾಗಿ ಕಠಿಣ ಪರಿಸ್ಥಿತಿಯನ್ನು ಸುಲಭವಾಗಿ ಎದುರಿಸಿದ್ದರು.
ಆದರೆ, ಲಾಕ್ಡೌನ್ ನಂತರ ಭಾರತೀಯರೇ ಅತಿ ಹೆಚ್ಚು ಒತ್ತಡಕ್ಕೆ ಒಳಗಾಗಿದ್ದಾರೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ, ವಾಯು ಸಮಸ್ಯೆಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿರುವ ಸಾಧ್ಯತೆಯೂ ಇದೆ ಎಂದು ವಿಶ್ಲೇಷಿಸಲಾಗಿದೆ.