ಪಾಕ್​ನಲ್ಲಿ ಹಿಂದೂ ದೇಗುಲ ಧ್ವಂಸ ಪ್ರಕರಣ: ಪೊಲೀಸರಿಗೆ ಛೀಮಾರಿ ಹಾಕಿದ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಾಧೀಶ, 20 ಮಂದಿ ಬಂಧನ

ಪಾಕ್​ನಲ್ಲಿ ಹಿಂದೂ ದೇಗುಲ ಧ್ವಂಸ ಪ್ರಕರಣ: ಪೊಲೀಸರಿಗೆ ಛೀಮಾರಿ ಹಾಕಿದ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಾಧೀಶ, 20 ಮಂದಿ ಬಂಧನ
ಸಿದ್ಧಿವಿನಾಯಕ ದೇಗುಲ ಧ್ವಂಸ ಮಾಡಿದ ದುಷ್ಕರ್ಮಿಗಳು

ಲಾಹೋರ್​ನಲ್ಲಿದ್ದ ಹಿಂದೂ ದೇವಸ್ಥಾನ ಧ್ವಂಸ ಮಾಡಿದ್ದಕ್ಕೆ ಪಾಕಿಸ್ತಾನ ಪಾರ್ಲಿಮೆಂಟ್​ನಲ್ಲಿಯೂ ಖಂಡನೆ ವ್ಯಕ್ತವಾಗಿದೆ. ದೇಗುಲ ವಿನಾಶ ಮಾಡಿದ್ದನ್ನು ವಿರೋಧಿಸಿ ನಿರ್ಣಯ ಅಂಗೀಕಾರ ಮಾಡಲಾಗಿದೆ.

TV9kannada Web Team

| Edited By: Lakshmi Hegde

Aug 07, 2021 | 5:16 PM

ಲಾಹೋರ್​: ಪಾಕಿಸ್ತಾನ (Pakistan)ದ ಪಂಜಾಬ್​ ಪ್ರಾಂತ್ಯದ ಭೋಂಗ್ ಪ್ರದೇಶದಲ್ಲಿದ್ದ ಸಿದ್ಧಿವಿನಾಯಕ ದೇವಸ್ಥಾನ (Hindu Temple) ಧ್ವಂಸ ಪ್ರಕರಣಕ್ಕೆ ಸಂಬಂಧಪಟ್ಟಂತೆ 20 ಜನರನ್ನು ಬಂಧಿಸಲಾಗಿದ್ದು, 150ಕ್ಕೂ ಹೆಚ್ಚು ಜನರ ವಿರುದ್ಧ ಕೇಸ್​ ದಾಖಲಿಸಲಾಗಿದೆ. ದುರ್ಗಮ ಪ್ರದೇಶದಲ್ಲಿದ್ದ ಈ ದೇಗುಲವನ್ನು ಮುಸ್ಲಿಂ ಗುಂಪೊಂದು ಕಳೆದ ಐದಾರು ದಿನಗಳ ಹಿಂದೆ ಧ್ವಂಸಗೊಳಿಸಿತ್ತು. ಅಲ್ಲಿದ್ದ ವಿಗ್ರಹವನ್ನು ಸುಟ್ಟಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು. ದೇಗುಲ ರಕ್ಷಿಸಲು ವಿಫಲರಾದ ಸ್ಥಳೀಯ ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ಕೂಡ ಛೀಮಾರಿ ಹಾಕಿತ್ತು.

ಈ ಸಿದ್ಧವಿನಾಯಕ ದೇಗುಲ ಇದ್ದಿದ್ದು ಲಾಹೋರ್​ನಿಂದ 590 ಕಿಮೀ ದೂರದಲ್ಲಿರುವ ಯಾರ್​ ಖಾನ್​ ಜಿಲ್ಲೆಯ ಭೋಂಗ್​ ಎಂಬ ದೂರದ ಊರಿನಲ್ಲಿ. ಮುಸ್ಲಿಮರ ಸೆಮಿನರಿಯಲ್ಲಿ ಎಂಟು ವರ್ಷದ ಹುಡುಗನೊಬ್ಬ ಮೂತ್ರವಿಸರ್ಜನೆ ಮಾಡಿದ್ದ. ಆತನನ್ನು ಬಂಧಿಸಲಾಗಿತ್ತಾದರೂ ನಂತರ ಬಿಡುಗಡೆ ಮಾಡಲಾಯಿತು. ಆ ಬಾಲಕನನ್ನು ಬಿಡುಗಡೆ ಮಾಡಿದ್ದನ್ನು ವಿರೋಧಿಸಿದ ಮುಸ್ಲಿಂ ಗುಂಪು ಸಿದ್ಧಿವಿನಾಯಕ ದೇಗುಲವನ್ನು ಧ್ವಂಸ ಮಾಡಿತ್ತು. ದೇವಾಲಯದ ಮೇಲೆ ದಾಳಿ ಮಾಡಿದವರಲ್ಲಿ 20 ಮಂದಿಯನ್ನು ಬಂಧಿಸಿದ್ದೇವೆ ಎಂದು ರಹೀಮ್​ ಯಾರ್ ಖಾನ್​ ಜಿಲ್ಲಾಧಿಕಾರಿ ಅಸಾದ್ ಸರ್ಫ್ರಾಜ್​ ತಿಳಿಸಿದ್ದಾರೆ. ಹಾಗೇ, ಇದು ಇಷ್ಟಕ್ಕೇ ನಿಲ್ಲುವುದಿಲ್ಲ, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಜನರು ಅರೆಸ್ಟ್ ಆಗುತ್ತಾರೆ ಎಂದೂ ಹೇಳಿದ್ದಾರೆ.

ಛೀಮಾರಿ ಹಾಕಿದ್ದ ಸುಪ್ರೀಂಕೋರ್ಟ್ ಜಡ್ಜ್​ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಪಾಕಿಸ್ತಾನ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಾಧೀಶ ಗುಲ್ಜಾರ್​ ಅಹ್ಮದ್​, ದೇಗುಲ ಧ್ವಂಸ ಮಾಡಿದ ಗುಂಪನ್ನು ತಡೆಯಲು ಮತ್ತು ಆರೋಪಿಗಳನ್ನು ಬಂಧಿಸಲು ವಿಫಲರಾದ ಸ್ಥಳೀಯ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಹಿಂದೂ ದೇವಾಲಯ ನಾಶಗೊಳಿಸಿದ್ದು, ಪಾಕಿಸ್ತಾನಕ್ಕೆ ನಾಚಿಕೆ ತರುವಂತ ವಿಚಾರ. ಇಷ್ಟೆಲ್ಲ ಆಗುವಾಗ ಪೊಲೀಸರು ಮೂಕಪ್ರೇಕ್ಷಕರಂತೆ ನಿಂತು ನೋಡಿದ್ದು ಇನ್ನಷ್ಟು ಹೇಸಿಗೆ ಹುಟ್ಟಿಸಿದೆ ಎಂದು ಛೀಮಾರಿ ಹಾಕಿದ್ದರು. ಹಾಗೇ ಮುಸ್ಲಿಂ ಸೆಮಿನರಿಯಲ್ಲಿ ಮೂತ್ರವಿಸರ್ಜನೆ ಮಾಡಿದ್ದ ಬಾಲಕನನ್ನು ಬಂಧಿಸಿದ್ದಕ್ಕೂ ನ್ಯಾಯಾಧೀಶರು ವಿರೋಧ ವ್ಯಕ್ತಪಡಿಸಿದ್ದಾರೆ. ಎಂಟು ವರ್ಷದ ಬಾಲಕನ ಮನಸ್ಥಿತಿ, ಅವನ ಹುಡುಗಾಟಿಕೆಯನ್ನು ಅರ್ಥ ಮಾಡಿಕೊಳ್ಳುವಷ್ಟು ಸಾಮರ್ಥ್ಯವೂ ಪೊಲೀಸರಿಗೆ ಇಲ್ಲವೇ ಎಂದು ಪ್ರಶ್ನಿಸಿದ್ದರು. ವಿಚಾರಣೆಯನ್ನು ಆಗಸ್ಟ್​ 13ಕ್ಕೆ ಮುಂದೂಡಲಾಗಿದೆ. ಅದರೊಂದಿಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್​ ಕೂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್ಲ ಆರೋಪಿಗಳನ್ನು ಬಂಧಿಸುವಂತೆ ಆದೇಶಿಸಿದ್ದರು.

ಪಾಕ್​ ಸಂಸತ್ತಿನಲ್ಲಿ ಖಂಡನೆ ಲಾಹೋರ್​ನಲ್ಲಿದ್ದ ಹಿಂದೂ ದೇವಸ್ಥಾನ ಧ್ವಂಸ ಮಾಡಿದ್ದಕ್ಕೆ ಪಾಕಿಸ್ತಾನ ಪಾರ್ಲಿಮೆಂಟ್​ನಲ್ಲಿಯೂ ಖಂಡನೆ ವ್ಯಕ್ತವಾಗಿದೆ. ದೇಗುಲ ವಿನಾಶ ಮಾಡಿದ್ದನ್ನು ವಿರೋಧಿಸಿ ನಿರ್ಣಯ ಅಂಗೀಕಾರ ಮಾಡಿದೆ. ಹಾಗೇ, ಭಾರತವೂ ಸಹ ಹಿಂದು ದೇಗುಲದ ಮೇಲೆ ನಡೆದ ದಾಳಿಯನ್ನು ಖಂಡಿಸಿದೆ. ಪಾಕಿಸ್ತಾನದಲ್ಲಿ ಕೇವಲ 75 ಲಕ್ಷ ಹಿಂದೂಗಳಷ್ಟೇ ಇದ್ದಾರೆ. ಇಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಲೇ ಇರುತ್ತದೆ.

ಇದನ್ನೂ ಓದಿ: ಕೂದಲೆಳೆಯಲ್ಲಿ ಸೋಲು ಅನುಭವಿಸಿದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಮೂಲತಃ ಬಾಗಲಕೋಟೆಯವರು; ಇನ್ನಷ್ಟು ವಿವರ ಇಲ್ಲಿದೆ

ಪಾಕಿಸ್ತಾನದಲ್ಲಿದ್ದ ಸಿದ್ಧಿವಿನಾಯಕ ದೇಗುಲ ಧ್ವಂಸ; ವಿಗ್ರಹವನ್ನು ತೆಗೆದು, ಸುಟ್ಟ ಗುಂಪು

Follow us on

Related Stories

Most Read Stories

Click on your DTH Provider to Add TV9 Kannada