ಹಾರ್ಮುಜ್ ಜಲಸಂಧಿ ಮುಚ್ಚಿರುತ್ತದೆ; ಮುಯ್ಯಿ ತೀರಿಸಲು ಮರೆಯಲ್ಲ: ಇರಾನ್ ಮುಖ್ಯಸ್ಥ

Hormuz Strait continues to be closed, says Iran's supreme leader Mojtaba Khamenei: ಹಾರ್ಮುಜ್ ಜಲಸಂಧಿ ಮುಚ್ಚಿದ ಸ್ಥಿತಿಯಲ್ಲೇ ಮುಂದುವರಿಯುತ್ತದೆ ಎಂದು ಇರಾನ್​ನ ಸರ್ವೋಚ್ಚ ಮುಖಂಡ ಮೊಜ್ತಬಾ ಖಮನೈ ಹೇಳಿದ್ದಾರೆ. ಅಮೆರಿಕದಿಂದ ಯಾವ ಶಾಂತಿ, ಭದ್ರತೆ ಸಿಕ್ಕೋದಿಲ್ಲ ಎನ್ನುವುದು ಗಲ್ಫ್ ದೇಶಗಳಿಗೆ ಗೊತ್ತಾಗಿದೆ. ತಮ್ಮಲ್ಲಿರುವ ಅಮೆರಿಕನ್ ನೆಲೆಗಳನ್ನು ಅವು ಮುಚ್ಚಬೇಕು ಎಂದು ಮೊಜ್ತಬಾ ಹೇಳಿದ್ದಾರೆ.

ಹಾರ್ಮುಜ್ ಜಲಸಂಧಿ ಮುಚ್ಚಿರುತ್ತದೆ; ಮುಯ್ಯಿ ತೀರಿಸಲು ಮರೆಯಲ್ಲ: ಇರಾನ್ ಮುಖ್ಯಸ್ಥ
ಮೊಜ್ತಬಾ ಖಮನೈ

Updated on: Mar 12, 2026 | 9:55 PM

ನವದೆಹಲಿ, ಮಾರ್ಚ್ 12: ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಿಗೆ ಇಂಧನ ಪೂರೈಕೆಗೆ ಆಯಕಟ್ಟಿನ ಸ್ಥಳವಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲು ಇರಾನ್​ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೆನೈ ಅವರು ಕರೆ ನೀಡಿದ್ದಾರೆ. ಹಾಗೆಯೇ, ಅಮೆರಿಕದ ಎಲ್ಲಾ ಮಿಲಿಟರಿ ನೆಲೆಗಳನ್ನು ತತ್​ಕ್ಷಣವೇ ಮುಚ್ಚಬೇಕೆಂದೂ ಗಲ್ಫ್ ದೇಶಗಳಿಗೆ ಅವರು ಅಪ್ಪಣೆ ಮಾಡಿದ್ದಾರೆ. ‘ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಕ್ರಮ ಮುಂದುವರಿಯುತ್ತದೆ’ ಎಂದು ಮೊಜ್ತಬಾ ಹೇಳಿದ್ದಾರೆ.

ವೈರಿಗಳಿಗೆ ಹೊಸ ಶಾಕ್ ಕೊಡಲು ಇರಾನ್ ಅಣಿ…

ಇದೇ ವೇಳೆ, ಇರಾನ್ ಮುಖ್ಯಸ್ಥರು ಅಮೆರಿಕ ಮತ್ತು ಇಸ್ರೇಲ್ ದೇಶಗಳಿಗೆ ಹಾಗೂ ಗಲ್ಫ್ ರಾಷ್ಟ್ರಗಳಿಗೆ ಹೊಸ ಶಾಕ್​ನ ಸುಳಿವು ಕೊಟ್ಟಿದ್ದಾರೆ. ‘ವೈರಿಗೆ ಕಡಿಮೆ ಅನುಭವ ಇರುವಂತಹ ಮತ್ತು ಬಹಳ ದುರ್ಬಲ ಇರುವಂತಹ ಇತರ ಫ್ರಂಟ್​​ಗಳನ್ನು ತೆರೆಯುವ ಬಗ್ಗೆ ಯೋಜಿಸುತ್ತಿದ್ದೇವೆ. ಈ ಯುದ್ಧ ಸ್ಥಿತಿ ಮುಂದುವರಿದರೆ ಅವುಗಳನ್ನು ಸಕ್ರಿಯಗೊಳಿಸಲಾಗುವುದು’ ಎಂದು ಖಮನೈ ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಹೊಸ ಟ್ಯಾರಿಫ್​ಗೆ ನೆಪಗಳ ಹುಡುಕಾಟ; ಭಾರತ ಸೇರಿ 16 ಟ್ರೇಡಿಂಗ್ ಪಾರ್ಟ್ನರ್ಸ್ ಮೇಲೆ ಅಮೆರಿಕ ತನಿಖೆ

ಹುತಾತ್ಮರ ರಕ್ತದ ಮುಯ್ಯಿ ಮರೆಯೋದಿಲ್ಲ…

ಇರಾನ್​ನ ಹುತಾತ್ಮರ ರಕ್ತಕ್ಕೆ ಮುಯ್ಯಿ ತೀರಿಸಿಕೊಳ್ಳಲು ಈ ದೇಶ ಮರೆಯದು ಎಂದೂ ಮೊಜ್ತಬಾ ಹೇಳಿದ್ದಾರೆ. ನೆರೆಯ ದೇಶಗಳೊಂದಿಗೆ ಇರಾನ್ ಸ್ನೇಹ ಬಯಸುತ್ತದಾದರೂ ಅವಲ್ಲಿರುವ ಅಮೆರಿಕನ್ ನೆಲೆಗಳ ಮೇಲೆ ದಾಳಿ ಮುಂದುವರಿಯುವುದು ಎಂದೂ ಸ್ಪಷ್ಟಪಡಿಸಿದ್ದಾರೆ.

‘ನಮ್ಮ ಪ್ರೀತಿಯ ತಾಯ್ನಾಡಿನ ಮೇಲೆ ದಾಳಿ ಮಾಡಿ ನಮ್ಮ ಜನರನ್ನು ಕೊಂದವರ ವಿಚಾರದಲ್ಲಿ ಈ ದೇಶಗಳು (ಗಲ್ಫ್) ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಶಾಂತಿ ಮತ್ತು ಭದ್ರತೆ ಒದಗಿಸುವ ಅಮೆರಿಕದ ಭರವಸೆ ಬರೀ ಸುಳ್ಳು ಎಂಬುದು ಈ ದೇಶಗಳಿಗೆ ಈಗಾಗಲೇ ಗೊತ್ತಾಗಿದೆ. ಆ ಅಮೆರಿಕನ್ ನೆಲೆಗಳನ್ನು ಕೂಡಲೇ ಮುಚ್ಚಬೇಕು’ ಎಂದು ಇರಾನ್ ಸರ್ವೋಚ್ಚ ನಾಯಕ ಒತ್ತಾಯಿಸಿದ್ದಾರೆ.

ಯುದ್ಧ ನಿಲ್ಲಿಸಲು ಇರಾನ್ ಮೂರು ಷರತ್ತುಗಳನ್ನು ಮುಂದಿಟ್ಟಿದೆ. ಅಮೆರಿಕ ಮತ್ತು ಇಸ್ರೇಲ್ ತತ್​ಕ್ಷಣವೇ ದಾಳಿ ನಿಲ್ಲಿಸಬೇಕು. ಭವಿಷ್ಯದಲ್ಲಿ ಇರಾನ್ ಮೇಲೆ ದಾಳಿಯಾಗುವುದಿಲ್ಲ ಎಂದು ಖಾತ್ರಿಪಡಿಸಬೇಕು. ದಾಳಿಯಿಂದ ಈಗಾಗಲೇ ಇರಾನ್​ಗೆ ಆಗಿರುವ ನಷ್ಟವನ್ನು ಭರಿಸಿಕೊಡಬೇಕು ಎಂಬುದು ಆ ಮೂರು ಷರತ್ತುಗಳು.

ಇದನ್ನೂ ಓದಿ: ಪೆಟ್ರೋಲ್, ಎಲ್​ಪಿಜಿ ಕೊರತೆ ಇಲ್ಲ: ಸಂಸತ್​ನಲ್ಲಿ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ

‘ಒಂದು ವಿಚಾರ ಒತ್ತಿಹೇಳಲು ಇಷ್ಟಪಡುತ್ತೇನೆ. ಶತ್ರುವಿನಿಂದ ನಾವು ಪರಿಹಾರ ಪಡೆದೇ ಪಡೆಯುತ್ತೇವೆ. ಪರಿಹಾರಕ್ಕೆ ಅವರು ಒಪ್ಪಲಿಲ್ಲವೆಂದರೆ ಅವರ ಆಸ್ತಿಗಳಿಂದಲೇ ನಮಗೆ ಬೇಕಾದ್ದನ್ನು ಪಡೆಯುತ್ತೇವೆ. ಅದು ಸಾಧ್ಯವಾಗದಿದ್ದಲ್ಲಿ ಅವರ ಆಸ್ತಿಗಳನ್ನು ತಕ್ಕ ಪ್ರಮಾಣದಲ್ಲಿ ನಾಶ ಮಾಡುತ್ತೇವೆ’ ಎಂದು ಮೊಜ್ತಬಾ ಖಮೇನಿ ತಿಳಿಸಿದ್ದಾರೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us