ಲೆಬಾನಾನ್ ಗೆ ಹೋಗಿ ತಂದೆಯನ್ನು ಭೇಟಿಯಾಗಿ ಬಂದ ಮೇಲೆ ನನ್ನ ಮಗ ಬಹಳ ಮೂಡಿ ಮತ್ತು ಅಂತರ್ಮುಖಿಯಾಗಿಬಿಟ್ಟಿದ್ದ: ಹಾದಿ ಮಟರ್ ತಾಯಿ
ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಮಟಾರ್ ನ ತಾಯಿ ಸಿಲ್ವಾನಾ ಫರ್ದೋಸ್, ತನ್ನ ತಂದೆಯನ್ನು ನೋಡಲು ಲೆಬನಾನ್ ಗೆ ಹೋಗುವ ಮೊದಲು ಬಹಿರ್ಮುಖಿ ಸ್ವಭಾವದವನಾಗಿದ್ದವನು ಅಲ್ಲಿಂದ ವಾಪಸ್ಸಾದ ಮೇಲೆ ಮೂಡಿ ಮತ್ತು ಅಂತರ್ಮುಖಿಯಾಗಿ ಬಿಟ್ಟಿದ್ದ ಎಂದು ಹೇಳಿದ್ದಾರೆ.
ನ್ಯೂ ಯಾರ್ಕ್ನಲ್ಲಿ ನಡೆಯುತ್ತಿದ್ದ ಸಾಹಿತ್ಯಿಕ ಕಾರ್ಯಕ್ರಮವೊಂದರಲ್ಲಿ ಖ್ಯಾತ ಲೇಖಕ ಮತ್ತು ಬ್ರೂಕರ್ ಪ್ರಶಸ್ತಿ ವಿಜೇತ ಸಲ್ಮಾನ್ ರಷ್ದೀ (Salman Rushdie) ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಹಾದಿ ಮಟಾರ್ (Hadi Matar) 2018ರಲ್ಲಿ ಲೆಬನಾನ್ ಗೆ (Lebanon) ಹೋಗಿ ಬಂದ ಬಳಿಕ ಅವನಲ್ಲಿ ಬಹಳಷ್ಟು ಬದಲಾವಣೆ ಕಂಡುಬಂದವು ಎಂದು ಅವನ ತಾಯಿ ಹೇಳಿದ್ದಾರೆ. ಕಳೆದ ಶುಕ್ರವಾರ ರಷ್ದೀ ಅವರನ್ನು ಕತ್ತು ಮತ್ತು ಹೊಟ್ಟೆ ಸೇರಿದಂತೆ ಹತ್ತಾರು ಕಡೆ ಚಾಕುವಿನಿಂದ ಇರಿದ ಮಟಾರ್ ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಕಾರ್ಯಕ್ರಮದಲ್ಲಿ ರಷ್ದೀ ಉಪನ್ಯಾಸ ನೀಡುತ್ತಿದ್ದಾಗ ಮಟಾರ್ ವೇದಿಕೆಯೆಡೆ ಧಾವಿಸಿ ಹಲ್ಲೆ ನಡೆಸಿದ್ದ. ನ್ಯೂ ಯಾರ್ಕ್ ಪೊಲೀಸ್ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಮಟಾರ್ ವಿರುದ್ಧ ಹತ್ಯೆಯತ್ನ ಮತ್ತು ಹಲ್ಲೆಯ ಆರೋಪ ವಿಧಿಸಲಾಗಿದೆ.
ಡೈಲಿ ಮೇಲ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಮಟಾರ್ ನ ತಾಯಿ ಸಿಲ್ವಾನಾ ಫರ್ದೋಸ್, ತನ್ನ ತಂದೆಯನ್ನು ನೋಡಲು ಲೆಬನಾನ್ ಗೆ ಹೋಗುವ ಮೊದಲು ಬಹಿರ್ಮುಖಿ ಸ್ವಭಾವದವನಾಗಿದ್ದವನು ಅಲ್ಲಿಂದ ವಾಪಸ್ಸಾದ ಮೇಲೆ ಮೂಡಿ ಮತ್ತು ಅಂತರ್ಮುಖಿಯಾಗಿ ಬಿಟ್ಟಿದ್ದ ಎಂದು ಹೇಳಿದ್ದಾರೆ.
‘ಲೆಬನಾನ್ ನಿಂದ ಅವನು ಹೊಸ ಚೈತನ್ಯದೊಂದಿಗೆ ವಾಪಸ್ಸಾಗಿ ವ್ಯಾಸಂಗ ಪೂರ್ತಿಗೊಳಿಸಿ ಕೆಲಸಕ್ಕೆ ಸೇರುತ್ತಾನೆ ಅಂತ ನಾನು ಭಾವಿಸಿದ್ದೆ. ಆದರೆ ಆಗಿದ್ದೇ ಬೇರೆ. ನೆಲಮಾಳಿಗೆಗೆ ಹೋಗಿ ಅವನು ಒಬ್ಬಂಟಿಯಾಗಿ ಕುಳಿತುಬಿಡುತ್ತಿದ್ದ. ಅವನು ಬಹಳಷ್ಟು ಬದಲಾಗಿದ್ದ. ಹಲವಾರು ತಿಂಗಳುಗಳವರೆಗೆ ಅವನು ನನ್ನೊಂದಿಗೆ ಮತ್ತು ಅವನ ಸಹೋದರಿಯರೊಂದಿಗೆ ಮಾತನ್ನೇ ಆಡಿರಲಿಲ್ಲ,’ ಎಂದು ಅಕೆ ಪತ್ರಿಕೆಗೆ ತಿಳಿಸಿದ್ದಾರೆ. ಮಟಾರ್ ಲೆಬನಾನಿನ ದಂಪತಿಗಳಿಗೆ ಅಮೆರಿಕಾದಲ್ಲಿ ಹುಟ್ಟಿರುವ ಮಗನಾಗಿದ್ದಾನೆ.
‘ಬೇಸ್ಮೆಂಟ್ ಹೋಗಿ ಅವನು ತನ್ನನ್ನು ತಾನು ರೂಮೊಂದರಲ್ಲಿ ಬಂಧಿಯಾಗಿಸಿಕೊಳ್ಳುತ್ತಿದ್ದರಿಂದ ಅವನಿಗೆ ಅಲ್ಲಿ ಪ್ರವೇಶ ನಿಷೇಧಿಸಲಾಯಿತು. ಅವನು ದಿನವಿಡೀ ಮಲಗಿ ರಾತ್ರಿ ಸಮಯವೆಲ್ಲ ಎಚ್ಚರವಾಗಿರುತ್ತಿದ್ದ,’ ಎಂದು 46-ವರ್ಷ-ವಯಸ್ಸಿನ ಫರ್ದೋಸ್ ಪತ್ರಿಕೆಗೆ ತಿಳಿಸಿದ್ದಾರೆ.
‘ಧರ್ಮದ ಮೇಲೆ ಗಮನ ಕೇಂದ್ರೀಕರಿಸುವಂತೆ ತನಗೆ ಒತ್ತಾಯಿಸುವುದನ್ನು ಬಿಟ್ಟು ಶಾಲೆಗೆ ಯಾಕೆ ಸೇರಿಸಿದ್ದು ಅಂತ ಅವನು ಒಮ್ಮೆ ನನ್ನೊಂದಿಗೆ ಜಗಳ ಮಾಡಿದ್ದ. ಬಾಲ್ಯದಿಂದಲೇ ಇಸ್ಲಾಂ ಬಗ್ಗೆ ಬೋಧನೆ ಮಾಡದಿದ್ದುದಕ್ಕೆ ಅವನಿಗೆ ಕೋಪ ಬಂದಿತ್ತು,’ ಎಂದು ಫರ್ದೋಸ್ ಹೇಳಿದ್ದಾರೆ.
ಶುಕ್ರವಾರದಂದು ತನ್ನ ಮಗಳಿಂದ ಆತಂಕದ ಫೋನ್ ಕರೆ ಬರುವುದಕ್ಕಿಂತ ಮೊದಲು ತಾನ್ಯಾವತ್ತೂ ಸಲ್ಮಾನ್ ರಷ್ದೀ ಬಗ್ಗೆ ಕೇಳಿರಲಿಲ್ಲ ಎಂದು ಫರ್ದೋಸ್ ಹೇಳಿದ್ದಾರೆ. ‘ನಾನ್ಯಾವತ್ತೂ ಅವರ ಯಾವುದೇ ಪುಸ್ತಕ ಓದಿಲ್ಲ. ಅಂಥ ಒಬ್ಬ ಲೇಖರಿದ್ದಾರೆ ಅನ್ನೋದು ಸಹ ನನಗೆ ಗೊತ್ತಿರಲಿಲ್ಲ. ನನ್ನ ಮಗ ಅವರ ಪುಸ್ತಕಗಳನ್ನು ಓದಿದ್ದಾನೆಯೇ ಇಲ್ಲವೇ ಅಂತಲೂ ತಿಳಿಯದು,’ ಎಂದು ಫರ್ದೋಸ್ ಹೇಳಿದರು.
‘ಅವನಿಲ್ಲದೆ ಬದುಕುವ ಮಾನಸಿಕ ಸಿದ್ಧತೆಗಳನ್ನು ನನ್ನ ಕುಟುಂಬ ಮಾಡಿಕೊಳ್ಳುತ್ತಿದೆ,’ ಎಂದು ಆಕೆ ಹೇಳಿದ್ದಾರೆ.
‘ನಾನು ಎಫ್ ಬಿ ಐಗೆ ತಿಳಿಸಿರುವ ಹಾಗೆ, ಅವನೊಂದಿಗೆ ಮಾತಾಡುವ ಇಚ್ಛೆಯೇನೂ ನನಗಿಲ್ಲ. ಅವನು ನಡೆಸಿದ ಕೃತ್ಯಕ್ಕೆ ಅವನೇ ಜವಾಬ್ದಾರನಾಗಿದ್ದಾನೆ. ನನಗೆ ಬೇರೆ ಎರಡು ಅಪ್ರಾಪ್ತ ಮಕ್ಕಳಿದ್ದಾರೆ, ಅವರ ಬಗ್ಗೆ ನಾನು ಕಾಳಜಿ ವಹಿಸಬೇಕಿದೆ. ನಾವೆಲ್ಲ ಆಘಾತಕ್ಕೊಳಗಾಗಿದ್ದೇವೆ ಮತ್ತು ನೊಂದಿದ್ದೇವೆ,’ ಎಂದು ಆಕೆ ಪತ್ರಿಕೆಗೆ ತಿಳಿಸಿದ್ದಾರೆ.
ಶನಿವಾರ ನ್ಯಾಯಾಲಯದ ಎದುರು ಹಾಜರಾದ ಮಟಾರ್ ತನ್ನ ವಿರುದ್ಧ ದಾಖಲಾಗಿರುವ ಅರೋಪಗಳು ಸುಳ್ಳು ಮತ್ತು ತಾನು ತಪ್ಪಿತಸ್ಥನಲ್ಲ ಎಂದು ಹೇಳಿದ.
ಸಾಮಾಜಿಕ ಜಾಲತಾಣಗಳಲ್ಲಿ ಮಟರ್ ಬಗ್ಗೆ ನಡೆಸಿದ ಪ್ರಾಥಮಿಕ ತನಿಖೆಯಿಂದ ಪ್ರಾಪ್ತವಾಗಿರುವ ಮಾಹಿತಿ ಪ್ರಕಾರ ಅವನು ‘ಶಿಯಾ ಉಗ್ರವಾದ’ ಮತ್ತು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ (ಐ ಆರ್ ಜಿಸಿ ) ಕಡೆ ಸಹಾನುಭೂತಿ ಹೊಂದಿದ್ದ. ಮಟರ್ ಮತ್ತು ಐಆರ್‌ಜಿಸಿ ನಡುವೆ ಯಾವುದೇ ನೇರ ಸಂಪರ್ಕವಿರದಿದ್ದರೂ, 2020 ರಲ್ಲಿ ಹತ್ಯೆಗೀಡಾದ ಇರಾನಿನ ಕಮಾಂಡರ್ ಖಾಸೆಮ್ ಸುಲೇಮಾನಿ ಚಿತ್ರಗಳು ಮಟರ್ ಸೆಲ್ಫೋನಿನ ಮೆಸೇಜಿಂಗ್ ಌಪ್ ನಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.