ಯಾವುದೇ ಪರಿಸ್ಥಿತಿಯಲ್ಲಿಯೂ ರಾಜೀನಾಮೆ ನೀಡುವುದಿಲ್ಲ ಎಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್

"ಯಾವುದೇ ಸಂದರ್ಭದಲ್ಲೂ ನಾನು ರಾಜೀನಾಮೆ ನೀಡುವುದಿಲ್ಲ. ನಾನು ಕೊನೆಯ ಎಸೆತದವರೆಗೂ ಆಡುತ್ತೇನೆ. ಅವರು ಇನ್ನೂ ಒತ್ತಡದಲ್ಲಿರುವುದರಿಂದ ನಾನು ಒಂದು ದಿನ ಮುಂಚಿತವಾಗಿ ಅವರನ್ನು ಅಚ್ಚರಿಗೊಳಿಸುತ್ತೇನೆ" ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಯಾವುದೇ ಪರಿಸ್ಥಿತಿಯಲ್ಲಿಯೂ ರಾಜೀನಾಮೆ ನೀಡುವುದಿಲ್ಲ ಎಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್
ಇಮ್ರಾನ್ ಖಾನ್
Updated By: ರಶ್ಮಿ ಕಲ್ಲಕಟ್ಟ

Updated on: Mar 23, 2022 | 9:32 PM

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರು ತಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯದ ಎರಡು ದಿನಗಳ ಮೊದಲು  ಪಾಕಿಸ್ತಾನ(Pakistan) ಅಸೆಂಬ್ಲಿಯಲ್ಲಿ ತಾನು ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದಾರೆ. “ಯಾವುದೇ ಸಂದರ್ಭದಲ್ಲೂ ನಾನು ರಾಜೀನಾಮೆ ನೀಡುವುದಿಲ್ಲ. ನಾನು ಕೊನೆಯ ಎಸೆತದವರೆಗೂ ಆಡುತ್ತೇನೆ. ಅವರು ಇನ್ನೂ ಒತ್ತಡದಲ್ಲಿರುವುದರಿಂದ ನಾನು ಒಂದು ದಿನ ಮುಂಚಿತವಾಗಿ ಅವರನ್ನು ಅಚ್ಚರಿಗೊಳಿಸುತ್ತೇನೆ” ಎಂದು ಇಮ್ರಾನ್ ಖಾನ್  ಪಾಕಿಸ್ತಾನದ ಸುದ್ದಿ ಚಾನೆಲ್ ಜಿಯೋ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಅದೇ ವೇಳೆ ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯ (no-confidence motion) ಯಶಸ್ವಿಯಾಗುವುದಿಲ್ಲ ಎಂದು ಪಾಕ್ ಪ್ರಧಾನಿ ಹೇಳಿದ್ದಾರೆ. “ನನ್ನ ಟ್ರಂಪ್ ಕಾರ್ಡ್ ಎಂದರೆ ನಾನು ಇನ್ನೂ ನನ್ನ ಯಾವುದೇ ಕಾರ್ಡ್‌ಗಳನ್ನು ಹಾಕಿಲ್ಲ” ಎಂದು ಅವರು ಹೇಳಿದರು. “ಮನೆಯಲ್ಲಿ ಕೂರುತ್ತೇನೆ ಎಂಬ ತಪ್ಪು ಕಲ್ಪನೆ ಯಾರಿಗೂ ಬೇಡ. ನಾನು ರಾಜೀನಾಮೆ ನೀಡುವುದಿಲ್ಲ. ನಾನೇಕೆ ನೀಡಲಿ? ಕಳ್ಳರ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಬೇಕೇ?” ಅಧಿಕಾರದಿಂದ ಕೆಳಗಿಳಿಯಲು ಒತ್ತಾಯಿಸಿದರೆ ನಾನು ಮೌನವಾಗಿರುವುದಿಲ್ಲ ಎಂದು ಖಾನ್ ಹೇಳಿದ್ದಾರೆ. ಪ್ರಬಲವಾದ ಪಾಕಿಸ್ತಾನದ ಸೇನೆಯೊಂದಿಗೆ ವೈಮನಸ್ಸು ಹೊಂದಿರುವ ವರದಿಗಳನ್ನು ಪಾಕಿಸ್ತಾನದ ಪ್ರಧಾನಿ ನಿರಾಕರಿಸಿದ್ದಾರೆ. “ಸೇನೆ ಇಲ್ಲದೇ ಇದ್ದಿದ್ದರೆ ದೇಶ ಮೂರು ಭಾಗಗಳಾಗಿ ಒಡೆಯುತ್ತಿತ್ತು. ಸೇನೆಯನ್ನು ರಾಜಕೀಯ ಮಾಡುವುದಕ್ಕಾಗಿ ಟೀಕಿಸಬಾರದು ಎಂದು ಖಾನ್ ಹೇಳಿದ್ದಾರೆ.

ವರದಿಗಳ ಪ್ರಕಾರ, ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ, ಡಿಜಿ-ಐಎಸ್‌ಐ ಲೆಫ್ಟಿನೆಂಟ್ ಜನರಲ್ ನವೀದ್ ಅಹ್ಮದ್ ಅಂಜುಮ್ ಸೇರಿದಂತೆ ಉನ್ನತ ಹಿರಿಯ ಜನರಲ್‌ಗಳು ಒಐಸಿ ಸಮ್ಮೇಳನದ ನಂತರ ಇಮ್ರಾನ್ ಖಾನ್‌ಗೆ ರಾಜೀನಾಮೆ ನೀಡುವಂತೆ ಕೇಳಿಕೊಂಡಿದ್ದಾರೆ.

ಪ್ರತಿಪಕ್ಷಗಳ ಹೊರತಾಗಿ, ಇಮ್ರಾನ್ ಖಾನ್ ಅವರ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಯ ಗಣನೀಯ ಸಂಖ್ಯೆಯ ಶಾಸಕರು ಇಸ್ಲಾಮಾಬಾದ್‌ನ ಸಿಂಧ್ ಹೌಸ್‌ನಲ್ಲಿ ನೆಲೆಸಿದ್ದಾರೆ ಮತ್ತು ತಮ್ಮದೇ ಪ್ರಧಾನ ಮಂತ್ರಿಯ ವಿರುದ್ಧ ಮತ ಚಲಾಯಿಸುತ್ತಾರೆ ಎಂದು ನಂಬಲಾಗಿದೆ. ಈ ವಾರದ ಆರಂಭದಲ್ಲಿ ಖೈಬರ್-ಪಖ್ತುಂಖ್ವಾದಲ್ಲಿನ ಮಲಕಾಂಡ್‌ನಲ್ಲಿ ನಡೆದ ರ್ಯಾಲಿಯಲ್ಲಿ, ಖಾನ್ ಅವರು ಸರ್ಕಾರದ ವಿರುದ್ಧ ಮತ ಹಾಕುವುದಾಗಿ ಬೆದರಿಕೆ ಹಾಕಿರುವ ತಮ್ಮ ಶಾಸಕರನ್ನು ‘ಕ್ಷಮಿಸುವುದಾಗಿ’ ಭರವಸೆ ನೀಡಿದ್ದರು.

ನೀವು ಮರಳಿ ಬಂದರೆ ನಾನು ನಿನ್ನನ್ನು ಕ್ಷಮಿಸುತ್ತೇನೆ. ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ. ನಾನು ಮಕ್ಕಳನ್ನು ಕ್ಷಮಿಸುವ ತಂದೆಯಂತಿದ್ದೇನೆ ಮತ್ತು ನಾನು ನಿಮ್ಮನ್ನು ಕ್ಷಮಿಸುತ್ತೇನೆ, ”ಎಂದು ಅವರು ಹೇಳಿದರು.

ಇದನ್ನೂ ಓದಿ: ರಾಜೀನಾಮೆ ನೀಡುವಂತೆ ಇಮ್ರಾನ್​ ಖಾನ್​ಗೆ ಸೂಚಿಸಿದ ಪಾಕಿಸ್ತಾನ ಸೇನಾಡಳಿತ; ಪ್ರಧಾನಿ ಭೇಟಿ ಮಾಡಿದ ಹಿರಿಯ ಅಧಿಕಾರಿಗಳು !