ಪಾಕಿಸ್ತಾನ ಪ್ರಧಾನಿಯನ್ನು ಬೆನ್ನತ್ತಿದ ಸಂಕಷ್ಟ; 50 ಸಾವಿರ ರೂ.ದಂಡ ವಿಧಿಸಿದ ಚುನಾವಣಾ ಆಯೋಗ
ಸ್ವಾತ್ನಲ್ಲಿ ಚುನಾವಣಾ ರ್ಯಾಲಿ ನಡೆಸದಂತೆ, ಸಾರ್ವಜನಿಕ ಭಾಷಣ ಮಾಡದಂತೆ ಇಮ್ರಾನ್ ಖಾನ್ಗೆ ಮಾರ್ಚ್ 15ರಂದು ಚುನಾವಣಾ ಆಯೋಗ ಸೂಚನೆ ನೀಡಿತ್ತು.
ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ಗೆ (Pakistan PM Imran Khan) ಒಂದರ ಹಿಂದೆ ಒಂದರಂತೆ ಸಂಕಷ್ಟಗಳು ಬಂದೊದಗುತ್ತಿವೆ. ಸದ್ಯ ಅವರು ನಿರ್ಗಮನಕ್ಕೆ ಸಿದ್ಧರಾಗಿರುವ ಪ್ರಧಾನಿ ಎಂದೇ ಹೇಳಲಾಗುತ್ತಿದೆ. ಈಗಾಗಲೇ ಸೇನಾ ಆಡಳಿತ ಅವರ ಬಳಿ ರಾಜೀನಾಮೆ ನೀಡುವಂತೆ ಕೇಳಿದ್ದಾಗಿ ಪಾಕಿಸ್ತಾನದ ಕ್ಯಾಪಿಟಲ್ ಟಿವಿ ಎಂಬ ಸುದ್ದಿ ಮಾಧ್ಯಮ ವರದಿ ಮಾಡಿದೆ. ಇದೀಗ ಇಮ್ರಾನ್ ಖಾನ್ಗೆ ಇನ್ನೊಂದು ಸಮಸ್ಯೆ ಎದುರಾಗಿದ್ದು, ಪಾಕಿಸ್ತಾನದ ಚುನಾವಣಾ ಆಯೋಗ ಅವರಿಗೆ 50 ಸಾವಿರ ರೂಪಾಯಿ ದಂಡ ವಿಧಿಸಿದೆ. ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಚುನಾವಣೆ ನಿಮಿತ್ತ ಸ್ವಾತ್ ಎಂಬಲ್ಲಿ ಇಮ್ರಾನ್ ಖಾನ್ ರ್ಯಾಲಿ ನಡೆಸಿದ್ದರು. ಈ ಮೂಲಕ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂಬ ಕಾರಣಕ್ಕೆ ಇಷ್ಟು ಮೊತ್ತದ ದಂಡ ವಿಧಿಸುತ್ತಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ.
ಸ್ವಾತ್ನಲ್ಲಿ ಚುನಾವಣಾ ರ್ಯಾಲಿ ನಡೆಸದಂತೆ, ಸಾರ್ವಜನಿಕ ಭಾಷಣ ಮಾಡದಂತೆ ಇಮ್ರಾನ್ ಖಾನ್ಗೆ ಮಾರ್ಚ್ 15ರಂದು ಚುನಾವಣಾ ಆಯೋಗ ಸೂಚನೆ ನೀಡಿತ್ತು. ಅಲ್ಲಿ ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಯಾವುದೇ ಸಾರ್ವಜನಿಕ ಆಡಳಿತ ಹುದ್ದೆಯಲ್ಲಿರುವವರೂ ಅಲ್ಲಿಗೆ ಭೇಟಿ ನೀಡಬಾರದು ಎಂದು ಪಾಕಿಸ್ತಾನ ಚುನಾವಣಾ ಆಯೋಗ ಹೇಳಿತ್ತು. ಆದರೆ ಇಮ್ರಾನ್ ಖಾನ್ ಅದನ್ನು ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ರ್ಯಾಲಿ ನಡೆಸಿದ್ದಕ್ಕೆ ಎಲೆಕ್ಷನ್ ಕಮಿಷನ್ ಇಮ್ರಾನ್ ಖಾನ್ಗೆ ಎರಡು ನೋಟಿಸ್ ಕೂಡ ನೀಡಿತ್ತು. ಆದರೆ ಇಮ್ರಾನ್ ಖಾನ್ ನೋಟಿಸ್ ಕಳಿಸಿದ್ದರ ವಿರುದ್ಧ ಇಸ್ಲಮಾಬಾದ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಈ ವಿಚಾರದಲ್ಲಿ ಅಂತರ ಕಾಯ್ದುಕೊಂಡಿತ್ತು.
ಪಾಕಿಸ್ತಾನದಲ್ಲಿ ಸದ್ಯ ರಾಜಕೀಯ ಅಸ್ಥಿರತೆ ಉಂಟಾಗಿದೆ. ಈ ಬಗ್ಗೆ ಕೂಲಂಕಷವಾಗಿ ಚರ್ಚೆ ನಡೆಸಿದ ಜನರಲ್ ಬಾಜ್ವಾ ಮತ್ತು ಉಳಿದ ಮೂವರು ಹಿರಿಯ ಲೆಫ್ಟಿನೆಂಟ್ಗಳು ಇಮ್ರಾನ್ಖಾನ್ರಿಂದ ರಾಜೀನಾಮೆ ಪಡೆಯುವ ನಿರ್ಧಾರ ಮಾಡಿದ್ದಾರೆ. ಸಭೆ ಬಳಿಕ ಬಾಜ್ವಾ ಮತ್ತು ಪಾಕ್ ಗೂಢಚಾರಿ ಲೆಫ್ಟಿನೆಂಟ್ ಜನರಲ್ ನದೀಮ್ ಅಂಜುಮ್ ಸೇರಿ ಇಮ್ರಾನ್ ಖಾನ್ರನ್ನು ಭೇಟಿಯಾಗಿ, ರಾಜೀನಾಮೆ ನೀಡಬೇಕಾಗಿ ತಿಳಿಸಿದ್ದಾರೆಂದು ಪಾಕ್ ಮಾಧ್ಯಮಗಳಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ರಸ್ತೆ ಬದಿಯಲ್ಲಿ ಬಿದ್ದಿದ್ದ ಮಿಠಾಯಿ ತಿಂದು ನಾಲ್ವರು ಮಕ್ಕಳು ಸಾವು; ಪೊಲೀಸರಿಂದ ತನಿಖೆ ಪ್ರಾರಂಭ
Published On - 5:16 pm, Wed, 23 March 22