ಇಸ್ಲಾಮಾಬಾದ್: ಕೌನ್ಸಿಲ್ ಆಫ್ ಕಾಮನ್ ಇಂಟರೆಸ್ಟ್ (CCI) ಸಭೆಯನ್ನು ಕಳೆದ ಎರಡು ತಿಂಗಳಿನಿಂದ ನಡೆಸಲು ವಿಫಲವಾಗಿರುವುದಕ್ಕೆ ಪಾಕ್ ಸುಪ್ರೀಂ ಕೋರ್ಟ್ ಇಮ್ರಾನ್ ಖಾನ್ ನೇತೃತ್ವದ ಸರ್ಕಾರವನ್ನು ಕಟುವಾಗಿ ಟೀಕಿಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದ ವಿಚಾರಣೆಯಲ್ಲಿ ಸರ್ಕಾರ ಭಾಗವಹಿಸಿರುವ ವಿಧಾನದ ಬಗ್ಗೆ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಕಾಜಿ ಫಯೆಜ್ ಇಸಾ ನೇತೃತ್ವದ ದ್ವಿಸದಸ್ಯ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಗಣತಿಯನ್ನು ಅರ್ಥ ಮಾಡಿಕೊಳ್ಳುವುದು ದೇಶವನ್ನು ನಡೆಸಲು ಬೇಕಾಗಿರುವ ಮೂಲ ಅಗತ್ಯ. ಗಣತಿಯ ಫಲಿತಾಂಶವನ್ನು ಬಿಡುಗಡೆಗೊಳಿಸುವುದು ಸರ್ಕಾರದ ಆದ್ಯತೆ ಆಗಿರಬೇಕಲ್ಲವೇ ಎಂದು ನ್ಯಾಯಮೂರ್ತಿ ಇಸಾ ಪ್ರಶ್ನಿಸಿದ್ದಾರೆ. ಈ ಬಗ್ಗೆ ಕೌನ್ಸಿಲ್ನಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದಿರುವುದಕ್ಕೆ ಸರ್ಕಾರವನ್ನು ಟೀಕಿಸಿದ್ದಾರೆ.
ಒಂದೋ ಈ ಸರ್ಕಾರಕ್ಕೆ ದೇಶವನ್ನು ಮುನ್ನಡೆಸುವ ಶಕ್ತಿ ಇಲ್ಲ ಅಥವಾ ಸರ್ಕಾರಕ್ಕೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಮೂರ್ತಿ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ. ಅಷ್ಟೇ ಅಲ್ಲದೆ, CCI ವರದಿಯನ್ನು ಯಾಕೆ ಗುಪ್ತವಾಗಿ ಇರಿಸಲಾಗಿದೆ ಎಂದೂ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಸರ್ಕಾರ ಹೀಗೆಯೇ ನಡೆಯುತ್ತದೆಯೇ? ಕೇಂದ್ರ ಮತ್ತು ಪ್ರಾದೇಶಿಕ ಆಡಳಿತ ಏನು ಮಾಡುತ್ತಿದೆ ಎಂದು ದೇಶ ತಿಳಿಯಲು ಬಯಸುತ್ತದೆ ಎಂದು ಅವರು ಹೇಳಿದ್ದಾರೆ.
ಪಂಜಾಬ್ ಪ್ರಾಂತ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಸಕಾಲದಲ್ಲಿ ನಡೆಸದಿರುವ ಬಗ್ಗೆಯೂ ಸುಪ್ರೀಂಕೋರ್ಟ್ನ ದ್ವಿಸದಸ್ಯ ಪೀಠ ಆಕ್ಷೇಪ ವ್ಯಕ್ತಪಡಿಸಿದೆ. ಪಂಜಾಬ್ ಸರ್ಕಾರಕ್ಕೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವುದು ಬೇಕಾಗಿಲ್ಲ. ಪೂರ್ಣ ಪಂಜಾಬ್ ವಿಧಾನಸಭೆಯ ನಿರ್ಣಯವನ್ನು ಕೇವಲ ವ್ಯಕ್ತಿಯ ಮಾತಿನ ಮೇರೆಗೆ ಉಲ್ಲಂಘಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಕೋರ್ಟ್ಗೆ ಪ್ರತಿಕ್ರಿಯಿಸಿರುವ ಹೆಚ್ಚುವರಿ ಅಟಾರ್ನಿ ಜನರಲ್ (AAG), ಮಾರ್ಚ್ 24ರಂದು ಸಿಸಿಐ ಸಭೆ ನಡೆಸಲಿದೆ. ಅದೊಂದು ಸೂಕ್ಷ್ಮ ವಿಚಾರವಾಗಿದೆ. ಹಾಗಾಗಿ, ಪ್ರಜ್ಞಾಪೂರ್ವಕವಾಗಿ ನಿರ್ಧಾರ ಕೈಗೊಳ್ಳಲು ಸರ್ಕಾರ ಬಯಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ ಈ ಟಿಕ್ಟಾಕ್ ಸ್ಟಾರ್ ಐಶ್ವರ್ಯಾ ರೈ ಪಡಿಯಚ್ಚು!
ಇದನ್ನೂ ಓದಿ: ನಾವು ಎಂದಿಗೂ ಶಾಂತಿಯ ಪರ; ಭಾರತ-ಪಾಕಿಸ್ತಾನ ಕದನವಿರಾಮ ಒಪ್ಪಂದ ಸ್ವಾಗತಿಸಿ ಇಮ್ರಾನ್ ಖಾನ್ ಟ್ವೀಟ್
Published On - 3:28 pm, Tue, 16 March 21