ಪಾಕಿಸ್ತಾನದ ₹140 ಮಿಲಿಯನ್ ಮೌಲ್ಯದ ಉಡುಗೊರೆಗಳನ್ನು ಪಾಕ್ ಮಾಜಿ ಪ್ರಧಾನಿ ಮಾರಾಟ ಮಾಡಿದ್ದಾರೆ: ಇಮ್ರಾನ್ ಖಾನ್ ಮೇಲೆ ಆರೋಪ
Imran Khan ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ಇಮ್ರಾನ್ ಖಾನ್ ದುಬೈನಲ್ಲಿ ಪಾಕಿಸ್ತಾನದ 140 ಮಿಲಿಯನ್ ರೂಪಾಯಿ ಮೌಲ್ಯದ ತೋಷಖಾನಾ ಉಡುಗೊರೆಗಳನ್ನು ಮಾರಾಟ ಮಾಡಿದ್ದಾರೆ.
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಶನಿವಾರ ಚಾರ್ಟರ್ಡ್ ಫ್ಲೈಟ್‌ನಲ್ಲಿ ಕರಾಚಿಗೆ (Karachi) ತೆರಳಿ ರಾಜಕೀಯ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದು ಹೊಸ ವಿವಾದಗಳನ್ನು ಹುಟ್ಟುಹಾಕಿದ ಸಮಯದಲ್ಲಿಯೇ ಪಾಕಿಸ್ತಾನದ ಖಜಾನೆಗೆ ಸೇರಬೇಕಾದ ಅಮೂಲ್ಯ ಉಡುಗೊರೆಗಳನ್ನು ಕದ್ದ ಆರೋಪ ಎದುರಿಸುತ್ತಿದ್ದಾರೆ. ಇಮ್ರಾನ್ ಖಾನ್ ಖಾಸಗಿ ಜೆಟ್‌ನಿಂದ ಹೊರನಡೆಯುತ್ತಿರುವ ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಕರಾಚಿ ಮೂಲದ ಎಂಗ್ರೋ ಕಾರ್ಪೊರೇಷನ್ (Engro Corporation) ವಿಮಾನದ ಮಾಲೀಕತ್ವದ ಬಗ್ಗೆ ಹೇಳಿಕೆ ನೀಡಿದೆ. ಆದರೆ ವಿಮಾನಕ್ಕೆ ಸಂಬಂಧಿಸಿದ ಯಾವುದೇ ವೆಚ್ಚವನ್ನು ಕಂಪನಿ ಭರಿಸಿಲ್ಲ ಎಂದು ಹೇಳಿದೆ. ಕರಾಚಿಯಲ್ಲಿ ರಾಜಕೀಯ ಸಭೆಗಾಗಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ತೆಗೆದುಕೊಂಡ ಖಾಸಗಿ ಜೆಟ್‌ನ ಎಂಗ್ರೋ ಮಾಲೀಕತ್ವದ ಬಗ್ಗೆ ಮಾಧ್ಯಮದ ಊಹಾಪೋಹಗಳಿಗೆ ಸಂಬಂಧಿಸಿದಂತೆ, ವಿಮಾನವು ಎಂಗ್ರೋ ಫರ್ಟಿಲೈಸರ್ಸ್ ಒಡೆತನದ್ದಾಗಿದ್ದರೂ, ಅದನ್ನು ವಾಡಿಕೆಯ ಅಭ್ಯಾಸವಾಗಿ ಪ್ರಿನ್ಸ್ಲಿ ಜೆಟ್ಸ್‌ಗೆ ಚಾರ್ಟರ್ ನೀಡಲಾಗಿದೆ ಎಂದು ಸ್ಪಷ್ಟಪಡಿಸಲು ನಾವು ಬಯಸುತ್ತೇವೆ. ವಿಮಾನಕ್ಕೆ ಸಂಬಂಧಿಸಿದ ಯಾವುದೇ ವೆಚ್ಚವನ್ನು ಎಂಗ್ರೋ ಭರಿಸಲಿಲ್ಲ ಎಂದು ಕಂಪನಿ ತಮ್ಮ ಹೇಳಿಕೆಯಲ್ಲಿ ತಿಳಿಸಿದೆ.
ಇಮ್ರಾನ್ ಖಾನ್ ಮತ್ತು ಬುಶ್ರಾ ಬೀಬಿ ಅವರು ಪಾಕಿಸ್ತಾನದ ಪ್ರಧಾನಿಯಾಗಿ ಮತ್ತು ಪಾಕಿಸ್ತಾನದ ಪ್ರಥಮ ಮಹಿಳೆಯಾಗಿ ಪಡೆದ ಎಲ್ಲಾ ಉಡುಗೊರೆಗಳನ್ನು ಉಳಿಸಿಕೊಂಡು ದೇಶದ ಖಜಾನೆಗೆ ಅತ್ಯಲ್ಪ ಮೊತ್ತವನ್ನು ಪಾವತಿಸಿದ್ದಾರೆ ಎಂಬ ವರದಿಗಳ ನಡುವೆ ಹೊಸ ವಿವಾದವು ಸ್ಫೋಟಗೊಂಡಿದೆ. ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ಇಮ್ರಾನ್ ಖಾನ್ ದುಬೈನಲ್ಲಿ ಪಾಕಿಸ್ತಾನದ 140 ಮಿಲಿಯನ್ ರೂಪಾಯಿ ಮೌಲ್ಯದ ತೋಷಖಾನಾ ಉಡುಗೊರೆಗಳನ್ನು ಮಾರಾಟ ಮಾಡಿದ್ದಾರೆ. ಈ ಉಡುಗೊರೆಗಳಲ್ಲಿ ಹಲವಾರು ರೋಲೆಕ್ಸ್ ವಾಚ್‌ಗಳು, ಒಂದು ಜೋಡಿ ಕಫ್‌ಲಿಂಕ್‌ಗಳು, ನೆಕ್ಲೇಸ್, ಬಳೆ, ಕಿವಿಯೋಲೆಗಳು, ಐಫೋನ್ ಇತ್ಯಾದಿ ಸೇರಿವೆ.
ಪಾಕಿಸ್ತಾನಿ ಕಾನೂನುಗಳ ಪ್ರಕಾರ, ರಾಜ್ಯ ಮುಖ್ಯಸ್ಥರು ನಿರ್ದಿಷ್ಟ ಮೊತ್ತವನ್ನು ಪಾವತಿಸುವ ಮೂಲಕ ಅಧಿಕಾರಾವಧಿಯಲ್ಲಿ ಸ್ವೀಕರಿಸಿದ ಉಡುಗೊರೆಗಳನ್ನು ಉಳಿಸಿಕೊಳ್ಳಬಹುದು. ಇಮ್ರಾನ್ ಖಾನ್ ಪಾವತಿಯನ್ನು ಬಿಟ್ಟುಬಿಟ್ಟಿದ್ದಾರೆ ಅಥವಾ ಅತ್ಯಲ್ಪ ಮೊತ್ತವನ್ನು ಪಾವತಿಸಿದ್ದಾರೆ ಎಂದು ಪಾಕಿಸ್ತಾನಿ ಮಾಧ್ಯಮಗಳು ಹೇಳಿಕೊಂಡಿವೆ.
ಶನಿವಾರ ನಡೆದ ಕರಾಚಿ ರ್ಯಾಲಿ ಇಮ್ರಾನ್ ಖಾನ್ ಅಧಿಕಾರದಿಂದ ಕೆಳಗಿಳಿದ ನಂತರ ಭಾಷಣ ಮಾಡಿದ ಎರಡನೇ ಸಾರ್ವಜನಿಕ ಸಭೆಯಾಗಿದೆ. “ಮ್ಯಾಚ್ ಫಿಕ್ಸ್ ಆಗಿತ್ತು” ಎಂದು ನನಗೆ ತಿಳಿದಿತ್ತು ಎಂದು ಖಾನ್ ಭಾಷಣದಲ್ಲಿ ಹೇಳಿದ್ದಾರೆ. “ನಾನು ಎಂದಿಗೂ ಯಾವುದೇ ದೇಶದ ವಿರುದ್ಧವಾಗಿಲ್ಲ ಎಂದು ನಾನು ರಾಷ್ಟ್ರಕ್ಕೆ ಹೇಳಲು ಬಯಸುತ್ತೇನೆ. ನಾನು ಭಾರತ ವಿರೋಧಿಯಲ್ಲ, ಯುರೋಪ್ ವಿರೋಧಿ ಅಥವಾ ಯುಎಸ್ ವಿರೋಧಿ ಅಲ್ಲ. ನಾನು ಪ್ರಪಂಚದ ಮಾನವೀಯತೆಯೊಂದಿಗಿದ್ದೇನೆ. ನಾನು ಯಾವುದೇ ರಾಷ್ಟ್ರದ ವಿರೋಧಿಯಲ್ಲ. ನಾನು ಎಲ್ಲರೊಂದಿಗೆ ಸ್ನೇಹವನ್ನು ಬಯಸುತ್ತೇನೆ ಆದರೆ ಯಾರೊಂದಿಗೂ ಗುಲಾಮಗಿರಿಯನ್ನು ಬಯಸುವುದಿಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.