Imran Khan: ನಮ್ಮ ಪಕ್ಷದವರನ್ನು ಪಾಕ್ ವಿರೋಧ ಪಕ್ಷದ ನಾಯಕರಾಗಿ ನಾಮನಿರ್ದೇಶನ ಮಾಡಬೇಡಿ; ಚುನಾವಣಾ ಆಯೋಗಕ್ಕೆ ಇಮ್ರಾನ್ ಖಾನ್ ಪತ್ರ
ಇಮ್ರಾನ್ ಖಾನ್ ಪಾಕ್ ಪ್ರಧಾನಿ ಹುದ್ದೆಯಿಂದ ಪದಚ್ಯುತರಾದ ಹಿನ್ನೆಲೆಯಲ್ಲಿ ಶೆಹಬಾಜ್ ಷರೀಫ್ ಅವರು ಮಧ್ಯರಾತ್ರಿಯ ಮತದಾನದ ನಂತರ ಅದೇ ದಿನ ಪಾಕಿಸ್ತಾನದ 23ನೇ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇಸ್ಲಾಮಾಬಾದ್: ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (Pakistan Tehreek-e-Insaf) ಮುಖ್ಯಸ್ಥ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರು ತಮ್ಮ ಪಕ್ಷದ ಯಾವುದೇ ಸದಸ್ಯರನ್ನು ಪಾಕಿಸ್ತಾನ ಪಾರ್ಲಿಮೆಂಟ್ನ ವಿರೋಧ ಪಕ್ಷದ ನಾಯಕರಾಗಿ ನಾಮನಿರ್ದೇಶನ ಮಾಡದಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಏಪ್ರಿಲ್ 10ರಂದು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ವಿಶ್ವಾಸಮತ ಯಾಚನೆ ವೇಳೆ ಬಹುಮತ ಸಾಬೀತುಪಡಿಸಲು ವಿಫಲರಾದ ಬಳಿಕ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದರು. ಅದಾದ ಮೇಲೆ ನೂತನ ಪ್ರಧಾನಮಂತ್ರಿಯಾಗಿ ಶೆಹಬಾಜ್ ಷರೀಫ್ ಆಯ್ಕೆಯಾಗಿದ್ದರು.
ಸ್ಪೀಕರ್ ಖಾಸಿಂ ಸೂರಿ ಇಂದು 123 ಎಂಎನ್ಎಗಳ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಆ ನನ್ನ 123 ಎಂಎನ್‌ಎಗಳಿಗೆ ನಾನು ಕೃತಜ್ಞನಾಗಿದ್ದೇನೆ. ಸರ್ಕಾರದ ಬದಲಾವಣೆಯ ವಿರುದ್ಧ ನಾವು ಸ್ವತಂತ್ರವಾಗಿ ನಿಂತಿದ್ದೇವೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಇಮ್ರಾನ್ ಖಾನ್ ಪಾಕ್ ಪ್ರಧಾನಿ ಹುದ್ದೆಯಿಂದ ಪದಚ್ಯುತರಾದ ಹಿನ್ನೆಲೆಯಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್ (ನವಾಜ್) ನಾಯಕ ಶೆಹಬಾಜ್ ಷರೀಫ್ ಅವರು ಮಧ್ಯರಾತ್ರಿಯ ಮತದಾನದ ನಂತರ ಅದೇ ದಿನ ಪಾಕಿಸ್ತಾನದ 23ನೇ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
2018ರಲ್ಲಿ ‘ನಯಾ ಪಾಕಿಸ್ತಾನ’ ನಿರ್ಮಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಇಮ್ರಾನ್ ಖಾನ್ ಮಧ್ಯಂತರದಲ್ಲೇ ಪ್ರಧಾನಿ ಹುದ್ದೆಯಿಂದ ನಿರ್ಗಮಿಸಬೇಕಾಯಿತು. ನಾನು ಪ್ರಧಾನಮಂತ್ರಿ ಹುದ್ದೆಯಲ್ಲಿ ಇದ್ದಾಗ ಅಪಾಯಕಾರಿ ಆಗಿರಲಿಲ್ಲ. ಆಗ ನಾನು ಸರ್ಕಾರದ ಭಾಗವಾಗಿದ್ದೆ. ಆದರೆ ನಾನು ಅಧಿಕಾರ ಕಳೆದುಕೊಂಡ ಮೇಲೆ ಬಹಳ ಅಪಾಯಕಾರಿ ಮನುಷ್ಯನಾಗಿದ್ದೇನೆ ಎಂದು ಹೇಳಿದ್ದಾರೆ. ನಾನು ಅಧಿಕಾರವನ್ನು ಕಳೆದುಕೊಳ್ಳಲು ವಿದೇಶಿ ಕುತಂತ್ರ ಕಾರಣ ಎಂದೇ ಆರೋಪಿಸುತ್ತಿರುವ ಇಮ್ರಾನ್ ಖಾನ್, ಹೀಗೆ ಆಮದು ಮಾಡಿಕೊಂಡ ಸರ್ಕಾರವನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದನ್ನು ಜನರೂ ವಿರೋಧಿಸುತ್ತಿದ್ದಾರೆ ಎಂದು ನಿನ್ನೆಯಷ್ಟೇ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: Imran Khan: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ದೇಶದ್ರೋಹದ ಆರೋಪ ಸಾಧ್ಯತೆ
ನಾನು ಇನ್ಮುಂದೆ ತುಂಬ ಡೇಂಜರಸ್ ಮನುಷ್ಯ ಎಂದ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್