ಒಳಿತು ಬಿತ್ತುವ ಆಶಯ: ಜೋ ಬೈಡೆನ್ಗೆ ಭಾರತ ಮೂಲದ ಅಮೆರಿಕನ್ನರಿಂದ ರಂಗೋಲಿಯ ಸ್ವಾಗತ
ಕಲಾವಿದರು, ವಿದ್ಯಾರ್ಥಿಗಳು, ಜನಸಾಮಾನ್ಯರು ಈ ಯೋಜನೆಯಲ್ಲಿ ಭಾಗವಹಿಸಲು ಅತ್ಯುತ್ಸಾಹದಿಂದ ಮುಂದೆ ಬಂದಿದ್ದಾರೆ. ಅಮೆರಿಕದ ವೈವಿಧ್ಯಮಯ ಸಂಸ್ಕೃತಿಗೆ ಪೂರಕವಾಗಿ ಜೋ ಬೈಡೆನ್ ಆಡಳಿತ ನಿರ್ವಹಿಸಲಿ ಎಂದು ರಂಗೋಲಿ ಬಿಡಿಸುವ ಕಲಾವಿದರು ಆಶಯ ವ್ಯಕ್ತಪಡಿಸಿದ್ದಾರೆ.
ವಾಷಿಂಗ್ಟನ್: ಅಮೆರಿಕದ 46ನೇ ಅಧ್ಯಕ್ಷರಾಗಲಿರುವ ಜೋ ಬೈಡೆನ್ಗೆ ಭಾರತೀಯ ಮೂಲದ ಅಮೆರಿಕನ್ನರು ಸಾಂಪ್ರದಾಯಿಕ ಸ್ವಾಗತ ಕೋರಲು ಸಕಲ ಸಿದ್ಧತೆ ನಡೆಸಿದ್ದಾರೆ. 1800 ಕ್ಕೂ ಹೆಚ್ಚು ಉತ್ಸಾಹಿಗಳು ಜೋ ಬೈಡೆನ್ ಸ್ವಾಗತಕ್ಕೆ ರಂಗೋಲಿ ಬಿಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಡೊನಾಲ್ಡ್ ಟ್ರಂಪ್ ಅಧಿಕಾರಾವಧಿ ಮುಗಿಯುವ ಹೊತ್ತಲ್ಲಿ ಹಲವು ಅವಾಂತರಗಳಿಗೆ ವೈಟ್ಹೌಸ್ ಸಾಕ್ಷಿಯಾಗಿತ್ತು. ಡೊನಾಲ್ಡ್ ಟ್ರಂಪ್ ಬೆಂಬಲಿಗರು ನಡೆಸಿದ ಗಲಾಟೆಯು ಅಮೆರಿಕದ ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ ಎಂದೇ ಬಿಂಬಿತವಾಗಿತ್ತು. ಆದರೆ, ಅವುಗಳನ್ನೆಲ್ಲ ಮರೆತು ಒಳಿತಿನ ಚಿಂತನೆಗಳನ್ನು ಬಿತ್ತಲೆಂದು ರಂಗೋಲಿ ಬಿಡಿಸುತ್ತಿದ್ದಾರೆ. ಕಲಾವಿದರು, ವಿದ್ಯಾರ್ಥಿಗಳು, ಜನಸಾಮಾನ್ಯರು ಈ ಯೋಜನೆಯಲ್ಲಿ ಭಾಗವಹಿಸಲು ಅತ್ಯುತ್ಸಾಹದಿಂದ ಮುಂದೆ ಬಂದಿದ್ದಾರೆ.
ರಂಗೋಲಿಗಳು ಒಳಿತಿನ ಸಂಕೇತ. ಮನೆ ಮುಂದೆ ರಂಗೋಲಿ ಬಿಡಿಸುವ ವಾಡಿಕೆ ಭಾರತೀಯರಲ್ಲಿದೆ. ಎಳೆಯ ಮುಂಜಾನೆಯಲ್ಲಿ ಮನೆ ಮುಂದೆ ನೀರು ಚಿಮುಕಿಸಿ ರಂಗೋಲಿ ಬಿಡಿಸಿದ ಮೇಲೆ ಮುಂದಿನ ಕೆಲಸ ಎಂಬ ಪದ್ಧತಿ ಭಾರತೀಯರದು. ಇಡೀ ದಿನ ನಮ್ಮಲ್ಲಿ ಒಳ್ಳೆಯ ಚಿಂತನೆಗಳು ತುಂಬಿಕೊಳ್ಳಲು ಸಹಕಾರಿ ಎಂಬಂರ್ಥದಲ್ಲಿ ರಂಗೋಲಿ ಚಿತ್ರಿಸುತ್ತಿದ್ದಾರೆ. ಅಮೆರಿಕ ಪೊಲೀಸರು ಕ್ಯಾಪಿಟಲ್ ಕಟ್ಟಡದ ಸುತ್ತ ರಂಗೋಲಿ ಚಿತ್ರಿಸಲು ಅನುಮತಿ ನೀಡಿದ್ದಾರೆ.
ಅಮೆರಿಕದ ವೈವಿಧ್ಯಮಯ ಸಂಸ್ಕೃತಿಗೆ ಪೂರಕವಾಗಿ ಜೋ ಬೈಡೆನ್ ಆಡಳಿತ ನಿರ್ವಹಿಸಲಿ ಎಂದು ರಂಗೋಲಿ ಬಿಡಿಸುವ ಕಲಾವಿದರು ಆಶಯ ವ್ಯಕ್ತಪಡಿಸಿದ್ದಾರೆ.
ರಂಗೋಲಿ ಸಾಧಕಿ | ತಮಿಳುನಾಡಿನಲ್ಲಿ ರಂಗೋಲಿ ಸಂಸ್ಕೃತಿ ಉಳಿಸಲು, ಬೆಳೆಸಲು ಶ್ರಮಿಸುತ್ತಿರುವ ಕನ್ನಡತಿ ಸುಚಿತಾ