Video: ದೇಶ, ರಾಜ್ಯ, ಒಕ್ಕೂಟ; ಇಂಗ್ಲೆಂಡ್​ನಲ್ಲಿ ರಾಹುಲ್ ಗಾಂಧಿಗೆ ಅಧಿಕಾರಿಯ ಪಾಠ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 25, 2022 | 1:51 PM

ರಾಹುಲ್ ಗಾಂಧಿ ಭಾಷಣ ಮಾಡುವಾಗ ಭಾರತ ಸರ್ಕಾರದ ಅಧಿಕಾರಿಯೊಬ್ಬರು ಮಧ್ಯಪ್ರವೇಶಿಸಿ, ಮಾತನಾಡಿರುವ ವಿಡಿಯೊ ಇದೀಗ ವೈರಲ್ ಆಗಿದೆ

Video: ದೇಶ, ರಾಜ್ಯ, ಒಕ್ಕೂಟ; ಇಂಗ್ಲೆಂಡ್​ನಲ್ಲಿ ರಾಹುಲ್ ಗಾಂಧಿಗೆ ಅಧಿಕಾರಿಯ ಪಾಠ
ಕೇಂಬ್ರಿಜ್ ವಿವಿ ಸಂವಾದಲ್ಲಿ ರಾಹುಲ್ ಗಾಂಧಿ
Follow us on

ಲಂಡನ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಬ್ರಿಟನ್​ನ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ (Cambridge University) ಭಾಷಣ ಮಾಡುವಾಗ ಭಾರತ ಸರ್ಕಾರದ ಅಧಿಕಾರಿಯೊಬ್ಬರು ಮಧ್ಯಪ್ರವೇಶಿಸಿ, ಮಾತನಾಡಿರುವ ವಿಡಿಯೊ ಇದೀಗ ವೈರಲ್ ಆಗಿದೆ. ಭಾರತೀಯ ರೈಲ್ವೆಯ ಟ್ರಾಫಿಕ್ ಸರ್ವೀಸ್ ಸೇವೆಯಲ್ಲಿರುವ ಸಿದ್ಧಾರ್ಥ ವರ್ಮಾ ಅವರು ಕೇಂಬ್ರಿಜ್ ವಿಶ್ವವಿದ್ಯಾಲಯದ ಕಾಮನ್​ವೆಲ್ತ್​ ಸ್ಕಾಲರ್​ ಸಹ ಹೌದು.

ರಾಹುಲ್ ಗಾಂಧಿ ಅವರು ಭಾಷಣ ಮಾಡುತ್ತಿದ್ದಾಗ ಮಧ್ಯಪ್ರವೇಶಿಸಿರುವ ಅವರು, ‘ನೀವು ಸಂವಿಧಾನದ 1ನೇ ವಿಧಿಯನ್ನು ಉಲ್ಲೇಖಿಸಿ ಭಾರತವು ರಾಜ್ಯಗಳ ಒಕ್ಕೂಟ ಎಂದು ಹೇಳಿದಿರಿ. ಆದರೆ ಒಂದು ಪುಟ ಹಿಂದಕ್ಕೆ ತಿರುವಿ, ಓದಿದ್ದರೆ ಭಾರತವು ಒಂದು ದೇಶ ಎನ್ನುವ ಉಲ್ಲೇಖ ಕಾಣಿಸುತ್ತಿತ್ತು. ಭಾರತವು ಜಗತ್ತಿನ ಅತ್ಯಂತ ಪುರಾತನ ಜೀವಂತ ನಾಗರೀಕತೆಗಳಲ್ಲಿ ಒಂದು. ಭಾರತ ಎನ್ನುವ ಪದದ ನಿಷ್ಪತ್ತಿಯು ವೇದಕಾಲಗಳಿಗೆ ಹೋಗುತ್ತದೆ. ತಕ್ಷಶಿಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದ ಆಚಾರ್ಯ ಚಾಣಕ್ಯ ನೀವು ಬೇರೆ ಜನಪದಗಳಿಗೆ ಸೇರಿದ್ದರೂ, ಒಂದು ದೇಶದ ಮಕ್ಕಳು ಎಂದು ಹೇಳಿದ್ದ’ ಎಂದು ವರ್ಮಾ ಅವರು ರಾಹುಲ್​ ಗಾಂಧಿಗೆ ವಿವರಣೆ ನೀಡಿದ್ದಾರೆ.

‘ಆಚಾರ್ಯ ಚಾಣಕ್ಯ ದೇಶ ಎನ್ನುವ ಪದ ಬಳಸಿದ್ದರೇ’ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು. ‘ಚಾಣಕ್ಯ ದೇಶ ಎನ್ನುವ ಪದ ಬಳಸಿಲ್ಲ. ಆದರೆ ರಾಷ್ಟ್ರ ಎನ್ನುವ ಪದ ಬಳಸಿದ್ದರು’ ಎಂದು ವರ್ಮಾ ಪ್ರತಿಕ್ರಿಯಿಸಿದ್ದರು. ‘ರಾಷ್ಟ್ರ ಎಂದರೆ ರಾಜನ ಅಧೀನದಲ್ಲಿರುವ ರಾಜ್ಯ’ ಎಂದು ರಾಹುಲ್ ವಿಶ್ಲೇಷಿಸಿದಾಗ ಮತ್ತೆ ಮಧ್ಯಪ್ರವೇಶಿಸಿದ ವರ್ಮಾ, ‘ಸಂಸ್ಕೃತದಲ್ಲಿ ರಾಷ್ಟ್ರ ಎಂದರೆ ದೇಶ ಎಂದ ಅರ್ಥ’ ಎಂದು ಪ್ರತಿಕ್ರಿಯಿಸಿದರು. ‘ದೇಶ (ನೇಶನ್) ಎನ್ನುವುದು ಪಾಶ್ಚಾತ್ಯರ ಪರಿಕಲ್ಪನೆ’ ಎಂದು ರಾಹುಲ್ ಗಾಂಧಿ ತಮ್ಮ ನಿಲುವು ಸ್ಪಷ್ಟಪಡಿಸಿದರು.

ಇದಕ್ಕೆ ಅಧಿಕಾರಿ ವರ್ಮಾ ಸುದೀರ್ಘ ವಿವರಣೆ ನೀಡಿದರು. ‘ದೇಶದ ಬಗ್ಗೆ ನಾನು ಕೇವಲ ರಾಜಕೀಯವಾಗಿ ಮಾತನಾಡುತ್ತಿಲ್ಲ. ವಿಶ್ವದ ಹಲವೆಡೆ ಇಂಥ ಪ್ರಯೋಗಗಳು ನಡೆದಿವೆ. ದೃಢವಾದ ಸಾಮಾಜಿಕ, ಸಾಂಸ್ಕೃತಿಕ ಬಂಧ ಇರದಿದ್ದರೆ ಕೇವಲ ಸಂವಿಧಾನವು ಒಂದು ದೇಶವನ್ನು ರೂಪಿಸಲು ಆಗುವುದಿಲ್ಲ. ನೀವೊಬ್ಬ ರಾಜಕೀಯ ನಾಯಕರಾಗಿ ಭಾರತದ ಬಗ್ಗೆ ನಿಮ್ಮ ಆಲೋಚನೆಗಳು ತಪ್ಪುತಪ್ಪಾಗಿವೆ ಎಂದು ನಿಮಗೆ ಅನ್ನಿಸುವುದಿಲ್ಲವೇ. ಭಾರತದ ಸಾವಿರಾರು ವರ್ಷಗಳ ಇತಿಹಾಸವನ್ನು ಅಳಿಸಿಹಾಕುವ ನಿಮ್ಮ ಆಲೋಚನೆಗಳಿಂದ ದೇಶದ ಹಿತಕ್ಕೂ ಧಕ್ಕೆಯಾದೀತು’ ಎಂದು ಎಚ್ಚರಿಸಿದರು.

‘ನೀವು ಹೇಳುವ ರೀತಿಯಲ್ಲಿ ಯೋಚಿಸುವವನು ನಾನಲ್ಲ’ ಎಂದು ರಾಹುಲ್ ಗಾಂಧಿ ತಿಳಿಸಿದರು. ರಾಹುಲ್ ಗಾಂಧಿ ನೀಡಿದ ಉತ್ತರದ ವಿಡಿಯೊ ಶೀಘ್ರ ಪೋಸ್ಟ್ ಮಾಡುತ್ತೇನೆ’ ಎಂದು ಅವರು ತಿಳಿಸಿದರು.

ಪ್ರತಿಷ್ಠಿತ ಕೇಂಬ್ರಿಜ್ ವಿಶ್ವವಿದ್ಯಾಲಯದ ಕಾರ್ಪಸ್ ಕ್ರಿಸ್ಟಿ ಕಾಲೇಜಿನಲ್ಲಿ ನಡೆದ ‘75ರ ಹೊಸಿಲಲ್ಲಿ ಭಾರತ’ ಹೆಸರಿನ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಹಿಂದೂ ರಾಷ್ಟ್ರೀಯವಾದ, ಕಾಂಗ್ರೆಸ್ ಪಕ್ಷದಲ್ಲಿ ಗಾಂಧಿ ಕುಟುಂಬದ ಪಾತ್ರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದರು.

‘ಭಾರತದಲ್ಲಿ ಪ್ರತಿಪಕ್ಷಗಳು ತಮ್ಮ ವಿಚಾರ ಮಂಡಿಸಲು ಮಾಧ್ಯಮಗಳಲ್ಲಿ ಅವಕಾಶವೇ ಸಿಗುತ್ತಿಲ್ಲ. ಭಾರತದ ಮಾಧ್ಯಮಗಳನ್ನು ಸರ್ಕಾರವನ್ನು ಬೆಂಬಲಿಸುವ ದೊಡ್ಡದೊಡ್ಡ ಕೈಗಾರಿಕೋದ್ಯಮಿಗಳು ನಿಯಂತ್ರಿಸುತ್ತಿದ್ದಾರೆ. ಹೀಗಾಗಿ ನಾವು ಒಂದು ರಾಜಕೀಯ ಪಕ್ಷವನ್ನಷ್ಟೇ ಎದುರಿಸುತ್ತಿಲ್ಲ. ಒಂದು ಸರ್ಕಾರವನ್ನು, ಅದರ ಅಧಿಕಾರವನ್ನು ಎದುರಿಸುತ್ತಿದ್ದೇವೆ. ಇದು ಬಹಳ ಕಷ್ಟ. ಆದರೆ ಒಂದಲ್ಲ ಒಂದು ದಿನ ಫಲ ಸಿಕ್ಕೇ ಸಿಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ