UK Prime Minister ಬ್ರಿಟನ್ ಪ್ರಧಾನಿ ಹುದ್ದೆಗೆ ರಿಷಿ ಸುನಕ್ ಹಾದಿ ಸುಗಮ
ಜಾನ್ಸನ್ ನಿರ್ಗಮನದಿಂದಾಗಿ ಪೆನ್ನಿ ಮೊರ್ಡಾಂಟ್ ಮಾತ್ರ ರಿಷಿ ಸುನಕ್‌ಗೆ ಪ್ರತಿಸ್ಪರ್ಧಿಯಾಗಿದ್ದಾರೆ. ಆದರೆ ಅವರು 100 ಬೆಂಬಲಿಗರನ್ನು ಭದ್ರಪಡಿಸುವ ಹಾದಿಯಲ್ಲಿದ್ದಾರೆ.
ಲಂಡನ್: ಬ್ರಿಟನ್ ಪ್ರಧಾನಿ ರೇಸ್ ನಿಂದ ಬೋರಿಸ್ ಜಾನ್ಸನ್ (Boris Johnson) ಹಿಂದೆ ಸರಿದ ನಂತರ ರಿಷಿ ಸುನಕ್ (Rishi Sunak) ಯುಕೆ ಮುಂದಿನ ಪ್ರಧಾನಿಯಾಗುವುದು ಬಹುತೇಕ ಖಚಿತ. ಸುನಕ್ ಅವರು ಸಂಸತ್ತಿನ 142 ಸದಸ್ಯರ ಬೆಂಬಲವನ್ನು ಹೊಂದಿದ್ದಾರೆ. ಪ್ರಧಾನಿಯಾಗಲು 100 ಅಂಕಗಳಿಗಿಂತ ಹೆಚ್ಚು ಸದಸ್ಯರ ಬೆಂಬಲ ಬೇಕಿದೆ. ಲಿಜ್ ಟ್ರಸ್ ವಿರುದ್ಧ ಸೋತ ಕೆಲವೇ ವಾರಗಳ ನಂತರ ಟೋರಿ ಸಂಸದರಾದ ಸುನಕ್ ಭಾನುವಾರದಂದು ಪ್ರಧಾನಿ ಹುದ್ದೆಗೆ ಸ್ಪರ್ಧಿಸಲು ಮತ್ತೆ ಕಣಕ್ಕಿಳಿದಿದ್ದಾರೆ. ನಾನು ನಮ್ಮ ಆರ್ಥಿಕತೆಯನ್ನು ಸರಿಪಡಿಸಲು, ನಮ್ಮ ಪಕ್ಷವನ್ನು ಒಗ್ಗೂಡಿಸಲು ಮತ್ತು ನಮ್ಮ ದೇಶಕ್ಕಾಗಿ ಸೇವೆ ಸಲ್ಲಿಸಲು ಬಯಸುತ್ತೇನೆ ಎಂದು ಭಾರತೀಯ ಮೂಲದ ಮಾಜಿ ಚಾನ್ಸೆಲರ್ ತಮ್ಮ ನಿರೀಕ್ಷಿತ ಉಮೇದುವಾರಿಕೆಯನ್ನು ದೃಢೀಕರಿಸುವ ಕಿರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಚ್ಚರಿಯ ನಡೆಯಲ್ಲಿ, ಸೋಮವಾರದ ಸ್ಪರ್ಧೆಗೆ ಪ್ರವೇಶಿಸಲು 100 ಶಾಸಕರ ಬೆಂಬಲವನ್ನು ಪಡೆಯಲು ಕರೇಬಿಯನ್ ನಲ್ಲಿ ತಮ್ಮ ರಜಾದಿನವನ್ನು ಕಡಿತಗೊಳಿಸಿದ ಬೋರಿಸ್ ಜಾನ್ಸನ್, ಭಾನುವಾರದಂದು ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ರೇಸ್‌ನಿಂದ ಹೊರಬಂದಿದ್ದಾರೆ. ಸಂಸತ್ತಿನಲ್ಲಿ ಏಕೀಕೃತ ಪಕ್ಷವನ್ನು ಮುನ್ನಡೆಸಲು ನನ್ನಿಂದ ಸಾಧ್ಯವಿಲ್ಲ ಎಂದಿದ್ದಾರೆ ಬೋರಿಸ್ ಜಾನ್ಸನ್. 58ರ ಹರೆಯದ ಬೋರಿಸ್ ಜಾನ್ಸನ್ ಡೌನಿಂಗ್ ಸ್ಟ್ರೀಟ್‌ಗೆ ಮರಳಬಹುದಾಗಿದ್ದರೂ ಸುನಕ್ ಅಥವಾ ಪೆನ್ನಿ ಮೊರ್ಡಾಂಟ್ ಅವರನ್ನು “ರಾಷ್ಟ್ರೀಯ ಹಿತಾಸಕ್ತಿಯಲ್ಲಿ” ಒಗ್ಗೂಡಿಸಲು ಮನವೊಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದರು.
ನಾನು ದೇಶಕ್ಕೆ ನೀಡಬೇಕಾದುದು ಸಾಕಷ್ಟು ಇದೆ ಎಂದು ನಾನು ನಂಬುತ್ತೇನೆ ಆದರೆ ಇದು ಸರಿಯಾದ ಸಮಯವಲ್ಲ ಎಂದು ನಾನು ಹೆದರುತ್ತೇನೆ ಎಂದು ಜಾನ್ಸನ್ ಹೇಳಿದ್ದಾರೆ. ಜಾನ್ಸನ್ ಈ ಹೇಳಿಕೆ ನೀಡಿದ ಬೆನ್ನಲ್ಲೇ ಸುನಕ್ ಅವರು ಬ್ರೆಕ್ಸಿಟ್, ಕೋವಿಡ್ ಲಸಿಕೆ ರೋಲ್‌ಔಟ್ ಮತ್ತು ಉಕ್ರೇನ್‌ನಲ್ಲಿನ ಯುದ್ಧ ಸೇರಿದಂತೆ ಕೆಲವು ಕಠಿಣ ಸವಾಲುಗಳ ಮೂಲಕ ದೇಶವನ್ನು ಮುನ್ನಡೆಸಿದ್ದಕ್ಕಾಗಿ ತಮ್ಮ ಮಾಜಿ ಮುಖ್ಯಸ್ಥರ ನಾಯಕತ್ವವನ್ನು ಶ್ಲಾಘಿಸಿ ಟ್ವೀಟ್ ಮಾಡಿದರು. ಅವರು ಮತ್ತೆ ಪ್ರಧಾನಿ ಹುದ್ದೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದರೂ, ಅವರು ದೇಶ ಮತ್ತು ವಿದೇಶಗಳಲ್ಲಿ ಸಾರ್ವಜನಿಕ ಜೀವನಕ್ಕೆ ಕೊಡುಗೆ ನೀಡುವುದನ್ನು ಮುಂದುವರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ ಸುನಕ್ .
ಜಾನ್ಸನ್ ನಿರ್ಗಮನದಿಂದಾಗಿ ಪೆನ್ನಿ ಮೊರ್ಡಾಂಟ್ ಮಾತ್ರ ರಿಷಿ ಸುನಕ್‌ಗೆ ಪ್ರತಿಸ್ಪರ್ಧಿಯಾಗಿದ್ದಾರೆ. ಆದರೆ ಅವರು 100 ಬೆಂಬಲಿಗರನ್ನು ಭದ್ರಪಡಿಸುವ ಹಾದಿಯಲ್ಲಿದ್ದಾರೆ. ಶುಕ್ರವಾರ ರೇಸ್‌ಗೆ ಪ್ರವೇಶಿಸಿದ ಮೊರ್ಡಾಂಟ್ ಅವರು 29 ಸಂಸದರ ಬೆಂಬಲವನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.
ಸೋಮವಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 2 ಗಂಟೆಯ ವೇಳೆಗೆ 100 ಸಂಸದರ ಬೆಂಬಲವನ್ನು ಪಡೆಯಲು ಮೊರ್ಡಾಂಟ್ ವಿಫಲವಾದರೆ, ರಿಷಿ ಸುನಕ್ ಪ್ರಧಾನಿಯಾಗುತ್ತಾರೆ.
Published On - 2:58 pm, Mon, 24 October 22