Go Back To India: ಅಮೆರಿಕದಲ್ಲಿ ಮುಂದುವರಿದ ಜನಾಂಗೀಯ ನಿಂದನೆ; ಭಾರತ ಮೂಲದ ಸಂಸದೆಗೆ ಅವಮಾನ
‘ನೀನು ನಿನ್ನ ದೇಶಕ್ಕೆ ವಾಪಸ್ ಹೋಗದಿದ್ದರೆ ಇಲ್ಲಿ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ’ ಎಂದು ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ.
ಬೆಂಗಳೂರು: ಅಮೆರಿಕದಲ್ಲಿ ಇತ್ತೀಚಿನ ದಿನಗಳಲ್ಲಿ ಭಾರತೀಯರನ್ನು ನಿಂದಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗಷ್ಟೇ ಅಮೆರಿಕದ ಜನಪ್ರತಿನಿಧಿ (Congresswoman) ಪ್ರಮೀಳ ಜಯಪಾಲ್ ಸಹ ಇಂಥದ್ದೇ ಅವಮಾನವನ್ನು ಅನುಭವಿಸಿದ್ದಾರೆ. ಚೆನ್ನೈನಲ್ಲಿ ಜನಿಸಿದ ಜಯಪಾಲ್ ತಮ್ಮ ಅನುಭವವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಅವರಿಗೆ ಆಡಿಯೊ ಮೆಸೇಜ್ ಮೂಲಕ ವ್ಯಕ್ತಿಯೊಬ್ಬರು ಕಳಿಸಿದ್ದ ವಾಯ್ಸ್ ಮೆಸೇಜ್ ಟ್ವೀಟ್ ಮಾಡಿದ್ದಾರೆ. ಪ್ರಮೀಳ ಜಯಪಾಲ್ ಅವರು ಅಮೆರಿಕದ ಪ್ರಜಾಪ್ರತಿನಿಧಿ ಸಭೆಯಲ್ಲಿ ಸೀಟಲ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಅಸಭ್ಯ ಮತ್ತು ಅಶ್ಲೀಲ ನಿಂದನೆ ಇದ್ದ ಕಾರಣ ಆಡಿಯೊ ಮೆಸೇಜ್ ಅನ್ನು ಹಲವು ಕಡೆ ಮ್ಯೂಟ್ ಮಾಡಲಾಗಿದೆ. ‘ನೀನು ನಿನ್ನ ದೇಶಕ್ಕೆ ವಾಪಸ್ ಹೋಗದಿದ್ದರೆ ಇಲ್ಲಿ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ’ ಎಂದು ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ. ‘ಸಾಮಾನ್ಯವಾಗಿ ರಾಜಕೀಯ ನಾಯಕರು ತಮಗೆ ಆದ ಅವಮಾನವನ್ನು ಹಂಚಿಕೊಳ್ಳುವುದಿಲ್ಲ. ಆದರೆ ನಾನು ಈ ವಿಷಯವನ್ನು ಬಹಿರಂಗಪಡಿಸಲು ನಿರ್ಧರಿಸಿದೆ. ಏಕೆಂದರೆ ಹಿಂಸಾಚಾರವನ್ನು ಸಾಮಾನ್ಯ ಸ್ಥಿತಿ ಎಂದು ಒಪ್ಪಿಕೊಳ್ಳಲು ಆಗುವುದಿಲ್ಲ’ ಎಂದು ಡೆಮಾಕ್ರಟಿಕ್ ಪಕ್ಷದ ನಾಯಕಿ ಟ್ವೀಟ್ನಲ್ಲಿ ಹೇಳಿದ್ದಾರೆ.
Typically, political figures don’t show their vulnerability. I chose to do so here because we cannot accept violence as our new norm.
We also cannot accept the racism and sexism that underlies and propels so much of this violence. pic.twitter.com/DAuwwtWt7B
— Rep. Pramila Jayapal (@RepJayapal) September 8, 2022
ಸೀಟಲ್ನಲ್ಲಿರುವ ಅವರ ಮನೆಯ ಎದುರು ಪಿಸ್ತೂಲ್ನೊಂದಿಗೆ ವ್ಯಕ್ತಿಯೊಬ್ಬ ಕಾಣಿಸಿಕೊಂಡಿದ್ದ. ನಂತರ ಪೊಲೀಸರು ಅವನನ್ನು ಬಂಧಿಸಿದ್ದರು. ಇದು ಒಂದು ತಿಂಗಳಲ್ಲಿ ಅಮೆರಿಕದಲ್ಲಿ ಭಾರತ ಮೂಲದವರ ಮೇಲೆ ನಡೆಯುತ್ತಿರುವ ಮೂರನೇ ಜನಾಂಗೀಯ ನಿಂದನೆ ಪ್ರಕರಣವಾಗಿದೆ.
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕಳೆದ ಆಗಸ್ಟ್ 21ರಂದು ಭಾರತ ಮೂಲದ ಕೃಷ್ಣನ್ ಜಯರಾಮನ್ ಎನ್ನುವವರ ಮೇಲೆ ಇದೇ ರೀತಿಯ ಜನಾಂಗೀಯ ನಿಂದನೆ, ದಾಳಿ ನಡೆದಿತ್ತು. ಈ ಘಟನೆಯಾದ ಒಂದು ದಿನದ ನಂತರ ಅಮೆರಿಕದ ಡಲ್ಲಾಸ್ ನಗರದಲ್ಲಿ ಭಾರತ ಮೂಲದ ಮಹಿಳೆಯ ಮೇಲೆ ಜನಾಂಗೀಯ ನಿಂದನೆ ವರದಿಯಾಗಿತ್ತು.
ಇದನ್ನೂ ಓದಿ: Racial Abuse: ಅಮೆರಿಕದಲ್ಲಿ ಮತ್ತೆ ಭಾರತೀಯನ ಜನಾಂಗೀಯ ನಿಂದನೆ, ಕೊಳಕ ಹಿಂದೂ ಪದ ಬಳಕೆಗೆ ವ್ಯಾಪಕ ಆಕ್ರೋಶ