Ukraine Crisis | ಉಕ್ರೇನ್‌ನಲ್ಲಿ ವಾಸವಿದ್ದ ಹಲವು ಭಾರತೀಯರು, ವಿದ್ಯಾರ್ಥಿಗಳು ರಷ್ಯಾ ದಾಳಿಯಿಂದ (Russia Ukraine War) ಸಮಸ್ಯೆಗಳಲ್ಲಿ ಸಿಲುಕಿಕೊಂಡಿದ್ದಾರೆ. ಸದ್ಯ ಸುರಕ್ಷಿತ ಪ್ರದೇಶಗಳಲ್ಲಿ, ಬಂಕರ್ಗಳಲ್ಲಿ ಆಶ್ರಯ ಪಡೆಯುತ್ತಿರುವ ಅವರು, ಸಹಾಯಕ್ಕಾಗಿ ಮನವಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಇಂದು ಯುದ್ಧ ಪೀಡಿತ ಪೂರ್ವ ಉಕ್ರೇನ್‌ನಲ್ಲಿ ಸಿಲುಕಿ, ಸಂಕಷ್ಟದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ವೀಡಿಯೊವೊಂದನ್ನು ಟ್ವೀಟ್ ಮಾಡಿದ್ದಾರೆ. ಆ ವಿದ್ಯಾರ್ಥಿಗಳನ್ನು ತಕ್ಷಣ ಭಾರತಕ್ಕೆ ಸ್ಥಳಾಂತರ ಮಾಡಲು ಸಹಾಯ ಮಾಡುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬಂಕರ್‌ನಲ್ಲಿ ಅಡಗಿಕೊಂಡಿರುವ ವಿದ್ಯಾರ್ಥಿಗಳು ವಿಡಿಯೋ ಸಂದೇಶದ ಮೂಲಕ ಭಾರತೀಯ ರಾಯಭಾರ ಕಚೇರಿಗೆ ಮನವಿ ಮಾಡಿದ್ದಾರೆ. ವಿಡಿಯೋದಲ್ಲಿರುವ ಈರ್ವರೂ ವಿದ್ಯಾರ್ಥಿನಿಯರು ಬೆಂಗಳೂರು ಮೂಲದವರಾಗಿದ್ದು, ತಮಗೆ ಯಾವುದೇ ಸಹಾಯ ದೊರೆಯುತ್ತಿಲ್ಲವೆಂದೂ ತಿಳಿಸಿ, ರಕ್ಷಣೆಗೆ ಮನವಿ ಮಾಡಿದ್ದಾರೆ.
ತಮ್ಮನ್ನು ಬೆಂಗಳೂರಿನ ಮೇಘನಾ ಎಂದು ಪರಿಚಯಿಸಿಕೊಂಡಿರುವ ಯುವತಿ, ದೇಶದ ವಿವಿಧ ಭಾಗಗಳ ಭಾರತೀಯರು ಆಹಾರ, ನೀರು ಇಲ್ಲದೇ, ಉಸಿರುಗಟ್ಟಿಸುವ ವಾತಾವರಣದಲ್ಲಿ ಕಳೆದ 24 ಗಂಟೆಗಳಿಂದ ಬಂಕರ್‌ನಲ್ಲಿ ಸಿಲುಕಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ‘ನಮಗೆ ಯಾವುದೇ ವಿಶೇಷ ವಿಮಾನಗಳು ಲಭ್ಯವಾಗಿಲ್ಲ. ನಾವು ಈ ಬಂಕರ್‌ನಲ್ಲಿ ಉಳಿದುಕೊಂಡಿದ್ದೇವೆ. ಸಾಧ್ಯವಾದಷ್ಟು ಬೇಗ ಸಹಾಯ ಮಾಡಿ ಎಂದು ಅವರು ವಿನಂತಿಸಿದ್ದಾರೆ. ವಿಡಿಯೋದಲ್ಲಿ ಹಲವು ವಿದ್ಯಾರ್ಥಿಗಳು ಬಂಕರ್‌ನಲ್ಲಿ ಆಶ್ರಯ ಪಡೆದಿರುವುದು ಗೋಚರಿಸುತ್ತಿದೆ. ವಿಡಿಯೋದ ಕೊನೆಗೆ ಮೇಘನಾಳ ಸಹೋದರ ಎಂದು ಪರಿಚಯಿಸಿಕೊಂಡಿರುವ ಪುಟಾಣಿ ಬಾಲಕನೋರ್ವ ಸಹೋದರಿಯ ರಕ್ಷಣೆಗೆ ಮನವಿ ಮಾಡಿದ್ದಾನೆ.
ರಾಹುಲ್ ಗಾಂಧಿ ಹಂಚಿಕೊಂಡ ವಿಡಿಯೋ ಇಲ್ಲಿದೆ:
Visuals of Indian students in bunkers are disturbing. Many are stuck in eastern Ukraine which is under heavy attack.
My thoughts are with their worried family members. Again, I appeal to GOI to execute urgent evacuation. pic.twitter.com/alem9nYNgr
— Rahul Gandhi (@RahulGandhi) February 26, 2022
ಸರಿಯಾಗಿ ಸಮನ್ವಯ ಮಾಡದೇ ಗಡಿಗಳಿಗೆ ತೆರಳದಂತೆ ಸೂಚಿಸಿರುವ ಭಾರತ:
ಭಾರತೀಯ ರಾಯಭಾರ ಕಚೇರಿಯು ಇಂದು ಉಕ್ರೇನ್ನಲ್ಲಿರುವ ಭಾರತೀಯ ಪ್ರಜೆಗಳಿಗೆ ಅಧಿಕಾರಿಗಳೊಂದಿಗೆ ಸರಿಯಾದ ಸಮನ್ವಯವಿಲ್ಲದೇ ಗಡಿ ಭಾಗಕ್ಕೆ ತೆರಳದಂತೆ ಸೂಚಿಸಿದೆ. ಸಾವಿರಾರು ಭಾರತೀಯರು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದು, ರಕ್ಷಣೆಗೆ ಕಾಯುತ್ತಿದ್ದಾರೆ. ನೆರೆಹೊರೆಯ ರಾಯಭಾರ ಕಚೇರಿಗಳು ಅವಿರತ ಶ್ರಮವಹಿಸಿ, ವಿದ್ಯಾರ್ಥಿಗಳನ್ನು ಕರೆಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಭಾರತ ತಿಳಿಸಿದೆ.
ಉಕ್ರೇನ್‌ನಲ್ಲಿ ಸಿಲುಕಿರುವ ನಾಗರಿಕರನ್ನು ಸ್ಥಳಾಂತರಿಸಲು ಭಾರತವು ಹಂಗೇರಿ ಮತ್ತು ಪೋಲೆಂಡ್‌ನಿಂದ ಉಕ್ರೇನ್‌ನ ಗಡಿಗಳಿಗೆ ತಂಡಗಳನ್ನು ಕಳುಹಿಸಿದೆ. ರಷ್ಯಾದ ಸೇನೆಯ ದಾಳಿಯ ನಡುವೆ ಉಕ್ರೇನಿಯನ್ ವಾಯುಪ್ರದೇಶವನ್ನು ಮುಚ್ಚಿರುವುದರಿಂದ ಅಧಿಕಾರಿಗಳು ಭೂ ಮಾರ್ಗದ ಮೂಲಕ ಪ್ರಯಾಣಿಸುತ್ತಿದ್ದಾರೆ.
ಕರ್ನಾಟಕ ವಿದ್ಯಾರ್ಥಿಗಳ ಮಾಹಿತಿ ಇಲ್ಲಿ ಲಭ್ಯವಿದೆ:
ಉಕ್ರೇನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳ ಹಾಗೂ ಕನ್ನಡಿಗರ ಬಗ್ಗೆ ಮಾಹಿತಿಗೆ ವೆಬ್ ಪೋರ್ಟಲ್ ಸ್ಥಾಪನೆ ಮಾಡಲಾಗಿದೆ. KSDMA ಮಾಹಿತಿಗಾಗಿ ವೆಬ್ ಪೋರ್ಟಲ್ ಸ್ಥಾಪಿಸಿದೆ. ಉಕ್ರೇನಲ್ಲಿ ಸಿಲುಕಿದವರ ವಿವರ, ವಿದೇಶಾಂಗ ಇಲಾಖೆ, ಭಾರತ ಸರ್ಕಾರದ ವೆಬ್ಸೈಟ್ನಿಂದ ಸಂಗ್ರಹಿಸಿದ ಮಾಹಿತಿ, ಹೆಲ್ಪ್ಲೈನ್, ಇ-ಮೇಲ್, ಮಾರ್ಗಸೂಚಿ ಮಾಹಿತಿ, ಎಲ್ಲಾ ಮಾಹಿತಿಗಳನ್ನು ಹೊಂದಿರುವ ವೆಬ್ ಪೋರ್ಟಲ್ ಸ್ಥಾಪಿಸಲಾಗಿದೆ.
ವೆಬ್ ಪೋರ್ಟಲ್ ಲಿಂಕ್: http://Ukraine.Karnataka.tech
ಇದನ್ನೂ ಓದಿ:
ನಾವಿರುವ ಕಟ್ಟಡದ ಬಳಿಯೇ ಬಾಂಬ್ ಹಾಕುತ್ತಿದ್ದಾರೆ; ಉಕ್ರೇನ್ನಲ್ಲಿರುವ ಬಾಗಲಕೋಟೆ ವಿದ್ಯಾರ್ಥಿಯಿಂದ ವಾಟ್ಸಾಪ್ ಸಂದೇಶ