ಸತ್ತರೂ ಸರಿ ಭಾರತಕ್ಕೆ ಬರಲ್ಲ: ವಿದ್ಯಾಭ್ಯಾಸಕ್ಕೆ ಅವಕಾಶ ನಿರಾಕರಿಸಿದ ಭಾರತ ಸರ್ಕಾರದ ನಡೆ ವಿರೋಧಿಸಿ ಉಕ್ರೇನ್​ನಲ್ಲೇ ಉಳಿದ ವೈದ್ಯಕೀಯ ವಿದ್ಯಾರ್ಥಿಗಳು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 27, 2022 | 11:19 AM

‘ಒಂದು ವೇಳೆ ಶವಪೆಟ್ಟಿಗೆಗಳಲ್ಲಿ ನಮ್ಮ ದೇಹಗಳು ಭಾರತ ತಲುಪಬೇಕಾದ ಪರಿಸ್ಥಿತಿ ಬಂದರೂ ಸರಿ, ನಾವು ಮಾತ್ರ ಓದು ನಿಲ್ಲಿಸಿ ಭಾರತಕ್ಕೆ ಹಿಂದಿರುಗುವುದಿಲ್ಲ’ ಎಂದು ವಿದ್ಯಾರ್ಥಿಗಳು ಭಾರತ ಸರ್ಕಾರದ ಎಚ್ಚರಿಕೆಯನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ.

ಸತ್ತರೂ ಸರಿ ಭಾರತಕ್ಕೆ ಬರಲ್ಲ: ವಿದ್ಯಾಭ್ಯಾಸಕ್ಕೆ ಅವಕಾಶ ನಿರಾಕರಿಸಿದ ಭಾರತ ಸರ್ಕಾರದ ನಡೆ ವಿರೋಧಿಸಿ ಉಕ್ರೇನ್​ನಲ್ಲೇ ಉಳಿದ ವೈದ್ಯಕೀಯ ವಿದ್ಯಾರ್ಥಿಗಳು
ದೆಹಲಿಯಲ್ಲಿ ಉಕ್ರೇನ್​ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ (ಸಂಗ್ರಹ ಚಿತ್ರ)
Follow us on

ಕೀವ್: ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ಹಿಂದಿರುಗಲು ಒಪ್ಪುತ್ತಿಲ್ಲ. ಉಕ್ರೇನ್​ನಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ (Russia Ukraine War) ಬಿಗಡಾಯಿಸುತ್ತಿದ್ದು, ಯಾವುದೇ ಕ್ಷಣದಲ್ಲಿ ಯುದ್ಧವು ತೀವ್ರಗೊಳ್ಳುವ ಅಪಾಯ ಎದುರಾಗಿದೆ. ಈ ಹಿನ್ನೆಲೆಯಲ್ಲಿಯೇ ಭಾರತ ಸರ್ಕಾರವು, ‘ತಕ್ಷಣ ಉಕ್ರೇನ್​ನಿಂದ ಹೊರಡಿ. ಇಂತಿಂಥ ಮಾರ್ಗಗಳ ಮೂಲಕ ನೆರೆ ದೇಶಗಳನ್ನು ತಲುಪಿಕೊಳ್ಳಿ. ಭಾರತಕ್ಕೆ ಕರೆತರಲು ವ್ಯವಸ್ಥೆ ಮಾಡುತ್ತೇವೆ’ ಎಂದು ಭಾರತ ಸರ್ಕಾರವು ಎಚ್ಚರಿಕೆಯ ಸಂದೇಶ ರವಾನಿಸಿದೆ. ಆದರೆ ಅಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಲು ಒಪ್ಪುತ್ತಿಲ್ಲ. ‘ಒಂದು ವೇಳೆ ಶವಪೆಟ್ಟಿಗೆಗಳಲ್ಲಿ ನಮ್ಮ ದೇಹಗಳು ಭಾರತ ತಲುಪಬೇಕಾದ ಪರಿಸ್ಥಿತಿ ಬಂದರೂ ಸರಿ, ನಾವು ಮಾತ್ರ ಓದು ನಿಲ್ಲಿಸಿ ಭಾರತಕ್ಕೆ ಹಿಂದಿರುಗುವುದಿಲ್ಲ’ ಎಂದು ವಿದ್ಯಾರ್ಥಿಗಳು ಭಾರತ ಸರ್ಕಾರದ ಎಚ್ಚರಿಕೆಯನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ.

‘ಭಾರತದಲ್ಲಿರುವ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ನಮ್ಮ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ. ಹಿಂದೊಮ್ಮೆ ಉಕ್ರೇನ್​ನಿಂದ ಹೊರಗೆ ಹೋಗಿದ್ದ ನಾವು ಭಾರತ ಸರ್ಕಾರದ ಕಠಿಣ ನಿಲುವಿನಿಂದಾಗಿ ತುಂಬಾ ಕಷ್ಟ ಅನುಭವಿಸಿ ಮತ್ತೆ ಇಲ್ಲಿಗೆ ಬಂದಿದ್ದೇವೆ. ಶವಪೆಟ್ಟಿಗೆಗಳಲ್ಲಿ ನಮ್ಮ ದೇಹಗಳು ಭಾರತಕ್ಕೆ ಹಿಂದಿರುಗಬೇಕಾದ ಪರಿಸ್ಥಿತಿ ಎದುರಾದರೂ ಸರಿ, ನಾವು ಮಾತ್ರ ಭಾರತಕ್ಕೆ ಮರಳುವುದಿಲ್ಲ’ ಎಂದು ಉಕ್ರೇನ್​ನಲ್ಲಿ ಸಿಲುಕಿರುವ ವಿದ್ಯಾರ್ಥಿ ಶರ್ಮಾ ಎನ್ನುವವರು ಹೇಳಿದ್ದಾರೆ.

‘ಭಾರತದ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿಯೂ ನಮಗೆ ಅವಕಾಶ ಸಿಗುತ್ತಿಲ್ಲ. ಮತ್ತೊಂದೆಡೆ ಆನ್​ಲೈನ್ ತರಗತಿಗಳ ಮೂಲಕ ಪಡೆದುಕೊಳ್ಳುವ ಸರ್ಟಿಫಿಕೇಟ್​ಗಳಿಗೆ ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಭಾರತದ ರಾಷ್ಟ್ರೀಯ ವೈದ್ಯಕೀಯ ಆಯೋಗವು (National Medical Commission – NMC) ಸ್ಪಷ್ಟಪಡಿಸಿದೆ. ಇದೇ ಆಯೋಗವು ಭಾರತದಲ್ಲಿ ವೈದ್ಯಕೀಯ ಶಿಕ್ಷಣವನ್ನು ನಿರ್ವಹಿಸುತ್ತಿದೆ. ಹೀಗಾಗಿಯೇ ಭಾರತ ಮೂಲದ ವಿದ್ಯಾರ್ಥಿಗಳು ಉಕ್ರೇನ್​ನಲ್ಲಿಯೇ ಆಫ್​ಲೈನ್ ವಿದ್ಯಾಭ್ಯಾಸ ಮುಂದುವರಿಸಲು ಮುಂದಾಗಿದ್ದಾರೆ. ಭಾರತದಿಂದ ಉಕ್ರೇನ್ ತಲುಪಲು ನಮಗೆ ₹ 70 ಸಾವಿರ ಖರ್ಚಾಗಿದೆ. ಉಳಿದ ಸಂದರ್ಭದಲ್ಲಿ ಇದರ ಅರ್ಧದಷ್ಟು ಮಾತ್ರವೇ ಖರ್ಚಾಗುತ್ತಿತ್ತು’ ಎಂದು ಅವರು ವಿವರಿಸಿದ್ದಾರೆ.

ಉತ್ತರಾಖಂಡದಿಂದ ಉಕ್ರೇನ್​ಗೆ ಬಂದಿರುವ ಮತ್ತೋರ್ವ ವೈದ್ಯಕೀಯ ವಿದ್ಯಾರ್ಥಿ ಆಶೀಷ್ ನೌಟಿಯಾಲ್ ಮಾತನಾಡಿ, ‘ನಾವು ನವೆಂಬರ್ 1 ಬರಲಿ ಎಂದು ಕಾಯುತ್ತಿದ್ದೇವೆ. ಆನ್​ಲೈನ್ ಮಾಧ್ಯಮದಲ್ಲಿ ವೈದ್ಯಕೀಯ ವಿದ್ಯಾಭ್ಯಾಸದ ಔಚಿತ್ಯದ ಬಗ್ಗೆ ಕೆಲ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್​ ನ 1ರಿಂದ ಆರಂಭಿಸಲಿದೆ’ ಎಂದು ತಿಳಿಸಿದರು.

ಇದನ್ನೂ ಓದಿ: Russia-Ukraine War: ತಕ್ಷಣ ಉಕ್ರೇನ್ ಬಿಟ್ಟು ಹೊರಡಿ; ಭಾರತೀಯ ಪ್ರಜೆಗಳಿಗೆ ಮತ್ತೆ ರಾಯಭಾರ ಕಚೇರಿ ಸೂಚನೆ

Published On - 11:18 am, Thu, 27 October 22