ಜಕಾರ್ತಾ: ಮಹಾಮಾರಿ ಕೊರೊನಾಗೆ ಭಯ ಪಡದ ದೇಶವೇ ಇಲ್ಲ. ಅಷ್ಟರ ಮಟ್ಟಿಗೆ ಈ ಕಿಲ್ಲರ್ ಕೊರೊನಾ ಇಡೀ ವಿಶ್ವವನ್ನೇ ತನ್ನ ಕಪಿಮುಷ್ಟಿಯಲ್ಲಿ ಬಂಧಿಸಿ ಹಿಂಸಿಸುತ್ತಿದೆ. ಅದೇ ರೀತಿ ಇಲ್ಲೊಂದು ಕಡೆ ಜನ ಮಹಾಮಾರಿಯನ್ನು ಮರೆತು ಮತ್ತಷ್ಟು ಸಂಕಷ್ಟವನ್ನು ಬರ ಮಾಡಿಕೊಳ್ಳೋದು ಬೇಡ ಅಂತಾ ಹೊಸ ಪ್ರಯತ್ನಕ್ಕೆಅಲ್ಲಿನ ಸರ್ಕಾರ ಕೈ ಹಾಕಿದೆ.
ಕೊರೊನಾ ಮರೆತರೆ ಸಾವಿಗೆ ಆಹ್ವಾನ ನೀಡಿದಂತೆ ಎಂಬ ಸಂದೇಶ
ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ ಸಾರ್ವಜನಿಕರಿಗೆ ಕೊರೊನಾ ಬಗ್ಗೆ ಅರಿವು ಮೂಡಿಸಲು ಹೊಸ ಪ್ಲಾನ್ ಮಾಡಿದ್ದಾರೆ. ಕೊರೊನಾದಿಂದ ಉಂಟಾಗುವ ಅಪಾಯದ ಬಗ್ಗೆ ಜನರಿಗೆ ಸದಾ ನೆನಪಾಗಲಿ ಎಂದು ಜಕಾರ್ತಾದಲ್ಲಿ ಅತಿ ಹೆಚ್ಚು ಜನನಿಬಿಡ ಪ್ರದೇಶಗಳಲ್ಲಿ ಖಾಲಿ ಶವ ಪೆಟ್ಟಿಗೆಗಳನ್ನು ಇಲ್ಲಿನ ಅಧಿಕಾರಿಗಳು ಇರಿಸಿದ್ದಾರೆ. ಇದರಿಂದ ಕೊರೊನಾವನ್ನು ಮರೆತರೆ ಸಾವಿಗೆ ಆಹ್ವಾನ ನೀಡಿದಂತೆ ಎಂಬ ಸಂದೇಶವನ್ನು ಸಾರಲು ಹೊರಟಿದ್ದಾರೆ.
ಜಕಾರ್ತಾ ಇಡೀ ದೇಶದಲ್ಲೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿದೆ. ಪ್ರದರ್ಶನಕ್ಕೆ ಇಟ್ಟಿರುವ ಖಾಲಿ ಶವ ಪೆಟ್ಟಿಗೆಯ ಮೇಲೆ ಅಲ್ಲಿನ ಸೋಂಕಿತರ ಸಂಖ್ಯೆ ಹಾಗೂ ಇತ್ತೀಚಿನ ಸ್ಥಳೀಯ ಜಿಲ್ಲೆಯ ಸೋಂಕು ಮತ್ತು ಸಾವಿನ ಪ್ರಮಾಣವನ್ನು ಬಿಂಬಿಸಲಾಗಿದೆ. ಶವ ಪೆಟ್ಟಿಗೆ ಮುಂದೆ ಪಿಪಿಟಿ ಕಿಟ್, ಫೇಸ್ ಶೀಟ್ ಧರಿಸಿರುವ ಗೊಂಬೆಯನ್ನು ಸಹ ಇರಿಸಲಾಗಿದೆ.