ಇಸ್ರೇಲ್: ರಾಜಕೀಯದ ಗೊಂದಲಕ್ಕೆ ಮೈತ್ರಿಯ ಮುಲಾಮು, ಸರ್ಕಾರದ ಭಾಗವಾದ ಅರಬ್ ಪಕ್ಷ

ಇದೀಗ ಇಸ್ರೇಲ್​ನಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರವು ವೈವಿಧ್ಯಮಯ ಸಿದ್ಧಾಂತಗಳನ್ನು ಹೊಂದಿರುವ ಹಲವು ರಾಜಕೀಯ ಪಕ್ಷಗಳ ಮೈತ್ರಿಯಿಂದ ಸ್ಥಾಪನೆಯಾಗಿದೆ. ಬಲಪಂಥೀಯ, ಎಡಪಂಥೀಯ ಮತ್ತು ನಡುಪಂಥೀಯ ವಿಚಾರಧಾರೆಯ ನಾಯಕರ ಜೊತೆಗೆ ಅರಬ್​ ಪಕ್ಷಕ್ಕೆ ಸೇರಿದ ಸದಸ್ಯರೊಬ್ಬರು ಸರ್ಕಾರದ ಭಾಗವಾಗಿದ್ದಾರೆ.

ಇಸ್ರೇಲ್: ರಾಜಕೀಯದ ಗೊಂದಲಕ್ಕೆ ಮೈತ್ರಿಯ ಮುಲಾಮು, ಸರ್ಕಾರದ ಭಾಗವಾದ ಅರಬ್ ಪಕ್ಷ
ಇಸ್ರೇಲ್ ನೂತನ ಪ್ರಧಾನಿ ನಫ್ತಾಲಿ ಬೆನೆಟ್

ಜೆರುಸಲೇಂ: ಇಸ್ರೇಲ್​ ಸಂಸತ್ತಿನಲ್ಲಿ ಭಾನುವಾರ ನಡೆದ ವಿಶ್ವಾಸಮತ ಯಾಚನೆಯು ಹೊಸ ಸರ್ಕಾರದ ಭವಿಷ್ಯ ನಿರ್ಧರಿಸಿತು. ಸತತ 12 ವರ್ಷಗಳ ಸುದೀರ್ಘ ಆಡಳಿತದ ನಂತರ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಧಿಕಾರದಿಂದ ಕೆಳಗಿಳಿದರು. ಇದೀಗ ಇಸ್ರೇಲ್​ನಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರವು ವೈವಿಧ್ಯಮಯ ಸಿದ್ಧಾಂತಗಳನ್ನು ಹೊಂದಿರುವ ಹಲವು ರಾಜಕೀಯ ಪಕ್ಷಗಳ ಮೈತ್ರಿಯಿಂದ ಸ್ಥಾಪನೆಯಾಗಿದೆ. ಬಲಪಂಥೀಯ, ಎಡಪಂಥೀಯ ಮತ್ತು ನಡುಪಂಥೀಯ ವಿಚಾರಧಾರೆಯ ನಾಯಕರ ಜೊತೆಗೆ ಅರಬ್​ ಪಕ್ಷಕ್ಕೆ ಸೇರಿದ ಸದಸ್ಯರೊಬ್ಬರು ಸರ್ಕಾರದ ಭಾಗವಾಗಿದ್ದಾರೆ.

120 ಸದಸ್ಯ ಬಲದ ಇಸ್ರೇಲ್ ಸಂಸತ್ತಿನಲ್ಲಿ ಹೊಸ ಸರ್ಕಾರವು ಕೇವಲ 61 ಸದಸ್ಯರೊಂದಿಗೆ ಅಧಿಕಾರಕ್ಕೆ ಬಂದಿದೆ. ಭಾನುವಾರ ಸಂಜೆ 4 ಗಂಟೆಗೆ ಅಧಿವೇಶನ ಆರಂಭವಾಯಿತು. ಬಲಪಂಥೀಯ ರಾಜಕೀಯ ಪಕ್ಷ ಯಾಮಿನಾ ಪಾರ್ಟಿಯ ನಾಯಕ, ಬೆಂಜಮಿನ್ ನೆತನ್ಯಾಹು ಅವರ ಬಹುಕಾಲದ ಅನುಯಾಯಿಯಾಗಿದ್ದ ನಫ್ಟಾಲಿ ಬೆನೆಟ್ ಮುಂದಿನ ಪ್ರಧಾನಿಯಾಗಿದ್ದಾರೆ. ಇದೀಗ 71ರ ಹರೆಯಲ್ಲಿರುವ ನೆತನ್ಯಾಹು ಕಳೆದ 12 ವರ್ಷಗಳಿಂದ ಅಧಿಕಾರದಲ್ಲಿದ್ದರು. ಇಸ್ರೇಲ್​ನಲ್ಲಿ ಸುದೀರ್ಘ ಅವಧಿ ಆಡಳಿತ ನಡೆಸಿದ ಪ್ರಧಾನಿ ಎಂಬ ಶ್ರೇಯ ನೆತನ್ಯಾಹು ಅವರಿಗೆ ಸಲ್ಲುತ್ತದೆ.

1996ರಿಂದ 1999ರ ಅವಧಿಯಲ್ಲಿಯೂ ನೆತನ್ಯಾಹು ಅಧಿಕಾರದಲ್ಲಿದ್ದರು. ಸುದೀರ್ಘ ಅವಧಿ ಅಧಿಕಾರದಲ್ಲಿದ್ದ ದಾಖಲೆ ಈ ಮೊದಲು ಇಸ್ರೇಲ್​ನ ಪಿತಾಮಹ ಡೇವಿಡ್ ಬೆನ್-ಗುರಿಯನ್ ಹೆಸರಿನಲ್ಲಿತ್ತು. ಕಳೆದ ವರ್ಷ ಈ ದಾಖಲೆಯನ್ನು ನೆತನ್ಯಾಹು ಮುರಿದರು. ಎರಡು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ನಾಲ್ಕು ಚುನಾವಣೆಗಳನ್ನು ಕಂಡ ಇಸ್ರೇಲ್​ನ ಗೊಂದಲದ ರಾಜಕಾರಣವು ವಿಶ್ವಾಸಮತ ಯಾಚನೆಯ ನಂತರ ಕೆಲಕಾಲವಾದರೂ ತಣ್ಣಗಾಗಲಿದೆ ಎಂಬ ನಿರೀಕ್ಷೆಯನ್ನು ಅಲ್ಲಿನ ಜನರು ಇಟ್ಟುಕೊಂಡಿದ್ದಾರೆ.

ಈ ಮೈತ್ರಿಯಲ್ಲಿರುವ ಹಲವು ನಾಯಕರಿಗೆ ಎಷ್ಟೋ ವಿಚಾರಗಳಲ್ಲಿ ಭಿನ್ನಮತವಿದೆ. ಹೀಗಾಗಿ ಎಂಟು ರಾಜಕೀಯ ಪಕ್ಷಗಳ ಕೂಡಾವಳಿಯಿಂದ ಅಧಿಕಾರಕ್ಕೆ ಬಂದಿರುವ ಈ ಸರ್ಕಾರವು ಬಹುಕಾಲ ಬಾಳಬಹುದು ಎಂದು ಅಲ್ಲಿನ ಜನರು ಅಂದುಕೊಳ್ಳುತ್ತಿಲ್ಲ. ಇದೀಗ 49ರ ಹರೆಯದಲ್ಲಿರುವ ಬೆನೆಟ್, ಯೆಶ್ ಅಟಿದ್ ಪಕ್ಷದ ನಡುಪಂಥೀಯ ನಾಯಕ ಯಾಸಿರ್ ಲಪಿಡ್ ಅವರೊಂದಿಗೆ ಮೈತ್ರಿ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಮೈತ್ರಿ ಮುಂದುವರೆದು 2023ರ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿದ್ದಾರೆ. 30 ಸ್ಥಾನಗಳೊಂದಿಗೆ ಇಸ್ರೇಲ್ ಸಂಸತ್ತಿನ ಅತಿದೊಡ್ಡ ರಾಜಕೀಯ ಪಕ್ಷ ಎನಿಸಿದ ಲಿಕುಡ್ ಪಕ್ಷದ ನಾಯಕ ನೆತನ್ಯಾಹು ಸಂಸದರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ವಿಫಲರಾದ ನಂತರ 17 ಸ್ಥಾನಗಳೊಂದಿಗೆ 2ನೇ ಅತಿದೊಡ್ಡ ಪಕ್ಷದ ನಾಯಕ ಲಪಿಡ್ ಅವರಿಗೆ ಅಧ್ಯಕ್ಷ ರುವೆನ್ ರಿವ್ಲಿನ್ ಸರ್ಕಾರ ರಚಿಸಲು ಆಹ್ವಾನ ನೀಡಿದ್ದರು.

ನೆತನ್ಯಾಹು ಅವರನ್ನು ಅಧಿಕಾರದಿಂದ ದೂರ ಇಡಬೇಕೆನ್ನುವ ಉದ್ದೇಶವೇ ಮುಖ್ಯವಾಗಿ ಇದೀಗ ಪ್ರಬಲ ವಿರೋಧಿಗಳೆಲ್ಲಾ ಒಂದೆಡೆ ಸೇರಿ ಮೈತ್ರಿಮಾಡಿಕೊಂಡಿದ್ದಾರೆ. ಇಸ್ರೇಲ್​ನಲ್ಲಿ ‘ಡಿವೈಡರ್ ಇನ್ ಚೀಫ್’ ಎಂದು ಕುಖ್ಯಾತಿ ಪಡೆದಿರುವ ನೆತನ್ಯಾಹು ತಮ್ಮ ಈವರೆಗಿನ ಇಮೇಜ್​ಗೆ ವ್ಯತಿರಿಕ್ತವಾಗಿ ಹಲವು ಪಕ್ಷಗಳನ್ನು ಒಗ್ಗೂಡಿಸಿ, ಯಾರೊಬ್ಬರೂ ಯೋಚಿಸಲೂ ಸಾಧ್ಯವಿಲ್ಲದ ರೀತಿಯಲ್ಲಿ ಮೈತ್ರಿ ರಾಜಕಾರಣ ಆರಂಭಿಸಿದರು.

ಹೊಸ ಮೈತ್ರಿ ಸರ್ಕಾರವು ಬಹುಕಾಲ ಬಾಳುವುದಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ನೆತನ್ಯಾಹು ಮತ್ತೆ ಮುಂಚೂಣಿಗೆ ಬಂದು ರಾಜಕೀಯ ಆಟಗಳನ್ನು ಆಡಬಹುದು. ಹೊಸ ಮೈತ್ರಿಕೂಟದಲ್ಲಿರುವ ಕಟ್ಟರ್ ಬಲಪಂಥೀಯ ಪಕ್ಷಗಳು ತಮ್ಮನ್ನು ಅಧಿಕಾರಕ್ಕೆ ತಂದ ಕ್ಷೇತ್ರಗಳ ಮತದಾರರ ಆಶಯಕ್ಕೆ ವಿರುದ್ಧವಾಗಿ ಈಗ ಮೈತ್ರಿ ಮಾಡಿಕೊಂಡಿವೆ. ಮುಂದಿನ ದಿನಗಳಲ್ಲಿ ಅವರ ಕ್ಷೇತ್ರಗಳಲ್ಲಿ ವಿರೋಧ ಹೆಚ್ಚಾದರೆ ಈ ಪಕ್ಷಗಳು ಮೈತ್ರಿಯ ಬದ್ಧತೆ ಮುಂದುವರಿಸುವುದು ಕಷ್ಟ.

ಇಸ್ರೇಲ್​ನ ಅರ್ಧಕ್ಕೂ ಹೆಚ್ಚು, ಅಂದರೆ ಮೂರನೇ ಎರಡರಷ್ಟು ಜನರು ನೆತನ್ಯಾಹು ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು ತಪ್ಪು ಎನ್ನುತ್ತಿದ್ದಾರೆ. ನೆತನ್ಯಾಹು ಅವರೊಂದಿಗೆ ಬಹುಕಾಲದ ಸಹಜ ಮಿತ್ರರಾಗಿದ್ದ ಹಲವರು ನೆತನ್ಯಾಹು ಅವರಿಂದ ದೂರ ಸರಿಯಲು ಜನಾಭಿಪ್ರಾಯದ ಬಲವೂ ಇರುವುದು ಸುಳ್ಳಲ್ಲ. ಸಿದ್ಧಾಂತಗಳಿಗಿಂತಲೂ ವೈಯಕ್ತಿಕ ಕಾರಣಗಳಿಂದಾಗಿ ಕಟ್ಟಾ ಬೆಂಬಲಿಗರು ಇದೀಗ ನೆತನ್ಯಾಹು ವಿರುದ್ಧ ನಿಂತಿದ್ದಾರೆ. ಹೊಸ ಮೈತ್ರಿ ಸರ್ಕಾರ ರಚಿಸಲೆಂದು ಒಗ್ಗೂಡಿರುವವರಲ್ಲಿ ಇಂಥವರ ಸಂಖ್ಯೆಯೇ ಹೆಚ್ಚು. ಏಪ್ರಿಲ್ 2019ರ ನಂತರ ದೇಶದಲ್ಲಿ ನಾಲ್ಕು ಸಾರ್ವತ್ರಿಕ ಚುನಾವಣೆಗಳು ನಡೆದಿವೆ. ಪ್ರತಿಬಾರಿಯೂ ಬಲಪಂಥೀಯ ಪಕ್ಷಗಳಿಗೇ ಹೆಚ್ಚು ಸ್ಥಾನ ಸಿಕ್ಕಿದೆ.

ನೆತನ್ಯಾಹು ಅವರು ಆಡಳಿತಾರೂಢ ಲಿಕುಡ್ ಪಕ್ಷವು ಅವರನ್ನು ಬದಿಗಿಡುವುದಾಗಿ ಮೊದಲೇ ಘೋಷಿಸಿದ್ದರೆ ಚುನಾವಣೆಯಲ್ಲಿ ಮೊದಲಿನಷ್ಟು ಮತಗಳನ್ನು ಪಡೆಯುವುದು ಅಷ್ಟು ಸುಲಭವಾಗಿರಲಿಲ್ಲ. ಅಧಿಕಾರ ಕೈತಪ್ಪುವುದು ಖಚಿತವಾಗುತ್ತಿರುವಂತೆಯೇ ಪಕ್ಷದಲ್ಲಿ ಅಸಮಾಧಾನ ತುಸುತುಸುವೇ ಹೊಗೆಯಾಡಲು ಆರಂಭಿಸಿತು. ಇಸ್ರೇಲ್​ನಲ್ಲಿ ನೆತನ್ಯಾಹು ಬಹುಕಾಲ ಪ್ರಶ್ನಾತೀತ ನಾಯಕರಾಗಿದ್ದರು. ತಮ್ಮ ಮಾತಿಗೆ ಎದುರು ಹೇಳುವ ನಾಯಕನೇ ಇಲ್ಲ ಎನ್ನುವಂಥ ಪರಿಸ್ಥಿತಿಯಲ್ಲಿ ತಮ್ಮ ನಿರ್ಧಾರ ವಿರೋಧಿಸಿದವರೆಲ್ಲರನ್ನೂ ನೆತನ್ಯಾಹು ದೂರು ಇಟ್ಟಿದ್ದರು. ಅಭಿಪ್ರಾಯಭೇದ ತೋರಿಸಿದವರಿಗೆ ಎಡಪಂಥೀಯರು ಎಂಬ ಹಣೆಪಟ್ಟಿ ಕಟ್ಟಿ, ಕಳಂಕ ಹೇರುವುದು ಅವರ ಚಾಳಿ.

ತಮ್ಮ ವೈಯಕ್ತಿಕ ರಾಜಕೀಯ ಲಾಭಕ್ಕಾಗಿ ಇಸ್ರೇಲ್ ಸಮಾಜದಲ್ಲಿದ್ದ ಸಣ್ಣಪುಟ್ಟ ಬಿರುಕುಗಳನ್ನು ದೊಡ್ಡದಾಗಿಸಿ ಸಮಾಜದ ಒಂದು ವರ್ಗವನ್ನು ಮತ್ತೊಂದು ವರ್ಗದ ಮೇಲೆ ಎತ್ತಿಕಟ್ಟುತ್ತಿದ್ದರು. ಇದೀಗ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದರೂ ನೆತನ್ಯಾಹು ಇಸ್ರೇಲ್​ನ ರಾಜಕೀಯದಲ್ಲಿ ಪ್ರಮುಖ ಹೆಸರಾಗಿಯೇ ಇರುತ್ತಾರೆ. ಬಲಪಂಥೀಯ ಲಿಕುಡ್ ರಾಜಕೀಯ ಪಕ್ಷದ ಮುಖ್ಯಸ್ಥರಾಗಿ ಮತ್ತು ವಿರೋಧ ಪಕ್ಷದ ನಾಯಕರಾಗಿ ಮುಂದುವರಿಯುತ್ತಾರೆ. ಹೊಸ ಮೈತ್ರಿ ಸರ್ಕಾರವು ನೆತನ್ಯಾಹುಗೆ ಇಷ್ಟವಾಗಿಲ್ಲ. ಅವರು ಇದನ್ನು ಅಪಾಯಕಾರಿ ಮೈತ್ರಿ, ವಿಶ್ವಾಸಘಾತುಕ ಶರಣಾಗತಿ ಎಂದು ವಿಶ್ಲೇಷಿಸಿದ್ದಾರೆ. ಸಾಧ್ಯವಾದಷ್ಟೂ ಬೇಗ ಈ ಸರ್ಕಾರವನ್ನು ಕಿತ್ತೊಗೆಯುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ.

ಬೆನೆಟ್​ರ ಯಾಮಿನಾ ಪಾರ್ಟಿಗೆ ಕಳೆದ ಚುನಾವಣೆಯಲ್ಲಿ ಕೇವಲ 7 ಸ್ಥಾನಗಳು ಬಂದಿದ್ದವು. ಈ ಪಕ್ಷದ ಓರ್ವ ಸದಸ್ಯ ಸರ್ಕಾರದ ವಿರುದ್ಧ ಮತ ಹಾಕುವುದಾಗಿ ಘೋಷಿಸಿದ್ದರು. ಹೀಗಾಗಿ ಮೈತ್ರಿಪಕ್ಷಗಳ ಸದಸ್ಯ ಬಲವು 61ಕ್ಕೆ ಇಳಿದಿದೆ.

ಅಧಿಕಾರಕ್ಕೆ ಬರಲು 61 ಸದಸ್ಯ ಬಲ ಬೇಕಿತ್ತು. ಈ ಮ್ಯಾಜಿಕ್ ನಂಬರ್​ ಸಾಧಿಸಲು ಎಂಟು ಪಕ್ಷಗಳು ಕಳೆದ ಜೂನ್ 2ರಂದು ಒಪ್ಪಂದ ಮಾಡಿಕೊಂಡವು. ರಾಷ್ಟ್ರಪತಿ ನೀಡಿದ್ದ ಗಡುವಿಗೆ ಅರ್ಧಗಂಟೆ ಮೊದಲು ಈ ನಾಯಕರು ಮೈತ್ರಿ ಒಪ್ಪಂದಕ್ಕೆ ಸಹಿಹಾಕಿದ್ದರು. 1948ರಲ್ಲಿ ಸ್ವಾತಂತ್ರ್ಯ ಪಡೆದ ಇಸ್ರೇಲ್​ನ ಇತಿಹಾಸದಲ್ಲಿ ಇಂಥ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿರಲಿಲ್ಲ. ಈ ಮೈತ್ರಿಯಲ್ಲಿ ಹಲವು ರಾಜಕೀಯ ಪಕ್ಷಗಳು ತೀವ್ರ ಅಭಿಪ್ರಾಯಭೇದ ಹೊಂದಿವೆ. ಸ್ವತಂತ್ರ ಅರಬ್ ಪಕ್ಷವು ಸರ್ಕಾರದ ಭಾಗವಾಗಿರುವುದು ಈ ಮೈತ್ರಿಯ ಬಹುಚರ್ಚಿತ ವಿಷಯ.

ಈ ಮೈತ್ರಿಯ ನಾಯಕರು ಹಲವು ಪ್ರಮುಖ ಸಮಸ್ಯೆಗಳು ಸುದೀರ್ಘ ಅವಧಿಗೆ ಬಗೆಹರಿಯದಂತೆ ಉಳಿಯಲು ಮುಖ್ಯಕಾರಣರಾಗಿದ್ದವರು. ಉದಾಹರಣೆಗೆ ಪ್ಯಾಲಸ್ತೈನ್ ಕುರಿತು ಇಸ್ರೇಲ್​ನ ರಾಜಕೀಯ ಧೋರಣೆ. ಯಹೂದಿ ನಿವಾಸಗಳು, ಪ್ಯಾಲಸ್ತೈನ್​ ಜೊತೆಗಿನ ಮಾತುಕತೆ, ಸಲಿಂಗ ವಿವಾಹಕ್ಕೆ ಮಾನ್ಯತೆ ಮತ್ತು ವಿದೇಶಾಂಗ ಸಂಬಂಧಗಳ ವಿಚಾರದಲ್ಲಿ ಹಲವು ಗೊಂದಲಗಳು ಮೂಡಲು ಈ ನಾಯಕರೇ ಕಾರಣರಾಗಿದ್ದರು.

ಒಟ್ಟಿಗೆ ಕೆಲಸ ಮಾಡಲು ಸಾಧ್ಯವಿರುವ ನಾಲ್ಕು ಮುಖ್ಯ ವಿಷಯಗಳ ಬಗ್ಗೆ ಮಾತ್ರ ತಮ್ಮ ಸರ್ಕಾರವು ಗಮನಹರಿಸುತ್ತದೆ ಎಂದು ಬೆನೆಟ್ ಹೇಳಿದ್ದರು. ಆರ್ಥಿಕ ವಿಚಾರಗಳು, ಕೊರೊನಾ ಪಿಡುಗು ನಿರ್ವಹಣೆಯಂಥ ವಿಚಾರಗಳಿಗೆ ಆದ್ಯತೆ ನೀಡುತ್ತೇವೆ. ಯಾವ ವಿಚಾರದ ಬಗ್ಗೆ ಒಮ್ಮತ ಸಾಧ್ಯವಿಲ್ಲವೋ ಅಂಥ ವಿಚಾರಗಳನ್ನು ಸದ್ಯಕ್ಕೆ ಚರ್ಚಿಸುವುದಿಲ್ಲ ಎಂದು ಹೇಳಿದ್ದರು. ಮೈತ್ರಿಯ ಭಾಗವಾದ ಕಾರಣಕ್ಕೆ ಯಾರೊಬ್ಬರೂ ತಮ್ಮ ಸಿದ್ಧಾಂತ ಬಿಡಬೇಕಿಲ್ಲ ಎಂದು ನಿಯೋಜಿತ ಪ್ರಧಾನಿ ಈಚೆಗೆ ಹೇಳಿದ್ದರು. ಆದರೆ ಎಲ್ಲರೂ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳುವ ಪ್ರಯತ್ನವನ್ನು ಸ್ವಲ್ಪ ದಿನಗಳ ಅವಧಿಗೆ ಮುಂದೂಡಬೇಕು. ನಾವು ಯಾವ ಗುರಿಯನ್ನು ಮುಟ್ಟಲು ಸಾಧ್ಯವೋ ಅದನ್ನು ಮಾತ್ರ ಯೋಚಿಸೋಣ, ಯಾವುದು ಸಾಧ್ಯವಿಲ್ಲವೋ ಅದರ ಬಗ್ಗೆ ಜಗಳ ಮಾಡುವುದು ಬೇಡ ಎಂದು ಹೇಳಿದ್ದರು.

ಹೊಸ ಸರ್ಕಾರದಲ್ಲಿ ದಾಖಲೆ ಸಂಖ್ಯೆಯಲ್ಲಿ ಅಂದರೆ 8 ಮಹಿಳಾ ಸಚಿವರು ಇರುತ್ತಾರೆ ಎನ್ನುವುದು ಮತ್ತೊಂದು ಗಮಾನರ್ಹ ಅಂಶ. ಮೋಸ, ಲಂಚ ಮತ್ತು ನಂಬಿಕೆದ್ರೋಹ ಆರೋಪಗಳನ್ನು ನೆತನ್ಯಾಹು ಎದುರಿಸುತ್ತಿದ್ದಾರೆ. ಅವರು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವಂತಾದರೆ, ಈ ಪ್ರಕರಣಗಳ ವಿಚಾರಣೆ ವಿಚಾರದಲ್ಲಿ ಇರುವ ರಕ್ಷಣೆ (ಇಮ್ಯುನಿಟಿ) ತಪ್ಪಿಹೋಗುತ್ತದೆ.

(Israel PM Benjamin Netanyahu Quit Now Coalition govt to take over for the first time in History)

ಇದನ್ನೂ ಓದಿ: ಇಸ್ರೇಲ್​ ನೂತನ ಪ್ರಧಾನಿ ನಫ್ತಾಲಿ ಬೆನೆಟ್​​ರಿಗೆ ಅಭಿನಂದನೆ, ಮಾಜಿ ಪ್ರಧಾನಿ ಬೆಂಜಮಿನ್​ ನೆತನ್ಯಾಹೂರಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಿ ಮೋದಿ

ಇದನ್ನೂ ಓದಿ: Naftali Bennett ಇಸ್ರೇಲ್​ನ ನೂತನ ಪ್ರಧಾನಿಯಾಗಿ ನಫ್ತಾಲಿ ಬೆನೆಟ್ ಪ್ರಮಾಣ ವಚನ ಸ್ವೀಕಾರ

Published On - 5:15 pm, Mon, 14 June 21

Click on your DTH Provider to Add TV9 Kannada