ಭಾರತದಲ್ಲಿ ಕೊವಿಡ್ ವಿರುದ್ಧದ ಹೋರಾಟಕ್ಕೆ ಇಸ್ರೇಲ್ ಸಾಥ್; ತಜ್ಞರ ತಂಡವನ್ನು ಕಳಿಸಲು ತೀರ್ಮಾನಿಸಿದ ಅಲ್ಲಿನ ಸರ್ಕಾರ
ಭಾರತದಲ್ಲಿ ಕೊವಿಡ್ 19 ಕ್ಷಿಪ್ರ ತಪಾಸಣೆ ನಡೆಸಲು ಮತ್ತು ಸುಲಭವಾಗಿ ಆಮ್ಲಜನಕ ಉತ್ಪತ್ತಿ ಮಾಡುವ ಸಾಂದ್ರಕಗಳನ್ನು ಅಭಿವೃದ್ಧಿಪಡಿಸಲು ತಜ್ಞರ ತಂಡವನ್ನು ನಾವು ಕಳಿಸುತ್ತೇವೆ ಎಂದು ಇಸ್ರೇಲ್ ಹೇಳಿದೆ.
ಕೊವಿಡ್ 19 ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿರುವ ಭಾರತದ ಸಹಾಯಕ್ಕೆ ಜಗತ್ತಿನ ಹಲವು ದೇಶಗಳು ನಿಂತಿವೆ. ಕೊರೊನಾ ಮೊದಲ ಅಲೆ ಸಂದರ್ಭದಲ್ಲಿ ಭಾರತ ತಮಗೆ ಮಾಡಿದ ಸಹಾಯವನ್ನು ನೆನಪಿಸಿಕೊಂಡ ಅಮೆರಿಕ, ಕೆನಡಾ, ಯುಕೆ, ಅರಬ್ ಸಂಯುಕ್ತ ರಾಷ್ಟ್ರ ಸೇರಿ ಹಲವು ದೇಶಗಳು ಭಾರತದ ನೆರವಿಗೆ ನಿಂತಿವೆ. ಇದೀಗ ಆ ಸಾಲಿಗೆ ಇಸ್ರೇಲ್ ಕೂಡ ಸೇರಿದೆ. ಭಾರತದಲ್ಲಿ ಕೊವಿಡ್ ವಿರುದ್ಧ ಹೋರಾಟಕ್ಕೆ ಸಹಾಯವಾಗಲಿ ಎಂಬ ದೃಷ್ಟಿಯಿಂದ ಇಸ್ರೇಲ್ನಿಂದ ತಜ್ಞ ವೈದ್ಯರ ತಂಡವೊಂದು ಭಾರತಕ್ಕೆ ಆಗಮಿಸಲಿದೆ.
ಭಾರತದಲ್ಲಿ ಕೊವಿಡ್ 19 ಕ್ಷಿಪ್ರ ತಪಾಸಣೆ ನಡೆಸಲು ಮತ್ತು ಸುಲಭವಾಗಿ ಆಮ್ಲಜನಕ ಉತ್ಪತ್ತಿ ಮಾಡುವ ಸಾಂದ್ರಕಗಳನ್ನು ಅಭಿವೃದ್ಧಿಪಡಿಸಲು ತಜ್ಞರ ತಂಡವನ್ನು ನಾವು ಕಳಿಸುತ್ತೇವೆ. ಈ ಮೂಲಕ ಕೊವಿಡ್ 19 ವಿರುದ್ಧ ಭಾರತ ಮಾಡುತ್ತಿರುವ ಹೋರಾಟಕ್ಕೆ ನಾವು ನೆರವು ನೀಡುತ್ತಿದ್ದೇವೆ ಎಂದು ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ರಾನ್ ಮಲ್ಕಾ ತಿಳಿಸಿದ್ದಾರೆ.
ಕೊರೊನಾ ಸಾಂಕ್ರಾಮಿಕ ಪ್ರಾರಂಭವಾದ ದಿನಗಳಲ್ಲಿ ನಾವು ಕಷ್ಟದಲ್ಲಿದ್ದಾಗ ನಮ್ಮ ನೆರವಿಗೆ ಬಂದಿದ್ದು ಭಾರತ. ಅದು ನಮಗೆ ನೀಡಿದ ಗುರುತರ ಸಹಾಯ, ನೆರವನ್ನು ಎಂದಿಗೂ ಮರೆಯೋದಿಲ್ಲ. ಇಸ್ರೇಲ್ ಹಾಗೂ ಭಾರತದ ನಡುವೆ ಸದೃಢ ಸ್ನೇಹ-ಸಂಬಂಧವಿದೆ. ಈ ಸಂದರ್ಭದಲ್ಲಿ ನಾವೆಲ್ಲ ಒಟ್ಟಾಗಿ ಜೀವಗಳನ್ನು ರಕ್ಷಿಸಬೇಕು. ಭಾರತದ ಸಹಾಯಕ್ಕೆ ಇಸ್ರೇಲ್ ಎಂದಿಗೂ ಬದ್ಧ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ರಾಬಿ ಮಾರಾಟ ಋತುವಿನಲ್ಲಿ ಹರ್ಯಾಣ ಮತ್ತು ಪಂಜಾಬ್ನಲ್ಲಿ ಗೋಧಿ ಸಂಗ್ರಹಣೆ ಹೆಚ್ಚಳ