Istanbul Blast: ಟರ್ಕಿಯ ಇಸ್ತಾಂಬುಲ್​ನಲ್ಲಿ ಮಹಿಳಾ ಉಗ್ರರಿಂದ ಬಾಂಬ್ ಸ್ಫೋಟ; 6 ಜನ ಸಾವು, 81 ಮಂದಿಗೆ ಗಾಯ

| Updated By: ಸುಷ್ಮಾ ಚಕ್ರೆ

Updated on: Nov 14, 2022 | 8:03 AM

ಇಸ್ತಾಂಬುಲ್‌ನ ಪ್ರಸಿದ್ಧ ಇಸ್ತಿಕ್‌ಲಾಲ್ ಶಾಪಿಂಗ್ ಸ್ಟ್ರೀಟ್‌ನಲ್ಲಿ ಮಹಿಳಾ ಭಯೋತ್ಪಾದಕರು ಬಾಂಬ್ ಸ್ಫೋಟಿಸಿದ ಪರಿಣಾಮ 6 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

Istanbul Blast: ಟರ್ಕಿಯ ಇಸ್ತಾಂಬುಲ್​ನಲ್ಲಿ ಮಹಿಳಾ ಉಗ್ರರಿಂದ ಬಾಂಬ್ ಸ್ಫೋಟ; 6 ಜನ ಸಾವು, 81 ಮಂದಿಗೆ ಗಾಯ
ಇಸ್ತಾಂಬುಲ್​ನಲ್ಲಿ ಸ್ಫೋಟ ಸಂಭವಿಸಿದ ಸ್ಥಳ
Follow us on

ಟರ್ಕಿ: ಟರ್ಕಿಯ (Turkey) ಇಸ್ತಾಂಬುಲ್‌ನ ಪ್ರಸಿದ್ಧ ಇಸ್ತಿಕ್‌ಲಾಲ್ ಶಾಪಿಂಗ್ ಸ್ಟ್ರೀಟ್‌ನಲ್ಲಿ (Istiklal street) ಮಾರಣಾಂತಿಕ ಸ್ಫೋಟ ಸಂಭವಿಸಿದೆ. ಈ ದುರಂತದಲ್ಲಿ 6 ಜನರು ಸಾವನ್ನಪ್ಪಿದ್ದು, 81 ಮಂದಿ ಗಾಯಗೊಂಡಿದ್ದಾರೆ. ಇಸ್ತಿಕ್‌ಲಾಲ್ ಶಾಪಿಂಗ್ ಸ್ಟ್ರೀಟ್‌ ಯಾವಾಗಲೂ ಪ್ರವಾಸಿಗರಿಂದ ತುಂಬಿರುವ ಸ್ಥಳವಾಗಿದೆ. ಈ ಪ್ರದೇಶದಲ್ಲಿ ಮಹಿಳಾ ಭಯೋತ್ಪಾದಕರು (Female Terrorist) ಬಾಂಬ್ ಸ್ಫೋಟಿಸಿದ ಪರಿಣಾಮ 6 ಜನ ಮೃತಪಟ್ಟಿದ್ದು, ಈ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಈ ಬಾಂಬ್ ಸ್ಫೋಟ (Bomb Blast) ನಡೆದ ವಿಡಿಯೋ ಟ್ವಿಟ್ಟರ್​ನಲ್ಲಿ ವೈರಲ್ ಆಗಿದೆ.

ಇಸ್ತಾಂಬುಲ್‌ ಸ್ಫೋಟದಲ್ಲಿ ಗಾಯಗೊಂಡಿರುವ 81 ಜನರ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಈ ಸ್ಫೋಟದ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ಇದು ಭಯೋತ್ಪಾದಕ ದಾಳಿ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸದ್ಯದ ಮಾಹಿತಿ ಪ್ರಕಾರ, ಮಹಿಳಾ ದಾಳಿಕೋರರು ಈ ಬಾಂಬ್ ದಾಳಿಯನ್ನು ನಡೆಸಿದ್ದಾರೆ. ಟರ್ಕಿಯ ಉಪಾಧ್ಯಕ್ಷ ಫುವಾಟ್ ಒಕ್ಟೇ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಾ, ಮಹಿಳಾ ಭಯೋತ್ಪಾದಕರು ಶಾಪಿಂಗ್ ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟಿಸಿರುವ ಶಂಕೆ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Breaking News: ಮಾಸ್ಕೋ- ದೆಹಲಿ ಮಾರ್ಗದ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ; ಪೊಲೀಸರಿಂದ ತನಿಖೆ

ಇದುವರೆಗೂ ಯಾವುದೇ ಭಯೋತ್ಪಾದಕ ಸಂಘಟನೆಗಳು ಬಾಂಬ್ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ. ಮಹಿಳೆಯೊಬ್ಬರು ಸುಮಾರು 40 ನಿಮಿಷಗಳ ಕಾಲ ಬೆಂಚ್ ಮೇಲೆ ಕುಳಿತಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ. ಆಕೆ ಈ ಬಾಂಬ್ ಸ್ಫೋಟ ನಡೆಯುವುದಕ್ಕೂ ಕೆಲವೇ ನಿಮಿಷಗಳ ಮೊದಲು ಆ ಜಾಗದಿಂದ ಹೊರಟುಹೋಗಿದ್ದಾರೆ. ಇಬ್ಬರು ಪುರುಷ ದಾಳಿಕೋರರು ಸಹ ಆ ಮಹಿಳೆಯೊಂದಿಗೆ ಸೇರಿ ಈ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.

ಇಸ್ತಾನ್‌ಬುಲ್‌ನಲ್ಲಿ ನಡೆದ ಸ್ಫೋಟದಲ್ಲಿ ಸಾವನ್ನಪ್ಪಿದವರಲ್ಲಿ ಒಬ್ಬ ಸರ್ಕಾರಿ ಅಧಿಕಾರಿ ಮತ್ತು ಅವರ ಚಿಕ್ಕ ಮಗಳು ಕೂಡ ಸೇರಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳು ಪ್ಯಾರಿಸ್ ಕೆಫೆಯಲ್ಲಿ 130 ಜನರ ಮೇಲೆ ಗುಂಡು ಹಾರಿಸಿ ಕೊಂದ 7 ವರ್ಷಗಳ ನಂತರ ಈ ಭಯೋತ್ಪಾದಕ ದಾಳಿ ನಡೆದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ