Nobel Peace Prize 2021: ರಷ್ಯಾ ಮತ್ತು ಫಿಲಿಪೈನ್ಸ್​​ನ ಇಬ್ಬರು ಪತ್ರಕರ್ತರಿಗೆ ನೊಬೆಲ್​ ಶಾಂತಿ ಪುರಸ್ಕಾರ

| Updated By: Lakshmi Hegde

Updated on: Oct 08, 2021 | 4:02 PM

ಜಾಪ್ರಭುತ್ವ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ಪ್ರತಿಕೂಲ ಪರಿಸ್ಥಿತಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಇವರಿಬ್ಬರೂ ಜಗತ್ತಿಗೇ ಆದರ್ಶಪ್ರಾಯರಾಗಿ ನಿಂತಿದ್ದಾರೆ ಎಂದು ನೊಬೆಲ್ ಸಮಿತಿಯ ಅಧ್ಯಕ್ಷೆ ಬೆರಿಟ್ ರೀಸ್-ಆಂಡರ್ಸನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Nobel Peace Prize 2021: ರಷ್ಯಾ ಮತ್ತು ಫಿಲಿಪೈನ್ಸ್​​ನ ಇಬ್ಬರು ಪತ್ರಕರ್ತರಿಗೆ ನೊಬೆಲ್​ ಶಾಂತಿ ಪುರಸ್ಕಾರ
ನೊಬೆಲ್​ ಶಾಂತಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರು
Follow us on

ಒಸ್ಲೋ: ಫಿಲಿಪೈನ್ಸ್ ಪತ್ರಕರ್ತೆ ಮರಿಯಾ ರೆಸ್ಸಾ ಮತ್ತು ರಷ್ಯಾದ ಪತ್ರಕರ್ತ ಡಿಮಿಟ್ರಿ ಮುರಾಟೋವ್ 2021ನೇ ಸಾಲಿನ ನೊಬೆಲ್​ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಷ್ಯಾ ಹಾಗೂ ಫಿಲಿಪೈನ್ಸ್​​ನಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಇವರಿಬ್ಬರೂ ದಿಟ್ಟ ಹೋರಾಟ ನಡೆಸಿದ್ದರು. ರೆಸ್ಸಾ ಮತ್ತು ಮುರಾಟೋವ್​ ಅವರು ಫಿಲಿಪೈನ್ಸ್​ ಮತ್ತು ರಷ್ಯಾದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟ ಪರಿಗಣಿಸಿ ಅವರಿಬ್ಬರಿಗೆ ಈ ಬಾರಿಯ ನೊಬೆಲ್​ ಶಾಂತಿ ಪುರಸ್ಕಾರ ನೀಡಲಾಗುವುದು ಎಂದು ನೊಬೆಲ್ ಸಮಿತಿಯ ಅಧ್ಯಕ್ಷೆ ಬೆರಿಟ್ ರೀಸ್-ಆಂಡರ್ಸನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಹಾಗೇ, ಪ್ರಜಾಪ್ರಭುತ್ವ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ಪ್ರತಿಕೂಲ ಪರಿಸ್ಥಿತಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಇವರಿಬ್ಬರೂ ಜಗತ್ತಿಗೇ ಆದರ್ಶಪ್ರಾಯರಾಗಿ ನಿಂತಿದ್ದಾರೆ ಎಂದೂ ತಿಳಿಸಿದ್ದಾರೆ. 

ಪತ್ರಕರ್ತೆ ರೆಸ್ಸಾ (58)  ತಮಗೆ ನೊಬೆಲ್​ ಶಾಂತಿ ಪುರಸ್ಕಾರ ಬಂದಿದ್ದು ನಿಜಕ್ಕೂ ಶಾಕ್​​ ತಂದಿದೆ. ಭಾವನಾತ್ಮಕ ಕ್ಷಣವಾಗಿದೆ. ಇದನ್ನು ಸ್ವೀಕರಿಸಲು ತುಂಬ ಹೆಮ್ಮೆಯಾಗುತ್ತದೆ ಎಂದಿದ್ದಾರೆ. ಹಾಗೇ, ಫಿಲಿಪೈನ್ಸ್​ನಲ್ಲಿ ಈಗಿರುವ ಪತ್ರಕರ್ತರೂ ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಣೆಯ ಹೋರಾಟವನ್ನು ಮುಂದುವರಿಸಬೇಕು ಎಂದು ಆಶಿಸಿದ್ದಾರೆ. ಹಾಗೇ, ಇವರು  2012ರಲ್ಲಿ ಸ್ಥಾಪನೆಯಾದ ತನಿಖಾ ಪತ್ರಿಕೋದ್ಯಮದ ಡಿಜಿಟಲ್​ ಮೀಡಿಯಾ ಸಂಸ್ಥೆ (ಆನ್​​ಲೈನ್​ ಮೀಡಿಯಾ) ರಾಪ್ಲರ್​ನ  ಸಹ ಸಂಸ್ಥಾಪಕರಾಗಿದ್ದಾರೆ. ಪತ್ರಿಕೆಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತಿರುವದನ್ನು ಕಟುವಾಗಿ ವಿರೋಧಿಸಿದ್ದರು. ಅಮೆರಿಕ ಪೌರತ್ವ ಹೊಂದಿರುವ ಅವರಿಗೆ ಜೈಲುಶಿಕ್ಷೆಯೂ ಆಗಿದೆ. ಅವರೀಗ ಜಾಮೀನನ ಆಧಾರದ ಮೇಲೆ ಹೊರಗಿದ್ದಾರೆ.

ರಷ್ಯಾದ ಪತ್ರಕರ್ತ ಡಿಮಿಟ್ರಿ ಮುರಾಟೋವ್​ಗೆ 59 ವರ್ಷ ವಯಸ್ಸಾಗಿದ್ದು, ಇವರೂ ಸಹ ರಷ್ಯಾದಲ್ಲಿ ಹರಣವಾಗುತ್ತಿರುವ ಅಭಿವ್ಯಕ್ತಿ, ವಾಕ್​​ ಸ್ವಾತಂತ್ರ್ಯ ರಕ್ಷಣೆಗಾಗಿ ದಶಕಗಳಿಂದಲೂ ಹೋರಾಟ ನಡೆಸಿದವರು. ನೊವಾಯಾ ಗೆಜೆಟಾ ಎಂಬ ಸ್ವತಂತ್ರ ಪತ್ರಿಕೆಯ ಸಂಸ್ಥಾಪಕರಲ್ಲಿ ಒಬ್ಬರು. 1993ರಲ್ಲಿ ನೊವಾಯಾ ಗೆಜೆಟಾ ಪ್ರಾರಂಭವಾಗಿದ್ದು, 1995ರವರೆಗೆ ಡಿಮಿಟ್ರಿಯವರೇ ಅದರ ಮುಖ್ಯಸಂಪಾದಕರಾಗಿದ್ದರು. ಈ ಪತ್ರಿಕೆ ಅಧಿಕಾರವನ್ನು ಮೂಲಭೂತವಾಗಿ ವಿಮರ್ಶಿಸುವ ಮನೋಭಾವದಿಂದ ಕೆಲಸ ಮಾಡುತ್ತಿದೆ. ಇದಕ್ಕೆ ಅಪಾರ ವಿರೋಧಿಗಳು ಇದ್ದು, ಡಿಮಿಟ್ರಿ ಮುರಾಟೋವ್​ಗೂ ಸಹ ಕೊಲೆ ಬೆದರಿಕೆಗಳು ಬಂದಿವೆ. ಇಲ್ಲಿಯವರೆಗೆ ಈ ಸುದ್ದಿಪತ್ರಿಕೆಗ ಸಂಬಂಧಪಟ್ಟಂತೆ 6 ಮಂದಿಯನ್ನು ಕೊಲ್ಲಲಾಗಿದೆ. ಅಂದರೆ ಆಡಳಿತ, ಸರ್ಕಾರ ವಿರೋಧಿಗಳನ್ನು ಅಲ್ಲಿ ಸಹಿಸಿಕೊಳ್ಳುತ್ತಿಲ್ಲ. ಈ ಮಧ್ಯೆಯೂ ಡಿಮಿಟ್ರಿ ಮುರಾಟೋವ್​ ಹೋರಾಟ ನಡೆಸುತ್ತಿದ್ದಾರೆ ಎಂದು ಪ್ರಶಸ್ತಿ ಸಮಿತಿ ಹೇಳಿದೆ. ಈ ನೊಬೆಲ್​ ಶಾಂತಿ ಪುರಸ್ಕಾರವನ್ನು ಡಿಸೆಂಬರ್​ 10ರಂದು ಪ್ರದಾನ ಮಾಡಲಾಗುವುದು.

ಇದನ್ನೂ ಓದಿ: Nobel Prize 2021: ಪ್ರಸಕ್ತ ವರ್ಷದ ಭೌತಶಾಸ್ತ್ರ ಕ್ಷೇತ್ರದ ನೊಬೆಲ್​ ಪ್ರಶಸ್ತಿ ಈ ಮೂವರು ವಿಜ್ಞಾನಿಗಳಿಗೆ

Airtel: ಜಿಯೋಗೆ ಭಾರೀ ಹೊಡೆತ: ಏರ್ಟೆಲ್​ನಿಂದ ಕೇವಲ 48 ರೂ. ಗೆ ಬರೋಬ್ಬರಿ 3GB ಡೇಟಾ

 

Published On - 3:36 pm, Fri, 8 October 21