2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಮ್ಮೆ ನಾನು ಸ್ಪರ್ಧಿಸಿದರೆ ಖಂಡಿತವಾಗಿಯೂ ನನ್ನ ಉತ್ತರಾಧಿಕಾರಿ ಕಮಲಾ ಹ್ಯಾರಿಸ್ ಅವರೇ ಆಗಿರುತ್ತಾರೆ (Running Mate) ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಯುಎಸ್ ಅಧ್ಯಕ್ಷರಾಗಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2024ರ ಚುನಾವಣೆಯಲ್ಲೂ ಕೂಡ ಕಮಲಾ ಹ್ಯಾರಿಸ್ ಅವರೇ ನನ್ನ ಉತ್ತರಾಧಿಕಾರಿ ಆಗಲಿದ್ದಾರೆ. ಅವರ ಮೇಲೆ, ಅವರ ಕಾರ್ಯವೈಖರಿಯ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದ್ದಾರೆ. ಈ ಬಗ್ಗೆ ಡಿಸೆಂಬರ್ನಲ್ಲಿ ಮಾತನಾಡಿದ್ದ ಕಮಲಾ ಹ್ಯಾರಿಸ್, ನಾನು ಮತ್ತು ಜೋ ಬೈಡನ್ ಇಬ್ಬರೂ 2024ರ ಅಧ್ಯಕ್ಷೀಯ ಚುನಾವಣೆ ಬಗ್ಗೆ ಚರ್ಚೆ ಮಾಡಿಲ್ಲ. ಒಂದೊಮ್ಮೆ ಬೈಡನ್ ಚುನಾವಣೆಯಲ್ಲಿ ನಿಲ್ಲದೆ ಇರಲು ನಿರ್ಧರಿಸಿದರೆ, ನಾನೂ ಕೂಡ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಗಬಹುದು ಎಂದೇ ಹೇಳಿದ್ದರು. ಆದರೀಗ ಹ್ಯಾರಿಸ್ ಕೆಲಸಗಳನ್ನು ಸಮರ್ಥಿಸಿಕೊಂಡಿರುವ ಬೈಡನ್, ನಾನು ವಹಿಸಿರುವ ಜವಾಬ್ದಾರಿಯನ್ನು ಕಮಲಾ ಹ್ಯಾರಿಸ್ ಅತ್ಯುತ್ತಮವಾಗಿ ನಿಭಾಯಿಸುತ್ತಿದ್ದಾರೆ. 2024ರ ಚುನಾವಣೆಯಲ್ಲಿ ಅವರು ಸ್ಪರ್ಧೆಯಲ್ಲಿ ಇರಲಿದ್ದಾರೆ ಎಂದು ಹೇಳಿದ್ದಾರೆ.
ಅಧ್ಯಕ್ಷೀಯ ಚುನಾವಣೆ ನಡೆದಾಗ ಆ ಸ್ಥಾನಕ್ಕೆ ನಿಲ್ಲುವವರು ಇನ್ನೊಬ್ಬರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಘೋಷಣೆ ಮಾಡುತ್ತಾರೆ. ಹಾಗೇ, ಕಳೆದ ಚುನಾವಣೆಯಲ್ಲಿ ಜೋ ಬೈಡನ್ ತಮ್ಮ ಉತ್ತರಾಧಿಕಾರಿಯನ್ನಾಗಿ (Running Mate) ಕಮಲಾ ಹ್ಯಾರಿಸ್ ಹೆಸರು ಘೋಷಿಸಿದ್ದರು. ಅದರಂತೆ ಡೆಮಾಕ್ರಟಿಕ್ ಪಕ್ಷ ಗೆದ್ದು, ಜೋ ಬೈಡನ್ ಅಧ್ಯಕ್ಷರಾಗಿದ್ದರು, ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿದ್ದಾರೆ. ಮುಂದಿನ ಚುನಾವಣೆಗೂ ಬೈಡನ್ ಕಮಲಾ ಹ್ಯಾರಿಸ್ ಹೆಸರನ್ನೇ ಹೇಳಿದ್ದಾರೆ. ಇಲ್ಲಿ ಮುಖ್ಯ ವಿಚಾರವೆಂದರೆ, 2024ರ ಅಧ್ಯಕ್ಷೀಯ ಚುನಾವಣೆ ಹೊತ್ತಿಗೆ ಜೋ ಬೈಡನ್ ಪಕ್ಷದಿಂದ ಇವರಿಬ್ಬರೂ ಸ್ಪರ್ಧಿಸಿ, ಗೆದ್ದರೆ ಕಮಲಾ ಹ್ಯಾರಿಸ್ ಅಧ್ಯಕ್ಷರೂ ಆಗಬಹುದಾದ ಸಾಧ್ಯತೆ ಇರುತ್ತದೆ.
ಜೋ ಬೈಡನ್ ಅವರು 2021ರ ಜನವರಿ 20ರಂದು ಅಮೆರಿಕದ 46ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅವರೊಂದಿಗೆ ಅಮೆರಿಕ ಉಪಾಧ್ಯಕ್ಷ ಸ್ಥಾನಕ್ಕೆ ಏರಿ ಇತಿಹಾಸ ಸೃಷ್ಟಿಸಿದವರು ಭಾರತ ಮೂಲದ ಕಮಲಾ ಹ್ಯಾರಿಸ್. ಅಮೆರಿಕ ಉಪಾಧ್ಯಕ್ಷ ಸ್ಥಾನಕ್ಕೆ ಏರಿದ ಮೊದಲ ಮಹಿಳೆ, ಕಪ್ಪುವರ್ಣೀಯ ಮಹಿಳೆ ಮತ್ತು ಏಷ್ಯನ್ ಅಮೆರಿಕನ್ ವ್ಯಕ್ತಿ ಎಂಬ ಹೆಗ್ಗಳಿಕೆಗಳಿಗೆ ಕಮಲಾ ಹ್ಯಾರಿಸ್ ಪಾತ್ರರಾಗಿದ್ದಾರೆ. ಕಮಲಾ ಹ್ಯಾರಿಸ್ ಮತ್ತು ಅಧ್ಯಕ್ಷ ಜೋ ಬೈಡನ್ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆಯಾ ಎಂಬುದೊಂದು ಅನುಮಾನ ಹುಟ್ಟುಹಾಕುವಂತ ವರದಿಯನ್ನು ಇತ್ತೀಚೆಗೆ ಸಿಎನ್ಎನ್ ಅಂತಾರಾಷ್ಟ್ರೀಯ ಮಾಧ್ಯಮ ಪ್ರಕಟ ಮಾಡಿತ್ತು. ಇವರಿಬ್ಬರ ಮಧ್ಯೆ ಕಿರಿಕಿರಿಗಳು, ಭಿನ್ನಾಭಿಪ್ರಾಯ, ಅಂತರಗಳು ಹೆಚ್ಚುತ್ತಿವೆ. ಇವರಿಬ್ಬರೂ ವೈಯಕ್ತಿಕವಾಗಿ ಸ್ಪರ್ಧೆಗೆ ಇಳಿದಿದ್ದಾರೆ ಎಂಬರ್ಥದ ಸುದೀರ್ಘ ವರದಿಯನ್ನು ಪ್ರಕಟಿಸಿತ್ತು. ಆದರೆ ಇದೀಗ ಇವರಿಬ್ಬರೂ ಅಧಿಕಾರ ಸ್ವೀಕರಿಸಿ ಒಂದು ವರ್ಷ ಆದ ಹೊತ್ತಲ್ಲಿ, ಜೋ ಬೈಡನ್ ನೀಡಿದ ಈ ಹೇಳಿಕೆ, ಅದಕ್ಕೆ ತದ್ವಿರುದ್ಧವಾಗಿದೆ.
ಇದನ್ನೂ ಓದಿ: ‘ಮಹಾಭಾರತ’ ಸೀರಿಯಲ್ ಅರ್ಜುನ ಪಾತ್ರಧಾರಿ ಶಾಹೀರ್ ಶೇಖ್ ತಂದೆ ಕೊವಿಡ್ನಿಂದ ನಿಧನ