ಪುಟಿನ್ ಆಪ್ತ ಟಿವಿ ನಿರೂಪಕನ ಇಟಲಿ ಮನೆಯ ಗೋಡೆಗಳ ಮೇಲೆ ಹಂತಕ, ಯುದ್ಧ ಬೇಡ ಎಂಬ ಸ್ಲೋಗನ್ಗಳು
ಇಟಾಲಿಯನ್ ಸರ್ಕಾರ ನೀಡಿರುವ ಮಾಹಿತಿಯ ಮೂರು ಮನೆಗಳ ಒಟ್ಟು ಮೌಲ್ಯ ಭಾರತೀಯ ಕರೆನ್ಸಿ ಪ್ರಕಾರ 66 ಕೋಟಿ ರೂ. ಗಿಂತ ಹೆಚ್ಚು. ಸೋಜಿಗದ ಸಂಗತಿಯೆಂದರೆ ಈ ಮನೆಗಳು ಖಾಲಿ ಇವೆ, ಅಂದರೆ ಮೂರರಲ್ಲೂ ಒಂದೇ ಒಂದು ನರಪಿಳ್ಳೆ ವಾಸವಾಗಿಲ್ಲ.
ರೋಮ್: ಅವರು ಯಾವ ದೇಶದ ದುಷ್ಕರ್ಮಿಗಳು (vandals) ಅಂತ ಗೊತ್ತಿಲ್ಲ, ಅದರೆ ಅವರ ವರ್ತನೆ ನೋಡಿದರೆ ರಷ್ಯ ಮತ್ತು ಅದರ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅವರ ವಿರೋಧಿಗಳು ಅನ್ನೋದರಲ್ಲಿ ಎರಡು ಮಾತಿಲ್ಲ. ವಿಷಯ ಏನು ಗೊತ್ತಾ? ಪುಟಿನ್ ಅವರಿಗೆ ತೀರ ಹತ್ತಿರದವರು ಎನ್ನಲಾಗಿರುವ ರಷ್ಯಾದ ಟಿವಿ ಌಂಕರ್ (TV anchor) ಒಬ್ಬರು ಇಟಲಿ ರಾಜಧಾನಿ ರೋಮ್ ನಲ್ಲಿ ವಾಸಿಸುತ್ತಾರೆ ಮತ್ತು ನಗರದಲ್ಲೊಂದು ಭವ್ಯ ಬಂಗ್ಲೆಯನ್ನು ಅವರು ಹೊಂದಿದ್ದಾರೆ ಎನ್ನಲಾಗಿದೆ. ನಾವು ಉಲ್ಲೇಖಿಸುತ್ತಿರುವ ದುಷ್ಕರ್ಮಿಗಳು ಌಂಕರ್ ಮನೆಯ ಗೋಡೆಗಳ ಮೇಲೆ ಯುದ್ಧ-ವಿರೋಧಿ ಸ್ಲೋಗನ್ ಗಳನ್ನು ಬರೆದಿದ್ದಾರೆ ಮತ್ತು ಮನೆಯೊಳಗಿನ ಈಜುಕೊಳಕ್ಕೆ ಕೆಂಪು ಬಣ್ಣ ಬಳಿದಿದ್ದಾರೆ.
ಪಿಯಾನೆಲ್ಲೋ ಡೆಲ್ ಲಾರಿಯೋ ಹೆಸರಿನ ಪ್ರದೇಶದಲ್ಲಿ ವ್ಲಾದಿಮಿರ್ ಸೊಲೊವೀವ್ ಎನ್ನುವ ಟಿವಿ ನಿರೂಪಕರಿಗೆ ಸೇರಿದ ವಿಲ್ಲಾದ ಗೋಡೆಗಳ ಮೇಲೆ ‘ಹಂತಕ’ ಮತ್ತು ‘ಯುದ್ಧ ಬೇಡ’ ಎಂಬ ಪದಗಳನ್ನು ಬರೆಯಲಾಗಿದೆ, ಎಂದು ವರದಿಯಾಗಿದೆ. ಎಸ್ ಎಸ್ ಎ ಸುದ್ದಿಸಂಸ್ಥೆ ತೆಗೆದುಕೊಂಡಿರು ಇಮೇಜ್ ಗಳಲ್ಲಿ ಕೊಮೊ ಲೇಕ್ ನಂತೆ ಕಾಣುವ ಈಜುಕೊಳಕ್ಕೆ ಕೆಂಪು ಬಣ್ಣ ಬಳಿದಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ಮೆನಾಜಿಯೋ ಪಟ್ಟಣಕ್ಕೆ ಹತ್ತಿರದಲ್ಲಿರುವ ಪ್ರದೇಶವೊಂದರಲ್ಲಿ ಸೊಲೊವೀವ್ ಅವರು ರಜಾದಿನಗಳನ್ನು ಕಳೆಯಲು ಮಾಡಿಕೊಂಡಿರುವ ಮನೆಗಳ ಪೈಕಿ ಒಂದರಲ್ಲಿ ಕಿಚ್ಚು ಕಾಣಿಸಿಕೊಂಡಿರುವ ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ಇಟಲಿಯ ಅಧಿಕಾರಿಗಳು ಬುಧವಾರ ಬೆಳಗ್ಗೆ ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರೇಡಿಯೋ ಮತ್ತು ದೂರದರ್ಶನಗಳ ಪ್ರಮುಖ ನಿರೂಪಕರಾಗಿರುವ ಸೊಲೊವೀವ್ ಅವರನ್ನು ಕ್ರೆಮ್ಲಿನ್‌ನ ಅತ್ಯಂತ ಕ್ರಿಯಾಶೀಲ ಮತ್ತು ಉತ್ಸಾಹದಿಂದ ಚಿಮ್ಮುವ ನಿರೂಪಕ ಎಂದು ಪರಿಗಣಿಸಲಾಗಿದೆ.
ಅವರು ಈ ಪ್ರದೇಶದಲ್ಲಿ ಮೂರು ವಿಲ್ಲಾಗಳನ್ನು ಹೊಂದಿದ್ದು, ಪುಟಿನ್‌ಗೆ ಹತ್ತಿರವಿರುವವರ ವಿರುದ್ಧ ಪಾಶ್ಚಿಮಾತ್ಯ ನಿರ್ಬಂಧಗಳನ್ನು ವ್ಯಾಪಕಗೊಳಿಸುವ ಭಾಗವಾಗಿ ಎಲ್ಲ ಮನೆಗಳನ್ನು ಇಟಾಲಿಯನ್ ಹಣಕಾಸು ವಿಭಾಗದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇಟಾಲಿಯನ್ ಸರ್ಕಾರ ನೀಡಿರುವ ಮಾಹಿತಿಯ ಮೂರು ಮನೆಗಳ ಒಟ್ಟು ಮೌಲ್ಯ ಭಾರತೀಯ ಕರೆನ್ಸಿ ಪ್ರಕಾರ 66 ಕೋಟಿ ರೂ. ಗಿಂತ ಹೆಚ್ಚು. ಸೋಜಿಗದ ಸಂಗತಿಯೆಂದರೆ ಈ ಮನೆಗಳು ಖಾಲಿ ಇವೆ, ಅಂದರೆ ಮೂರರಲ್ಲೂ ಒಂದೇ ಒಂದು ನರಪಿಳ್ಳೆ ವಾಸವಾಗಿಲ್ಲ.
ಕೊಮೊ ಫೈರ್ ಸರ್ವಿಸಸ್ ನ ಮುಖ್ಯಸ್ಥ ಗೆನ್ನಾರೋ ಡಿ ಮಾಯೊ ಅವರು ಎ ಎಫ್ ಪಿ ಸುದ್ದಿಸಂಸ್ಥೆಗೆ ಹೇಳಿಕೆಯೊಂದನ್ನು ನೀಡಿ, ‘ಸೊಲೊವೀವ್ ಅವರ ಒಂದು ಮನೆಯಲ್ಲಿ ಕಾಣಿಸಿದ ಬೆಂಕಿ ಚಿಕ್ಕ ಪ್ರಮಾಣದ್ದಾಗಿತ್ತು ಮತ್ತು ನಮ್ಮ ಒಂದು ತಂಡ ಬಹಳ ಕಡಿಮೆ ಸಮಯದಲ್ಲಿ ಬೆಂಕಿಯನ್ನು ನಂದಿಸಿತು,’ ಎಂದು ಹೇಳಿದ್ದಾರೆ.
‘ಹೇಳಿಕೊಳ್ಳುವಂಥ ಹಾನಿಯೇನೂ ಸಂಭವಿಸಿಲ್ಲ. ಟೈರ್ ಗಳಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ದಟ್ಟ ಕಪ್ಪುಹೊಗೆ ಎದ್ದಿತ್ತು,’ ಎಂದು ಅವರು ಹೇಳಿದ್ದಾರೆ. ಇಟಲಿಯ ಎಜಿಐ ನ್ಯೂಸ್ ಏಜೆನ್ಸಿಗೆ ನೀಡಿರುವ ಹೇಳಿಕೆಯಲ್ಲಿ ಮೆನಾಜಿಯೊ
ಪಟ್ಟಣದ ಮೇಯರ್ ಮೈಕೆಲ್ ಸ್ಪ್ಯಾಗಿಯಾರಿ ಅವರು, ‘ಸೊಲೊವೀವ್ ಅವರಿಗೆ ಸೇರಿದ ಮನೆಯೊಂದರಲ್ಲಿ ಕಾಣಿಸಿಕೊಂಡ ಬೆಂಕಿಯು ಒಂದು ‘ಪ್ರತಿಭಟನೆಯ ದ್ಯೋತಕವಾಗಿತ್ತು,’ ಹಾಗಾಗಿ ಕಿಚ್ಚಿನಿಂದ ಯಾವುದೇ ಹಾನಿ ಸಂಭವಿಸಿಲ್ಲ,’ ಎಂದ ಹೇಳಿದ್ದಾರೆ.
ಸುಮಾರು 5 ವರ್ಷಗಳ ಹಿಂದೆ ಅತ್ಯಂತ ಜನಪ್ರಿಯ ರಜಾ ತಾಣವೆನಿಸಿರುವ ಉತ್ತರ ಇಟಲಿಯ ಪಶ್ಚಿಮ ಭಾಗದಲ್ಲಿ ಸೊಲೊವೀವ್ ಅವರು ಆಸ್ತಿಯನ್ನು ಖರೀದಿಸಿದ್ದಾರೆ ಎಂದು ಮೈಕೆಲ್ ಸ್ಪ್ಯಾಗಿಯಾರಿ ಹೇಳಿದ್ದಾರೆ.
ಇದನ್ನೂ ಓದಿ: Russia-Ukraine Crisis ಬುಕಾ ಹತ್ಯೆ: ಯುದ್ಧ ಅಪರಾಧಗಳ ವಿಚಾರಣೆ ಮಾಡಬೇಕೆಂದು ಕರೆ ನೀಡಿದ ಅಮೆರಿಕ ಅಧ್ಯಕ್ಷ ಬೈಡನ್