2014ರಲ್ಲಿ ರಷ್ಯಾಕ್ಕೆ ಪಲಾಯನ ಮಾಡಿರುವ ಉಕ್ರೇನ್‌ನ ಮಾಜಿ ಅಧ್ಯಕ್ಷ ವಿಕ್ಟರ್ ಯಾನುಕೋವಿಚ್ ಹೆಸರು ಮತ್ತೀಗ ಮುನ್ನೆಲೆಗೆ ಬಂದಿದೆ. ಈ ವಿಕ್ಟರ್ ಅವರನ್ನು ಒಂದು ವಿಶೇಷ ಸಂದರ್ಭಕ್ಕಾಗಿ ರಷ್ಯಾ ಸರ್ಕಾರ ಸಜ್ಜುಗೊಳಿಸುತ್ತಿದೆ ಎಂದು ಉಕ್ರೇಯಿನ್ಸ್ಕಾ ಪ್ರಾವ್ಡಾ ಎಂಬ ಆನ್ಲೈನ್ ಪತ್ರಿಕೆಯ ವರದಿಯನ್ನು ಉಲ್ಲೇಖಿಸಿ, ಕೀವ್ ಇಂಡಿಪೆಂಡೆಂಟ್ ಮಾಧ್ಯಮ ಟ್ವೀಟ್ ಮಾಡಿದೆ. ಈ ಅಧ್ಯಕ್ಷ ಮೊದಲಿನಿಂದಲೂ ರಷ್ಯಾದೊಂದಿಗೆ ಉತ್ತಮ ಸಂಬಂಧವನ್ನೇ ಹೊಂದಿದ್ದರು. 2014ರಲ್ಲಿ ವೊಲೊಡಿಮಿರ್ ಝೆಲೆನ್ಸ್ಕಿ ಅಧ್ಯಕ್ಷರಾದ ಬಳಿಕ ವಿಕ್ಟರ್ ರಷ್ಯಾಕ್ಕೆ ಹೋಗಿ ನೆಲೆಸಿದ್ದರು. ಇದೀಗ ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ, ಆ ದೇಶವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡು ಮತ್ತೆ ಇದೇ ವಿಕ್ಟರ್ರನ್ನು ಅಧ್ಯಕ್ಷರನ್ನಾಗಿ ಘೋಷಿಸಲು ಸಿದ್ಧತೆ ನಡೆಸಿದೆ ಎಂಬುದನ್ನು ಉಕ್ರೇನ್ ಗುಪ್ತಚರ ಇಲಾಖೆಗಳು ತಿಳಿಸಿದ್ದಾಗಿ ವರದಿಯಲ್ಲಿ ಹೇಳಲಾಗಿದೆ.
ಯಾರಿವರು ವಿಕ್ಟರ್?
ವಿಕ್ಟರ್ ಯಾನುಕೋವಿಚ್ ಅವರು 2010ರಲ್ಲಿ ಉಕ್ರೇನ್‌ನ ನಾಲ್ಕನೇ ಅಧ್ಯಕ್ಷರಾಗಿ ಆಯ್ಕೆಯಾದವರಾಗಿದ್ದರು. 2013ರ ನವೆಂಬರ್ನಲ್ಲಿ ಘನತೆಯ ಕ್ರಾಂತಿ ಶುರುವಾಗಿ 2014ರವರೆಗೂ ಅದು ಮುಂದುವರಿಯಿತು. ವಿಕ್ಟರ್ ರಷ್ಯಾದೊಂದಿಗೆ ತುಂಬ ಆಪ್ತ ಸಂಬಂಧ ಹೊಂದಿದ್ದರು. ಈ ನಿಕಟತೆಗೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಅವರು ಯುರೋಪಿಯನ್ ಒಕ್ಕೂಟದೊಂದಿಗೆ ರಾಜಕೀಯ ಮತ್ತು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದ್ದರು. ಅಲ್ಲಿಂದಲೇ ಶುರುವಾಗಿತ್ತು ಅವರ ವಿರುದ್ಧ ಪ್ರತಿಭಟನೆ. ಅದಕ್ಕೆ ಘನತೆಯ ಕ್ರಾಂತಿ ಎಂದೇ ಕರೆಯಲಾಯಿತು. ಉಕ್ರೇನ್ನಾದ್ಯಂತ ಪ್ರತಿಭಟನೆ, ಹಿಂಸಾಚಾರ, ದಂಗೆ, ಫೈರಿಂಗ್ ಶುರುವಾಯಿತು. ಇದೆಲ್ಲದರ ಪರಿಣಾಮವಾಗಿ 2014ರ ಫೆಬ್ರವರಿಯಲ್ಲಿ ಅಧ್ಯಕ್ಷ ಸ್ಥಾನದಿಂದ ಇಳಿದ ವಿಕ್ಟರ್, ರಷ್ಯಾಕ್ಕೆ ಪಲಾಯನ ಮಾಡಿದರು. ಈಗಲೂ ಕೂಡ ಕ್ರೆಮ್ಲಿನ್ ಅಂದರೆ ರಷ್ಯಾ ಸರ್ಕಾರದ ರಕ್ಷಣೆಯಲ್ಲೇ ಇದ್ದಾರೆ.
ಉಕ್ರೇನ್ ಅಧ್ಯಕ್ಷನಾಗಿದ್ದಾಗಲೂ ರಷ್ಯಾದ ಬೆಂಬಲ ಪಡೆದು, ಆ ದೇಶದ ಅಭ್ಯರ್ಥಿಯಂತೆಯೇ ಇದ್ದ ವಿಕ್ಟರ್ ಇದೀಗ ಮತ್ತೆ ಆ ಸ್ಥಾನಕ್ಕೆ ಏರಲು ಸಿದ್ಧತೆ ನಡೆದಿದೆ ಎಂಬ ವರದಿ ಬಲವಾಗಿ ಕೇಳಿಬಂದಿದೆ. ವಿಕ್ಟರ್ ಅಧ್ಯಕ್ಷನಾಗುವುದಕ್ಕೂ ಮೊದಲು 2006-2007ರವರೆಗೆ ಉಕ್ರೇನ್ ಪ್ರಧಾನಿಯಾಗಿದ್ದರು. ಅದಕ್ಕೂ ಪೂರ್ವ 1997 ರಿಂದ 2002 ರವರೆಗೆ ಪೂರ್ವ ಉಕ್ರೇನ್‌ನ ಡೊನೆಟ್ಸ್ಕ್ ಒಬ್ಲಾಸ್ಟ್‌ನ ಗವರ್ನರ್ ಕೂಡ ಆಗಿದ್ದವರು. 2004ರಲ್ಲಿ ಮೊದಲಬಾರಿಗೆ ಇವರು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದರು. ಆದರೆ ಆ ಚುನಾವಣೆಯಲ್ಲಿ ವಿವಿಧ ವಂಚನೆಯ ಆರೋಪ ಕೇಳಿಬಂತು. ಆ ಪ್ರಕರಣ ಅಲ್ಲಿನ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಲ್ಲದೆ, ಚುನಾವಣೆಯನ್ನು ಕೋರ್ಟ್ ಅನೂರ್ಜಿತಗೊಳಿಸಿತು. ಹಾಗಾಗಿ ಮತ್ತೆ ಅಧ್ಯಕ್ಷೀಯ ಚುನಾವಣೆ ನಡೆಯಿತು. ಇದೇ ಕಾರಣಕ್ಕೆ ಅಲ್ಲಿ ಆರೆಂಜ್ ಕ್ರಾಂತಿಯ ಹೆಸರಲ್ಲಿ ಸಾಲುಸಾಲು ಪ್ರತಿಭಟನೆಗಳು ನಡೆದವು. ಅಷ್ಟೆಲ್ಲ ಆದ ಮೇಲೆ ವಿಕ್ಟರ್ ಯಾನುಕೋವಿಚ್ ಆ ಚುನಾವಣೆಯಲ್ಲಿ, ಯುಶ್ಚೆಂಕೋ ವಿರುದ್ಧ ಸೋಲುಂಡರು. ಮತ್ತೆ 2010ರಲ್ಲಿ ಗೆದ್ದರೂ 2014ರಲ್ಲಿ ಅಧಿಕಾರ ಹೋಯಿತು.
ಇದನ್ನೂ ಓದಿ: ಯುದ್ಧದಿಂದ ಕಂಗೆಟ್ಟಿರುವ ಉಕ್ರೇನ್ನಲ್ಲಿ ಸಿಲುಕಿದ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಧಾವಿಸಿದ ನಟ ಸೋನು ಸೂದ್
Published On - 4:09 pm, Thu, 3 March 22