ಯುದ್ಧಭೂಮಿಯಾಗಿರುವ ಉಕ್ರೇನ್ನಿಂದ (Ukraine) ಬರೀ ಮನುಷ್ಯರನ್ನಷ್ಟೇ ಅಲ್ಲ, ಪ್ರಾಣಿಗಳನ್ನೂ ಸ್ಥಳಾಂತರ ಮಾಡಲಾಗುತ್ತಿದೆ. ಉಕ್ರೇನ್ ರಾಜಧಾನಿ, ರಷ್ಯಾದ ತೀವ್ರ ದಾಳಿಗೆ ತುತ್ತಾಗಿರುವ ಕೀವ್ನ (Kyiv) ಪೂರ್ವದಲ್ಲಿರುವ ಒಂದು ಅಭಯಾರಣ್ಯದಿಂದ ಗುರುವಾರ ಆರು ಸಿಂಹಗಳು, ಆರು ಹುಲಿಗಳು, ಒಂದು ಆಫ್ರಿಕನ್ ಕಾಡು ನಾಯಿ, ಎರಡು ಕ್ಯಾರಕಲ್ಸ್ (ಒಂದು ಜಾತಿಯ ಕಾಡು ಬೆಕ್ಕು)ಗಳನ್ನು ಒಂದು ಟ್ರಕ್ನಲ್ಲಿ ಕರೆದುಕೊಂಡು ಹೋಗಿ ಪೋಲ್ಯಾಂಡ್ಗೆ ಬಿಡಲಾಗಿದೆ. ಹೀಗೆ ಕೀವ್ನಿಂದ ಪೋಲ್ಯಾಂಡ್ಗೆ ಹೋಗಲು ಟ್ರಕ್ಗೆ ಎರಡು ದಿನ ಬೇಕಾಯಿತು ಎಂದೂ ಪೋಲಿಶ್ ಪ್ರಾಣಿ ಸಂಗ್ರಹಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ರಷ್ಯಾ ಕೀವ್ನಲ್ಲಿ ತೀವ್ರವಾಗಿ ದಾಳಿ ನಡೆಸುತ್ತಿದೆ. ಹೀಗಾಗಿ ಕೀವ್ನ ಈ ಅಭಯಾರಣ್ಯದ ಮಾಲೀಕರಿಗೆ ಅಲ್ಲಿರುವ ಪ್ರಾಣಿಗಳ ಬಗ್ಗೆ ತೀವ್ರ ಆತಂಕ ಶುರುವಾಗಿತ್ತು. ಅವುಗಳ ರಕ್ಷಣೆಗಾಗಿ ಸಹಾಯ ಮಾಡುವಂತೆ ಮಾಲೀಕರು ಪೋಲ್ಯಾಂಡ್ನ ಪಶ್ಚಿಮದಲ್ಲಿರುವ ಪೋಜ್ನಾನ್ ಪ್ರಾಣಿಸಂಗ್ರಹಾಲಯದ ಆಡಳಿತಕ್ಕೆ ಮನವಿ ಮನವಿ ಮಾಡಿದ್ದರು. ಅದರಂತೆ ಈಗ ಪ್ರಾಣಿಗಳನ್ನು ಸಾಗಣೆ ಮಾಡಲಾಗಿದೆ.
ಪ್ರಾಣಿಗಳನ್ನು ಯುದ್ಧ ನಡೆಯುತ್ತಿರುವ ಝೈಟೋಮಿರ್ ಮತ್ತು ಇತರ ಬಾಂಬ್ ದಾಳಿಯಾಗುತ್ತಿರುವ ವಲಯಗಳಿಂದ ತಪ್ಪಿಸಲು ಕೀವ್ ಅಭಯಾರಣ್ಯದ ಅಧಿಕಾರಿಗಳು ತುಂಬ ಪ್ರಯತ್ನ ಪಟ್ಟರು. ಸುಮಾರು ದೂರ ಅವುಗಳನ್ನು ಕರೆದುಕೊಂಡು ಹೋದರೂ ಎಲ್ಲ ಕಡೆ ಬಾಂಬ್, ಶೆಲ್ ದಾಳಿ ಆಗುತ್ತಿದ್ದರಿಂದ ವಾಪಸ್ ಬಂದರು. ಯಾವ ದಿಕ್ಕಿನಲ್ಲಿ ಹೋದರೂ ಆ ರಸ್ತೆಗಳಲ್ಲೆಲ್ಲ ಸ್ಫೋಟ, ಗುಂಡಿನ ಶಬ್ದವೇ ಕೇಳುತ್ತಿತ್ತು. ಎಲ್ಲಿ ನೋಡಿದರೂ ರಸ್ತೆ ತಡೆಯಾಗಿದೆ. ಹೀಗಾಗಿ ಬೇರೆ ದಾರಿ ಕಾಣದೆ ನಮ್ಮ ಪ್ರಾಣಿ ಸಂಗ್ರಹಾಲಯಕ್ಕೆ ಕರೆದುಕೊಂಡು ಬಂದು ಬಿಟ್ಟಿದ್ದಾರೆ ಎಂದು ಪೋಜ್ನಾನ್ ಪ್ರಾಣಿಸಂಗ್ರಹಾಲಯದ ವಕ್ತಾರೆ ಮಾಲ್ಗೊರ್ಜಾಟಾ ಚೊಡಿಲಾ ತಿಳಿಸಿದ್ದಾರೆ.
ಕೀವ್ನಿಂದ ಪೋಲ್ಯಾಂಡ್ಗೆ ಬರುವುದು ಅಷ್ಟು ಸುಲಭವಾಗಿರಲಿಲ್ಲ. ಯಾಕೆಂದರೆ ತುಂಬ ದೂರದ ದಾರಿ. ಮೊದಲೊಮ್ಮೆ ಪ್ರಾಣಿಗಳನ್ನು ಹೊತ್ತ ಟ್ರಕ್ನ್ನು ಅರ್ಧ ದಾರಿ ಸಾಗಿದ್ದ ಮೇಲೆ ರಷ್ಯಾದ ಯುದ್ಧ ಟ್ಯಾಂಕ್ಗಳು ತಡೆದಿದ್ದವು. ಎರಡನೇ ಪ್ರಯತ್ನದಲ್ಲಿ ಬಂದು ತಲುಪಿದ್ದಾರೆ. ಹೀಗೆ ಬಂದ ಪ್ರಾಣಿಗಳಿಗೆ ಪುಟ್ಟ ಮರಿಗಳೂ ಇವೆ. ಎರಡು ದಿನಗಳ ಕಾಲ ಟ್ರಕ್ನಲ್ಲೇ ಇದ್ದು ಬದುಕುಳಿದಿದ್ದು ನಿಜಕ್ಕೂ ಸಮಾಧಾನ ತಂದ ಸಂಗತಿ. ಅದರಲ್ಲೂ 17ವರ್ಷದ ಹುಲಿಯೊಂದು ತುಂಬ ಬಸವಳಿದುಬಿಟ್ಟಿದೆ. ಹೀಗೆ ಇವುಗಳನ್ನು ಈ ಪ್ರಾಣಿ ಸಂಗ್ರಹಾಲಯಕ್ಕೆ ಮುಟ್ಟಿಸಿದ ಮೂವರು ಚಾಲಕರು ಮತ್ತೆ ಕೀವ್ಗೆ ಮರಳಿದ್ದಾರೆ. ತಮ್ಮ ನಗರವನ್ನು ರಕ್ಷಿಸಿಕೊಳ್ಳಬೇಕು ಎಂದು ಹೇಳುತ್ತಲೇ ಹೋದರು. ಹಾಗೇ, ಈ ಪ್ರಾಣಿಗಳು ನಮ್ಮ ಪ್ರಾಣಿ ಸಂಗ್ರಹಾಲಯದಲ್ಲೇ ಉಳಿಯುವುದಿಲ್ಲ. ಇಲ್ಲಿ ಸ್ವಲ್ಪ ದಿನ ಇದ್ದು, ಇಲ್ಲಿಂದ ಪಶ್ಚಿಮಕ್ಕೆ ಇರುವ ಒಂದು ಅಭಯಾರಣ್ಯಕ್ಕೆ ಹೋಗಲಿವೆ ಎಂದು ಚೊಡಿಲಾ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತ- ಬಾಂಗ್ಲಾದ ಗಡಿಯಲ್ಲಿ ಗಡಿ ಭದ್ರತಾ ಪಡೆಗಳಿಗೆ ಹೊಸ ತಲೆಬಿಸಿ; ಹೆಚ್ಚಾದ ಮಾನವ ಕೂದಲು ಕಳ್ಳಸಾಗಣೆ!
Published On - 10:39 am, Sun, 6 March 22