ಬೀಜಿಂಗ್ನಲ್ಲಿ ಹೆಚ್ಚುತ್ತಿದೆ ಕೊವಿಡ್ 19; ಮಾಲ್, ವಸತಿ ಸಂಕೀರ್ಣಗಳೆಲ್ಲ ಸೀಲ್ಡೌನ್
ಚಾಯಾಂಗ್ ಮತ್ತು ಹೈಡಿಯನ್ ಜಿಲ್ಲೆಗಳಲ್ಲಿ ಕೊವಿಡ್ 19 ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ 280 ಜನರನ್ನು ಗುರುತಿಸಲಾಗಿದೆ. ಹಾಗೇ. 12,000 ಜನರ ಮಾದರಿ ಪರೀಕ್ಷೆ ಮಾಡಲಾಗಿದೆ.
ಬೀಜಿಂಗ್: ಚೀನಾದಲ್ಲಿ ಇತ್ತೀಚೆಗೆ ಕೊವಿಡ್ 19 ಸೋಂಕಿನ (Covid 19) ಪ್ರಮಾಣ ಹೆಚ್ಚಾಗಿದೆ. ಹಲವು ನಗರಗಳಲ್ಲಿ ಇತ್ತೀಚೆಗೆ ಲಾಕ್ಡೌನ್ (Lock Down) ಮಾಡಲಾಗಿದೆ. ಈ ಮಧ್ಯೆ ಬೀಜಿಂಗ್ನಲ್ಲೂ ಕೂಡ ಹಲವು ಮಾಲ್, ವಸತಿ ಸಂಕೀರ್ಣಗಳನ್ನು ಸ್ಥಳೀಯ ಸರ್ಕಾರ ಲಾಕ್ ಮಾಡುತ್ತಿದೆ. ಅದರಲ್ಲೂ ಬೀಜಿಂಗ್‌ನ ಕೇಂದ್ರಭಾಗದಲ್ಲಿರುವ ಜಿಲ್ಲೆಗಳ್ಲಿ ಕೊರೊನಾ ವೈರಸ್ ಹೆಚ್ಚಾಗಿ ಕಂಡುಬರುತ್ತಿದೆ. ಕೊರೊನಾ ಸೋಂಕು ಮೊದಲು ಪ್ರಾರಂಭವಾಗಿದ್ದೇ ಚೀನಾದಲ್ಲಿ. ನಂತರ ಆ ದೇಶ ಲಾಕ್ಡೌನ್, ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧಗಳ ಮೂಲಕ ಅದನ್ನು ನಿಯಂತ್ರಿಸಿಕೊಂಡಿತ್ತು. ಆದರೆ ಈಗೀಗ ಮತ್ತೆ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ.
ಬೀಜಿಂಗ್‌ನ ಕೇಂದ್ರ ಜಿಲ್ಲೆಗಳಾದ ಚಾಯಾಂಗ್ ಮತ್ತು ಹೈಡಿಯನ್‌ನಲ್ಲಿ ಗುರುವಾರ ಬೆಳಿಗ್ಗೆ ಆರು ಹೊಸ ಪ್ರಕರಣಗಳು ಕಂಡುಬಂದಿವೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಕೊವಿಡ್ 19 ಸೋಂಕಿತನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬ ಬೀಜಿಂಗ್‌ನ ಡಾಂಗ್ಚೆಂಗ್ನಲ್ಲಿರುವ ರಾಫೆಲ್ಸ್ ಸಿಟಿ ಮಾಲ್ಗೆ ಭೇಟಿ ನೀಡಿದ್ದ. ಹೀಗಾಗಿ ಆ ಸಿಟಿ ಮಾಲ್ನ್ನು ಬುಧವಾರ ಸಂಜೆಗೆ ಮುಚ್ಚಲಾಗಿದೆ. ಅಲ್ಲಿ ಸ್ಯಾನಿಟೈಸ್ ಮಾಡುವ ಕಾರ್ಯವೂ ನಡೆಯುತ್ತಿದೆ. ಇನ್ನು ಆ ಮಾಲ್ನಲ್ಲಿದ್ದ ಯಾರನ್ನೂ ಹಾಗೇ ಹೊರಹೋಗಲು ಬಿಟ್ಟಿಲ್ಲ. ಪ್ರತಿಯೊಬ್ಬರಿಗೂ ಕೊವಿಡ್ 19 ಟೆಸ್ಟ್ ಮಾಡಿಸಿಯೇ ಹೊರಬಿಡಲಾಗಿದ್ದು, ವರದಿ ಬರುವವರೆಗೂ ಐಸೋಲೇಟ್ ಆಗಲು ಸೂಚಿಸಲಾಗಿದೆ. ಇಂದೂ ಕೂಡ ಆ ಮಾಲ್ ಮುಚ್ಚಿಕೊಂಡೇ ಇದೆ.
ಚಾಯಾಂಗ್ ಮತ್ತು ಹೈಡಿಯನ್ ಜಿಲ್ಲೆಗಳಲ್ಲಿ ಕೊವಿಡ್ 19 ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ 280 ಜನರನ್ನು ಗುರುತಿಸಲಾಗಿದೆ. ಹಾಗೇ. 12,000 ಜನರ ಮಾದರಿ ಪರೀಕ್ಷೆ ಮಾಡಲಾಗಿದೆ. ಸೋಂಕಿತರ ಮನೆಯನ್ನು ಮತ್ತೆ ಸೀಲ್ಡೌನ್ ಮಾಡಲಾಗುತ್ತಿದೆ. ಇಂದು ಐದು ವಸತಿ ಸಂಕೀರ್ಣಗಳು, ಎರಡು ಪ್ರಾಥಮಿಕ ಶಾಲೆಗಳು ಮತ್ತು 2 ಕಚೇರಿಗಳನ್ನು ಲಾಕ್ ಮಾಡಲಾಗಿದೆ.
ಇದನ್ನೂ ಓದಿ: ಬಿಜೆಪಿ ತೊರೆದ ಬಂಗಾಳಿ ನಟಿ; ಈ ಪಕ್ಷದಲ್ಲಿ ಪ್ರಾಮಾಣಿಕತೆಯೇ ಇಲ್ಲವೆಂದ ಶ್ರಬಂತಿ !