ಪಾರ್ಕಿಂಗ್ ಸ್ಥಳದಲ್ಲಿ ಎಡವಟ್ಟು ಮಾಡಿಕೊಂಡು ಪೊಲೀಸರ ಬಳಿ ಸಿಕ್ಕಿಬಿದ್ದ 84ರ ವೃದ್ಧ; ಈ ವ್ಯಕ್ತಿಯ ಮಾತು ಕೇಳಿ ಪೊಲೀಸರು ಶಾಕ್ !
ಇಂಗ್ಲೆಂಡ್ನಲ್ಲಿ ಹೀಗೆ ಪರವಾನಗಿ ಇಲ್ಲದೆ ಮಾಡುವ ವಾಹನ ಸಂಚಾರಕ್ಕೆ ಮೂರ್ನಾಲ್ಕು ವಿಧದ ಶಿಕ್ಷೆ ಕಟ್ಟಿಟ್ಟ ಬುತ್ತಿ. ಅಂದರೆ ಅಪರಾಧ ಎಷ್ಟು ಗಂಭೀರಸ್ವರೂಪದಲ್ಲಿದೆ ಎಂಬುದನ್ನು ಆಧರಿಸಿ ಶಿಕ್ಷೆ ಕೊಡುತ್ತಾರೆ.
70 ವರ್ಷಕ್ಕೂ ಹೆಚ್ಚು ಕಾಲ ಲೈಸೆನ್ಸ್, ಇನ್ಶೂರೆನ್ಸ್ ದಾಖಲೆಗಳು ಇಲ್ಲದೆ ವಾಹನ ಓಡಿಸಿದ ವ್ಯಕ್ತಿಯೊಬ್ಬರು ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಇದು ನಡೆದದ್ದು ಇಂಗ್ಲೆಂಡ್ನ ನಾಟಿಂಗ್ಹ್ಯಾಮ್ನಲ್ಲಿ. 84 ವರ್ಷದ ವೃದ್ಧ ಹೇಳಿದ ಈ ಮಾತುಗಳನ್ನು ಕೇಳಿ ತಾವು ಶಾಕ್ ಆಗಿದ್ದಾಗಿ ಪೊಲೀಸರು ಹೇಳಿದ್ದಾರೆ. ನಾಟಿಂಗ್ಹ್ಯಾಮ್ನ ಸೂಪರ್ಮಾರ್ಕೆಟ್ವೊಂದರ ಕಾರು ಪಾರ್ಕಿಂಗ್ ಸ್ಥಳದಲ್ಲಿ ಈ ವ್ಯಕ್ತಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಪಾರ್ಕಿಂಗ್ ನಿಯಮ ಉಲ್ಲಂಘನೆ ಮಾಡಿದ ಇವರ ಬಳಿ, ಲೈಸೆನ್ಸ್ ತೋರಿಸುವಂತೆ ಪೊಲೀಸರು ಕೇಳಿದ್ದಾರೆ. ಆಗ ವೃದ್ಧ, ನನ್ನ ಬಳಿ ಲೈಸೆನ್ಸ್ ಇಲ್ಲ. ನನಗೆ 12 ವರ್ಷ ಆಗಿದ್ದಾಗಿನಿಂದಲೂ ವಾಹನಗಳನ್ನು ಓಡಿಸುತ್ತಿದ್ದೇನೆ. ಆದರೆ ಲೈಸೆನ್ಸ್ ಮಾಡಿಸಿಲ್ಲ. ಆಗಿನಿಂದಲೂ ಪೊಲೀಸರ ಕೈಗೆ ಸಿಕ್ಕಿಬೀಳುವುದನ್ನು ತಪ್ಪಿಸಿಕೊಂಡೇ ಓಡಾಡುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾರೆ.
ವೃದ್ಧ ಹೇಳಿದ ಮಾತುಗಳನ್ನು ಕೇಳಿ ಪೊಲೀಸರು ಸಿಕ್ಕಾಪಟೆ ಶಾಕ್ ಆಗಿದ್ದಾಗಿ ಹೇಳಿಕೊಂಡಿದ್ದಾರೆ. ಫೇಸ್ಬುಕ್ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿ, 1938ರಲ್ಲಿ ಜನಿಸಿದ ಈ ವ್ಯಕ್ತಿ 12 ವರ್ಷವಾದಾಗಿನಿಂದಲೂ ಪರವಾನಗಿ, ವಿಮೆ ಇಲ್ಲದೆ ಗಾಡಿ ಓಡಿಸುತ್ತಿದ್ದಾರಂತೆ. 70ಕ್ಕೂ ಹೆಚ್ಚು ವರ್ಷವಾಯಿತು. ಆದರೆ ಅದು ಹೇಗೆ ಒಮ್ಮೆಯೂ ಪೊಲೀಸರ ಬಳಿ ಸಿಕ್ಕಿಬೀಳಲಿಲ್ಲ ಎಂಬುದು ನಿಜಕ್ಕೂ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಮತ್ತೊಂದು ವಿಷಯಕ್ಕೆ ಪೊಲೀಸರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವ್ಯಕ್ತಿ ಇಷ್ಟು ವರ್ಷಗಳಲ್ಲಿ ಒಮ್ಮೆಯೂ ಒಂದೇಒಂದು ಅಪಘಾತಕ್ಕೆ ಒಳಗಾಗಲಿಲ್ಲ. ಇನ್ನೊಬ್ಬರಿಗೆ ಡಿಕ್ಕಿ ಮಾಡಿ ಗಾಯಗೊಳಿಸಲಿಲ್ಲ. ಇನ್ನೊಂದು ವಾಹನಕ್ಕೆ ತನ್ನ ವಾಹನ ತಾಗಿಸಲಿಲ್ಲ ಎಂದೂ ತಿಳಿಸಿದ್ದಾರೆ. ಆದರೆ ಇದೆಲ್ಲ ಕಾನೂನು ಪ್ರಕಾರ ತಪ್ಪು. ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದೂ ಎಚ್ಚರಿಕೆ ನೀಡಿದ್ದಾರೆ.
ಇಂಗ್ಲೆಂಡ್ನಲ್ಲಿ ಹೀಗೆ ಪರವಾನಗಿ ಇಲ್ಲದೆ ಮಾಡುವ ವಾಹನ ಸಂಚಾರಕ್ಕೆ ಮೂರ್ನಾಲ್ಕು ವಿಧದ ಶಿಕ್ಷೆ ಕಟ್ಟಿಟ್ಟ ಬುತ್ತಿ. ಅಂದರೆ ಅಪರಾಧ ಎಷ್ಟು ಗಂಭೀರಸ್ವರೂಪದಲ್ಲಿದೆ ಎಂಬುದನ್ನು ಆಧರಿಸಿ ಶಿಕ್ಷೆ ಕೊಡುತ್ತಾರೆ. ವಿಮೆ ಇಲ್ಲದೆ ಗಾಡಿ ಓಡಿಸುವುದಕ್ಕೆ ದಂಡ ವಿಧಿಸಬಹುದಾದ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗೇ, ಚಾಲಕನ ವಾಹನವನ್ನು ಪೊಲೀಸರು ಜಪ್ತಿ ಕೂಡ ಮಾಡಬಹುದು. ಆದರೆ ಸದ್ಯ ಈ ವೃದ್ಧನಿಗೆ ಯಾವ ಶಿಕ್ಷೆ ಕೊಡಲಾಯಿತು ಎಂದು ಪೊಲೀಸರು ತಿಳಿಸಲಿಲ್ಲ.
ಇದನ್ನೂ ಓದಿ: ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಗೋಲ್ಮಾಲ್: ಕರ್ನಾಟಕ ಯೂತ್ ಕಾಂಗ್ರೆಸ್ ನಾಯಕರಿಂದಲೇ ಹೈಕಮಾಂಡ್ಗೆ ದೂರು
Published On - 3:40 pm, Sun, 30 January 22